ಬಸವ ಜಯಂತಿ ದಿನ ರೇಣುಕಾಚಾರ್ಯ ಜಯಂತಿ ಮತ್ತು 770 ಅಮರ ಗಣಂಗಳು ಮತ್ತು ಎಲ್ಲ ಮಹಾಪುರಷರ ಜಯಂತಿಗಳನ್ನು ಆಚರಿಸುವಂತೆ ಈ ಹಿಂದೆ ಹೊರಡಿಸಿಲಾದ ಸುತ್ತೋಲೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಇಂದು (ಏ.27) ಹಿಂಪಡೆದಿದೆ.
ಈ ಹಿಂದೆ ಆಚರಿಸುತ್ತಿದ್ದ ರೀತಿಯಲ್ಲೇ ಪ್ರತ್ಯೇಕವಾಗಿ ಬಸವ ಜಯಂತಿ, ರೇಣುಕಾಚಾರ್ಯ ಜಯಂತಿ ಹಾಗೂ ಇತರ ಜಯಂತಿಗಳನ್ನು ಪ್ರತ್ಯೇಕವಾಗಿ ಆಚರಿಸುವಂತೆ ಮಹಾಸಭಾದ ಎಲ್ಲ ಜಿಲ್ಲಾ, ತಾಲೂಕು ಘಟಕಗಳಿಗೆ ಆದೇಶ ಮೂಲಕ ಸೂಚಿಸಲಾಗಿದೆ.
ಆದೇಶದಲ್ಲಿ ಏನಿದೆ?
2025ರ ಮಾರ್ಚ್ 18 ರಂದು ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಸದಸ್ಯರು, ಜಿಲ್ಲಾ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧ್ಯಕ್ಷರು ಮೊದಲಾದವರು ಸಭೆ ಸೇರಿ ಕೆಲವು ನಿರ್ಣಯ ಕೈಗೊಂಡು ಅದರ ಪ್ರಕಾರವಾಗಿ ಈವರೆಗೆ ಪ್ರತ್ಯೇಕವಾಗಿ ಆಚರಿಸಲಾಗುತ್ತಿರುವ ಬಸವ ಜಯಂತಿ, ರೇಣುಕಾಚಾರ್ಯರ ಜಯಂತಿ ಮತ್ತು 770 ಅಮರ ಗಣಂಗಳು ಮತ್ತು ಎಲ್ಲ ಮಹಾಪುರುಷರ ಜಯಂತಿಗಳನ್ನು ಬಸವ ಜಯಂತಿಯಂದೇ ಆಚರಿಸುವಂತೆ ಮತ್ತು ಇದನ್ನು ಈ ವರ್ಷದಿಂದಲೇ ಅನುಷ್ಠಾನಕ್ಕೆ ತರುವಂತೆ ಏ.2ರಂದು ಕರ್ನಾಟಕ ರಾಜ್ಯ ಘಟಕದ ವತಿಯಿಂದ ಸುತ್ತೋಲೆ ಹೊರಡಿಸಲಾಗಿತ್ತು.
ʼರಾಜ್ಯ ಘಟಕದ ಸಭೆಯಲ್ಲಿ ವಿಶಾಲ ಮನೋಭಾವದಿಂದ ಮತ್ತು ಸಮಾಜದ ಒಗ್ಗಟ್ಟಿನ ಪ್ರದರ್ಶನದ ಉದ್ದೇಶದಿಂದ ಇಂತಹ ನಿರ್ಣಯ ಕೈಗೊಳ್ಳಲಾಗಿತ್ತು. ಯಾರಿಗೂ ನೋವುಂಟು ಮಾಡುವ ಉದ್ದೇಶ ಘಟಕದ್ದಾಗಿರಲಿಲ್ಲ. ಆದರೆ, ಈ ಸುತ್ತೋಲೆ ಹೊರ ಬಂದ ನಂತರ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ವೀರಶೈವ-ಲಿಂಗಾಯತರ ಒಗ್ಗಟ್ಟಿಗೆ ಭಂಗ ಬಾರದಂತೆ ಮತ್ತು ಸಮಾಜದ ಒಗ್ಗಟ್ಟನ್ನು ಮತ್ತು ಸಾಮರಸ್ಯವನ್ನು ಕಾಪಾಡುವ ದೃಷ್ಟಿಯಿಂದ ರಾಜ್ಯ ಘಟಕ ಹೊರಡಿಸಿರುವ ಈ ಸೂತ್ತೋಲೆಯನ್ನು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪನವರು ಕೂಡಲೇ ಹಿಂಪಡೆಯುವಂತೆ ಸೂಚಿಸಿರುತ್ತಾರೆʼ ಎಂದು ಮಹಾಸಭಾದ ಕಾರ್ಯದರ್ಶಿ ಎಚ್.ಎಮ್.ರೇಣುಕ ಪ್ರಸನ್ನ ಅವರು ಆದೇಶ ಪತ್ರಕ್ಕೆ ಸಹಿ ಹಾಕಿ ತಿಳಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ಸೂಚನೆಯಂತೆ ಈ ಸುತ್ತೋಲೆಯನ್ನು ಹಿಂಪಡೆಯಲಾಗಿದ್ದು, ಈ ಹಿಂದೆ ಆಚರಿಸುತ್ತಿದ್ದ ರೀತಿಯಲ್ಲೇ ಪ್ರತ್ಯೇಕವಾಗಿ ಬಸವಜಯಂತಿ, ರೇಣುಕಾಚಾರ್ಯ ಜಯಂತಿ ಆಚರಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಎದ್ದಿರುವ ವಿವಾದವನ್ನು ಇಲ್ಲಿಗೆ ಕೊನೆಗೊಳಿಸಿ, ಸಮಾಜದ ಏಕತ್ವವನ್ನು ಶ್ರೇಷ್ಠತೆಯಿಂದ ಪ್ರದರ್ಶಿಸಲು ಸವಿನಯಪೂರ್ವಕವಾಗಿ ಕೋರಲಾಗಿದೆ. ಈ ಹಿಂದಿನಂತೆ ಜಯಂತಿಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವಂತೆ ಆದೇಶ ಮೂಲಕ ನಿರ್ದೇಶಿಸಿದ್ದಾರೆ.
ಶಂಕರ ಬಿದರಿ ಹೊರಡಿಸಿದ ಸುತ್ತೋಲೆಗೆ ತೀವ್ರ ಖಂಡನೆ :
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಅವರು ಏ.30 ರಂದು ಬಸವ ಜಯಂತಿ ದಿನದಂದು ಪಂಚಾಚಾರ್ಯರ ಯುಗಮಾನೋತ್ಸವ ಹಮ್ಮಿಕೊಂಡಿರುವ ಸುತ್ತೋಲೆಯನ್ನು ತೀವ್ರವಾಗಿ ಖಂಡಿಸಿ ಶನಿವಾರ ಬೀದರ್‌ನಲ್ಲಿ ಮಠಾಧೀಶರ ನೇತ್ರತ್ವದಲ್ಲಿ ಬಸವಪರ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿ ಸುತ್ತೋಲೆ ಹಿಂಪಡೆಯುವಂತೆ ಆಗ್ರಹಿಸಿದರು.
ಈ ಆದೇಶ ಹೊರಡಿಸಿದ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಸವಾನುಯಾಯಿಗಳು ಶಂಕರ ಬಿದರಿ ಅವರ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದು ಘೋಷಣೆ ಕೂಗಿದರು.
ಬಳಿಕ ಅಖಿಲ ಭಾರತ ವೀರಶೈವ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿಗಳು, ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಈಶ್ವರ ಖಂಡ್ರೆ ಅವರನ್ನು ಬಸವಪರ ಸಂಘಟನೆಗಳ ಪ್ರಮುಖರ ನಿಯೋಗ ಬೀದರ್‌ನಲ್ಲಿ ಭೇಟಿ ಮಾಡಿ ಕೂಡಲೇ ಆದೇಶ ಹಿಂಪಡೆಯುವಂತೆ ಮನವರಿಕೆ ಮಾಡಿದರು. ಸುತ್ತೋಲೆ ಹಿಂಪಡೆಯದಿದ್ದರೆ ಬೆಂಗಳೂರಿನ ವೀರಶೈವ ಮಹಾಸಭಾ ಕಚೇರಿ ಎದುರುಗಡೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕನ್ನಡ, ಉರ್ದು ಮಾಧ್ಯಮದ 250 ವಿದ್ಯಾರ್ಥಿಗಳಿಗೆ ‘ಶಾಹೀನ್ ಕಲ್ಯಾಣ ಕರ್ನಾಟಕ ವಿದ್ಯಾರ್ಥಿ ವೇತನ’ : ಅಬ್ದುಲ್ ಖದೀರ್
ಸಚಿವ ಈಶ್ವರ ಖಂಡ್ರೆ ಅವರು ಸಕರಾತ್ಮಕವಾಗಿ ಸ್ಪಂದಿಸಿ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಚರ್ಚಿಸಿ ಆದೇಶ ಹಿಂಪಡೆಯುವಂತೆ ತಿಳಿಸುವೆ ಎಂದು ಭರವಸೆ ನೀಡಿದ್ದರು. ಕೊನೆಗೂ ಬಸವ ಭಕ್ತರ ಪ್ರತಿಭಟನೆಗೆ ಮಣಿದು ವೀರಶೈವ ಮಹಾಸಭಾ ಹೊರಡಿಸಿದ ಸುತ್ತೋಲೆ ಹಿಂಪಡೆದಿದೆ ಎಂದು ಬಸವಪರ ಸಂಘಟನೆಗಳ ಮುಖಂಡರು ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.