ಬಡವರಿಗೆ, ದುರ್ಬಲ ವರ್ಗದವರಿಗೆ ನಯಾಪೈಸೆಯ ಪ್ರಯೋಜನವಿಲ್ಲದ ಈ ಸಂಘೀ ಸಂಸ್ಕೃತಿಯ ಕಾಲೇಜಿಗೆ ಸಚಿವ ಮಧು ಬಂಗಾರಪ್ಪನವರು ಬರಲಿ, ಅದು ಅವರ ಆಯ್ಕೆ. ಆದರೆ ಸಂಘೀ ಕಾಲೇಜಿನಲ್ಲಿ ನಿಂತು ಆರ್‍ಎಸ್ಎಸ್ ಅಸಲಿಯತ್ತನ್ನು ಮಕ್ಕಳಿಗೆ ತಿಳಿಸಿಕೊಡುತ್ತಾರೆಯೇ?
ಕುಮಟಾದ ಗೋರೆಯಲ್ಲಿರುವ ಆರ್‍ಎಸ್ಎಸ್ ‘ಧ್ಯೇಯೋದ್ದೇಶ’ದ ಆಂಗ್ಲ ಮಾಧ್ಯಮ ಕಾಲೇಜಿನ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗವಹಿಸುತ್ತಿರುವ ಬಗ್ಗೆ ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿವೆ.
ಸಚಿವರು ಕುಮಟಾದ ಯಾವುದಾದರೂ ಸರಕಾರಿ ಶಾಲೆಗೆ ಭೇಟಿ ಕೊಟ್ಟು ಬಡ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಸ್ಥೈರ್ಯ-ಭರವಸೆ ತುಂಬುವ, ಸ್ಫೂರ್ತಿಯಾಗುವ ಕೆಲಸ ಮಾಡಬಹುದಿತ್ತು. ಅದನ್ನು ಬಿಟ್ಟು ಬಡವರ ಕೈಗೆಟುಕದ ಲಕ್ಷಾಂತರ ರೂಪಾಯಿ ಶುಲ್ಕ ಮತ್ತು ಹಿಂದುತ್ವದ ರಹಸ್ಯ ಕಾರ್ಯಸೂಚಿಯ ಖಾಸಗಿ ಶಾಲೆಗೆ ಬರುತ್ತಿರುವುದು ಯಾಕೆ? ಅದರಲ್ಲೂ ಇದೊಂದು ಆರ್‍ಎಸ್ಎಸ್ ತತ್ವಾದರ್ಶದ ಶಾಸಕನಾಗುವ ಕನಸಿನ ಕೇಸರಿ ರಾಜಕಾರಣಿ ಮಾಲೀಕತ್ವದ ಶಾಲೆ. ಇದರಿಂದ ಸಮಾಜಕ್ಕೆ ಹೋಗುವ ಸಂದೇಶದ ಅರಿವೇನಾದರೂ ಮಂತ್ರಿ ಮಧು ಬಂಗಾರಪ್ಪರಿಗೆ ಇದೆಯಾ? ಆರ್‍ಎಸ್ಎಸ್ ಶಿಕ್ಷಣೋದ್ಯಮ ಪ್ರಮೋಷನ್‌ಗೆ ಕಾಂಗ್ರೆಸ್ ಸರಕಾರದ ಸಚಿವರನ್ನೇ ಬಳಸಿಕೊಳ್ಳುವ ತಂತ್ರಗಾರಿಕೆಯಾ ಇದು ಎಂಬ ಜಿಜ್ಞಾಸೆ ಸಾರ್ವಜನಿಕರಲ್ಲಿ ಮೂಡಿದೆ.
ಮೂರ್ನಾಲ್ಕು ವರ್ಷದ ಹಿಂದೆ ಆರಂಭವಾಗಿರುವ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಲೋಕಾರ್ಪಣೆ ಮಾಡಿದ್ದು ಕಟ್ಟರ್ ಆರ್‍ಎಸ್ಎಸ್ ಪ್ರಚಾರಕ ಸು.ರಾಮಣ್ಣ. ರಾಮಣ್ಣ ಎಂದರೆ ಸಾಮಾನ್ಯರಲ್ಲ. ಬಿಜೆಪಿಯ ಶಾಸಕ, ಸಂಸದ ಟಿಕೆಟ್ ಹಂಚಿಕೆಯಲ್ಲಿ ರಾಮಣ್ಣರ ಶಿಫಾರಸ್ಸಿಗೆ ಕಿಮ್ಮತ್ತಿರುತ್ತದೆ. ಉತ್ತರ ಕನ್ನಡದ ಕಡೆ ಸಂಘೀ ಕೈಂಕರ್ಯಕ್ಕೆ ರಾಮಣ್ಣ ಬಂದಾಗೆಲ್ಲ ಮನೆಗೆ ಬರಮಾಡಿಕೊಂಡು ವಿಶೇಷ ಅಡುಗೆ ಮಾಡಿ ಉಣಬಡಿಸಿ ಕೃತಾರ್ಥರಾಗುವುದು ಕುಮಟಾದ ಬಿಜೆಪಿ ಮುಖಂಡ-ವೈದ್ಯ ಗಣೇಶ್ ಜಿ. ಹೆಗಡೆ. ಕೆನರಾ ಎಕ್ಸಲೆನ್ಸ್ ಕಾಲೇಜಿನ ಸಂಸ್ಥಾಪಕರು ಇದೇ ಡಾ.ಜಿ.ಜಿ.ಹೆಗಡೆ. ಹೇಗಾದರೂ ಮಾಡಿ ಜೀವನದಲ್ಲೊಮ್ಮೆ ಎಮ್ಮೆಲ್ಲೆ ಆಗಲೇಬೇಕೆಂಬ ಹಠ ತೊಟ್ಟಿರುವ ಡಾ.ಹೆಗಡೆ ಗೋ ಸೇವೆ, ಗುರು ಸೇವೆ, ಆರೋಗ್ಯ-ಶಿಕ್ಷಣ ಉದ್ಯಮ ಸೇವೆ… ಹೀಗೆ ತರಹೇವಾರಿ ಸೇವೆಗಳ ಸೇವಾದುರಂಧರರು.
ಇದನ್ನು ಓದಿದ್ದೀರಾ?: ಉತ್ತರ ಕನ್ನಡ | ನಗರಸಭೆ ಮಾಜಿ ಸದಸ್ಯನ ಕೊಲೆ ಪ್ರಕರಣ: ಐವರು ಪೊಲೀಸರ ಅಮಾನತು
ಶುರುವಿನ ರಾಜಕಾರಣದಲ್ಲಿ ಕಾಂಗ್ರೆಸ್‌ನಲ್ಲಿದ್ದ ಡಾ.ಜಿ.ಜಿ. ಹೆಗಡೆ, ಕಾಂಗ್ರೆಸ್ ಹೈಕಮಾಂಡ್‌ಗೆ ಹತ್ತಿರವಿದ್ದ ಮಾರ್ಗರೆಟ್ ಆಳ್ವರನ್ನು ನೆಚ್ಚಿಕೊಂಡಿದ್ದರು. ಹಾಗೆಯೇ ಅವರ ಖಾಸಾ ಆದ್ಮಿ-ಜಾತಿ ಬಂಧುವಾಗಿದ್ದ ಕುಮಟಾದ ಮೋಂಟಿ ಫರ್ನಾಂಡೀಸ್ ಬಾಲಂಗೋಚಿಯಾಗಿದ್ದರು. ಮಾರ್ಗರೆಟ್ ಆಳ್ವರನ್ನು ಭೇಟಿಯಾಗುವಾಗ, ಮೋಂಟಿ ಜತೆಗೂಡಿ ಉತ್ತರ ಕನ್ನಡದ ದುಬಾರಿ ಶಿಗಡಿ, ನೋಗ್ಲಾ ಮೀನು ಐಸ್ ಬಾಕ್ಸ್‌ನಲ್ಲಿಟ್ಟು ಕೊಟ್ಟು ಬರುತ್ತಿದ್ದರೆಂಬುದು ಅಂದು ರಾಜಕೀಯ ವಲಯದಲ್ಲಿ ದೊಡ್ಡ ಜೋಕ್ ಆಗಿತ್ತು. ಕಾಂಗ್ರೆಸ್ ಎಮ್ಮೆಲ್ಲೆ ಟಿಕೆಟ್ ಬಯಸಿದ್ದ ಡಾ.ಹೆಗಡೆ ಕೊನೆಗೆ ಒಂದು ನಿಗಮ-ಮಂಡಳಿ ಗೂಟದ ಕಾರಾದರೂ ಸಿಗಬಹುದೆಂದು ಕಾದರು. ಏನೂ ಸಿಗದಿದ್ದಾಗ ತನ್ನ ಮನಃಸ್ಥಿತಿಗೆ ತಕ್ಕುದಾದ ಬಿಜೆಪಿ ಸೇರಿದರು. ಆನಂತರ ಹಿಂದುತ್ವದ ನಾಯಕಮಣಿ ಎಂದು ತೋರಿಸಿಕೊಳ್ಳಲು ಸಿಗುವ ಯಾವ ಸಂದರ್ಭವನ್ನೂ ಮಿಸ್ ಮಾಡಿಕೊಳ್ಳುತ್ತಿಲ್ಲ.
ಕುಮಟಾದಲ್ಲಿ ಡಾ.ಜಿ.ಜಿ.ಹೆಗಡೆ ನಡೆಸುತ್ತಿರುವ ಆಸ್ಪತ್ರೆಯಲ್ಲಿ ಬಡವರಿಗೆ, ಅಸಹಾಯಕರಿಗೆ ಆಗುತ್ತಿರುವ ಅನುಕೂಲ ಅಷ್ಟಕ್ಕಷ್ಟೇ. ಈಗವರು ಕುಮಟಾದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ತೆರೆಯುವ ಮಾತಾಡುತ್ತಿದ್ದಾರೆ. ಹತ್ತಾರು ಎಕರೆ ಭೂಮಿಗೆ ಸರಕಾರಕ್ಕೆ ಬೇಡಿಕೆ ಇಡುತ್ತಿದ್ದಾರೆ. ಜಿಲ್ಲೆಗೊಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬೇಕೆಂಬ ಕೂಗು ತುಂಬ ಹಳೆಯದು. ಅಪಘಾತ, ಗಂಭೀರ ಕಾಯಿಲೆ ಸಂದರ್ಭದಲ್ಲಿ ಜಿಲ್ಲೆಯ ಜನರು ಅಕ್ಕಪಕ್ಕದ ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ಉಡುಪಿ, ಮಣಿಪಾಲ್ ಮತ್ತು ಮಂಗಳೂರಿಗೆ ಧಾವಿಸಬೇಕಾದ ಅನಿವಾರ್ಯತೆಯಿದೆ. ಹಾಗಂತ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಶುರುಮಾಡುವುದು ಮತ್ತದರ ಉದ್ದೇಶ ಈಡೇರುವುದು ಅಷ್ಟು ಸುಲಭವಲ್ಲ. ಉತ್ತರ ಕನ್ನಡದಂಥ ತೀರಾ ಹಿಂದುಳಿದ-ರಿಮೋಟ್ ಪ್ರದೇಶಕ್ಕೆ ನುರಿತ, ತಜ್ಞ ವೈದ್ಯರು ಬರಲು ಮನಸ್ಸು ಮಾಡುವುದಿಲ್ಲ. ಕಾರವಾರದ ಸರಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲೇ ಇರಬೇಕಾದಷ್ಷು ವೈದ್ಯ ಸಿಬ್ಬಂದಿಯಿಲ್ಲ. ಯಡಿಯೂರಪ್ಪ, ಈಶ್ವರಪ್ಪರಂಥ ಘಟಾನುಘಟಿಗಳು ಸರ್ವಶಕ್ತರಾಗಿದ್ದಾಗಲೂ ಶಿವಮೊಗ್ಗೆಯಲ್ಲೂ ಪೂರ್ಣ ಪ್ರಮಾಣದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮಾಡಲಾಗಿಲ್ಲ.
ಮೂರ್ನಾಲ್ಕು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಉತ್ತರ ಕನ್ನಡ ಜಿಲ್ಲೆಯ ರಸ್ತೆ ಅಪಘಾತದ ಗಾಯಾಳುಗಳು ಮತ್ತು ಹೃದಯಾಘಾತವೇ ಮುಂತಾದ ತುರ್ತು ಚಿಕಿತ್ಸೆ ಅನಿವಾರ್ಯವಾದ ಕಾಯಿಲೆಯವರು ದೂರದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸೇರುವುದರೊಳಗೆ ದಾರಿಯಲ್ಲೇ ಅಸುನೀಗುತ್ತಿದ್ದಾರೆ. ಹಾಗಾಗಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಾಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವೇ ಆಗಿತ್ತು. ಬೀದಿ ಹೋರಾಟಗಳೂ ನಡೆದಿತ್ತು. ಆದರೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಗಗನ ಕುಸುಮವಾಗೇ ಉಳಿದಿದೆ. ಉತ್ತರ ಕನ್ನಡಕ್ಕೀಗ ಜರೂರಾಗಿ ಆಗಬೇಕಿರುವುದು ಅಪಘಾತ ಸಂದರ್ಭದಲ್ಲಿ ಅವಶ್ಯವಿರುವ ಟ್ರೋಮಾ ಸೆಂಟರ್ ಮತ್ತು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ತಕ್ಷಣ ತಲುಪಲು ಏರ್ ಆಂಬುಲೆನ್ಸ್ ವ್ಯವಸ್ಥೆ. ಇದೆಲ್ಲ ಖುದ್ದು ವೈದ್ಯರಾಗಿರುವ ಡಾ.ಜಿ.ಜಿ.ಹೆಗಡೆಯಂತವರಿಗೆ ಗೊತ್ತಿರದ ಸಂಗತಿಯೇನಲ್ಲ. ಆದರೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ನೆಪದಲ್ಲಿ ಜಿಲ್ಲೆಯ ಮುಗ್ಧ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಎಂಬುದು ಎಮ್ಮೆಲ್ಲೆಯಾಗುವವರಿಗೆ ಮತ್ತು ಎಮ್ಮೆಲ್ಲೆ-ಎಂಪಿಗಿರಿ ಕೈಜಾರದಂತೆ ಹಿಡಿದಿಟ್ಟು ಕೊಳ್ಳಬೇಕಾದವರಿಗೆ ಜನರ ಭಾವನೆಗಳೊಂದಿಗೆ ಆಟ ಆಡಲು ಆಟಿಕೆ ಆಗಿಹೋಗಿದೆ.
ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಈಗ ಕಾಲೇಜಿಗೆ ಭೇಟಿ ಕೊಡುತ್ತಿರುವ ಸಂದರ್ಭದಲ್ಲಿ, ಡಾ.ಜಿ.ಜಿ.ಹೆಗಡೆಯವರ ಭೂತ-ಭವಿಷ್ಯ ಚರ್ಚೆಯಾಗುತ್ತಿದೆ. ಅವರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ‘ಸೇವೆ’ಗಳ ನೆಪದಲ್ಲಿ ನಡೆಯುತ್ತಿರುವ ಲೂಟಿಗಳ ಕುರಿತು ಜನ ಮಾತನಾಡುತ್ತಿದ್ದಾರೆ. ಇಂತಹ ಶಿಕ್ಷಣ ಸಂಸ್ಥೆಗೆ ಅತಿಥಿಯಾಗಿ ಬರುವ ಅಗತ್ಯವೇನಿದೆ ಎಂದು ಆಕ್ಷೇಪಿಸುತ್ತಿದ್ದಾರೆ.

ಇದೇ ಮೇ 3ರಂದು ಮಂತ್ರಿ ಮಧು ಬಂಗಾರಪ್ಪನವರು ಡಾ.ಹೆಗಡೆ ಕಾಲೇಜಿಗೆ ಬರುತ್ತಿದ್ದಾರೆ. ಡಾ.ಹೆಗಡೆಯವರ ಸ್ವಜಾತಿ ಹವ್ಯಕ ವಿದ್ಯಾರ್ಥಿಗಳೇ ಹೆಚ್ಚಿರುವ ಕಾಲೇಜಿನಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ಆ ಕಾಲೇಜಿನ ಘೋಷವಾಕ್ಯವೇ ‘ಸಂಸ್ಕಾರದೊಂದಿಗೆ ಶಿಕ್ಷಣ’. ‘ಸಂಸ್ಕಾರ’ವೆಂದರೆ ಸನಾತನ ಸಂಸ್ಕಾರ ಎಂದು ಬಿಚ್ಚಿ ಹೇಳುವ ಅಗತ್ಯವಿಲ್ಲ. ಕಾಲೇಜಿನಲ್ಲಿ ಬೆಳಗ್ಗೆ ಯೋಗ, ಸಂಜೆ ಭಜನೆ ಕಡ್ಡಾಯ. ಯೋಗ ಹಾಗೂ ಭಜನೆ ಹಿಂದುತ್ವದ ಪಕ್ಕಾ ಟ್ರೇಡ್ ಮಾರ್ಕ್‌ನಂತಾಗಿರುವ ದಿನಮಾನವಿದು.
ಬಡವರಿಗೆ, ದುರ್ಬಲ ವರ್ಗದವರಿಗೆ ನಯಾಪೈಸೆಯ ಪ್ರಯೋಜನವಿಲ್ಲದ ಈ ಸಂಘೀ ಸಂಸ್ಕೃತಿಯ ಕಾಲೇಜಿಗೆ ಸಚಿವ ಮಧು ಬಂಗಾರಪ್ಪನವರು ಬರಲಿ, ಅದು ಅವರ ಆಯ್ಕೆ. ಹಾಗೆಯೇ ಹಿಂದುತ್ವದ ಕಾಲೇಜಿನಲ್ಲಿ ನಿಂತು ಹಿಂದುತ್ವದ ಅಸಲಿಯತ್ತನ್ನು ಮಕ್ಕಳಿಗೆ ವಿವರಿಸಲಿ. ಹಾಗೆಯೇ ಡಾ.ಹೆಗಡೆಗೆ ನಿಜವಾಗಿಯೂ ಶಿಕ್ಷಣ ವಂಚಿತ ಅಸಾಯಕ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದದ್ದೇ ಆದರೆ, ತಮ್ಮ ಆಧುನಿಕ ಸೌಲಭ್ಯದ ಕಾಲೇಜಿಗೆ ಎಸ್ಸೆಸೆಲ್ಸಿಯಲ್ಲಿ ಶೇ. 50ಕ್ಕಿಂತ ಕಡಿಮೆ ಅಂಕ ಪಡೆದವರನ್ನು ಸೇರಿಸಿಕೊಂಡು ಡಾಕ್ಟರ್, ಇಂಜಿನಿಯರ್, ಚಾರ್ಟರ್ಡ್ ಅಕೌಂಟೆಂಟ್ ಮತ್ತಿತರ ಉನ್ನತ ಸ್ಕಾಲರ್‍ಗಳನ್ನು ತಯಾರು ಮಾಡಲಿ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.