ವಕ್ಪ್ ತಿದ್ದುಪಡಿ ಕಾಯ್ದೆ 2025 ಅನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಯಿತು.
ಬೀದರ್ ನಗರದ ಜಾಮೀಯಾ ಮಸೀದಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಗವಾನ್ ಚೌಕ್, ಶಹಾಗಂಜ್ ಮಾರ್ಗವಾಗಿ ಡಾ.ಅಂಬೇಡ್ಕರ್ ವೃತ್ತದ ಮೂಲಕ ಛತ್ರಪತಿ ಶಿವಾಜಿ ವೃತ್ತದಲ್ಲಿ ಆಯೋಜಿಸಿದ ಬಹಿರಂಗ ಸಮಾವೇಶ ವೇದಿಕೆಯವರೆಗೆ ನಡೆಯಿತು.
ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಜನರು ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಇಂಗ್ಲೀಷ್ ಹಾಗೂ ಉರ್ದು ಭಾಷೆಯಲ್ಲಿ ಬರೆದ ಭಿತ್ತಿಪತ್ರ ಹಾಗೂ ತ್ರಿವರ್ಣ ಧ್ವಜ ಹಿಡಿದು ಕರಾಳ ವಕ್ಪ್ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಘೋಷಣೆಗಳು ಕೂಗಿದರು.

ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ‘ರೈತ ವಿರೋಧಿ ಕರಾಳ ಕಾಯ್ದೆಗಳನ್ನು ಹಿಂಪಡೆಯದ ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದೆ. ದೇಶದಲ್ಲಿ ಸರಾಯಿ, ತಂಬಾಕು, ಗುಟ್ಕಾ ಸೇವನೆಯಿಂದ ಶೇ.30ರಷ್ಟು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದ ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಮೂಲಕ ಮುಸ್ಲಿಂ ಸಮುದಾಯಕ್ಕೆ ನೋವು ಕೊಡುತ್ತಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ದೇಶದಲ್ಲಿ ಶಾಂತಿ, ಸೌಹಾರ್ದತೆ ಬಯಸುವ ಮುಸ್ಲಿಂ ಸಮುದಾಯಕ್ಕೆ ತಕ್ಲಿಪ್ ಕೊಡುವುದು ಬಿಟ್ಟು ಬಿಡಿ, ಈ ಹಿಂದೆ ಹಿಜಾಬ್, ಆಹಾರ ಪದ್ಧತಿ, ಶಿಕ್ಷಣ ವಿಷಯದಲ್ಲಿ ಮುಸ್ಲಿಂರನ್ನು ಗುರಿ ಮಾಡಲಾಗಿತ್ತು. ಇಂತಹ ವಿಷಯಗಳಿಗೆ ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಪಕ್ಷ ಸಂಸತ್ತಿನಲ್ಲಿ ಕೂಡ ವಿರೋಧಿಸಿದೆ. ಇದು ಸಾಂಕೇತಿಕ ಹೋರಾಟ ಅಷ್ಟೇ, ಕಾಯ್ದೆ ಹಿಂಪಡೆಯದಿದ್ದರೆ ಇನ್ನೂ ಬೃಹತ್ ಪ್ರಮಾಣದಲ್ಲಿ ಹೋರಾಟ ರೂಪಿಸಲಾಗುವುದು. ಜೀವ ಹೋದರೂ ಚಿಂತೆಯಿಲ್ಲ, ಹೋರಾಟ ಮುಂದುವರಿಯಲಿದೆʼ ಎಂದು ಹೇಳಿದರು.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮೌಲಾನಾ ಅಬು ತಬ್ಲೀಬ್ ರೆಹಮಾನ್ ಮಾತನಾಡಿ, ʼದೇಶದಲ್ಲಿ ಹಿಂದೂ-ಮುಸ್ಲಿಂರು ಸಹೋದರತೆ ಭಾವದಿಂದ ಬದುಕುತ್ತಿದ್ದೇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ದೇಶ ಸದೃಢವಾಗಿರಲು ಸಾಧ್ಯ. ಕರಾಳ ವಕ್ಫ್ ತಿದ್ದುಪಡಿ ಕಾನೂನು ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆʼ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ಖಂಡಿಸಿ, ದಾಳಿಯಲ್ಲಿ ಮೃತಪಟ್ಟವರಿಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಪ್ರವಾಸಿಗರ ಜೀವ ಪಡೆದ ಉಗ್ರರನ್ನು ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಂಡು ಇಂತಹ ಅಮಾನವೀಯ, ಅನಾಗರಿಕ ಮತ್ತು ಪೈಶಾಚಿಕ ಘಟನೆಗಳನ್ನು ಸಮಾಜದಲ್ಲಿ ನಡೆಯದಂತೆ ಎಚ್ಚರವಹಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಡಾ.ಅಬ್ದುಲ್ ಖದೀರ್, ಅಣದೂರಿನ ಭಂತೆ ಜ್ಞಾನಸಾಗರ, ಫಾದರ್ ಕ್ಲಾರಿಯೋ, ಇಸಾಮ್ಮೋದಿನ ಮುಜಾಯಿದ್ದಿನ್, ಜ್ಞಾನಿ ದರ್ಬಾರ್ ಸಿಂಗ್ ಮಾತನಾಡಿದರು.
ʼವಕ್ಫ್ ತಿದ್ದುಪಡಿ ಕಾಯ್ದೆಯು ಭಾರತೀಯ ಸಂವಿಧಾನದ ಜಾತ್ಯತೀತ ಮತ್ತು ಬಹುತ್ವ ರಚನೆಯ ಮೇಲಿನ ದಾಳಿಯಾಗಿದೆ. ಅಲ್ಪಸಂಖ್ಯಾತ ಹಕ್ಕುಗಳ ಉಲ್ಲಂಘನೆ ಮತ್ತು ಮುಸ್ಲಿಂ ಸಮುದಾಯವನ್ನು ದುರ್ಬಲಗೊಳಿಸುವ ಮತ್ತು ಇಸ್ಲಾಮೋಫೋಬಿಯಾವನ್ನು ಉತ್ತೇಜಿಸುವ ಪ್ರಯತ್ನವಾಗಿದೆ’ ಎಂದರು .
‘ಸಹಿಷ್ಣುತೆ, ತಿಳುವಳಿಕೆ ಮತ್ತು ನಂಬಿಕೆಗಳ ನಡುವಿನ ಶಾಂತಿಯುತ ಸಹಬಾಳ್ವೆಯು ರಾಷ್ಟ್ರೀಯ ಏಕತೆಯ ಮೂಲಾಧಾರವಾಗಿರುವ ಭಾರತದ ಧಾರ್ಮಿಕ ಬಹುತ್ವದ ಸಂಪ್ರದಾಯವನ್ನು ಇದು ದುರ್ಬಲಗೊಳಿಸುತ್ತದೆ. ಕೂಡಲೇ ಈ ಕಾಯ್ದೆ ವಾಪಸ್ ಪಡೆಯಬೇಕುʼ ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ರ್‍ಯಾಲಿ
ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್ ಹಾಗೂ ಪ್ರಮುಖರಾದ ಮೌಲಾನಾ ಅಬ್ದುಲ್ ಜ್ಞಾನಿ ಖಾನ್, ಡಾ.ಮಕ್ಸೂದ್ ಚಂದಾ, ಅಬ್ದುಲ್ ಖಲೀದ್, ಮಹ್ಮದ್ ಅಹ್ಮದ್, ಮಹ್ಮದ್ ಸಲಾಂ ಖುರೇಸಿ, ಮಹಮ್ಮದ್ ತಾಜುದ್ದೀನ್ ಬಾಬು, ಮನ್ಸೂರ್ ಅಹ್ಮದ್ ಖಾದ್ರಿ, ಡಾ.ಶಾ ಜೀಯಾವುಲ್ಲಾ ಇಸ್ಲಾಂ, ಮಹ್ಮದ್ ಯುಸೂಫ್‌ದ್ದಿನ್, ಮೊಹ್ಮದ್ ನಿಜಾಮುದ್ದೀನ್, ಮುಖಂಡರಾದ ಮಾರುತಿ ಬೌದ್ಧೆ, ಸಂಜಯ ಜಾಗೀರದಾರ್, ವಿನಯ ಮಾಳಗೆ, ಮಹೇಶ್ ಗೊರನಾಳಕರ್, ಜಗದೀಶ್ವರ ಬಿರಾದಾರ, ಬಸವರಾಜ ಮಾಳಗೆ, ಬಾಬುರಾವ ಹೊನ್ನಾ, ಓಂಪ್ರಕಾಶ ರೊಟ್ಟೆ, ಬಾಬುರಾವ್ ಪಾಸ್ವಾನ್, ಮಾರುತಿ ಗೋಖಲೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.
You Muslims in India proved that irrespective what happens in this country your agenda remains the same. Shame on the entire community