ರಕ್ಷಣಾ ಕಾರ್ಯಾಚರಣೆಗಳ ನೇರ ಪ್ರಸಾರವನ್ನು ತಪ್ಪಿಸಲು ಕೇಂದ್ರವು ಮಾಧ್ಯಮಗಳಿಗೆ ಸಲಹೆ ನೀಡಿದೆ. ಇದಾದ ಒಂದು ದಿನದ ನಂತರ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಭಾನುವಾರ “ನೇರ ಪ್ರಸಾರಕ್ಕೆ ಅನುಮತಿ ಕಾರ್ಯತಂತ್ರದ ನಿರ್ಲಕ್ಷ್ಯವೇ” ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಶನಿವಾರ ಮಾಧ್ಯಮಗಳಿಗೆ ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಟುವಟಿಕೆಗಳ ನೇರ ಪ್ರಸಾರವನ್ನು ಮಾಡದಂತೆ ಸಲಹೆ ನೀಡಿದೆ. ಅಂತಹ ಮಾಹಿತಿಯನ್ನು ನೀಡುವುದು ತಿಳಿದೋ ಅಥವಾ ತಿಳಿಯದೆಯೋ ಶತ್ರುಗಳಿಗೆ ಸಹಾಯ ಮಾಡಬಹುದು ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಖಂಡನೆ, ಸಭೆ, ಬಂದ್, ಪ್ರತಿಭಟನೆ – ಇವು ಪಹಲ್ಗಾಮ್ ದಾಳಿಗೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ; ಅಸಹ್ಯ ಮೆರೆದ ಬಿಜೆಪಿ
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಯಾದವ್, “ಭದ್ರತಾ ದೃಷ್ಟಿಕೋನದಿಂದ ವಿಶೇಷ ಕಾರ್ಯಾಚರಣೆಗಳ ನೇರ ಪ್ರಸಾರಕ್ಕೆ ಅನುಮತಿ ಕಾರ್ಯತಂತ್ರದ ನಿರ್ಲಕ್ಷ್ಯವೇ ಅಥವಾ ರಾಜಕೀಯ ಪ್ರಚಾರದಿಂದ ಪ್ರೇರಿತವಾಗಿದೆಯೇ? ಸರ್ಕಾರ ತಕ್ಷಣ ಇದನ್ನು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
“ನಾಳೆ ಮತ್ತೆ ಸರ್ಕಾರ ‘ಇದು ಒಂದು ತಪ್ಪಿನ ನಂತರ ಎರಡನೇ ತಪ್ಪು’ ಎಂದು ಹೇಳುತ್ತದೆ. ಭದ್ರತೆಯಂತಹ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಮಾಧ್ಯಮಗಳ ಅನಗತ್ಯ ಅತಿಕ್ರಮಣವಿದೆ ಎಂಬುದು ಇದರ ಸ್ಪಷ್ಟ ಅರ್ಥ. ನಮ್ಮ ಭದ್ರತಾ ಪಡೆಗಳ ಸ್ಥಳ ಮತ್ತು ಅವರ ಕಾರ್ಯತಂತ್ರದ ಬಗ್ಗೆ ಮಾಹಿತಿಯನ್ನು ನೀಡುವ ನೇರ ಪ್ರಸಾರವನ್ನು ಶತ್ರುಗಳು ಸಹ ನೋಡುತ್ತಾರೆ. ಇದು ದೇಶದ ಭದ್ರತೆ ಮತ್ತು ನಮ್ಮ ಯೋಧರ ಜೀವವನ್ನು ಅಪಾಯಕ್ಕೆ ಸಿಲುಕಿಸುತ್ತದೆ” ಎಂದು ಹೇಳಿದರು.
सुरक्षा के दृष्टिकोण से स्पेशल ऑपरेशन्स की लाइव कवरेज की अनुमति क्या एक रणनीतिक लापरवाही थी या फिर ये राजनीतिक प्रचार से प्रेरित थी, ये बात सरकार तत्काल स्पष्ट करे। कल को फिर से सरकार ये कहेगी कि ‘एक चूक के बाद ये दूसरी चूक’ हो गयी।
— Akhilesh Yadav (@yadavakhilesh) April 27, 2025
इसका मतलब साफ़ है कि सुरक्षा जैसे अति…
“ಇಂತಹ ನೇರ ಪ್ರಸಾರಕ್ಕಾಗಿ ಕಠಿಣ ಶಿಕ್ಷಾರ್ಹ ಕ್ರಮ ತೆಗೆದುಕೊಳ್ಳಬೇಕು. ದೇಶದ ಮತ್ತು ಯೋಧರ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಕ್ಷಮಿಸಲಾಗದು” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಕಾಶ್ಮೀರದ ಪಕ್ಷಗಳು, ಸಂಘಟನೆಗಳಿಂದ ಖಂಡನೆ; ಸಂವೇದನೆ ಮರೆತ ಮಾಧ್ಯಮಗಳು
ಮಂಗಳವಾರ ದಕ್ಷಿಣ ಕಾಶ್ಮೀರದ ಪ್ರಮುಖ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದು 28 ಮಂದಿ ಸಾವನ್ನಪ್ಪಿದ್ದಾರೆ. ದಾಳಿಯ ನಂತರ, ಸರ್ಕಾರವು ರಕ್ಷಣಾ ವಿಷಯಗಳ ವರದಿ ಮಾಡುವ ಬಗ್ಗೆ ಮಾಧ್ಯಮಗಳಿಗೆ ಸಲಹೆಯನ್ನು ನೀಡಿದೆ.
“ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ, ಎಲ್ಲಾ ಮಾಧ್ಯಮ ವೇದಿಕೆಗಳು, ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ರಕ್ಷಣೆ ಮತ್ತು ಇತರ ಭದ್ರತೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವರದಿ ಮಾಡುವಾಗ ಸಂಪೂರ್ಣ ಜವಾಬ್ದಾರಿಯಿಂದ ವರ್ತಿಸಬೇಕು” ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದ ಸಲಹೆ ತಿಳಿಸಿದೆ.
