ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಮಾಡಿದ ಉಗ್ರರ ಶೋಧ ಕಾರ್ಯಾಚರಣೆ ಜಮ್ಮು ಕಾಶ್ಮೀರದಲ್ಲಿ ಮುಂದುವರೆದಿದೆ. ಈ ವೇಳೆ ಅಮಾಯಕರಿಗೆ ಹಾನಿಯಾಗದಿರಲಿ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಒತ್ತಾಯಿಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು 28 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಸದ್ಯ ಉಗ್ರರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ನಡುವೆ ಭಯೋತ್ಪಾದನೆ ಮತ್ತು ಅದರ ಮೂಲದ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಭಾನುವಾರ ಜಮ್ಮು ಕಾಶ್ಮೀರ ಸಿಎಂ ಕರೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಗುಪ್ತಚರ ವೈಫಲ್ಯದ ಬಗ್ಗೆ ಅನುಮಾನವಿದೆ; ಯಾರನ್ನಾದರೂ ಹೊಣೆ ಮಾಡಬೇಕು: ಸೇನಾ ಮಾಜಿ ಮುಖ್ಯಸ್ಥ
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಒಮರ್, “ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಯೋತ್ಪಾದನೆ ಮತ್ತು ಅದರ ಮೂಲದ ವಿರುದ್ಧ ನಿರ್ಣಾಯಕ ಹೋರಾಟ ನಡೆಯಬೇಕು. ಕಾಶ್ಮೀರದ ಜನರು ಭಯೋತ್ಪಾದನೆ ಮತ್ತು ಮುಗ್ಧ ಜನರ ಹತ್ಯೆಯ ವಿರುದ್ಧ ಬಹಿರಂಗವಾಗಿ ಹೊರಬಂದಿದ್ದಾರೆ. ಸ್ವಯಂಪ್ರೇರಿತವಾಗಿ ಬಹಿರಂಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
After the Pahalgam terror attack, there must be a decisive fight against terrorism and its origin. People of Kashmir have come out openly against terrorism and the murder of innocent people, they did this freely & spontaneously. It’s time to build on this support and avoid any…
— Omar Abdullah (@OmarAbdullah) April 27, 2025
“ಈ ಬೆಂಬಲವನ್ನು ನಿರ್ಮಿಸುವ ಮತ್ತು ಜನರನ್ನು ದೂರವಿಡುವ ಯಾವುದೇ ತಪ್ಪು ಕ್ರಮವನ್ನು ತಪ್ಪಿಸುವ ಸಮಯ ಇದು. ತಪ್ಪಿತಸ್ಥರನ್ನು ಶಿಕ್ಷಿಸಿ, ಅವರ ಮೇಲೆ ಯಾವ ಕರುಣೆಯೂ ಬೇಡ. ಆದರೆ ಮುಗ್ಧ ಜನರು ಹಾನಿಗೊಳಗಾಗಲು ಬಿಡಬೇಡಿ” ಎಂದು ಮನವಿ ಮಾಡಿದ್ದಾರೆ.
ಈ ಭಯೋತ್ಪಾದನ ದಾಳಿ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಉದ್ವಿಗ್ನತೆ ಇನ್ನಷ್ಟೂ ಹೆಚ್ಚಾಗಿದೆ. ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ತಕ್ಷಣದಿಂದ ರದ್ದು ಮಾಡಲಾಗುತ್ತದೆ ಎಂದು ಭಾರತ ಈಗಾಗಲೇ ಘೋಷಿಸಿದೆ. ಪಾಕಿಸ್ತಾನದಿಂದಲೂ ಭಾರತೀಯರು ವಾಪಸ್ ಬರುತ್ತಿದ್ದಾರೆ, ಇಲ್ಲಿಂದಲೂ ಪಾಕಿಸ್ತಾನ ಪ್ರಜೆಗಳು ವಾಪಸ್ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.
