ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಆಡಳಿತ ವ್ಯವಸ್ಥೆಯ ಗುಪ್ತಚರ ಮತ್ತು ಭದ್ರತಾ ವೈಫಲ್ಯ ಎಂದು ಆರೋಪಿಸಿ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಭೋಜ್‌ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಗಾಯಕಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಸುಮಾರು 28ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಇದಾದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಗುಪ್ತಚರ ವೈಫಲ್ಯದ ಬಗ್ಗೆ ಅನುಮಾನವಿದೆ; ಯಾರನ್ನಾದರೂ ಹೊಣೆ ಮಾಡಬೇಕು: ಸೇನಾ ಮಾಜಿ ಮುಖ್ಯಸ್ಥ
ಈ ನಡುವೆ 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ ನಂತರ, ಪಹಲ್ಗಾಮ್ ದಾಳಿಯ ಹೆಸರಿನಲ್ಲಿ ಪ್ರಧಾನಿ ಮೋದಿ ಈಗ ಬಿಹಾರದಲ್ಲಿ ಮತ ಯಾಚಿಸಲಿದ್ದಾರೆ ಎಂದು ನೇಹಾ ಸಿಂಗ್ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ಪಾಕಿಸ್ತಾನಿ ಪತ್ರಕರ್ತರ ಗುಂಪು ನಿರ್ವಹಿಸುವ ಎಕ್ಸ್‌ನಲ್ಲಿ ಮರು ಪೋಸ್ಟ್ ಮಾಡಲಾಗಿದೆ. ಇದಾದ ಬೆನ್ನಲ್ಲೇ ಲಕ್ನೋದ ಹಜರತ್‌ಗಂಜ್‌ನಲ್ಲಿ ನೇಹಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

“ನೇಹಾ ಅವರ ಎಕ್ಸ್ ಪೋಸ್ಟ್ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಪರಸ್ಪರ ಅಪರಾಧಗಳನ್ನು ಪ್ರಚೋದಿಸಿ ರಾಷ್ಟ್ರೀಯ ಸಮಗ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪಹಲ್ಗಾಮ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಮಾಯಕರ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾ ಅವರು ನಿರಂತರವಾಗಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
”ನೇಹಾ ಸಿಂಗ್ ರಾಥೋಡ್ ಅವರ ‘ದೇಶ ವಿರೋಧಿ’ ಹೇಳಿಕೆಗಳು ಪಾಕಿಸ್ತಾನದಲ್ಲಿ ವೈರಲ್ ಆಗುತ್ತಿವೆ. ಅಲ್ಲಿ ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ನೇಹಾ ಅವರನ್ನು ಹೊಗಳಲಾಗುತ್ತಿದೆ. ನೇಹಾ ಸಿಂಗ್ ರಾಥೋಡ್ ಅವರ ಈ ಎಲ್ಲಾ ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ಪಾಕಿಸ್ತಾನಿ ಮಾಧ್ಯಮಗಳು ಭಾರತದ ವಿರುದ್ಧ ಬಳಸುತ್ತಿವೆ” ಎಂದೂ ಎಫ್‌ಐಆರ್‌ನಲ್ಲಿದೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ ಅಪರಾಧಿಗಳ ಶೋಧ; ಅಮಾಯಕರಿಗೆ ಹಾನಿಯಾಗದಿರಲಿ: ಸಿಎಂ ಒಮರ್ ಅಬ್ದುಲ್ಲಾ ಒತ್ತಾಯ
ಏಪ್ರಿಲ್ 25ರಂದು ಪೋಸ್ಟ್ ಮಾಡಿದ ತಮ್ಮ ವೀಡಿಯೊದಲ್ಲಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ನೇಹಾ ಸಿಂಗ್ ರಾಥೋಡ್ (ರಷ್ಯಾ-ಉಕ್ರೇನ್) ಯುದ್ಧವನ್ನು ನಿಲ್ಲಿಸಬಲ್ಲ ವ್ಯಕ್ತಿಗೆ ತನ್ನದೇ ದೇಶದಲ್ಲಿ ಭಯೋತ್ಪಾದಕ ದಾಳಿಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದರು.
“ನಾನು ಸರ್ಕಾರವನ್ನು ಯಾವುದರ ಬಗ್ಗೆ ಪ್ರಶ್ನಿಸಬೇಕು? ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆಗಳು ಇನ್ನು ಮುಂದೆ ಪ್ರಸ್ತುತವಲ್ಲ. ರಾಷ್ಟ್ರೀಯತೆಯ ರಾಜಕೀಯದ ಹೊರತಾಗಿಯೂ ಮತ್ತು ದೇಶದಲ್ಲಿ ಹಿಂದೂ-ಮುಸ್ಲಿಂ ಗಲಭೆ ಉತ್ತುಂಗದಲ್ಲಿದ್ದರೂ ಜನರು ಕೊಲ್ಲಲ್ಪಡುತ್ತಿದ್ದಾರೆ” ಎಂದೂ ಹೇಳಿದ್ದರು.
