ಬಾಗಲಕೋಟೆ ತಾಲೂಕಿನ ಬೊಡನಾಯಕನದಿನ್ನಿಯಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಗೆ ಸಿಡಿಲು ಬಡಿದು ಭಾರತಿ(41) ಎಂಬುವವರು ಮೃತಪಟ್ಟಿದ್ದಾರೆ. ಹೊಲದ ಕೆಲಸ ಮುಗಿಸಿ, ಮನೆಗೆ ಮರಳುತ್ತಿದ್ದ ವೇಳೆ ಸಿಡಿಲು ಬಡಿದಿದೆ.
ಬಾಗಲಕೋಟೆ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆಯಾಯಿತು.
ಗದಗ ಜಿಲ್ಲೆಯ ಗಜೇಂದ್ರಗಡ ಸಮೀಪದ ಇಟಗಿ ಗ್ರಾಮದ ಹೊಲದಲ್ಲಿ ಸಿಡಿಲು ಬಡಿದು 8 ಆಡು ಮತ್ತು 4 ಕುರಿಗಳು ಮೃತಪಟ್ಟಿವೆ. 6 ಕುರಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆಯಾಗಿದೆ. ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಕೊಯ್ಲಿಗೆ ಸಿದ್ದವಾಗಿದ್ದ ಹಿಂಗಾರು ಭತ್ತದ ಬೆಳೆ ಮಣ್ಣು ಪಾಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಶನಿವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಭಾರೀ ಮಳೆಯಾಗಿದ್ದು, ಪುತ್ತೂರು, ಕಡಬ ತಾಲೂಕಿನ ಉಪ್ಪಿನಂಗಡಿ, ಕೊಯಿಲ, ಆಲಂಕಾರು, ನೆಲ್ಯಾಡಿ, ಸುಳ್ಯ ತಾಲೂಕಿನ ಬಳ್ಪ, ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ, ಮಡಂತ್ಯಾರ್, ನೆರಿಯ, ಕಕ್ಕಿಂಜೆ, ಬಂದಾರು ಪರಿಸರದಲ್ಲಿ ಬಿರುಸಿನ ಮಳೆ ಸುರಿದಿದೆ.
ಈ ಸುದ್ದಿ ಓದಿದ್ದೀರಾ? ಗುಡುಗು ಸಹಿತ ಮಳೆ ಮುಂದುವರಿಕೆ; 19 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಣೆ
ಕೊಡಗು ಜಿಲ್ಲೆಯ ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಬಿರುಸಿನ ಮಳೆ ಸುರಿಯಿತು. ಸುಮಾರು 45 ನಿಮಿಷಗಳ ಕಾಲ ಮಳೆಯಾಯಿತು. ಸಿದ್ದಾಪುರದಲ್ಲಿ ಹಗುರ ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ಬೇಸತ್ತಿದ್ದ ಜನರು ಹರ್ಷಗೊಂಡಿದ್ದಾರೆ.