ಈ ದಿನ ಸಂಪಾದಕೀಯ | ಒಳಮೀಸಲಾತಿ ಗಣತಿ ಚಾರಿತ್ರಿಕ ದಾಖಲೆ, ತಪ್ಪದೇ ಭಾಗಿಯಾಗಿರಿ

Date:

Advertisements
ಮೇ 5ರಿಂದ ಮೇ 17ರವರೆಗೆ ನಡೆಯುವ ಮನೆಮನೆ ಸಮೀಕ್ಷೆಯಲ್ಲಿ ಪರಿಶಿಷ್ಟರೆಲ್ಲರೂ ಭಾಗಿಯಾಗುವುದು ಮಹತ್ವದ ಜವಾಬ್ದಾರಿ. ಹೀಗಾಗಿ ಯಾರೂ ಗಣತಿಯಿಂದ ತಪ್ಪಿಸಿಕೊಳ್ಳಬಾರದೆಂಬುದು ಸಮಸಮಾಜದ ನಿರ್ಮಾಣ ಮತ್ತು ಸಾಮಾಜಿಕ ನ್ಯಾಯದ ದನಿಯಾಗಿರುವ 'ಈದಿನ.ಕಾಮ್‌'ನ ಮನವಿಯೂ ಆಗಿದೆ.

30 ವರ್ಷಗಳ ಕಾಲ ನಡೆದ ಒಳಮೀಸಲಾತಿ ಹೋರಾಟಕ್ಕೆ 2024ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ಅಂತಿಮ ಸ್ವರೂಪವನ್ನು ನೀಡಿತು. ‘ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ, ಆದರೆ ವೈಜ್ಞಾನಿಕ ದತ್ತಾಂಶವನ್ನು ಆಧರಿಸಿಯೇ ವರ್ಗೀಕರಣ ನಡೆಸಬೇಕು’ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಯಿತು. ಅದರನ್ವಯ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಒಳಮೀಸಲಾತಿ ಜಾರಿಯೂ ಆಯಿತು. ಕರ್ನಾಟಕದಲ್ಲಿ ಜಾತಿಗಳ ದಾಖಲಾತಿ ದೃಢೀಕರಣದಲ್ಲಿ ಗೊಂದಲಗಳಿರುವುದು ಬಹುದೊಡ್ಡ ಚರ್ಚೆಯ ವಿಷಯ. ಹೀಗಾಗಿ ಒಳಮೀಸಲಾತಿ ಜಾರಿಯ ಶಿಫಾರಸ್ಸಿಗಾಗಿ ರಾಜ್ಯ ಸರ್ಕಾರವು ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವನ್ನು ರೂಪಿಸಿತು. ಈಗ ಆಯೋಗದ ಮುಂದೆ ಇದ್ದ ಸವಾಲು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ– ಎಂದು ಮಿಶ್ರಿತವಾಗಿರುವ ಹೊಲೆಯ, ಮಾದಿಗ ಮತ್ತು ಈ ಸಮುದಾಯಗಳಿಗೆ ಸಂಬಂಧಿತ ಜಾತಿಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದಾಗಿತ್ತು. ಆ ಮೂಲಕ ಪರಿಶಿಷ್ಟ ಜಾತಿಯಲ್ಲಿನ 101 ಸಮುದಾಯಗಳ ಸ್ಥಿತಿಗತಿಗಳನ್ನು ಅವಲೋಕಿಸಿ, ವರ್ಗೀಕರಣದ ಶಿಫಾರಸ್ಸುಗಳನ್ನು ಮಾಡಬೇಕಾಗಿತ್ತು.

ಇದನ್ನು ಓದಿದ್ದೀರಾ?: ಜಾತಿ ಗಣತಿ | ಕೆಲ ಜಾತಿಗಳ ಪ್ರಮಾಣ ಕುಸಿತಕ್ಕೆ ಅವುಗಳ ಅಭಿವೃದ್ಧಿಯೂ ಕಾರಣ: ಎ.ನಾರಾಯಣ ವಿಶ್ಲೇಷಣೆ

ಕರ್ನಾಟಕದಲ್ಲಿ ಒಳಮೀಸಲಾತಿ ಹೋರಾಟದ ಭಾಗವಾಗಿ ರಚಿತವಾಗಿದ್ದ ಜಸ್ಟಿಸ್ ಎ.ಜೆ.ಸದಾಶಿವ ಆಯೋಗದ ವರದಿಯಲ್ಲೂ ಮತ್ತು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ರೂಪಿಸಿದ್ದ ಜೆ.ಸಿ.ಮಾಧುಸ್ವಾಮಿ ಉಪಸಮಿತಿಯ ವರದಿಯಲ್ಲೂ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ- ಸಮಸ್ಯೆಗಳಿರುವುದು ಚರ್ಚೆಗೆ ಬಂದಿತ್ತು. ಖಚಿತವಾಗಿ ಹೊಲೆಯ ಮತ್ತು ಮಾದಿಗ ಸಮುದಾಯಗಳ ಸಂಖ್ಯೆ ತಿಳಿಯಬೇಕಾದರೆ ಮತ್ತೊಂದು ತುರ್ತು ಸಮೀಕ್ಷೆಯನ್ನು ಕೈಗೊಳ್ಳಬೇಕಾದ ಅಗತ್ಯತೆಯನ್ನು ಮನಗಂಡ ಜಸ್ಟಿಸ್ ದಾಸ್ ಅವರು, ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿ, ಮರು ಸಮೀಕ್ಷೆಯ ಅಗತ್ಯತೆಯನ್ನು ಪ್ರಸ್ತಾಪಿಸಿದರು. ಇದಕ್ಕೆ ಒಪ್ಪಿಕೊಂಡ ಸರ್ಕಾರ, ಖಚಿತವಾಗಿ ಪರಿಶಿಷ್ಟ ಜಾತಿಗಳ ಜನಸಂಖ್ಯೆಯನ್ನು ತಿಳಿಯಲು, ಸರ್ವೇ ಕಾರ್ಯಕ್ಕೆ ಸಮ್ಮತಿ ಸೂಚಿಸಿತು. ಇದರ ಭಾಗವಾಗಿ ಮೇ 5ರಿಂದ 17ರವರೆಗೆ ಮನೆಮನೆ ಸಮೀಕ್ಷೆ ನಡೆಸಲು ಆಯೋಗವು ಸಜ್ಜಾಗಿದೆ. ಗಣತಿ ಕಾರ್ಯಕ್ಕೆ ಬೇಕಾದ ಎಲ್ಲ ಅಂತಿಮ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಇತ್ತ ಸಮುದಾಯಗಳ ಸಂಘಟನೆಗಳೂ ಗಣತಿಯ ವಿಚಾರವಾಗಿ ಜಾಗೃತಿ ಮೂಡಿಸುತ್ತಾ, ಉಪಜಾತಿಗಳನ್ನು ಬರೆಸುವಂತೆ ಪ್ರಚಾರ ಮಾಡುತ್ತಿವೆ.

Advertisements

ಗ್ರಾಮೀಣ ಪ್ರದೇಶದಲ್ಲಿ ಗಣತಿ ಸುಲಭವಾದರೂ ವಲಸೆ ಹೋದವರ ಮತ್ತು ನಗರ ಪ್ರದೇಶದಲ್ಲಿರುವ ಪರಿಶಿಷ್ಟ ಜಾತಿಯವರ ಪತ್ತೆ ಕಷ್ಟದ ಕೆಲಸ. ಅದಕ್ಕಾಗಿ ಆನ್‌ಲೈನ್ ಮೂಲಕವೂ ತಮ್ಮ ಉಪಜಾತಿಗಳನ್ನು ಘೋಷಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಮನೆಮನೆ ಸಮೀಕ್ಷೆಯಲ್ಲಿ ಭಾಗಿಯಾಗಲು ಸಾಧ್ಯವಾಗದೆ ಇರುವವರು ಗ್ರಾಮ ಪಂಚಾಯಿತಿಗೆ ಬಂದು ತಮ್ಮ ಜಾತಿಯನ್ನು ಹೇಳಿಕೊಳ್ಳಲು ಎರಡು ದಿನಗಳ ಕಾಲಾವಕಾಶ ನೀಡಲಾಗುತ್ತಿದೆ. ಈ ಕೆಲಸವು ಅತ್ಯಂತ ಮಹತ್ವಪೂರ್ಣವಾದದ್ದು ಹಾಗೂ ಐತಿಹಾಸಿಕ ದಾಖಲೆಯಾಗಿ ಉಳಿಯುವಂತಹದ್ದು.

ಕರ್ನಾಟಕದ ಮೀಸಲಾತಿ ಚರಿತ್ರೆಯನ್ನು ತೆಗೆದು ನೋಡಿದರೆ ಆಯೋಗಗಳು ಮತ್ತು ಸಮಿತಿಗಳ ಕಾರ್ಯಗಳು ಐತಿಹಾಸಿಕ ದಾಖಲೆಯಾಗಿ ನಮ್ಮ ಮುಂದೆ ನಿಲ್ಲುತ್ತವೆ. ಬ್ರಾಹ್ಮಣೇತರರ ಮೀಸಲಾತಿಗಾಗಿ ನಾಲ್ವಡಿಯವರ ಕಾಲದಲ್ಲಿ ವರದಿ ಸಲ್ಲಿಸಿದ ಮಿಲ್ಲರ್ ಕಮಿಷನ್, ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವರದಿ ನೀಡಿದ ಎಲ್.ಜಿ.ಹಾವನೂರು, ವೀರಪ್ಪ ಮೊಯ್ಲಿ ಅವರು ಒಬಿಸಿ ಮೀಸಲಾತಿಯಲ್ಲಿ ಬದಲಾವಣೆಗಳನ್ನು ತರಲು ಕಾರಣವಾದ ಒ. ಚಿನ್ನಪ್ಪ ರೆಡ್ಡಿ ಆಯೋಗ, ಕರ್ನಾಟಕದ ಎಲ್ಲ ಜಾತಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯನ್ನು ನಡೆಸಿದ ಕಾಂತರಾಜ ಆಯೋಗ ಮತ್ತು ವರದಿಯನ್ನು ಪರಿಶೀಲಿಸಿದ ಜಯಪ್ರಕಾಶ್ ಹೆಗ್ಡೆ ಆಯೋಗ- ಇವೆಲ್ಲವೂ ಚಾರಿತ್ರಿಕ ವಿದ್ಯಮಾನಗಳಿಗೆ ಸಾಕ್ಷಿಯಾಗಿ ನಿಂತಿವೆ. ಚರಿತ್ರೆಯ ಏರಿಳಿತದಲ್ಲಿ ಮತ್ತೆ ಮತ್ತೆ ಚರ್ಚೆಗೆ ಬರುತ್ತವೆ. ಹೀಗಾಗಿ ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕೆ ರಚನೆಯಾದ ಜಸ್ಟಿಸ್ ಎ.ಜೆ.ಸದಾಶಿವ ಆಯೋಗ ಮತ್ತು ಜಸ್ಟಿಸ್ ನಾಗಮೋಹನ ದಾಸ್ ಏಕಸದಸ್ಯ ಆಯೋಗವು ಮತ್ತೆ ಮತ್ತೆ ಚರಿತ್ರೆಯಲ್ಲಿ ಉಲ್ಲೇಖಗೊಳ್ಳುವುದು ಖಚಿತ. ಅದರಲ್ಲೂ ಜಸ್ಟಿಸ್ ದಾಸ್ ಆಯೋಗವು ಮಾಡಲು ಹೊರಟಿರುವ ಕೆಲಸಕ್ಕೆ ಬಹುಕಾಲದ ತಾಳಿಕೆ ಇರುವುದಂತೂ ಸ್ಪಷ್ಟ. ಈವರೆಗೆ ನಡೆದಿರುವ ಗಣತಿ ಕಾರ್ಯಗಳಿಗಿಂತ ಭಿನ್ನವಾದ ಕೆಲಸಕ್ಕೆ ಆಯೋಗ ಮುಂದಾಗಿದೆ.

ಬ್ರಿಟಿಷ್ ಆಡಳಿತ ಕಾಲದಲ್ಲಿ 1881ರ ವೇಳೆಗೆ ಜನಗಣತಿ ಆರಂಭವಾಯಿತು. 1901 ಮತ್ತು 1911ರ ಜನಗಣತಿಯ ಸಂದರ್ಭದಲ್ಲಿ ಜಾತಿಗಳ ಗಣತಿಯೂ ಮಹತ್ವ ಪಡೆಯಿತು. 1911ರ ಗಣತಿಯ ವೇಳೆ ಅಸ್ಪೃಶ್ಯರು ಯಾರು ಎಂಬುದನ್ನು ತಿಳಿಯಲು ಹತ್ತು ಗುಣಲಕ್ಷಣಗಳನ್ನು ಬ್ರಿಟಿಷ್ ಸರ್ಕಾರ ಪಟ್ಟಿ ಮಾಡಿತ್ತು. ಲೋಥಿಯನ್ ಸಮಿತಿಯ ವರದಿ ಆಧಾರದಲ್ಲಿ ಅಸ್ಪೃಶ್ಯ ಸಮುದಾಯಗಳಿಗೆ ಪ್ರತ್ಯೇಕ ಮತದಾನದ ಹಕ್ಕನ್ನು ನೀಡುವಂತಹ ಮತ್ತು ಪರಿಶಿಷ್ಟರ ಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ಕ್ರಮಗಳನ್ನು ಬ್ರಿಟಿಷರು ತೆಗೆದುಕೊಳ್ಳಲು ಹೋದಾಗ ಆಧಾರವಾಗಿದ್ದು ಇದೇ ಜಾತಿಗಣತಿಯ ವಿವರಗಳು. 1941ರ ಸಂದರ್ಭದಲ್ಲಿ ಎರಡನೇ ವಿಶ್ವ ಮಹಾಯುದ್ಧ ನಡೆಯುತ್ತಿತ್ತು. ಜಾತಿ ಗಣತಿ ಪೂರ್ಣವಾಗಲಿಲ್ಲ. ಸ್ವಾತಂತ್ರ್ಯ ನಂತರದಲ್ಲಿ ನೆಹರೂ ನೇತೃತ್ವದ ಸರ್ಕಾರ ಜನಗಣತಿಯಲ್ಲಿ ಜಾತಿ ಗಣತಿಯನ್ನು ಕೈಬಿಟ್ಟಿತು. ಆ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿದ್ದೂ ಉಂಟು.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಬಾಹ್ಯ ಭಯೋತ್ಪಾದನೆಗೆ ಆಂತರಿಕ ಮುಸ್ಲಿಂ ವಿರೋಧ ಉತ್ತರವಲ್ಲ

ಇತ್ತೀಚಿನ ವರ್ಷಗಳಲ್ಲಿ ಪ್ರಾತಿನಿಧ್ಯದ ಪ್ರಶ್ನೆ ಗಟ್ಟಿಯಾದಂತೆ ಜಾತಿ ಗಣತಿಯ ಮಹತ್ವವನ್ನು ಸುಪ್ರೀಂ ಕೋರ್ಟ್ ಕೂಡ ಮನಗಂಡಿರುವುದು ಸ್ಪಷ್ಟವಾಗುತ್ತಿದೆ. ಒಳಮೀಸಲಾತಿ ವಿಚಾರದಲ್ಲಿ ಕೋರ್ಟ್ ನೀಡಿದ ತೀರ್ಪಿನಲ್ಲೂ ‘ವೈಜ್ಞಾನಿಕ ದತ್ತಾಂಶ’ ಎಂಬ ಅಂಶ ಬಹುಮುಖ್ಯ ಸ್ಥಾನ ಪಡೆದಿದೆ. ತಾಂತ್ರಿಕವಾಗಿ ಸಾಕಷ್ಟು ಮುಂದುವರಿದಿರುವ ಈ ಕಾಲಘಟ್ಟದಲ್ಲಿ ಪರಿಶಿಷ್ಟರ ಜನಸಂಖ್ಯೆಯನ್ನು ಉದ್ದೇಶಿಸಿ ಮಾಡುತ್ತಿರುವ ಗಣತಿಯು ಅನೇಕ ಪಲ್ಲಟಗಳಿಗೆ ಕಾರಣವಾಗುವುದು ಸ್ಪಷ್ಟ. ಈ ಚಾರಿತ್ರಿಕ ವಿದ್ಯಮಾನದಲ್ಲಿ ಭಾಗಿಯಾಗುವುದು ಎಲ್ಲ ಪರಿಶಿಷ್ಟ ಸಮುದಾಯಗಳ ಜವಾಬ್ದಾರಿ. ತಮ್ಮ ತಮ್ಮ ಸಂಖ್ಯಾಬಲ, ಸಾಮಾಜಿಕ- ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಿಕ್ಕಿರುವ ಸುವರ್ಣಾವಕಾಶವೂ ಇದಾಗಿದೆ ಎಂಬುದನ್ನು ಮರೆಯಬಾರದು. ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಜನರು ಕೀಳರಿಮೆಯಿಂದ ಜಾತಿ ನೋಂದಣಿಗೆ ಹಿಂಜರಿಯಬಹುದು. ಅಂಥವರಿಗಾಗಿಯೇ ಆನ್‌ಲೈನ್ ನೋಂದಣಿಯೂ ನಡೆಯುತ್ತಿರುವುದು ಸ್ವಾಗತಾರ್ಹ. ಮೇ 5ರಿಂದ ಮೇ 17ರವರೆಗೆ ನಡೆಯುವ ಮನೆಮನೆ ಸಮೀಕ್ಷೆಯಲ್ಲಿ ಪರಿಶಿಷ್ಟರೆಲ್ಲರೂ ಭಾಗಿಯಾಗುವುದು ಮಹತ್ವದ ಜವಾಬ್ದಾರಿ. ಹೀಗಾಗಿ ಯಾರೂ ಗಣತಿಯಿಂದ ತಪ್ಪಿಸಿಕೊಳ್ಳಬಾರದೆಂಬುದು ಸಮಸಮಾಜದ ನಿರ್ಮಾಣ ಮತ್ತು ಸಾಮಾಜಿಕ ನ್ಯಾಯದ ದನಿಯಾಗಿರುವ ‘ಈದಿನ.ಕಾಮ್‌’ನ ಮನವಿಯೂ ಆಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X