ವಚನಯಾನ | ಶರಣರ ದೃಷ್ಟಿಯಲ್ಲಿ ಉಪನಿಷತ್ತುಗಳು

Date:

Advertisements

ಬ್ರಾಹ್ಮಣ ಪಂಡಿತರು ವೈದಿಕತೆಯ ಅವಗುಣಗಳನ್ನು ಮುಕ್ತವಾಗಿ ಸ್ವೀಕರಿಸದೆ ಅದನ್ನು ಬಚ್ಚಿಟ್ಟು ಉಪನಿಷತ್ತುಗಳೆಂಬ ವಿಚಾರಪರ ಅಧ್ಯಾತ್ಮಿಕತೆಯ ಮುಖವಾಡದಲ್ಲಿ ಬ್ರಾಹ್ಮಣ್ಯದ ಅವಗುಣಗಳನ್ನು ರಕ್ಷಿಸಿದರು ಹಾಗೂ ಅವನ್ನು ಮತ್ತಷ್ಟು ಬಲಪಡಿಸಿದರು. ಸನಾತನ ಬ್ರಾಹ್ಮಣ ಧರ್ಮದಲ್ಲಿ ಸಾಂಪ್ರದಾಯಿಕ ನೆಲೆಯಲ್ಲಿ ವೇದಗಳ ಬಲದಿಂದ ಉಪನಿಷತ್ತಿನ ವಿಚಾರಧಾರೆಗಳು ಪ್ರತಿಷ್ಠಾಪನೆಗೊಳಿಸಿ ಅದಕ್ಕೆ ಭಿನ್ನವಾಗಿರುವ ಪರಿಪೂರ್ಣ ವೈಚಾರಿಕ ಚಿಂತನೆಗಳನ್ನು ಬ್ರಾಹ್ಮಣರು ನಾಶಗೊಳಿಸಿದರು.

ಪ್ರಾಚೀನ ಭಾರತದಲ್ಲಿ ಸನಾತನ ಆರ್ಯ ಬ್ರಾಹ್ಮಣ ಧರ್ಮದ ಕುರಿತು ಜನಮಾನಸದಲ್ಲಿ ಹುಟ್ಟಿದ ಅಸಂತೃಪ್ತಿಯ ಕಾರಣದಿಂದ ಅನೇಕ ವೈಚಾರಿಕ ಆಂದೋಲನಗಳು ಈ ನೆಲದಲ್ಲಿ ಹುಟ್ಟಿಕೊಂಡವು. ಸನಾತನ ಬ್ರಾಹ್ಮಣ ಧರ್ಮದ ಕಂದಾಚಾರಗಳು ಈ ನೆಲದ ಜನರ ಚಿಂತನಾಕ್ರಮವನ್ನು ಮಂಕುಗೊಳಿಸಿದ್ದವು. ಪ್ರಾಚೀನ ಭಾರತದಲ್ಲಿ ವೈಚಾರಿಕ ವಿಕಸನವಾದಕ್ಕೆ ಎಳ್ಳಷ್ಟು ಸ್ಥಾನವಿರಲಿಲ್ಲ. ಬ್ರಾಹ್ಮಣೇತರ ಋಷಿ ಮುನಿಗಳು ಬ್ರಾಹ್ಮಣ್ಯದ ಅವಗುಣಗಳ ವಿರುದ್ಧ ಚಿಂತನೆಯನ್ನು ಆರಂಭಿಸುವ ಮೂಲಕ ಉಪನಿಷತ್ತುಗಳು ಉತ್ಪತ್ತಿಯಾದವು. ಆದರೆ ಉಪನಿಷತ್ತಗಳಲ್ಲೂ ಬ್ರಾಹ್ಮಣರು ಒಳಹೊಕ್ಕ ಕಾರಣ ಪರಿಪೂರ್ಣ ವೈಚಾರಿಕತೆಗೆ ತೆರೆದುಕೊಳ್ಳುವಲ್ಲಿ ವಿಫಲವಾದವು. ವೈದಿಕತೆಯ ಜನವಿರೋಧಿ ಚಿಂತನೆಗಳ ವಿರುದ್ಧ ಹುಟ್ಟಿಕೊಂಡ ಉಪನಿಷತ್ತುಗಳು ಬ್ರಾಹ್ಮಣರ ಒಳನುಸುಳುವಿಕೆಯಿಂದ ಕಲುಷಿತಗೊಂಡವು. ಕಾಲಕಾಲಕ್ಕೆ ಮೈದಳೆದ ವೈಚಾರಿಕ ಚಿಂತನೆಗಳನ್ನು ಬ್ರಾಹ್ಮಣರು ಹತ್ತಿಕ್ಕುತ್ತ ಬಂದ ವಿಷಯ ನಮಗೆಲ್ಲಾ ತಿಳಿದದ್ದೆ. ಈ ಉಪಖಂಡವು ವೈಚಾರಿಕತೆಯನ್ನು ರೂಢಿಸಿಕೊಂಡರೆ ತಮ್ಮ ಸಾಮಾಜಿಕ ಸ್ಥಾನಮಾನಗಳಿಗೆ ಗಂಡಾಂತರ ಬರುತ್ತದೆ ಎನ್ನುವ ಭಯ ಬ್ರಾಹ್ಮಣರದಾಗಿತ್ತು. ಆ ಕಾರಣದಿಂದ ಅಂದಿನ ಬ್ರಾಹ್ಮಣರು ವೈಚಾರಿಕತೆಯನ್ನು ಭಾರತದ ಎಲ್ಲಾ ಕ್ಷೇತ್ರಗಳಿಂದ ಪ್ರಜ್ಞಾಪೂರ್ವಕವಾಗಿ ದೂರವಿಟ್ಟರು. ಕ್ರಮೇಣ ಬ್ರಾಹ್ಮಣ್ಯದ ಕುರಿತು ಜನರಲ್ಲಿ ಆಕ್ರೋಶ ಹೆಪ್ಪುಗಟ್ಟಲಾರಂಭಿಸಿತು. ಇದನ್ನು ಬಹಳ ಸೂಕ್ಷ್ಮವಾಗಿ ಗ್ರಹಿಸಿದ ಬ್ರಾಹ್ಮಣ ಪಂಡಿತರು ಜನರ ಗಮನವನ್ನು ಬೇರೆಡೆ ಸೇಳೆಯುವ ಹುನ್ನಾರವನ್ನು ಯೋಚಿಸಿದರು. ಅದರ ಪರಿಮಾಣ ಉಪನಿಷತ್ತುಗಳಲ್ಲಿ ಬ್ರಾಹ್ಮಣ್ಯ ಗುಪ್ತವಾಗಿ ಒಳನುಸುಳಿತು.

ಬ್ರಾಹ್ಮಣ ಪಂಡಿತರು ವೈದಿಕತೆಯ ಅವಗುಣಗಳನ್ನು ಮುಕ್ತವಾಗಿ ಸ್ವೀಕರಿಸದೆ ಅದನ್ನು ಬಚ್ಚಿಟ್ಟು ಉಪನಿಷತ್ತುಗಳೆಂಬ ವಿಚಾರಪರ ಅಧ್ಯಾತ್ಮಿಕತೆಯ ಮುಖವಾಡದಲ್ಲಿ ಬ್ರಾಹ್ಮಣ್ಯದ ಅವಗುಣಗಳನ್ನು ರಕ್ಷಿಸಿದರು ಹಾಗೂ ಅವನ್ನು ಮತ್ತಷ್ಟು ಬಲಪಡಿಸಿದರು. ಸನಾತನ ಬ್ರಾಹ್ಮಣ ಧರ್ಮದಲ್ಲಿ ಸಾಂಪ್ರದಾಯಿಕ ನೆಲೆಯಲ್ಲಿ ವೇದಗಳ ಬಲದಿಂದ ಉಪನಿಷತ್ತಿನ ವಿಚಾರಧಾರೆಗಳು ಪ್ರತಿಷ್ಠಾಪನೆಗೊಳಿಸಿ ಅದಕ್ಕೆ ಭಿನ್ನವಾಗಿರುವ ಪರಿಪೂರ್ಣ ವೈಚಾರಿಕ ಚಿಂತನೆಗಳನ್ನು ಬ್ರಾಹ್ಮಣರು ನಾಶಗೊಳಿಸಿದರು. ಆದ್ದರಿಂದ ಉಪನಿಷತ್ತಿನ ಅಧ್ಯಾತ್ಮಿಕ ವಿಚಾರಧಾರೆಗಳು ಸ್ಪಷ್ಟವಾಗಿ ಏಕದೇವೋಪಾಸನೆಯನ್ನು ಪ್ರತಿಪಾದಿಸುವಲ್ಲಿ ವಿಫಲಗೊಂಡವು. ಇದನ್ನು ಡಾ. ಎಸ್. ಎಮ್. ಹುಣಶ್ಯಾಳ ಅವರು ತಮ್ಮ 1946ರಲ್ಲಿ ಬರೆದ “ಲಿಂಗಾಯತ ಚಳವಳಿ: ಕರ್ನಾಟಕದಲ್ಲಿ ಒಂದು ಸಾಮಾಜಿಕ ಕ್ರಾಂತಿ” ಎನ್ನುವ ಕೃತಿಯಲ್ಲಿ ಹೀಗೆ ಹೇಳುತ್ತಾರೆ: “ಬ್ರಹದಾರಣ್ಯಕ ಮತ್ತು ಛಾಂದೋಗ್ಯ ಉಪನಿಷತ್ತುಗಳಲ್ಲಿ ಆಕಾಶದ್ರವ್ಯ ˌ ಬೆಂಕಿ ಮತ್ತು ಗಾಳಿಗಳ ಶಾಸ್ವತತೆಯನ್ನು ಗುರುತಿಸಲಾಗಿದೆ. ಈ ಅಭಿಪ್ರಾಯವು ಎಲ್ಲಾ ಉಪನಿಷತ್ತುಗಳಲ್ಲಿ ಹೇಳಲಾದ ‘ಒಬ್ಬನಲ್ಲದೆ ಇನ್ನೊಬ್ಬನಿಲ್ಲ’ ಎಂಬ ಪರಬ್ರಹ್ಮದ ಕಲ್ಪನೆಯನ್ನು ವಿರೋಧಿಸುತ್ತದೆ. ಹೀಗಾಗಿ ಒಂದು ಕ್ರಮಬದ್ಧ ತತ್ವಶಾಸ್ತ್ರಕ್ಕೆ ಉಪನಿಷತ್ತಿನಲ್ಲಿಯ ವಿಚಾರಗಳು ತಳಹದಿಯಾಗಲಾರವು.”

Advertisements

ಉಪನಿಷತ್ತಿನಲ್ಲಿನ ಈ ವೈರುಧ್ಯಗಳನ್ನು ಅಂದಿನ ವಿಚಾರವಾದಿಗಳು ಗುರುತಿಸಿದರು. ಪಂಚಭೂತಗಳ ಅಸ್ಥಿತ್ವ ಒಪ್ಪಿಕೊಂಡರೆ ‘ಪರಬ್ರಹ್ಮನೆ ಮೂಲ’ ಎನ್ನುವ ವೇದಾಂತದ ಸಿದ್ಧಾಂತವು ಸುಳ್ಳು ಎಂದಾಗುತ್ತದೆ. ಮುಂದೆ ಶಂಕರಾಚಾರ್ಯನು ವೇದಾಂತಗಳ ಆಧಾರದಲ್ಲಿ ಅದ್ವೈತ ತತ್ವವನ್ನು ಪ್ರತಿಪಾದಿಸಿದ. ಆದ್ದರಿಂದ ಶಂಕರನು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತವು ಉಪನಿಷತ್ತಿನ ವೈರುಧ್ಯಗಳನ್ನೆ ಆಧರಿಸಿತ್ತು. ಉಪನಿಷತ್ ಋಷಿಗಳಿಂದ ಮೊದಲ್ಗೊಂಡು ಶಂಕರನ ವರೆಗೆ ವಿಚಾರವಾದದ ಮುಖವಾಡದಲ್ಲಿ ಬಹಳ ಜಾಣತನದಿಂದ ಬ್ರಾಹ್ಮಣ್ಯವನ್ನು ರಕ್ಷಿಸಲು ಹೆಣಗಾಡಿದ್ದನ್ನು ಗಮನಿಸಬಹುದು. ಕೊನೆಗೆ ಅದು ಅಸಂಗತವಾದ ಮಾಯಾವಾದಕ್ಕೆ ಬಂದು ನಿಲ್ಲುತ್ತದೆ. ಶಂಕರನ ವೇದಾಂತದಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಶೂನ್ಯವಾಗಿತ್ತು. ಈ ಜಗತ್ತೆ ಮಾಯೆ ಎನ್ನುವ ಮಿತ್ಯವಿತ್ತು. ಕಣ್ಣಿಗೆ ಕಾಣುವ ಜಗತ್ತನ್ನು ನಿರಾಕರಿಸಿ ಕಣ್ಣಿಗೆ ಕಾಣದ ಪರಬ್ರಹ್ಮವನ್ನು ಒಪ್ಪಿಕೊಳ್ಳುವ ಶಂಕರನ ವೇದಾಂತ ವಿಚಾರಹೀನವಾಗಿತ್ತು. ಕರ್ಮಸಿದ್ಧಾಂತವು ಜನರ ಅಭಿವ್ಯಕ್ತಿ ಸ್ವಾತಂತ್ರವನ್ನು ದಮನಮಾಡಿತ್ತು. ಅದರಿಂದ ಬಹುದೇವೋಪಾಸನೆˌ ಮೂಢನಂಬಿಕೆಗಳು ಸಾರ್ವತ್ರೀಕರಣಗೊಂಡವು.

vedas

ಇಂತಹ ಸಂದಿಗ್ಧ ಸಂದರ್ಭದಲ್ಲಿ ಹನ್ನೆರಡನೇ ಶತಮಾನದಲ್ಲಿ ಲಿಂಗಾಯತ ಸಿದ್ಧಾಂತವು ಹುಟ್ಟಿಕೊಂಡಿತು. ಇದು ಸನಾತನಿಗಳ ವೇದ, ಉಪನಿಷತ್, ಶಾಸ್ತ್ರ, ಆಗಮ, ಶ್ರತಿ, ಸ್ಮೃತಿ, ಪುರಾಣ, ಗೀತೆಗಳನ್ನೆಲ್ಲ ಕಟುವಾದ ವಿಮರ್ಶೆಗೆ ದೂಡಿತು. ಉಪನಿಷತ್ತುಗಳು ಹಾಗೂ ಶಂಕರನ ಮಾಯಾವಾದವು ವೈಚಾರಿಕತೆಯ ಸೋಗಿನಲ್ಲಿ ಪ್ರತಿಷ್ಠಾಪಿಸಿದ ಹುಸಿ ವೈಚಾರಿಕತೆಯನ್ನು ಶರಣ ಸಿದ್ಧಾಂತವು ಅನಾವರಣಗೊಳಿಸಿತು. ಸನಾತನ ಬ್ರಾಹ್ಮಣ ಧರ್ಮದ ಬಹುದೇವೋಪಾಸನೆ ಸಿದ್ಧಾಂತದ ಆಧಾರದಲ್ಲಿ ರೂಪಿಸಲಾಗಿದ್ದ ಉಪನಿಷತ್ತಿನಲ್ಲಿಯ ವೇದಾಂತದ ಅಸ್ಪಷ್ಟ ಏಕದೇವೋಪಾಸನೆ ಒಂದು ತೇಪೆಹಾಕುವ ಪ್ರಯತ್ನವೆಂದು ಲಿಂಗಾಯತ ಸಿದ್ಧಾಂತ ಸಾರಿ ಹೇಳಿತು. ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿನ ಬ್ರಾಹ್ಮಣ್ಯದ ದಬ್ಬಾಳಿಕೆಗೆ ಲಿಂಗಾಯತ ಸಿದ್ಧಾಂತವು ಪರಿಣಾಮಾರಿಯಾಗಿ ತಡೆಯೊಡ್ಡಿತು. ಶರಣರು ವೇದˌ ಉಪನಿಷತ್ತುಗಳನ್ನು ಕಠಿಣವಾದ ವಿಮರ್ಷೆಗೆ ದೂಡಿದರು. ಅವುಗಳಲ್ಲಿನ ಪ್ರತಿಯೊಂದು ಹುಳುಕುಗಳನ್ನು ಒಂದೊಂದಾಗಿ ಹುಡುಕಿ ಹುಡುಕಿ ತಮ್ಮ ವಚನಗಳಲ್ಲಿ ವಿಮರ್ಶಿಸಿದರು. ವೈಚಾರಿಕತೆಯ ಸೋಗಿನಲ್ಲಿ ಉಪನಿಷತ್ತುಗಳು ಸಾಮಾನ್ಯ ಜನರನ್ನು ಹೇಗೆ ಹಾದಿ ತಪ್ಪಿಸುತ್ತವೆ ಹಾಗೂ ಬ್ರಾಹ್ಮಣ್ಯವನ್ನು ಹೇಗೆ ರಕ್ಷಿಸುತ್ತವೆ ಎನ್ನುವ ಕುರಿತು ಶರಣ ನಗೆಯ ಮಾರಿತಂದೆ ಹೀಗೆ ಅತ್ಯಂತ ಮಾರ್ಮಿಕವಾಗಿ ವಿಮರ್ಶಿಸಿದ್ದಾರೆ:

“ಕಲ್ಲಿಯ ಹಾಕಿ ನೆಲ್ಲವ ತುಳಿದು
ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ
ವಾಗದ್ವೈತವ ಕಲಿತು
ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು
ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವಂತೆ
ಅದೇತರ ನುಡಿ? ಮಾತಿನ ಮರೆ
ಆತುರವೈರಿ ಮಾರೇಶ್ವರ.”
~ ನಗೆಯ ಮಾರಿತಂದೆ

ಭಾವಾರ್ಥ

ಕಲ್ಲಿಯ ಹಾಕಿˌ ನೆಲ್ಲು ತುಳಿಯುವುದು ಎಂದರೆ ಗುಬ್ಬಿ ಮತ್ತಿತರ ಪಕ್ಷಿಗಳನ್ನು ಕಾಳುಗಳ ಆಶೆ ತೋರಿಸಿ ಬಲೆಗೆ ಹಾಕುವ ವಿದ್ಯೆ. ಈ ಹಕ್ಕಿಗಳನ್ನು ಮೋಸದಿಂದ ಗಾಳ ಹಾಕಿ ಹಿಡಿದು ತಿನ್ನುವ ಕಲೆಯನ್ನು ಕಲ್ಲಿ ವಿದ್ಯೆ ಎನ್ನುತ್ತಾರೆ. ವಚನದ ಮುಂದಿನ ಸಾಲಿನಲ್ಲಿ ಈ ಕಲ್ಲಿ ವಿದ್ಯೆಯನ್ನು ಉಪನಿಷತ್ತಿಗೆ ಹೋಲಿಸುತ್ತಾರೆ ಶರಣ ಮಾರಿತಂದೆ. ಈ ವಾಗದ್ವೈತವೆಂಬ ಸಂಸ್ಕ್ರತದಲ್ಲಿ ಬರೆದಿಟ್ಟ ಉಪನಿಷತ್ತಿನ ಚಿಂತನೆಗಳನ್ನು ಕಂಠಪಾಠ ಮಾಡಿಕೊಂಡು ಆ ಪಾಯಿಪಾಠದ ಸಲಿಗೆಯನ್ನು ಮುಂದಿಟ್ಟುಕೊಂಡು ಬ್ರಾಹ್ಮಣರು ಆಟ ಆಡುವ ಪರಿಯನ್ನು ವಚನದ ಮುಂದಿನ ಸಾಲಿನಲ್ಲಿ ಶರಣ ಮಾರಿತಂದೆ ಹೇಳುತ್ತಾರೆ. ಬ್ರಾಹ್ಮಣರ ಉಪಜೀವನದ ಊರುಗೋಲಾಗಿದ್ದ ಹಾಗೂ ರಾಜರ ಆಸ್ಥಾನದಲ್ಲಿ ಮುಖಸ್ತುತಿಗೆ ಮೀಸಲಾಗಿದ್ದ ಯಾರಿಗೂ ತಿಳಿಯದ ಸಂಸ್ಕ್ರತ ಭಾಷೆಯಲ್ಲಿನ ಚಿಂತನೆಗಳೆಂಬ ತತ್ವಮಸಿಯನ್ನು ಕಲಿತು ಮಾತನಾಡುವುದೆಂದರೆ ಅದು ಮೀನಿನ ಬಾಯಲ್ಲಿ ಮೇವು ಹಾಕಿದಂತೆ ಎನ್ನುತ್ತಾರೆ ಮಾರಿತಂದೆ. ಹಾಗಾಗಿ ಈ ಉಪನಿಷತ್ತು ಎನ್ನುವುದು ಒಂದು ತತ್ವಶಾಸ್ತ್ರದ ಸೋಗಿನಲ್ಲಿರುವ ಮಾಯಾವಿದ್ಯೆ. ಅದು ಮನುಷ್ಯನ ಸಹಜ ಜೀವನ ಶೈಲಿ ಮತ್ತು ರೂಢಿಗತ ಮಾತನ್ನು ಮರೆಸುವ ವಿದ್ಯೆ ಎನ್ನುತ್ತಾರೆ ಶರಣ ನಗೆಯ ಮಾರಿತಂದೆ. ಒಟ್ಟಾರೆ ಇಡೀ ವಚನವು ವೈಚಾರಿಕತೆಯ ಮುಖವಾಡದಲ್ಲಿರುವ ಉಪನಿಷತ್ತೆಂಬ ಸಂಸ್ಕೃತ ಸಾಹಿತ್ಯದೊಳಗಿನ ಮೋಸವನ್ನು ಅನಾವರಣಗೊಳಿಸುತ್ತದೆ.

th 3

ಟಿಪ್ಪಣಿ

ಬ್ರಾಹ್ಮಣವಾದ ಮೊದಲು ನೇರವಾಗಿ ತನ್ನ ಸಿದ್ಧಾಂತವನ್ನು ಸಾರ್ವತ್ರೀಕರಣಗೊಳಿಸಲು ಯತ್ನಿಸುತ್ತದೆ. ಅದಕ್ಕೆ ಪ್ರತಿರೋಧ ಎದುರಾದಾಗ ವೈಚಾರಿಕತೆಯ ಸೋಗಿನಲ್ಲಿ ಬ್ರಾಹ್ಮಣವಾದವನ್ನು ರಕ್ಷಿಸಿಕೊಂಡು ಬಲಪಡಿಸಿಕೊಳ್ಳುತ್ತದೆ. ಉದಾಹರಣೆಗೆˌ ವೇದˌ ಆಗಮ ಹಾಗೂ ಮನುಸ್ಮೃತಿಗಳು ನೇರವಾಗಿ ಬ್ರಾಹ್ಮಣ್ಯದ ಪಾರಮ್ಯವನ್ನು ಪ್ರತಿಪಾದಿಸಿತ್ತವೆ. ಆ ಕಾರಣದಿಂದ ಅದಕ್ಕೆ ತಲೆದೋರಿದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲಾಗದೆ ಒಂದಷ್ಟು ಕಾಲ ಬ್ರಾಹ್ಮಣವಾದವು ಈ ನೆಲದಲ್ಲಿ ಸೊರಗುತ್ತದೆ. ಕ್ರಮೇಣ ವೈಚಾರಿಕತೆಯ ಹೆಸರಿನಲ್ಲಿ ಹುಟ್ಟುಪಡೆಯುತ್ತಿದ್ದ ಉಪನಿಷತ್ತುಗಳಲ್ಲಿ ಉಪಾಯವಾಗಿ ಬ್ರಾಹ್ಮಣ್ಯವು ಒಳನುಸುಳುತ್ತದೆ. ಉಪನಿಷತ್ತುಗಳನ್ನು ವೇದಗಳ ಅಂತ್ಯಭಾಗ ಎಂದು ಕರೆಯುತ್ತಾರೆ. ಹಾಗಾದರೆ ಇವು ವೇದಕ್ಕೆ ವಿರೋಧವಾದ ವೈಚಾರಿಕತೆಯನ್ನು ಹೇಗೆ ಪ್ರತಿಪಾದಿಸಬಲ್ಲವು ಎನ್ನುವ ಪ್ರಶ್ನೆ ಇಲ್ಲಿ ನಮ್ಮನ್ನು ಕಾಡುತ್ತದೆ. ಮೇಲ್ನೋಟಕ್ಕೆ ಉಪನಿಷತ್ತುಗಳು ಅಗಾಧವಾದ ವೈಚಾರಿಕತೆಯನ್ನು ಪ್ರತಿಪಾದಿಸುತ್ತವೆ ಎನ್ನುವಂತೆ ಕಂಡರೂ ಅವುಗಳಲ್ಲಿ ಅಧ್ಯಾತ್ಮಿಕ ಹಾಗೂ ತತ್ವಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ಬಗೆಯ ವೈರುಧ್ಯಗಳು ಕಾಣಸಿಗುತ್ತವೆ. ಉಪನಿಷತ್ತುಗಳು ಜನಸಾಮಾನ್ಯರ ಆಡು ಭಾಷೆಯಲ್ಲಿ ಬರೆಯಲ್ಪಡಲಿಲ್ಲ ಮತ್ತು ಅವು ಜನಸಾಮಾನ್ಯರ ಒಳಗೊಳ್ಳುವಿಕೆಯಿಂದ ಉದಿಸಲಿಲ್ಲ.

ಇದನ್ನೂ ಓದಿ ಧರ್ಮ, ಭಾಷೆಗಿಂತ ದೇಶ ಮೊದಲು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ವೇದ ಶಾಸ್ತ್ರ, ಆಗಮ ಪುರಾಣ ಮುಂತಾದ ವೈದಿಕ ಪರಿಕರಗಳು ಈ ನೆಲದಲ್ಲಿ ಎದುರಿಸಿದ ಪ್ರತಿರೋಧಗಳನ್ನು ತಾತ್ವಿಕವಾಗಿ ಎದುರಿಸುವಲ್ಲಿ ಸಂಪೂರ್ಣವಾಗಿ ಸೋತವು. ತನ್ನ ದಮನಕಾರಿ ಹಾಗೂ ಒಡೆದಾಳುವ ನೀತಿಯಿಂದ ಇವುಗಳ ಪ್ರತಿಪಾದಕರು ತಮಗೆ ಎದುರಾದ ಸೈದ್ಧಾಂತಿಕ ಪ್ರತಿರೋಧಗಳನ್ನು ಹತ್ತಿಕ್ಕಿದರು. ಉಪಾಯಗಾಣದೆ ಸನಾತನ ಬ್ರಾಹ್ಮಣರು ಉಪನಿಷತ್ತುಗಳಲ್ಲಿ ಒಳಹೊಕ್ಕು ವೈಚಾರಿಕತೆ ಮತ್ತು ಉದಾರವಾದ ವೈದಿಕ ಸಿದ್ಧಾಂತದ ಮೂಲ ಮಂತ್ರ ಎನ್ನುವ ಹೊಸ ವರಸೆ ಆರಂಭಿಸಿದರು. ಉಪನಿಷತ್ತಿನಲ್ಲಿರುವ ಈ ಬ್ರಾಹ್ಮಣವಾದದ ವೈಚಾರಿಕ ಮುಖವಾಡವನ್ನು ಗುರುತಿಸುವಲ್ಲಿ ಬ್ರಾಹ್ಮಣೇತರ ವಿದ್ವಾಂಸರು ಸೋತರು. ಆದರೆ ಹನ್ನೆರಡನೇ ಶತಮಾನದಲ್ಲಿ ಶರಣರು ಉಪನಿಷತ್ತುಗಳನ್ನು ಸರಿಯಾದ ಕ್ರಮದಲ್ಲಿ ಅರ್ಥೈಸಿದರು. ಆ ಕಾರಣದಿಂದ ಬೌದ್ದ, ಜೈನ ಹಾಗೂ ಸಿಖ್ ಧರ್ಮಗಳ ಸಿದ್ಧಾಂತಕ್ಕಿಂತ ಸನಾತನಿಗಳಿಗೆ ಲಿಂಗಾಯತ ಸಿದ್ಧಾಂತದ ಕುರಿತು ಇಂದಿಗೂ ದೊಡ್ಡ ಮಟ್ಟದ ಭಯವಿದೆ. ಮೇಲಿನ ವಚನದಲ್ಲಿ ಶರಣ ನಗೆಯ ಮಾರಿತಂದೆ ಸಂಸ್ಕೃತದಲ್ಲಿರುವ ಉಪನಿಷತ್ತುಗಳ ಕುರಿತು ಅತ್ಯಂತ ಮಾರ್ಮಿಕವಾಗಿ ಮಾತನಾಡಿದ್ದಾರೆ. ಉಪನಿಷತ್ತನ್ನು ಕಲ್ಲಿವಿದ್ಯೆ ಎನ್ನುವ ಮಾರಿತಂದೆ ವೈಚಾರಿಕತೆಯ ಸೋಗಿನಲ್ಲಿರುವ ಇದೊಂದು ಮೋಸದ ಜಾಲವೆಂದು ಅರ್ಥೈಸಿದ್ದಾರೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X