ವೇಗವಾಗಿ ಬಂದ ವ್ಯಾನ್ ಬೈಕ್‌ಗೆ ಡಿಕ್ಕಿ ಹೊಡೆದು ಬಳಿಕ ನೀರು ತುಂಬಿದ ಬಾವಿಗೆ ಉರುಳಿ ಸುಮಾರು 11 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯಲ್ಲಿ ನಾರಾಯಣಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ರತ್ಲಂ ವಲಯದ ಉಪ ಮಹಾನಿರ್ದೇಶಕ (ಡಿಐಜಿ) ಮನೋಜ್ ಸಿಂಗ್, “ವ್ಯಾನ್‌ನಲ್ಲಿ 13 ಜನರು ಪ್ರಯಾಣಿಸುತ್ತಿದ್ದರು ಅವರಲ್ಲಿ ನಾಲ್ವರನ್ನು ರಕ್ಷಿಸಲಾಗಿದ್ದು, ಇತರ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ | ಭೀಕರ ಅಪಘಾತ; ಮಗು ಸೇರಿ 9 ಮಂದಿ ದಾರುಣ ಸಾವು
“ರಕ್ಷಣೆಗಾಗಿ ಬಾವಿಗೆ ಇಳಿದ ಮನೋಹರ್ ಎಂದು ಗುರುತಿಸಲಾದ ಗ್ರಾಮಸ್ಥರು ಸಹ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬಲಿಯಾದ ವ್ಯಕ್ತಿಯ ಶವವನ್ನು ಇನ್ನೂ ಬಾವಿಯಿಂದ ಹೊರತೆಗೆಯಲಾಗಿಲ್ಲ” ಎಂದು ಮಾಹಿತಿ ನೀಡಿದ್ದಾರೆ.
ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಬಾವಿಗೆ ಉರುಳಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಈ ಅಪಘಾತದಲ್ಲಿ ಬೈಕ್ ಸವಾರ ಕೂಡಾ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಸದ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಇತರ ಘಟಕಗಳ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳಕ್ಕೆ ಧಾವಿಸಿದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ, ಚಾಲಕನ ನಿಯಂತ್ರಣ ತಪ್ಪಿ ವಾಹನ ಬಾವಿಗೆ ಉರುಳಿದೆ ಎಂದು ಹೇಳಿದರು.
