ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಸ್ಮಶಾನ ಭೂಮಿ ಮಂಜೂರಾತಿಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಎನ್‌ಎಸ್‌ಒಎಸ್‌ವೈಎಫ್ ಕಾರ್ಯಕರ್ತರು ಬೀದರ್ ಜಿಲ್ಲೆಯ ಔರಾದ್ ತಾಲೂಕು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಪ್ರತಿಭಟಿಸಿದರು.
“ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಔರಾದ್ ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶೈಕ್ಷಣಿಕ ಅಭಿವೃದ್ಧಿಗೆ ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲ. ಉದ್ಯೋಗಕ್ಕೆ ಯಾವುದೇ ರೀತಿಯ ಕಾರ್ಖಾನೆ, ಕಂಪನಿ, ವ್ಯಾಪಾರ ಕೇಂದ್ರಗಳಿಲ್ಲ. ಹೀಗೆ ಸುಮಾರು ಸಮಸ್ಯೆಗಳಿಗೆ ಒಳಗಾಗಿ ಬಡತನದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಅಂತಿಮ ಸಂಸ್ಕಾರ ನಡೆಸಲು ಜಾಗ ಇಲ್ಲದಿರುವುದು ಜ್ವಲಂತ ಸಮಸ್ಯೆಯಾಗಿದೆ” ಎಂದು ದೂರಿದರು.
ನಮ್ಮ ಸಂಘಟನೆಯಿಂದ ಹಲವು ಬಾರಿ ಮನವಿ ಮಾಡಿದ್ದೇವೆ. 2017ರ ಎಪ್ರಿಲ್ 9ರಂದು ಧರಣಿ ಸತ್ಯಾಗ್ರಹವನ್ನೂ ಮಾಡಿದ್ದೇವೆ. ಆದರೆ ನಮಗೆ ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅದಕ್ಕಾಗಿ ನಮ್ಮ ಸಂಘಟನೆಯ ರಾಜ್ಯ ಸಂಚಾಲಕ ಶಿವ ಕಾಂಬಳೆ ನೇತೃತ್ವದಲ್ಲಿ ಹಲವು ಮುಖಂಡರು ಮತ್ತೆ 2017ರ ನವೆಂಬರ್ 22ರಂದು ಮೂರು ದಿನಗಳ ಕಾಲ ನಿರಂತರವಾಗಿ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿಮಾ ಯೋಜನೆ ವಂಚನೆಗೆ ಕಡಿವಾಣ: ಉಸ್ತುವಾರಿ ಸಚಿವ ಈಶ್ವರ ಖಂಡ್ರೆ
“ಬೀದರ್ ಸಹಾಯಕ ಆಯುಕ್ತ ಶಿವಕುಮಾರ ಶಿಲವಂತ ತಹಶೀಲ್ದಾರ್ ಮುಖಾಂತರ 2017ರಲ್ಲಿ ತಾಲೂಕಿನಾದ್ಯಂತ 30 ದಿನಗಳಲ್ಲಿ ಸ್ಮಶಾನ ಭೂಮಿ ಹದ್ದುಬಸ್ತಿ ಮತ್ತು ಮಂಜೂರು ಮಾಡಬೆಕೆಂದು ಆದೇಶ ಮಾಡಿದ್ದರು. ಆದರೆ ಈವರೆಗೆ ಔರಾದ್ ಪಟ್ಟಣ ಸೇರಿದಂತೆ ತಾಲೂಕಿನ ಯಾವುದೇ ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡದಿರುವುದು ದುರಂತವೇ ಸರಿ. ಇಂಥ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಸ್ಮಶಾನ ಭೂಮಿ ಮಂಜೂರು ಪ್ರಕ್ರಿಯೆ ನಡೆಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಸಂಚಾಲಕ ಶಿವಕುಮಾರ ಕಾಂಬಳೆ, ಪ್ರವೀಣ ಕಾರಂಜೆ, ಸುನೀಲ ವಾಘಮಾರೆ, ಸಂತೋಷ ಸೂರ್ಯವಂಶಿ, ಸುಂದರ ಮೇತ್ರೆ, ದಿನೇಶ ಶಿಂಧೆ ಸೇರಿದಂತೆ ಇತರರು ಇದ್ದರು.