ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆವರಣದಲ್ಲಿ ಬಿಜೆಪಿ ಬೆಂಬಲಿತ ಎಬಿವಿಪಿ ಸದಸ್ಯರು ಇಸ್ರೇಲ್ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ಪ್ಯಾಲೆಸ್ತೀನ್ ಧ್ವಜ ಸುಟ್ಟು, ಇಸ್ತೇಲ್ ಪರವಾದ ಘೋಷಣೆಗಳನ್ನು ಕೂಗಿದ್ದಾರೆ. ಭಾರತದಲ್ಲಿ ಇಸ್ಲಾಮೋಫೋಬಿಯಾವನ್ನು ಹರಡುವ ತಂತ್ರದ ಭಾವವಾಗಿ ಈ ಪ್ರತಿಭಟನೆ ನಡೆದಿದೆ ಎಂದು ಹೇಳಲಾಗಿದೆ.
ಹಿಂದುತ್ವವಾದಿ ವಿದ್ಯಾರ್ಥಿ ಸಂಘಟನೆ ಎಪಿವಿಪಿಯ ಮುಖಂಡರು ಪ್ಯಾಲೆಸ್ತೀನ್ ಧ್ವಜವನ್ನು ಸುಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಬಿವಿಪಿಯ ನಡೆಯನ್ನು ಹಲವಾರು ವಿದ್ಯಾರ್ಥಿ ಸಂಘಟನೆಗಳು ಖಂಡಿಸಿವೆ. ಎಬಿವಿಪಿ ಮುಖಂಡರ ವಿರುದ್ಧ ವಿಶ್ವವಿದ್ಯಾಲಯವು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ.
ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಿದೆ. ತನ್ನ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 50,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಕೊಂದಿದೆ. ಇಡೀ ಜಗತ್ತು ಪ್ಯಾಲೆಸ್ತೀನ್ ಪರವಾಗಿ ನಿಲ್ಲಬೇಕು. ಪ್ಯಾಲೆಸ್ತೀನ್‌ನಲ್ಲಿ ಶಾಂತಿ ನೆಲೆಸಲು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಬೇಕು ಎಂಬ ಒತ್ತಾಯಗಳಿವೆ.
ಪ್ಯಾಲೆಸ್ತೀನ್ ಪರವಾಗಿ ಭಾರತದಲ್ಲಿ ಹಲವಾರು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಶಾಂತಿಗಾಗಿ ಒತ್ತಾಯಿಸುತ್ತಿವೆ. ಇಂತಹ ಸಂದರ್ಭದಲ್ಲಿ ಎಬಿಪಿವಿ ಮುಖಂಡರು ಜೆಎನ್‌ಯುನಲ್ಲಿ ಇಸ್ರೇಲ್ ಪರವಾಗಿ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದ್ದಾರೆ.
In a blatant Islamophobic act, members of the Akhil Bharatiya Vidyarthi Parishad (ABVP) at Jawaharlal Nehru University (JNU) burnt a Palestinian flag inside the campus on Saturday, April 26, while chanting slogans in support of Israel.
— The Siasat Daily (@TheSiasatDaily) April 27, 2025
A video has emerged where the Hindutva… pic.twitter.com/yA4lis7Xmg
“ಎಬಿವಿಪಿ ಎಸಗಿರುವ ಈ ಕೃತ್ಯವು ಸಾವಿರಾರು ಪ್ಯಾಲೆಸ್ತೀನಿಯರ ನರಮೇಧ ನಡೆಸಿದ ಇಸ್ರೇಲ್ ಆಡಳಿತಕ್ಕೆ ಬಿಜೆಪಿ-ಎಬಿವಿಪಿಯ ನಿಷ್ಠೆಯನ್ನು ಪ್ರತಿಬಿಂಬಿಸುತ್ತದೆ. ಇಸ್ಲಾಮೋಫೋಬಿಕ್ ಮತ್ತು ದ್ವೇಷಪೂರಿತ ಕೃತ್ಯದ ಮೂಲಕ ಕ್ಯಾಂಪಸ್‌ನಲ್ಲಿ ಹಿಂಸಾಚಾರ ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಎಬಿವಿಪಿ ಪ್ರಯತ್ನಿಸುತ್ತಿದೆ. ಇಂತಹ ಕೃತ್ಯಗಳು ವಿಶ್ವವಿದ್ಯಾಲಯದಲ್ಲಿ ಶಾಂತಿ, ಸಾಮರಸ್ಯದ ಮೇಲೆ ನೇರ ದಾಳಿಯಾಗಿವೆ” ಎಂದು ಫ್ರೆಟರ್ನಿಟಿ ಮೂವ್‌ಮೆಂಟ್ ಹೇಳಿದೆ.
ಎಬಿವಿಪಿಯ ಧೋರಣೆ ಖಂಡಿಸಿ ಮುಸ್ಲಿಂ ವಿದ್ಯಾರ್ಥಿ ಒಕ್ಕೂಟ (ಎಂಎಸ್‌ಎಫ್) ಕೂಡ ಹೇಳಿಕೆ ಬಿಡುಗಡೆ ಮಾಡಿದೆ. “ದ್ವೇಷದಿಂದ ಲಾಭ ಪಡೆಯಲು ಯತ್ನಿಸುವವರಿಂದ ನಾವು ಏನನ್ನು ಬಯಸಲು ಸಾಧ್ಯ. ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಿರುವ ಜನರ ಧ್ವಜವನ್ನು ಸುಡುವುದು ನಿಮ್ಮನ್ನು (ಎಬಿವಿಪಿ) ಬಲಪಡಿಸುವುದಿಲ್ಲ. ಅದು ನಿಮ್ಮ ರಾಜಕೀಯದ ಶೂನ್ಯತೆಯನ್ನು ಮಾತ್ರ ಬಹಿರಂಗಪಡಿಸುತ್ತದೆ” ಎಂದು ಹೇಳಿದೆ.
ಮತ್ತೊಂದು ವಿದ್ಯಾರ್ಥಿ ಸಂಘಟನೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ), “ಎಬಿವಿಪಿಯ ಕ್ರಮವು ‘ನರಮೇಧದ ವೈಭವೀಕರಣ’ವಾಗಿದೆ. ಇಂತಹ ನಡೆಗಳು ನೈತಿಕವಾಗಿ ಅಸಹ್ಯಕರ ಮಾತ್ರವಲ್ಲದೆ ದ್ವೇಷ ಮತ್ತು ಹಿಂಸೆಗೆ ಸ್ಪಷ್ಟ ಪ್ರಚೋದನೆ ನೀಡುತ್ತವೆ. ರಾಷ್ಟ್ರೀಯ ಚಿಹ್ನೆಗಳಿಗೆ ಉದ್ದೇಶಪೂರ್ವಕವಾಗಿ ಅಗೌರವ ತೋರುವುದು, ನರಮೇಧವನ್ನು ವೈಭವೀಕರಿಸುವುದು ಮಾನವೀಯತೆ ಮತ್ತು ಘನತೆಯ ತತ್ವಗಳನ್ನು ಉಲ್ಲಂಘಿಸುವ ಕೃತ್ಯಗಳಾಗಿವೆ. ಈ ರೀತಿಯ ಧರ್ಮಾಂಧತೆ ಮತ್ತು ಆಕ್ರಮಣಶೀಲತೆಗೆ ಪ್ರಜಾಪ್ರಭುತ್ವ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ” ಎಂದು ಹೇಳಿದೆ.