- ಪರಿಶಿಷ್ಟ ಜಾತಿಯ ಅಧಿಕಾರಿ ಎಂಬ ಕಾರಣಕ್ಕೆ ದುರುದ್ದೇಶದಿಂದ ಇಂತಹ ನಿರ್ಧಾರ
- ಪೂರ್ವಗ್ರಹಪೀಡಿತ ವಿಚಾರಣಾ ವರದಿ ಆಧಾರಿಸಿ ಹುದ್ದೆಯಿಂದ ಕೆಳಕ್ಕಿಳಿಸಲಾಗಿದೆ
2016 ಮತ್ತು 2017ರಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಿದ್ಧತೆಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಪ್ರಕರಣವನ್ನು ಪುನರ್ ಪರಿಶೀಲನೆ ನಡೆಸಿ, ದೋಷ ಮುಕ್ತಗೊಳಿಸಿ, ತಮಗೆ ಹಿಂದಿನ ಹುದ್ದೆಯನ್ನು ನೀಡುವಂತೆ ವಿಧಾನಸಭೆಯ ಅಧೀನ ಕಾರ್ಯದರ್ಶಿ ಎಸ್ ಮೂರ್ತಿ ವಿಧಾನಸಭೆ ಸಚಿವಾಲಯದ ವಿಶೇಷ ಮಂಡಳಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
ಜೂನ್ 30ರಂದು ಹೊಸದಾಗಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿರುವ ಅವರು, “ಲೆಕ್ಕ ಪರಿಶೋಧನಾ ಇಲಾಖೆಯ ಕೆಲವು ಅಧಿಕಾರಿಗಳಿಂದ ಅನಧಿಕೃತವಾಗಿ ಪಡೆದ ಲೆಕ್ಕ ಪರಿಶೋಧನಾ ವರದಿ ಆಧಾರದಲ್ಲಿ ನನ್ನ ವಿರುದ್ಧ ಕ್ರಮ ಜರುಗಿಸಲಾಗಿದೆ. ದಂಡನೆ ವಿಧಿಸಿ ವಿಧಾನಸಭೆಯ ಕಾರ್ಯದರ್ಶಿ ಹುದ್ದೆಯಿಂದ ಅಧೀನ ಕಾರ್ಯದರ್ಶಿ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ. ಶೋಕಾಸ್ ನೋಟಿಸ್‌ಗೆ ನಾನು ಉತ್ತರಿಸಿದ್ದರೂ ಆ ಬಗ್ಗೆ ಉಲ್ಲೇಖಿಸದೇ ದಂಡನಾ ಆದೇಶ ಹೊರಡಿಸಲಾಗಿದೆ” ಅರ್ಜಿಯಲ್ಲಿ ತಿಳಿಸಿದ್ದಾರೆ.
“ಎರಡೂ ಅಧಿವೇಶನಗಳಲ್ಲಿ ನಾನು ಕೈಗೊಂಡಿದ್ದ ತೀರ್ಮಾನಗಳಿಂದ ವಿಧಾನಸಭೆ ಸಚಿವಾಲಯಕ್ಕೆ ಆರ್ಥಿಕವಾಗಿ ಉಳಿತಾಯವಾಗಿದೆ. ಆದರೆ, ತಪ್ಪು ಲೆಕ್ಕಾಚಾರವನ್ನು ಆಧರಿಸಿ ನನ್ನ ವಿರುದ್ಧ ಕ್ರಮ ಜರುಗಿಸಲಾಗಿದೆ. ನಾನು ಪರಿಶಿಷ್ಟ ಜಾತಿಯ ಅಧಿಕಾರಿ ಎಂಬ ಕಾರಣಕ್ಕೆ ದುರುದ್ದೇಶದಿಂದ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ. ಪೂರ್ವಗ್ರಹಪೀಡಿತವಾದ ವಿಚಾರಣಾ ವರದಿ ಆಧಾರದಲ್ಲಿ ಹುದ್ದೆಯಿಂದ ಕೆಳಕ್ಕೆ ಇಳಿಸಲಾಗಿದೆ” ಎಂದು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾನು ಸಿದ್ದರಾಮಯ್ಯರ ಅಭಿಮಾನಿ, ಅವರ ಶಿಷ್ಯ; ಬಿಜೆಪಿ ನಾಯಕ ಎಸ್ ಟಿ ಸೋಮಶೇಖರ್ ಅಚ್ಚರಿಯ ಹೇಳಿಕೆ
“ನಿಯಮಾನುಸಾರ ಮರು ಪರಿಶೀಲನೆ ನಡೆಸುವಂತೆ ರಾಜ್ಯಪಾಲರಿಗೆ ನಾನು ಮನವಿ ಸಲ್ಲಿಸಿದ್ದೆ. ರಾಜ್ಯಪಾಲರು ನನ್ನ ಮನವಿಯನ್ನು ಮುಂದಿನ ಕ್ರಮಕ್ಕಾಗಿ ವಿಶೇಷ ಮಂಡಳಿಗೆ ಕಳುಹಿಸಿದ್ದಾರೆ. ಆದರೆ, ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪ್ರಕರಣದ ಮರು ಪರಿಶೀಲನೆ ನಡೆಸಲು ಮಂಡಳಿಗೆ ಕಾನೂನಿನಲ್ಲಿ ಅವಕಾಶವಿದೆ” ಎಂದು ತಿಳಿಸಿದ್ದಾರೆ.
“ದುರುದ್ದೇಶದಿಂದ ನೀಡಿದ ವಿಚಾರಣಾ ವರದಿ ಆಧಾರದಲ್ಲಿ ನನಗೆ ವಿಧಿಸಿರುವ ದಂಡನೆಯನ್ನು ರದ್ದುಪಡಿಸಿ, ವಿಧಾನಸಭೆ ಕಾರ್ಯದರ್ಶಿ ಹುದ್ದೆಗೆ ಮರು ನೇಮಕ ಮಾಡಬೇಕು. ಎಂ ಕೆ ವಿಶಾಲಾಕ್ಷಿ ಅವರಿಗೆ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿರುವ ತೀರ್ಮಾನವನ್ನೂ ರದ್ದುಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.