“ಇತರೆ ಹಿಂದುಳಿದ ವರ್ಗಗಳ (ಒಬಿಸಿಗಳ) ಬದುಕಿನ ವಿವರಗಳಿರುವ ಜಾತಿ ಗಣತಿಯನ್ನು ಕೆಲವು ರಾಜಕಾರಣಿಗಳು ಕಸ ಎಂದು ಜರಿಯುತ್ತಿದ್ದಾರೆ. ಈ ಧೈರ್ಯ ಅವರಿಗೆ ಬಂದಿದ್ದು ಹೇಗೆ? ಒಬಿಸಿಗಳ ಮೌನವೇ ಅವರಿಗೆ ಧೈರ್ಯವನ್ನು ನೀಡಿದೆ. ಈ ಮೌನ ಸರಿಯಲ್ಲ” ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ, ರಾಜಕೀಯ ಚಿಂತಕ ಎ.ನಾರಾಯಣ ಎಚ್ಚರಿಸಿದರು.
ಜಾಗೃತ ಕರ್ನಾಟಕ ಸಂಘಟನೆಯು ಬೆಂಗಳೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಜಾತಿ ಗಣತಿ- ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಅವರು ಜಾತಿ ಗಣತಿಯ ವಿವರಗಳನ್ನು ವಿಸ್ತೃತವಾಗಿ ಚರ್ಚಿಸಿದರು.
ಹಿಂದುಳಿದ ಜಾತಿಗಳಿಗೆ ತಮ್ಮ ಸಾಮಾಜಿಕ ಮತ್ತು ರಾಜಕೀಯ ಸ್ಥಾನದ ಬಗ್ಗೆ ಅರಿವಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸಿದ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರು ತೀರಿಕೊಂಡಾಗ ಕನ್ನಡದ ಖ್ಯಾತ ಪತ್ರಿಕೆಯೊಂದರ ಅಂಕಣಕಾರ ಸಾವನ್ನು ಸಂಭ್ರಮಿಸಿದ್ದ. ಮಂಡಲ್ ವರದಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಎತ್ತಿಹಿಡಿದರು. ತೀರ್ಪು ಬರೆದ ಯಾವ ಜಡ್ಜ್ ಕೂಡ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರಲಿಲ್ಲ. ಹಿಂದುಳಿದ ವರ್ಗಗಳ ಪರ ನಿಂತ ಸುಪ್ರೀಂ ಕೋರ್ಟ್ ನ್ಯಾಯವನ್ನೂ ಆ ಅಂಕಣಕಾರ ಕಸ ಎಂದು ಜರಿದಿದ್ದ. ಆಗ ಒಬಿಸಿಗಳು ಒಂದೇ ಒಂದು ಮಾತನಾಡಲಿಲ್ಲ. ಈಗ ಸಿದ್ದರಾಮಯ್ಯನವರು ಜಾತಿಗಣತಿಯ ವರದಿಯನ್ನು ಕ್ಯಾಬಿನೆಟ್‌ಗೆ ತಂದಿದ್ದಾರೆ. ಕೆಲವರು ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವರದಿಯನ್ನು ಕಸದ ಬುಟ್ಟಿಗೆ ಎಸೆಯಿರಿ ಎಂಬ ಹೇಳಿಕೆಗಳು ಬರುತ್ತಿದ್ದರೂ ಮೌನವಾಗಿದ್ದಾರೆ. ಇವರಿಗೆ ಈ ಧೈರ್ಯ ಬಂದಿದ್ದು ಎಲ್ಲಿಂದ ಎಂದು ಪ್ರಶ್ನಿಸಿದರು.
ಇದನ್ನೂ ಓದಿರಿ: ಜೈಪುರ ಮಸೀದಿಯಲ್ಲಿ ದಾಂಧಲೆ: ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು
ಜಾತಿಗಣತಿಯನ್ನು ಕಸದ ಬುಟ್ಟಿಗೆ ಎಸೆಯಿರಿ ಎಂದು ಹೇಳುತ್ತಿದ್ದರೂ ನಾವು ಸುಮ್ಮನಿರುವುದೇ ನಮ್ಮ ಹಿಂದುಳಿದಿರುವಿಕೆ. ಗಣತಿಯ ವಿವರಗಳನ್ನು ಕ್ಯಾಬಿನೆಟ್ ತಂದ ತಕ್ಷಣ ವಿವಾದ ಆಯಿತು. ನಮ್ಮ ಜಾತಿಯ ಸಂಖ್ಯೆ ಸರಿಯಾಗಿಲ್ಲ ಎನ್ನುವುದು ಸಹಜ. ವರದಿಯನ್ನು ಪ್ರಶ್ನಿಸುವುದು ತಪ್ಪಲ್ಲ. ಆದರೆ ಒಬಿಸಿಗಳ ಬದುಕಿನ ಪ್ರಶ್ನೆಗೆ ಸಂಬಂಧಿಸಿದ ವರದಿಯನ್ನು ಕಸ ಬುಟ್ಟಿಗೆ ಎಸೆಯಿರಿ ಎನ್ನುತ್ತಿದ್ದಾರೆ. ಯಾಕಪ್ಪ ಎಸೆಯಬೇಕು? ಈ ರಾಜ್ಯದ ಬಹುಸಂಖ್ಯಾತ ಹಿಂದುಳಿದ ಸಮುದಾಯಗಳ ಬದುಕನ್ನು ಕಸ ಎನ್ನುವ ಧೈರ್ಯ ಇವರಿಗೆ ಹೇಗೆ ಬಂತು ಎಂಬುದನ್ನು ನಾವು ಅರಿಯಬೇಕಿದೆ. ನಮ್ಮ ಪರ ಯಾರಿದ್ದಾರೋ ಅವರ ಜೊತೆ ನಿಂತು ಒಬಿಸಿ ಸಮುದಾಯ ಶಕ್ತಿಯಾಗಿ ಹೊಮ್ಮದಿದ್ದರೆ, ಮುಂದೆಯೂ ಅವಮಾನವನ್ನು ಅನುಭವಿಸುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಮಾಜಿ ಪೊಲೀಸ್ ಅಧಿಕಾರಿ ಸುಹೇಲ್ ಅಹಮ್ಮದ್, ಸಾಮಾಜಿಕ ಹೋರಾಟಗಾರ ಜಿ.ಕೆ.ಮೋಹನ್, ಪತ್ರಕರ್ತ ಧರಣೀಶ್ ಬೂಕನಕೆರೆ, ನಿವೃತ್ತ ಅಧಿಕಾರಿ ಸಣ್ಣಭತ್ತಪ್ಪ ಕಾರ್ಯಕ್ರಮದಲ್ಲಿ ಇದ್ದರು.