ಜಾತಿ ಗಣತಿಯಲ್ಲಿ ನಮ್ಮ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಕೆಲವು ಜಾತಿಗಳು ವಾದಿಸುತ್ತಿವೆ. ಆದರೆ ಇದಕ್ಕೆ ಆ ಜಾತಿಗಳ ಅಭಿವೃದ್ಧಿಯೇ ಕಾರಣ ಇರಬಹುದು. ಮಾನವ ಸೂಚ್ಯಂಕದಲ್ಲಿ ಚಲನೆ ಕಂಡ ಸಮುದಾಯಗಳಲ್ಲಿ ಜನಸಂಖ್ಯೆ ಕುಸಿತವಾಗುತ್ತದೆ ಎಂದು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ ಎ.ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ಜಾಗೃತ ಕರ್ನಾಟಕ ಸಂಘಟನೆಯು ಭಾನುವಾರ ಹಮ್ಮಿಕೊಂಡಿದ್ದ ‘ಜಾತಿ ಗಣತಿ ಚಿಂತನೆ- ಮಂಥನ’ ಕಾರ್ಯಕ್ರಮದಲ್ಲಿ ವಿಸ್ತೃತವಾಗಿ ಮಾತನಾಡಿದ ಅವರು ಜಾತಿ ಗಣತಿಯ ವಿವರಗಳನ್ನು ಬಿಚ್ಚಿಟ್ಟರು.
ರಾಜ್ಯ ಸರ್ಕಾರದ ಬಳಿ ಇರುವ ಜಾತಿ ಗಣತಿಯನ್ನು ಮೂರು ಭಾಗವಾಗಿ ನೋಡಬೇಕೆಂದು ವಿಶ್ಲೇಷಿಸಿರುವ ಅವರು, ಹಿಂದುಳಿದ ಸಮುದಾಯಗಳ ಮುಂದಿರುವ ಸವಾಲುಗಳನ್ನು ವಿವರಿಸಿದರು.
ಅವರ ಭಾಷಣದ ಪ್ರಮುಖ ಅಂಶಗಳು ಈ ಕೆಳಗಿವೆ:
- ಜಾತಿ ಗಣತಿಯನ್ನು ಮಾಡಿದ ಮೊಟ್ಟಮೊದಲ ರಾಜ್ಯ ಕರ್ನಾಟಕ. ಹಿಂದುಳಿದ ವರ್ಗದ ಮುಖ್ಯಮಂತ್ರಿ ಅಧಿಕಾರದಲ್ಲಿ ಇದ್ದರೂ ಆ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಆಗುತ್ತಿಲ್ಲ. ಈಗ ನಮ್ಮ ಬಳಿ ಇರುವುದು ಅಧಿಕೃತವಲ್ಲದ ವರದಿ. ಇದು ಕಾಂಗ್ರೆಸ್ ಅಥವಾ ಸಿದ್ದರಾಮಯ್ಯನವರು ಎದುರಿಸುತ್ತಿರುವ ಸ್ಥಿತಿ ಎಂದು ಹೇಳಲಾಗದು. ಇದು ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಬಿಕ್ಕಟ್ಟು ಎಂದೇ ಹೇಳಬೇಕು.
- ಮಂಡಲ್ ಆಯೋಗದ ವರದಿಯನ್ನು ವಿ.ಪಿ.ಸಿಂಗ್ ಅವರೊಬ್ಬರ ನಿರ್ಧಾರದಿಂದ ಜಾರಿಗೆ ತರಲಾಗಲಿಲ್ಲ. ಇಂದ್ರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಎತ್ತಿಹಿಡಿಯಿತು. ಹೀಗಾಗಿ ಮಂಡಲ್ ವರದಿ ಜಾರಿಗೆ ಬಂದಿತು. ‘ಸಿದ್ದರಾಮಯ್ಯನವರು ಬಿಡುಗಡೆ ಮಾಡಲು ಹೊರಟಿರುವ ವರದಿಯು ರಾಜಕೀಯಪ್ರೇರಿತವಾದದ್ದು, ಕೆಲವು ಜಾತಿಗಳನ್ನು ಮಣಿಸಬೇಕು ಎಂಬ ಹುನ್ನಾರದಿಂದ ಒಬ್ಬ ನಾಯಕ ಮಾಡಿದ ವರದಿ ಇದು’ ಎಂದು ಆರೋಪಿಸುತ್ತಿದ್ದಾರೆ. ಖಂಡಿತ ಹಾಗೆ ಇಲ್ಲ. ಮಂಡಲ್ ಕಮಿಷನ್‌ಗೆ ಸಂಬಂಧಿಸಿದ ಇಂದ್ರಾ ಸಹಾನಿ ಪ್ರಕರಣದ ತೀರ್ಪಿನಿಂದ ಕರ್ನಾಟಕ ಜಾತಿ ಸಮೀಕ್ಷೆಯ ಇತಿಹಾಸ ಶುರುವಾಗುತ್ತದೆ. ‘ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಹೀಗಾಗಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಬೇಕು. ಆಯೋಗವು ನಿರಂತರವಾಗಿ ಪರಿಶೀಲನೆಗಳನ್ನು ನಡೆಸಬೇಕು. ಯಾರನ್ನು ಒಬಿಸಿ ಪಟ್ಟಿಯಿಂದ ಹೊರಗಿಡಬೇಕು ಅಥವಾ ಸೇರಿಸಬೇಕು ಎಂಬುದನ್ನು ಶಿಫಾರಸ್ಸು ಮಾಡಬೇಕು ಹಾಗೂ ಪ್ರತಿ ಹತ್ತು ವರ್ಷಗಳಿಗೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಬೇಕು’ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸೂಚಿಸಲಾಗಿದೆ. ಹೀಗಾಗಿ ಈ ಜಾತಿ ಸಮೀಕ್ಷೆಯು ಸಿದ್ದರಾಮಯ್ಯ ಅವರು ಮಾಡಿದ್ದಲ್ಲ. ಸುಪ್ರೀಂ ಕೋರ್ಟ್‌ನ ಆದೇಶದಂತೆ ರಚಿತವಾಗಿರುವ ಆಯೋಗವು ಈ ಕೆಲಸವನ್ನು ಕಾಲಕಾಲಕ್ಕೆ ಮಾಡಲೇಬೇಕಾಗುತ್ತದೆ. ಎಲ್ಲ ರಾಜ್ಯಗಳಲ್ಲಿ ಆಯೋಗಗಳು ರಚನೆಯಾದರೂ ಸಮೀಕ್ಷೆಗಳನ್ನು ನಡೆಸಲಿಲ್ಲ. ಕೋರ್ಟ್‌ನ ಆದೇಶದಂತೆ ಕೆಲಸವನ್ನು ಕೈಗೆತ್ತಿಕೊಂಡಿದ್ದು ಸಿದ್ದರಾಮಯ್ಯನವರ ಸರ್ಕಾರ ಮಾತ್ರ. ಸುಪ್ರೀಂ ಕೋರ್ಟ್ ಹೇಳಿದ್ದನ್ನು ಜಾರಿಗೆ ತರುವಲ್ಲಿ ಎಲ್ಲಿದೆ ರಾಜಕೀಯ?
- ಯಾರಿಗೆ ಎಷ್ಟು ಪ್ರಮಾಣದ ಮೀಸಲಾತಿ ಎಂಬುದನ್ನು ಶಿಫಾರಸ್ಸು ಮಾಡುವ ಅಧಿಕಾರ ಆಯೋಗಕ್ಕಿದೆ. ಕಾಂತರಾಜ ನೇತೃತ್ವದ ಆಯೋಗ ಮಾಡಿದ ಜಾತಿ ಸಮೀಕ್ಷೆಯ ಮುಂದುವರಿಕೆಯಾಗಿ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಸರ್ಕಾರಕ್ಕೆ ಕೊಟ್ಟಿರುವ ವರದಿಯ ಸ್ವರೂಪದ ಬಗ್ಗೆ ಮೂಲಭೂತ ಅರಿವು ಇರಬೇಕಾಗುತ್ತದೆ. ಈಗ ಹೊರಬಿದ್ದಿರುವ ವಿವರಗಳು ಸಾರರೂಪವಷ್ಟೇ. ಮಿಕ್ಕೆಲ್ಲ ವಿವರಗಳೆಲ್ಲ ವಿಧಾನಸೌಧದ ಪೆಟ್ಟಿಗೆಯಲ್ಲಿವೆ.
- ಜಾತಿ ಸಮೀಕ್ಷೆಯನ್ನು ಮೂರು ಭಾಗವಾಗಿ ನೋಡಬಹುದು: ಭಾಗ 1: ಸಮಸ್ತ ಜಾತಿಗಳ ಅಂಕಿ-ಅಂಶಗಳು ಇದರಲ್ಲಿವೆ. ಐಎಂಎಂ ಡಿಟಾಬೇಸ್‌ನಲ್ಲಿ ಮೂಲ ದಾಖಲೆಗಳು ಭದ್ರವಾಗಿವೆ. ಭಾಗ 2: ಇಲ್ಲಿ ಮೂಲ ದಾಖಲೆಯ ಸಂಖ್ಯೆ ಇಟ್ಟುಕೊಂಡು ಸಂಖ್ಯಾಶಾಸ್ತ್ರಾತ್ಮಕ ವಿಶ್ಲೇಷಣೆ ಮಾಡಲಾಗಿದೆ. ಯಾವ ಜಾತಿಗಳು ಎಷ್ಟು ಅಭಿವೃದ್ಧಿ ಸಾಧಿಸುವೆ? ಶೈಕ್ಷಣಿಕ, ರಾಜಕೀಯ, ನೌಕರಿ, ಆಸ್ತಿಯ ಪಾಲು ಎಷ್ಟು?- ಇತ್ಯಾದಿ ಮಹತ್ವದ ಸಂಗತಿಗಳನ್ನು ಎರಡನೇ ಭಾಗದಲ್ಲಿ ವಿವರಿಸಿದ್ದಾರೆ. ಭಾಗ 3: ಶಿಫಾರಸ್ಸಿನ ಪಟ್ಟಿ ಇಲ್ಲಿದೆ. ಯಾವ ಜಾತಿಗೆ ಎಷ್ಟು ಮೀಸಲಾತಿ ಕೊಡಬೇಕು ಎಂಬ ಶಿಫಾರಸ್ಸುಗಳನ್ನು ಕಾಣಬಹುದು. ಈ ಶಿಫಾರಸ್ಸುಗಳನ್ನು ಕಾಂತರಾಜ ಆಯೋಗದ ವರದಿಯಲ್ಲೇ ಕೊಡಲಾಗಿತ್ತು. ಅದರ ಮೂಲಪ್ರತಿ ಕಳವಾಗಿದೆ ಎಂದು ಹೇಳಲಾಗುತ್ತದೆ. ಆದರೆ ಮೂಲ ದಾಖಲೆಗಳು ಭದ್ರವಾಗಿರುವಾಗ ಈ ವಾದದಲ್ಲಿ ಹುರುಳಿಲ್ಲ. ಯಾವುದೋ ಒಂದು ದಾಖಲೆ ಕಳವಾಗಿದೆ ಎಂದು ಯೋಚಿಸಬೇಕಿಲ್ಲ.
- ಡಿ.ದೇವರಾಜು ಅರಸು ಅವರ ಕಾಲದಲ್ಲಿ ಎಲ್.ಜಿ.ಹಾವನೂರು ಅವರ ಆಯೋಗದ ವರದಿ ಸಲ್ಲಿಕೆಯಾಗಿತ್ತು. ಮುಖ್ಯಮಂತ್ರಿಯಾಗಿದ್ದ ಅರಸು ಹಿಂದುಳಿದ ವರ್ಗಕ್ಕೆ ಸೇರಿದವರು. ಅದನ್ನು ಜಾರಿಗೆ ತಂದರು. ಅರಸು ಅವರಿಗಿಂತ ಮುಂಚೆ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಮಿಲ್ಲರ್ ಸಮಿತಿ ಮಾಡಿ, ಅದರ ಶಿಫಾರಸ್ಸುಗಳನ್ನು ಜಾರಿಗೆ ತಂದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಅವರು ಕೂಡ ಹಿಂದುಳಿದ ಜಾತಿಗೆ (ಯಾದವ ಸಮುದಾಯಕ್ಕೆ) ಸೇರಿದವರು. ರಾಮಕೃಷ್ಣ ಹೆಗಡೆಯವರ ಅಧಿಕಾರವಧಿಯಲ್ಲಿ ವೆಂಕಟಸ್ವಾಮಿ ಆಯೋಗ ರಚಿಸಲಾಯಿತು. ಆದರೆ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಲಿಲ್ಲ. ವೆಂಕಟಸ್ವಾಮಿ ಆಯೋಗವು ಸಾಕಷ್ಟು ಜನರನ್ನು ಸಂಪರ್ಕಿಸಿ ವರದಿ ಮಾಡಿತ್ತು. ಹೆಗಡೆಯವರು ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಮುಂದೆ ಬಂದಿದ್ದು ಚಿನ್ನಪ್ಪ ರೆಡ್ಡಿ ಆಯೋಗ. ಅತ್ಯಂತ ಹಿಂದುಳಿದ ಸಮುದಾಯದಿಂದ ಬಂದ ವೀರಪ್ಪ ಮೊಯ್ಲಿಯವರು ಆ ವರದಿಯನ್ನು ಕೈಗೆತ್ತಿಕೊಂಡು ಜಾರಿಗೆ ತರುವ ಸಾಹಸ ಮಾಡಿದರು. ವಿಧಾನಸೌಧದ ಮೂರನೇ ಮಹಡಿಯಲ್ಲಿ ಮೊಯ್ಲಿ ಅವರನ್ನು ಅಡ್ಡಾಡಿಸಿಕೊಂಡ ಹೋದ ಇತಿಹಾಸವೂ ನಮ್ಮ ಮುಂದಿದೆ. ಈಗ ಹಿಂದುಳಿದ ವರ್ಗಗಳ ವರದಿಯನ್ನು ಕೈಗೆತ್ತಿಕೊಳ್ಳಲು ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯನವರೇ ಬರಬೇಕಾಯಿತು. ರಾಜಕೀಯ ಅಧಿಕಾರ ಏಕೆ ಬೇಕು, ನಾವು ಯಾಕೆ ಒಟ್ಟಿಗೆ ಇರಬೇಕು ಎಂಬುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಾ? ಅರಸು ಅವರು ಅನುಭವಿಸಿದ ಸಂಘಷ್ಟಗಳನ್ನು ನಾವು ಓದಬೇಕು. ಹಿಂದುಳಿದ ವರ್ಗದವರ ಚರಿತ್ರೆ ನಮಗೆ ಗೊತ್ತಿರಬೇಕು.
- ಜಾತಿ ಗಣತಿಯಲ್ಲಿ ಮೂಲ ಜಾತಿಗಳನ್ನು ನಮೂದಿಸಲಾಗಿದೆ. ಶೇ. 16 ಇದ್ದವರನ್ನು ಶೇ. 11ರಷ್ಟಕ್ಕೆ ಇಳಿಸಲಾಗಿದೆ ಎಂದು ಆಕ್ಷೇಪ ಎತ್ತಲಾಗಿದೆ. ವರದಿಯನ್ನು ನಾವು ಸರಿಯಾಗಿ ಗಮನಿಸಬೇಕು. ಆ ಜಾತಿಗಳ ಪ್ರಮಾಣ ಕುಸಿತವಾಗಿದೆ ಎಂಬುದನ್ನು ನೋಡಬೇಕು. ಆರ್ಥಿಕವಾಗಿ ಸಬಲರಾದ ಮತ್ತು ಮಧ್ಯಮವರ್ಗವಾಗಿ ಹೊಮ್ಮಿದ ಜಾತಿಗಳಲ್ಲಿ ಜನನ ಪ್ರಮಾಣ ಕುಸಿತವಾಗಿರುತ್ತದೆ. ಜಾತಿ ಪ್ರಮಾಣ ಕಡಿಮೆಯಾಗಿರಲು ಇದು ಕಾರಣವಾಗಿರಬಹುದು. ವಲಸೆಯ ಕಾರಣ ಅನೇಕ ಜನ ಹೊರಗೆ ಇದ್ದಾರೆ. ಅನೇಕರು ಜಾತಿಯನ್ನು ಸಮೀಕ್ಷೆಯ ವೇಳೆ ಹೇಳಿಕೊಂಡಿಲ್ಲ. ಏನೋ ಪಿತೂರಿ ಮಾಡುತ್ತಿದ್ದಾರೆ ಎಂಬ ಮಾನೋಭಾವ ಅಂಥವರಿಗೆ ಇತ್ತೆಂದು ತೋರುತ್ತದೆ.
- ರಾಜ್ಯ ಸರ್ಕಾರ ಸದರಿ ವರದಿಯನ್ನು ಹೀಗಿಯೇ ಜಾರಿಗೆ ತರುವುದಾಗಿ ಹೇಳಿದರೆ ಸಮಸ್ತ ಹಿಂದುಳಿದ ವರ್ಗಗಳು ಈ ಸರ್ಕಾರದ ಬೆನ್ನಿಗೆ ನಿಲ್ಲಬೇಕು. ವರದಿಯನ್ನು ಒಪ್ಪಿಕೊಳ್ಳುವಂತೆ ಪ್ರಬಲ ಜಾತಿಗಳ ಮೇಲೆ ಒತ್ತಡವನ್ನೂ ಹಿಂದುಳಿದ ಜಾತಿಗಳು ತರಬೇಕಿದೆ. ಸರ್ಕಾರ ಎಲ್ಲರನ್ನೂ ನಿಭಾಯಿಸಬೇಕಾಗಿರುವುದರಿಂದ ಮತ್ತೊಂದು ವರದಿ ಮಾಡಲು ಮುಂದಾದ್ದಲ್ಲಿ ಅದನ್ನೂ ಒಬಿಸಿಗಳು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಕೆಲವು ಎಚ್ಚರಿಕೆಯನ್ನು ವಹಿಸುವ ಅಗತ್ಯವಿದೆ. ಆಗ ವಿಳಂಬ ನೀತಿಯನ್ನು ಅನುಸರಿಸದಂತೆ ನೋಡಿಕೊಳ್ಳಬೇಕು. ಜಾತಿಗಳಲ್ಲಿನ ಕೆಲವು ಉಪಜಾತಿಗಳು ತಮ್ಮನ್ನು ಹಿಂದುಳಿದ ಜಾತಿಗೆ ಸೇರಿಸುವಂತೆ ಒತ್ತಾಯಿಸುವ ಸಾಧ್ಯತೆ ಇದೆ. ಇದನ್ನು ತಡೆಯಬೇಕು. ಈ ಎಚ್ಚರಿಕೆಯನ್ನು ಇಟ್ಟುಕೊಂಡು ನಾವು ಸರ್ಕಾರದ ಹೊಸ ನಿರ್ಧಾರಕ್ಕೂ ಸ್ವಾಗತಿಸಬೇಕಾಗಬಹುದು.
- ಸೋರಿಕೆಯಾದ ವರದಿಯಲ್ಲಿ ಸಂಪೂರ್ಣ ವಿವರಗಳಿಲ್ಲ. ಯಾವ ಜಾತಿಯ ಬಳಿ ಎಷ್ಟು ಭೂಮಿ ಇದೆ, ಯಾವ ಜಾತಿಯ ಉದ್ಯೋಗ ಪ್ರಮಾಣ ಎಷ್ಟಿದೆ, ಮೊದಲಾದ ಸಾಮಾಜಿಕ ವಿವರಗಳು ಸದ್ಯ ಸೋರಿಯಾಗಿರುವ ಪ್ರತಿಯಲ್ಲಿ ಇಲ್ಲ. ಇನ್ನೊಂದು ಕಂತಿನ ವರದಿಯಲ್ಲಿ ಆ ವಿವರಗಳಿವೆ. ಆ ಮಾಹಿತಿಯನ್ನು ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಮುಂದೆ ಇಡಬೇಕು. ಬಿಹಾರದಲ್ಲಿ ಜಾತಿ ಗಣತಿ ಬಿಡುಗಡೆಯಾದಾಗ ಚರ್ಚೆಯಾಗಿದ್ದೇ ಆ ವಿವರಗಳು. ಆ ಅಂಕಿ- ಅಂಶಗಳ ಆಧಾರದ ಮೇಲೆ ರಾಜ್ಯದ ಪ್ರತಿ ಜಾತಿಯ ಮಾನವ ಅಭಿವೃದ್ಧಿ ಸೂಚ್ಯಂಕದ ಲೆಕ್ಕವನ್ನು ಸರ್ಕಾರ ಬಿಡುಗಡೆ ಮಾಡಬೇಕು. ಮಾನವ ಅಭಿವೃದ್ಧಿ ಸೂಚ್ಯಂಕದ ಮಾಹಿತಿ ಹೊರಬಿದ್ದರೆ ಕೆಲವು ಜಾತಿಗಳ ಸಂಖ್ಯೆ ಕುಸಿತವಾಗಿರುವ ಕಾರಣ ತಿಳಿಯುತ್ತದೆ. ಏಕೆಂದರೆ ಮಾನವ ಅಭಿವೃದ್ಧಿ ಸೂಚ್ಯಂಕ ಉತ್ತಮವಾಗಿರುವಲ್ಲಿ ಜನಸಂಖ್ಯೆ ಕಡಿಮೆ ಇರುತ್ತದೆ ಎಂಬುದು ವೈಜ್ಞಾನಿಕ ಸತ್ಯ. ಸೂಚ್ಯಂಕಕ್ಕೆ ಅದೊಂದು ಸಾಕ್ಷ್ಯ.
- ವರದಿ ಮಾಡಿರುವ ಶಿಫಾರಸ್ಸಿನ ವಿಚಾರಕ್ಕೆ ಬಂದರೆ ಪ್ರವರ್ಗಗಳ ಮರು ಹೊಂದಾಣಿಕೆ ಮತ್ತು ಮೀಸಲಾತಿ ಪ್ರಮಾಣದ ವಿವರಗಳಿವೆ. ಈಗ ಹಿಂದುಳಿದ ವರ್ಗಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಲು ಶಿಫಾರಸ್ಸು ಮಾಡಲಾಗಿದೆ. ಈ ಮೊದಲು ಪ್ರವರ್ಗ 1, ಪ್ರವರ್ಗ 2ಎ, ಪ್ರವರ್ಗ 2ಬಿ, ಪ್ರವರ್ಗ 3ಎ, ಪ್ರವರ್ಗ 3ಬಿ ಎಂದಿತ್ತು. ಜಯಪ್ರಕಾಶ್ ಹೆಗ್ಡೆ ಅವರ ಆಯೋಗದ ಶಿಫಾರಸ್ಸು ಏನೆಂದರೆ ಪ್ರವರ್ಗ 1ನ್ನು ಪ್ರವರ್ಗ 1ಎ, ಪ್ರವರ್ಗ 1ಬಿ ಎಂದು ವಿಂಗಡಿಸಬೇಕು ಎಂಬುದಾಗಿದೆ. 2ಎ, 2ಬಿ ಮುಂದುವರಿಯುತ್ತದೆ. ಆದರೆ 2ಎಯಲ್ಲಿನ ಕೆಲವು ಜಾತಿಗಳನ್ನು ಬೇರೆಡೆ ಸೇರಿಸಲಾಗುತ್ತದೆ. 3ಎ ಮತ್ತು 3ಬಿ ಮುಂದುವರಿಯುತ್ತದೆ. ಅಲ್ಲಿ ಕೆಲವು ಜಾತಿಗಳನ್ನು ಹೊಂದಾಣಿಕೆ ಮಾಡಲಾಗಿದೆ. ಆಯಾ ಜಾತಿಗಳಿಗೆ ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ. ಈಗ ಇರುವುದು 32 % ಮೀಸಲಾತಿ. ಅದನ್ನು ಶೇ. 52ಕ್ಕೆ ಏರಿಸಲಾಗಿದೆ. ಎಲ್ಲ ಜಾತಿಗಳಿಗೂ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಪ್ರವರ್ಗ 1ರ ಮೀಸಲಾತಿ ಶೇ. 15 ಇದ್ದದ್ದು ಶೇ.10ಕ್ಕೆ ಇಳಿದಿರುವಂತೆ ಕಾಣುತ್ತದೆ. ಆದರೆ ಜಾತಿಗಳ ಸಂಖ್ಯೆ ಕಡಿಮೆ ಆಗಿದೆ ಎಂಬುದನ್ನು ಗಮನಿಸಬೇಕು. ಇನ್ನೊಂದೆಡೆ ಯಾರ ಜನಸಂಖ್ಯೆ ಕಡಿಮೆ ಆಗಿದೆಯೋ ಅವರಿಗೆ ಮೀಸಲಾತಿ ಕೂಡ ಹೆಚ್ಚಾಗಿದೆ.
- ಪ್ರವರ್ಗ 1ಬಿ ಯಾಕೆ ಸೃಷ್ಟಿ ಮಾಡಿದ್ದೀರಿ ಎಂದು ನಾವು ಕೇಳಬೇಕಾಗಿದೆ. ಅದಕ್ಕೆ ನೀಡಬೇಕಾದ ಕಾರಣವನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದೆ. ಸದ್ಯಕ್ಕೆ ಕೊಟ್ಟಿರುವ ಕಾರಣ ಒಂದೆರಡು ವಾಕ್ಯಗಳಲ್ಲಿ ಇದೆ. ಅಷ್ಟು ಸಾಲುವುದಿಲ್ಲ. ಆದರೆ ಎಲ್ಲ ವರ್ಗಕ್ಕೂ ಕ್ರೀಮಿ ಲೇಯರ್ ಅನ್ವಯಿಸಲಾಗಿದೆ. ಮಂಡಲ್ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ತತ್ವ ಇದು. ಹಿಂದುಳಿದ ವರ್ಗಕ್ಕೆ ಮೀಸಲಾತಿ ಕೊಡಿ, ಮುಂದುವರಿದವರನ್ನು ಹೊರಗಿಡಿ ಎಂಬುದು ಆ ತತ್ವವಾಗಿತ್ತು. ಮುಂದುವರಿದವರು ಎಂದು ಹೇಗೆ ನಿರ್ಧರಿಸುವುದು ಎಂಬಲ್ಲಿ ಅಪಾಯ ಕೂಡ ಇದೆ. ಈ ಕುರಿತು ಹಿಂದುಳಿದವರು ಚರ್ಚಿಸಬೇಕು.
- ಅನೇಕ ಅನಾಮಿಕ ಜಾತಿಗಳಿವೆ. ಆ ಅನಾಮಿಕ ಜಾತಿಗಳಿಂದ ಒಬ್ಬ ಡಿ ಗ್ರೂಪ್ ನೌಕರ ಕೂಡ ಈವರೆಗೆ ಸೃಷ್ಟಿಯಾಗಿಲ್ಲವೆಂದು ವರದಿ ಹೇಳುತ್ತದೆ. ಅಂತಹ ಜಾತಿಗಳಿಗೆ ನ್ಯಾಯ ಒದಗಿಸಬೇಕು. ಸಮಸ್ತ ಒಬಿಸಿಗಳು ರಾಜಕೀಯ ಶಕ್ತಿಯಾಗಿ ಗುರುತಿಸಿಕೊಳ್ಳಬೇಕು. ಅನಾಮಿಕ ಜಾತಿಗಳ ಉನ್ನತೀಕರಣಕ್ಕೆ ವಿಶೇಷ ನೇಮಕಾತಿ ಅಭಿಯಾನ ನಡೆಸಬೇಕು. ಅಂತಹ ಕೆಲಸದಿಂದ ಮಾತ್ರ ಕರ್ನಾಟಕವೂ ಮಾದರಿ ರಾಜ್ಯವಾಗುತ್ತದೆ. ಅಂತಹ ಸಾಮಾಜಿಕ ನ್ಯಾಯವು ಕರ್ನಾಟಕದ ಮಾದರಿಯಾಗಬೇಕಾಗಿದೆ.
- ಹಿಂದುಳಿದವರ ಸಂಖ್ಯೆ 70 ಪರ್ಸೆಂಟ್ ಎಂದು ವರದಿ ಹೇಳುತ್ತದೆ. ಆದರೆ 3ಎ ಮತ್ತು 3ಬಿಗೆ ಸೇರಿದವರು ಹಿಂದುಳಿದವರಲ್ಲ. ಅವರನ್ನು ಅಧಿಕೃತ ಹಿಂದುಳಿದ ಪಟ್ಟಿಗೆ ಸೇರಿಸಲಾಗಿದೆಯೇ ಹೊರತು ಅವರು ಹಿಂದುಳಿದವರಲ್ಲ. ನಮ್ಮದು ಕ್ಯಾಟಗರಿ 1ಎ, 1ಬಿ, 2ಎಗೆ ಮಾತ್ರ ಸೀಮಿತವಾಗಿರುವುದಾಗಿ ಹಿಂದುಳಿದ ವರ್ಗಗಳು ಯೋಚಿಸಬೇಕು. 2ಬಿಯಲ್ಲಿ ಮುಸ್ಲಿಮರು ಬರುತ್ತಾರೆ. ಅವರ ಸ್ಥಿತಿಗತಿಗಳ ಬಗ್ಗೆ ಸಾಚಾರ್ ಕಮಿಟಿಯ ವರದಿ ಇದೆ. ಅದು ಬೇರೆಯ ಚರ್ಚೆಯ ವಿಚಾರ. ಮೊದಲ ಮೂರು ಕ್ಯಾಟಗರಿಯ ವಿಚಾರದಲ್ಲಿ ಒಬಿಸಿಗಳು ಗಂಭೀರವಾಗಿ ಯೋಚಿಸಬೇಕಾಗಿದೆ.