ಧರ್ಮ, ಭಾಷೆಗಿಂತ ದೇಶ ಮೊದಲು. ದೇಶಕ್ಕಾಗಿ ನಾವು ಎಲ್ಲರೂ ಒಂದಾಗಬೇಕು. ಆದರೆ, ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಆರ್‌ಟಿ ನಗರದ ತರಳಬಾಳು ಕೇಂದ್ರ ಸಭಾಂಗಣದಲ್ಲಿ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿವಶ್ರೀ ಪ್ರಶಸ್ತಿ ಪ್ರದಾನ ಮತ್ತು ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರ ‘ಸಂಜೆಗೊಂದು ನುಡಿಚಿಂತನ -365’ ಕೃತಿ ಲೋಕಾರ್ಪಣಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಇರುತ್ತಾರೆ, ಹೋಗುತ್ತಾರೆ. ಆದರೆ, ದೇಶ ಎಂದಿಗೂ ಇರುತ್ತದೆ. ಹೀಗಾಗಿ, ದೇಶದ ಹಿತಕ್ಕಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಲ್ಲಿ ರಾಜಕೀಯ, ಟೀಕೆ ಮಾಡುವುದು ಒಳ್ಳೆಯ ಕ್ರಮವಲ್ಲ. ಸರ್ವಪಕ್ಷಗಳ ಸಭೆಯಲ್ಲಿಯೂ ಇದನ್ನೆ ಉಲ್ಲೇಖಿಸಿ ಸರಕಾರಕ್ಕೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಹ್ಯ ಭಯೋತ್ಪಾದನೆಗೆ ಆಂತರಿಕ ಮುಸ್ಲಿಂ ವಿರೋಧ ಉತ್ತರವಲ್ಲ
ಸರ್ವ ಪಕ್ಷಗಳ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಹಾಜರಾಗಬೇಕಿತ್ತು. ಆದರೆ, ಅವರು ಬಂದಿಲ್ಲ. ಇದನ್ನು ನಿತ್ಯ ಟೀಕೆ ಮಾಡಲು ನಾವು ಹೋಗುವುದಿಲ್ಲ. ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಂಡರೂ ಬೆಂಬಲ ನೀಡುತ್ತೇವೆ. ಆದರೆ, ಕೇಂದ್ರ ಸೂಕ್ತ ಕ್ರಮಕ್ಕೆ ಮುಂದಾಗಲಿ ಮೊದಲು ಎಂದು ಅವರು ಹೇಳಿದರು.
ಉಗ್ರರ ವಿರುದ್ಧ ಕಾರ್ಯಾಚರಣೆಗೆ ಬೆಂಬಲ ಕೊಡುತ್ತೇವೆ ಎಂದು ಈಗಾಗಲೇ ನಾವು ಹೇಳಿದ್ದೇವೆ. ದೇಶಕ್ಕಾಗಿ ಹೋರಾಟ ಮಾಡುತ್ತೇವೆ ಅಂದರೆ ಅದಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ಅವರು ನಮ್ಮೆಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೋಗಬೇಕು. ಈಗಾಗಲೇ ಬೇರೆ ಬೇರೆ ರೀತಿಯಲ್ಲಿ ಮಾತಾಡುತ್ತಿದ್ದಾರೆ ಅದು ಸರಿಯಲ್ಲ. ಆ ಸಭೆಯಲ್ಲಿ ಏನು ನಡೆಯಿತು ಎನ್ನುವುದನ್ನು ಹೇಳಿದ್ದೇನೆ. ದೇಶದ ಹಿತದೃಷ್ಟಿಯಿಂದ ಏನು ಮಾತಾಡಬೇಕೋ ಅದನ್ನು ಮಾತ್ರ ಮಾತಾಡಿದ್ದೇವೆ ಎಂದು ತಿಳಿಸಿದರು.