ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) 2025-26ರ ಶೈಕ್ಷಣಿಕ ಅವಧಿಯ 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಪ್ರಮುಖ ಪರಿಷ್ಕರಣೆಯನ್ನು ಮಾಡಿದೆ. ಮೊಘಲರು ಮತ್ತು ದೆಹಲಿ ಸುಲ್ತಾನರಿಗೆ ಸಂಬಂಧಿಸಿದ ಅಧ್ಯಾಯಗಳನ್ನು ಕೈಬಿಟ್ಟಿದ್ದು ಮಹಾ ಕುಂಭಮೇಳದ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಸದ್ಯ ಒಂದನೇ ಭಾಗದ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಎರಡನೇ ಭಾಗದ ಪುಸ್ತಕ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಲ್ಲಿ ಉಳಿದ ಪಠ್ಯಕ್ರಮಗಳು ಇರಲಿದೆ ಎಂದು ಹೇಳಲಾಗಿದೆ. ಆದರೆ ಸದ್ಯ ಮೊಘಲರು ಮತ್ತು ದೆಹಲಿ ಸುಲ್ತಾನರ ಪಠ್ಯವನ್ನು ಕೈಬಿಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇತಿಹಾಸವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮತ್ತೆ ಪಠ್ಯಪುಸ್ತಕ ಪರಿಷ್ಕರಣೆ; ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಡಿ ಪರಿಷ್ಕರಿಸಲು ಸಮಿತಿ ರಚನೆ
ಹೊಸ ಪುಸ್ತಕದ ಮೊದಲ ಭಾಗದಲ್ಲಿ ಐದು ವಿಷಯಗಳ ಮೇಲೆ ಕೇಂದ್ರೀಕರಿಸಿದೆ. ಭಾರತ ಮತ್ತು ಪ್ರಪಂಚ, ಭೂತಕಾಲದ ವಸ್ತ್ರ, ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಜ್ಞಾನ ಸಂಪ್ರದಾಯಗಳು, ಆಡಳಿತ ಮತ್ತು ಪ್ರಜಾಪ್ರಭುತ್ವ ಮತ್ತು ನಮ್ಮ ಸುತ್ತಲಿನ ಆರ್ಥಿಕ ಜೀವನದ ವಿಷಯಗಳು ಇದರಲ್ಲಿ ಒಳಗೊಂಡಿದೆ.
ಅಧ್ಯಾಯಗಳು ಈಗ ಮೌರ್ಯ ಸಾಮ್ರಾಜ್ಯ, ಅಶೋಕನ ಆಳ್ವಿಕೆ ಮತ್ತು ಪ್ರಾಚೀನ ಭಾರತದ ರಾಜಕೀಯ ಭೂದೃಶ್ಯವನ್ನು ಒತ್ತಿಹೇಳುತ್ತವೆ. ಶುಂಗರು, ಶಾತವಾಹನರು, ಚೇದಿಗಳು, ಚೋಳರು, ಪಾಂಡ್ಯರು ಮತ್ತು ಚೇರರ ರಾಜವಂಶಗಳ ಬಗ್ಗೆ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.
ಆದರೆ ದೆಹಲಿ ಸುಲ್ತಾನರು, ಮೊಘಲ್ ಆಳ್ವಿಕೆ ಮತ್ತು ಅವರ ಆಡಳಿತ ವ್ಯವಸ್ಥೆಗಳನ್ನು ಒಳಗೊಂಡ ವಿಷಯಗಳನ್ನು ಬಿಡಲಾಗಿದೆ. ಭಾಗ 2ರಲ್ಲಿ ಈ ವಿಷಯಗಳನ್ನು ಸೇರ್ಪಡೆ ಮಾಡಲಾಗಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಪಠ್ಯಕ್ಕೆ ಕತ್ತರಿ ಹಾಕಲಾಗಿತ್ತು. ಆದರೆ ಸಂಪೂರ್ಣ ಮಾಹಿತಿಯನ್ನು ತೆಗೆದಿರಲಿಲ್ಲ.
ಇದನ್ನು ಓದಿದ್ದೀರಾ? ಪಠ್ಯಪುಸ್ತಕ ಪರಿಷ್ಕರಣೆ | ಕೆಲವು ಪದ ಮತ್ತು ವಾಕ್ಯಗಳಲ್ಲಷ್ಟೇ ಬದಲಾವಣೆ: ಸಚಿವ ಮಧು ಬಂಗಾರಪ್ಪ
ಪರಿಷ್ಕೃತ ಪಠ್ಯದಲ್ಲಿ ‘ಭೂಮಿ ಹೇಗೆ ಪವಿತ್ರ’ ಎಂಬ ಹೊಸ ಅಧ್ಯಾಯವನ್ನು ಸೇರಿಸಲಾಗಿದೆ. ಇದರಲ್ಲಿ ಹಿಂದೂ ಧರ್ಮ, ಬೌದ್ಧಧರ್ಮ, ಇಸ್ಲಾಂ, ಕ್ರಿಶ್ಚಿಯನ್ ಧರ್ಮ, ಯಹೂದಿ, ಜೊರಾಸ್ಟ್ರಿಯನ್ ಧರ್ಮ ಮತ್ತು ಸಿಖ್ ಧರ್ಮ ಸೇರಿದಂತೆ ವಿವಿಧ ಧರ್ಮಗಳ ಪವಿತ್ರ ಸ್ಥಳಗಳನ್ನು ಪರಿಚಯಿಸಲಾಗಿದೆ. ಈ ಪಠ್ಯದಲ್ಲಿ ಮಹಾ ಕುಂಭಮೇಳದ ಬಗ್ಗೆ ವಿವರವಿದೆ. ಈ ಮಹಾ ಕುಂಭಮೇಳದಲ್ಲಿ 660 ದಶಲಕ್ಷ ಯಾತ್ರಿಕರು ಭಾಗಿಯಾಗಿದ್ದಾರೆ ಎಂಬ ಉಲ್ಲೇಖ ಮಾಡಲಾಗಿದೆ. ಆದರೆ 2013ರ ಕಾಲ್ತುಳಿತದಂತಹ ದುರಂತ ಘಟನೆಗಳ ಬಗ್ಗೆ ಉಲ್ಲೇಖಿಸಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರವು ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳಿದೆ. ಹಾಗೆಯೇ ಪಠ್ಯ ಪುಸ್ತಕಗಳ ಕೇಸರೀಕರಣ ಮಾಡುವ ಪ್ರಯತ್ನವನ್ನೂ ಬಿಜೆಪಿ ಸರ್ಕಾರ ಹಲವು ಬಾರಿ ಮಾಡಿದೆ. ಇದೀಗ ಹಂತ ಹಂತವಾಗಿ ಮುಸ್ಲಿಂ ದೊರೆಗಳ ಪಠ್ಯಗಳನ್ನು ತೆಗೆದುಹಾಕಲಾಗಿದೆ.
