ಬಿಸಿಲ ಪ್ರತಾಪದಿಂದ ಬಾಯಾರಿದ ಜನರ ದಾಹ ತಣಿಸಲು ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣ ಪಂಚಾಯಿತಿಯಿಂದ ನಿಡಗುಂದಿಯ ಪ್ರಮುಖ ಸ್ಥಳಗಳಲ್ಲಿ ಕುಡಿವ ನೀರಿನ ಅರವಟ್ಟಿಗೆ ಅಳವಡಿಸಲಾಗಿದೆ.
ಪಟ್ಟಣದ ಜನಸಂದಣಿಯ 10 ಕಡೆ ನೆರಳಿನ ವ್ಯವಸ್ಥೆಯಡಿ ಅರವಟ್ಟಿಗೆ ಇರಿಸಿ ದಿನವೂ ಶುದ್ಧ ಮತ್ತು ತಣ್ಣನೆಯ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಿಸಿಲಿಗೆ ಬಳಲಿದ ಜನರ ಬಾಯಾರಿಕೆ ತಣಿಸಲು ಅರವಟ್ಟಿಗೆಗಳು ಆಸರೆಯಾಗಿವೆ. ಪಟ್ಟಣ ಪಂಚಾಯಿತಿಯ ಈ ಸೇವೆಗೆ ಜನರಿಂದ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ.
ಭಾನುವಾರದಿಂದ ನೀರಿನ ಸೇವೆ ಆರಂಭಿಸಿದ್ದು, ನಿತ್ಯ ಸಾವಿರಾರು ಜನರ ದಾಹ ಇಂಗಿಸಲಾಗುತ್ತಿದೆ. ಸರ್ಕಾರಿ ಕಚೇರಿ, ಶಾಲಾ ಕಾಲೇಜು, ವ್ಯಾಪಾರ ಸೇರಿದಂತೆ ನಾನಾ ಕಾರಣಗಳಿಂದ ನಿತ್ಯ ಸಾವಿರಾರು ಜನ ಪಟ್ಟಣಕ್ಕೆ ಆಗಮಿಸುತ್ತಾರೆ. ಬಿಸಿಲಿಗೆ ಬಸವಳಿದಾಗ ಹೋಟೆಲ್‌ನಲ್ಲಿ ನೀರು, ಕುಡಿಯಬೇಕೆಂದರೆ ಚಹಾ ಇಲ್ಲವೇ ಏನಾದರೂ ಉಪಾಹಾರ ತೆಗೆದುಕೊಳ್ಳಬೇಕು. ಇನ್ನೂ ಕೆಲ ಹೋಟೆಲ್‌ನಲ್ಲಿ ನೀರು ಸರಿ ಇರುವುದಿಲ್ಲ. ಹೀಗಾಗಿ ಜನರು ಮಿನರಲ್ ವಾಟರ್ ಮೊರೆ ಹೋಗುತ್ತಾರೆ ಇದಕ್ಕೆ 20 ರೂಪಾಯಿ ನೀಡಬೇಕು. ಸಾಮಾನ್ಯ ಜನರಿಗೆ ಅನುಕೂಲವಾಗಲೆಂದು ಪಟ್ಟಣ ಪಂಚಾಯಿತಿಯಿಂದ ಜನಸಂದಣಿಯ ಸ್ಥಳಗಳಲ್ಲಿ ಅರವಟ್ಟಿಗೆ ಅಳವಡಿಸುವ ಮೂಲಕ ತಾಪತ್ರಯವನ್ನು ತಪ್ಪಿಸಲಾಗುತ್ತಿದೆ.

ನಿತ್ಯ ಎರಡು ಬಾರಿ ನೀರು ಸರಬರಾಜು : “ಅರವಟ್ಟಿಗೆ ನೀರು ತುಂಬಿಸಲು ಸಿಬ್ಬಂದಿ ನೇಮಿಸಲಾಗಿದೆ. ಅವರು ನಿತ್ಯ ಬೆಳಿಗ್ಗೆ 6ಕ್ಕೆ ಮತ್ತು ಮಧ್ಯಾಹ್ನ 2 ಗಂಟೆ ವೇಳೆ ನೀರು ತುಂಬಿಸುತ್ತಾರೆ. ಅರವಟ್ಟಿಗೆಗಳಿಗೆ ಸಂಪರ್ಕ ಸಂಖ್ಯೆಯ ಬ್ಯಾನರ್ ಅಳವಡಿಸಿದ್ದು, ನೀರು ಖಾಲಿಯಾದ ಬಳಿಕ ಸಂಬಂಧಿಸಿದವರಿಗೆ ಕರೆ ಮಾಡಿದರೆ ತಕ್ಷಣ ನೀರು ತುಂಬಿಸಲಾಗುತ್ತದೆ” ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು.
ಮಲ್ಲಿಕ್ ಭಗವಾನ್ ಮಾತನಾಡಿ, “ನಾವು ಹಣ್ಣುಗಳನ್ನು ಮಾರುತ್ತೇವೆ. ನಮಗ ಈ ನೀರಿನ ಅನುಕೂಲ ಬಹಳ ಚೊಲೋ ಆಗಿದಿ ರಿ. ನಾವು ಈ ನೀರಿನ ವ್ಯವಸ್ಥೆ ಮಾಡಿದವರಿಗೆ ಚಿರಋಣಿ ರಿ” ಅಂದರು.
ಮಾಳಮ್ಮ ಅಜ್ಜಿ ಮಾತನಾಡಿ, “ನಾವು ಸುಮಾರು 20 ವರ್ಷದಿಂದ ತರಕಾರಿ ಮಾರಾಟ ಮಾಡ್ತೀವಿ. ಇದೇ ಮೊದಲ ಬಾರಿ ನೀರಿನ ವ್ಯವಸ್ಥೆ ಮಾಡಿದ್ದು, ನಮಗೆ ಬಹಳ ಖುಷಿ ಆಗ್ಯಾದ. ದೇವರು ಅವರನ್ನ ನೂರುಕಾಲ ಚನಾಗಿ ಇಟ್ಟಿರಲಿ ಅಂತ ಬೇಡ್ಕೊಳ್ತೀವಿ” ಎಂದು ಹರಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಿಧಿ ಆಸೆಗಾಗಿ ಪೂಜಾರಿಯಿಂದ ದೇವಸ್ಥಾನ ಕಟ್ಟೆ ಧ್ವಂಸ ; ಸ್ಥಳೀಯರ ಆರೋಪ
ಎಲ್ಲೆಲ್ಲಿ ಸ್ಥಾಪನೆ : ಪಟ್ಟಣದ ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆ ಆವರಣ, ಸರ್ಕಾರಿ ಆಸ್ಪತ್ರೆ ಆವರಣ, ಹಳೇ ಬಸ್ ನಿಲ್ದಾಣ, ಟಿವಿಎಸ್ ಶೋ ರೂಮ್, ರೇಣುಕಾ ಮೆಡಿಕಲ್ ಕಾಲೇಜ್ ಎದರು, ತರಕಾರಿ ಮಾರುಕಟ್ಟೆ, ಕಾಶೀನಕುಂಟೆ ರಸ್ತೆ ಹಾಗೂ ಮುದ್ದೇಬಿಹಾಳ ಕ್ರಾಸ್ ಬಳಿ ಎರಡು ಕಡೆ ಹೀಗೆ ಒಟ್ಟು 10ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವೀರೇಶ್ ಹಟ್ಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಪಟ್ಟಣ ಮತ್ತು ಬೇರೆ ಕಡೆಯಿಂದ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ನೆರಳಿನ ವ್ಯವಸ್ಥೆಯಡಿ, 10 ಕಡೆ ನೀರಿನ ಅರವಟ್ಟಿಗೆ ಸ್ಥಾಪಿಸಲಾಗಿದೆ. ನಿತ್ಯ ಬೆಳಿಗ್ಗೆ ಮತ್ತು ಮಧ್ಯಾಹ್ನ ಅರವಟ್ಟಿಗೆಗಳನ್ನು ತುಂಬಲು 4 ಬಾರಿ ನೀರು ಸರಬರಾಜು ಸಿಬ್ಬಂದಿಗೆ ಸೂಚಿಸಲಾಗಿದೆ. ಪ್ರತಿ ಅರವಟ್ಟಿಗೆಗೆ ಅಂದಾಜು 6 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ” ಎನ್ನುತ್ತಾರೆ.