ಭಾರತ ಪಾಕಿಸ್ತಾನದ ಬೆನ್ನುಮುರಿಯುವುದು ಸದ್ಯ ಪಾಕಿಸ್ತಾನ ಎಸಗಿರುವ ಪಾತಕಕ್ಕೆ ಶಾಸ್ತಿಯಾಗಬಹುದು. ಆದರೆ, ಭಾರತ ಪಾಕಿಸ್ತಾನಕ್ಕಾಗಲಿ, ವಿಶ್ವಕ್ಕಾಗಲಿ ದಿಟ್ಟ ಉತ್ತರ ಕೊಡಬೇಕೆಂದರೆ ಅದು ಕಾಶ್ಮೀರದ ಜನತೆ ಭಾರತದೊಂದಿಗೆ ಮಾನಸಿಕವಾಗಿ, ಹೃದಯಪೂರ್ವಕವಾಗಿ ಮಿಳಿತಗೊಳ್ಳಲು ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ನಾವು ಮರೆಯಬಾರದು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಭಯೋತ್ಪಾದಕರು ನಡೆಸಿದ ಹೇಯ, ನೀಚ ಕೃತ್ಯವು ಭಾರತ ಮತ್ತು ಪಾಕಿಸ್ತಾನದ ನಡುವಿನ ಕಂದರವನ್ನು ಮತ್ತಷ್ಟು ಆಳ-ಅಗಲವಾಗಿಸುವ ತನ್ನ ಉದ್ದೇಶವನ್ನು ಕಾರ್ಯಗತಗೊಳಿಸಿದೆ.
ಅದರೊಟ್ಟಿಗೆ, ತಮ್ಮ ಎಲ್ಲ ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಕಾಶ್ಮೀರದ ಜನತೆ, ವಿಶೇಷವಾಗಿ ಕಾಶ್ಮೀರದ ಯುವಜನತೆ ತಮ್ಮ ಭವಿಷ್ಯದ ಕನಸುಗಳನ್ನು ಭಾರತದ ಅಭಿವೃದ್ದಿ, ಬೆಳವಣಿಗೆಯೊಂದಿಗೆ ಮಿಳಿತಗೊಳಿಸಲು ಉತ್ಸಾಹದಿಂದ ಇರಿಸುತ್ತಿದ್ದ ಹೆಜ್ಜೆಗಳಿಗೆ ದೊಡ್ಡದೊಂದು ತೊಡರುಗಾಲು ಹಾಕುವ ನಿಟ್ಟಿನಲ್ಲಿ ಈ ಹೀನ ಭಯೋತ್ಪಾದಕ ಕೃತ್ಯ ತಾತ್ಕಾಲಿಕವಾಗಿ ಪರಿಣಾಮವನ್ನೂ ಬೀರಬಹುದು.
ಭಯೋತ್ಪಾದಕರ ಕೃತ್ಯವನ್ನು ದೇಶವು ಒಗ್ಗೂಡಿ ಖಂಡಿಸಿದ್ದು, ಪಾಕಿಸ್ತಾನ ಮತ್ತೆಂದೂ ಇಂತಹ ದುಸ್ಸಾಹಸಕ್ಕೆ ಕೈ ಹಾಕದಂತೆ, ಮೇಲೇಳಲು ಸಾಧ್ಯವಿಲ್ಲದಂತಹ ದಿಟ್ಟ ಪ್ರತ್ಯುತ್ತರವನ್ನು ನೀಡಬೇಕು ಎನ್ನುವ ಬಗ್ಗೆಯೂ ಪಕ್ಷಾತೀತವಾಗಿ ಒಮ್ಮತದ ದನಿ ಕೇಳಿಬಂದಿದೆ.
ಭಾರತ ಪಾಕಿಸ್ತಾನದ ಬೆನ್ನುಮುರಿಯುವುದು ಸದ್ಯ ಪಾಕಿಸ್ತಾನ ಎಸಗಿರುವ ಪಾತಕಕ್ಕೆ ಶಾಸ್ತಿಯಾಗಬಹುದು. ಆದರೆ, ಭಾರತ ಪಾಕಿಸ್ತಾನಕ್ಕಾಗಲಿ, ವಿಶ್ವಕ್ಕಾಗಲಿ ದಿಟ್ಟ ಉತ್ತರ ಕೊಡಬೇಕೆಂದರೆ ಅದು ಕಾಶ್ಮೀರದ ಜನತೆ ಭಾರತದೊಂದಿಗೆ ಮಾನಸಿಕವಾಗಿ, ಹೃದಯಪೂರ್ವಕವಾಗಿ ಮಿಳಿತಗೊಳ್ಳಲು ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ನಾವು ಮರೆಯಬಾರದು.
ವಿನಾಶಕಾರಿ ದೇಶದ ವಿಪರೀತ ಬುದ್ಧಿ!
ಕಾಶ್ಮೀರದ ಇಂದಿನ ಸುಶಿಕ್ಷಿತ ಯುವಪೀಳಿಗೆಗೆ ಪಾಕಿಸ್ತಾನವೆಂಬುದು ಧಾರ್ಮಿಕ ಮೂಲಭೂತವಾದದ, ಭಯೋತ್ಪಾದನೆಯನ್ನು ಉಪಕಸುಬು ಮಾಡಿಕೊಂಡಿರುವ, ಮಿಲಿಟರಿಯ ಕೈಗೊಂಬೆಯಾಗಿ ‘ನಾಮ್ ಕೇ ವಾಸ್ತೆ’ ಆಡಳಿತ ನಡೆಸುವ ಪೊಳ್ಳು ಸರ್ಕಾರಗಳ ದೇಶವಾಗಿ ಕಾಣುತ್ತಿದೆ. ಜಿದ್ದಿಗೆ ಬಿದ್ದಂತೆ ಪಾತಾಳದ ಕಡೆಗೆ ವೇಗವಾಗಿ ಮುನ್ನುಗ್ಗುತ್ತಿರುವ ಪಾಕಿಸ್ತಾನ ತನ್ನ ಇತಿಹಾಸದುದ್ದಕ್ಕೂ ತನ್ನ ದೇಶದ ನಾಗರಿಕರ ಹಿತಚಿಂತನೆಯನ್ನು ಕೇಂದ್ರದಲ್ಲಿರಿಸಿಕೊಂಡು ಅಭಿವೃದ್ಧಿ ಪಥದಲ್ಲಿ ನಡೆದಿದ್ದೇ ಕಡಿಮೆ. ಬದಲಿಗೆ ಭೌಗೋಳಿಕವಾಗಿ ತನಗಿರುವ ಅನುಕೂಲವನ್ನು ಬಳಸಿಕೊಂಡು ಬಲಿಷ್ಠ ರಾಷ್ಟ್ರಗಳ ಹಿತಾಸಕ್ತಿಗೆ ಅನುಗುಣವಾಗಿ ಗೋಣು ಆಡಿಸಿದ್ದೇ ಹೆಚ್ಚು. ಆ ದೇಶಗಳು ನೇರವಾಗಿ ಮಾಡಲಾಗದ ಕೆಟ್ಟ ಕೆಲಸಗಳನ್ನು ತಾನು ಕಣ್ಣಿಗೊತ್ತಿಕೊಂಡು ಮಾಡುತ್ತಾ ಅದನ್ನೇ ತನ್ನ ದುಡಿಮೆಯ ಮಾರ್ಗವಾಗಿ, ಆರ್ಥಿಕ ಮೂಲವಾಗಿ ಮಾಡಿಕೊಂಡು ಬಂದ ಪಾಕಿಸ್ತಾನ ಮಿಲಿಟರಿ ಬಲವನ್ನೇ ಅಭಿವೃದ್ಧಿ ಎಂದು ತನ್ನ ಜನತೆಯನ್ನು ವಂಚಿಸಿಕೊಂಡು ಬಂದಿದೆ.
ಸದಾಕಾಲ ಒಂದಿಲ್ಲೊಂದು ಅಂತಃಕಲಹದಲ್ಲಿ ಸಿಲುಕಿಕೊಂಡಿರುವ ಪಾಕಿಸ್ತಾನದಲ್ಲಿ ಅಲ್ಲಿನ ಸರ್ಕಾರದ ಆಡಳಿತಯಂತ್ರವೇ ತಲುಪದ, ಷರಿಯಾ ಮಾದರಿಯ ಆಡಳಿತವೇ ಮೇಲುಗೈ ಸಾಧಿಸಿರುವ ಅನೇಕ ಪ್ರಾಂತ್ಯಗಳಿವೆ. ಯುವಪೀಳಿಗೆಯ ಕೈಗೆ ಪುಸ್ತಕ-ಲೇಖನಿಯನ್ನು ಕೊಡದ, ಅವರ ಕನಸುಗಳಿಗೆ ರೆಕ್ಕೆಯನ್ನು ನೀಡದ ಈ ದೇಶ ಯಾರದೋ ಮೇಲೆ ಜಿದ್ದಿಗೆ ಬಿದ್ದಂತೆ ತನ್ನೊಡಲಿನಲ್ಲಿ ವಾಕರಿಕೆ ಬರಿಸುವಷ್ಟು ಪಾಶ್ಚಿಮಾತ್ಯ ದೇಶಗಳು ಬಳಸಿ ಬಿಸಾಕಿರುವ ಗುಜರಿ ಅಸ್ತ್ರಗಳನ್ನು ತುಂಬಿಕೊಂಡು, ಅದು ಬಲು ಸಲೀಸಾಗಿ ಯುವಜನತೆಗೆ ಸಿಗುವಂತೆ ಮಾಡಿದೆ.

ಅಭಿವೃದ್ಧಿಯ ಮಾತನ್ನೇ ಆಡದ ಇಂತಹ ದೇಶದ ರಾಜಕಾರಣಿಗಳ ಜುಟ್ಟು ಅಲ್ಲಿನ ಮಿಲಿಟರಿ ಕೈಯಲ್ಲಿ ಆರಂಭದಿಂದಲೇ ಸೇರಿ ಹೋಗಿದೆ. ಸದಾಕಾಲ ಸಾಲದ ಸುಳಿಯಲ್ಲಿಯೇ ಇರುವ, ಉತ್ಪಾದನೆ, ಸೇವಾವಲಯಗಳೆರಡರಲ್ಲೂ ಮಕಾಡೆ ಮಲಗಿರುವ ಈ ದೇಶಕ್ಕೆ ಭಯೋತ್ಪಾದನೆ ಎನ್ನುವುದು ಅನ್ನ, ನೀರು ಎಲ್ಲವೂ ಆಗಿ ಪರಿಣಮಿಸಿದೆ. ಪಾಕಿಸ್ತಾನದ ರಾಜಕಾರಣಿಗಳು, ಅಲ್ಲಿನ ಸೇನೆ ತನ್ನ ದೇಶದ ಜನರನ್ನು ಇನ್ನಿಲ್ಲದಂತೆ ವಂಚಿಸಿತ್ತಾ ಅವರ ಬದುಕಿನಲ್ಲಿ ದಾರಿದ್ರ್ಯವನ್ನಷ್ಟೇ ತುಂಬುವಲ್ಲಿ ಈವರೆಗೆ ಸಫಲವಾಗಿವೆ.
ಪಾಕಿಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರಗಳು ಎಂದೂ ತಮ್ಮ ಜೊತೆಗೆ ಎಣಿಸಿಕೊಂಡಿಲ್ಲ, ಬದಲಿಗೆ ಅದು ಅಮೆರಿಕದ ಪಕ್ಷಪಾತಿ ಎಂದು ಎರಡನೇ ದರ್ಜೆಯ ನಾಗರಿಕನಂತೆ ಗುರುತಿಸಿವೆ. ಅಣ್ವಸ್ತ್ರವನ್ನು ಹೊಂದಿದ ಮೊದಲ ಇಸ್ಲಾಮಿಕ್ ರಾಷ್ಟ್ರ ಎನ್ನುವ ಅದರ ಶ್ರೇಯದ ಬಗ್ಗೆ ಇಸ್ಲಾಮಿಕ್ ರಾಷ್ಟ್ರಗಳು ಮುಂಚಿನಿಂದಲೂ ನಂಬಿಕೆ ಹೊಂದಿಲ್ಲ. ಪಾಕಿಸ್ತಾನದ ಅಣ್ವಸ್ತ್ರಗಳು ತಮ್ಮ ಪಾಲಿಗಿರುವುದಿಲ್ಲ ಎನ್ನುವ ಧೋರಣೆಯನ್ನು ಈ ರಾಷ್ಟ್ರಗಳು ಎಂದೋ ತಳೆಯಲು ಪಾಕಿಸ್ತಾನಿ ಸೇನೆ ಹಾಗೂ ಸರ್ಕಾರಗಳು ಹೂಡುವ ಕಳ್ಳಾಟಗಳು ಕಾರಣ.
ಹೀಗೆ, ಖುದ್ದು ಅಂಧಕಾರದಲ್ಲಿರುವ ಈ ದೇಶ ತಮ್ಮ ಪಾಲಿಗೆ ಬೆಳಕೆಂದೂ ಆಗದು ಎನ್ನುವುದನ್ನು ಕಾಶ್ಮೀರದ ಪೀಳಿಗೆ ಅರಿತಿದೆ. ಭಾರತದಲ್ಲಿ ಬಲಪಂಥೀಯ ವಾದ, ವಿಭಜಕ ಶಕ್ತಿಗಳು ಎಷ್ಟೇ ಬಲಗೊಂಡಿದ್ದರೂ ಈ ದೇಶದ ಭವಿಷ್ಯವನ್ನು ಅವು ಮಾತ್ರವೇ ನಿರ್ಧರಿಸಲಾಗದು ಎನ್ನುವುದು ಕಾಶ್ಮೀರಿ ಜನತೆಗೆ ತಿಳಿದಿದೆ. ಒತ್ತರಿಸಿದಷ್ಟೂ ಎದ್ದು ಬರುವ ಇಲ್ಲಿನ ಪ್ರಜಾಸತ್ತಾತ್ಮಕ ದನಿಗಳು, ಆಗಸವಿರುವುದೇ ಹಾರುವುದಕ್ಕೆ ಎಂದು ರೆಕ್ಕೆಬಿಚ್ಚುವ ಯುವಶಕ್ತಿ, ಪುಟಿದೇಳುವ ಆರ್ಥಿಕತೆ, ಎಷ್ಟು ಕತ್ತರಿಸಿದರೂ ಸುಲಭಕ್ಕೆ ತುಂಡಾಗದ ಸಾಮರಸ್ಯದ ಹೆಣಿಗೆಗಳು ಈ ದೇಶವನ್ನು ಪೊರೆಯುತ್ತವೆ ಎಂದು ಕಾಶ್ಮೀರದ ಜನತೆಗೆ, ರಾಜಕಾರಣಿಗಳಿಗೆ ಹಾಗೂ ಅಲ್ಲಿ ಅಭಿಪ್ರಾಯ ರೂಪಿಸುವ ದನಿಗಳಿಗೆ ತಿಳಿದಿದೆ.
ಪಾಕಿಸ್ತಾನಕ್ಕೆ ಕಪಾಳಮೋಕ್ಷ ಮಾಡಿದ ಕಾಶ್ಮೀರಿ ಜನತೆ
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ವಿಚಾರವನ್ನೇ ತೆಗೆದುಕೊಳ್ಳಿ, ಈ ಬಗ್ಗೆ ಹಿಂದುತ್ವವಾದಿಗಳು ತೋರಿದ ರಣೋತ್ಸಾಹವೇ ಇಡೀ ದೇಶದ ದನಿಯೂ ಕೂಡ ಎಂದು ಕಾಶ್ಮೀರದ ಜನತೆ ಭಾವಿಸಲಿಲ್ಲ. ಏಕೆಂದರೆ, ಸರ್ಕಾರದ ಆ ಕ್ರಮ ಪ್ರಜಾತಾಂತ್ರಿಕವಲ್ಲ, ಸಂಸದೀಯವಲ್ಲ ಎನ್ನುವುದನ್ನು ಕಾಂಗ್ರೆಸ್ ಸಹಿತ ದೇಶದ ಅನೇಕ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಹೇಳಿದವು. ಜಮ್ಮು ಮತ್ತು ಕಾಶ್ಮೀರಕ್ಕೆ ಶೀಘ್ರವೇ ರಾಜ್ಯದ ಸ್ಥಾನಮಾನವನ್ನು ಮರಳಿಸಬೇಕು ಎನ್ನುವುದು ಈಗಲೂ ವಿಪಕ್ಷಗಳ ಗಟ್ಟಿ ದನಿಯಾಗಿದೆ. ಹೀಗಾಗಿ, ಕಾಶ್ಮೀರದ ಜನತೆ ನೋವಿನಲ್ಲಿಯೂ ಕೂಡ ತಾವು ಮಾಡಿಕೊಳ್ಳಬಹುದಾದ ಆಯ್ಕೆ ಭಾರತವೇ ಆಗಿದೆ ಎಂದು ಭಾವಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದನೆಯನ್ನು ಖಂಡಿಸಿ ಕಾಶ್ಮೀರದ ಜನತೆ ತೋರಿಸಿರುವ ಪ್ರತಿಭಟನೆ, ಗಟ್ಟಿದನಿಯಿಂದ ಆಡಿರುವ ಮಾತುಗಳು ಪಾಕಿಸ್ತಾನಕ್ಕೆ ವಿಶೇಷವಾಗಿ ಅಲ್ಲಿನ ಸೇನೆಗೆ ಜೀರ್ಣಿಸಿಕೊಳ್ಳಲಾಗದ ಕಹಿ ಗುಳಿಗೆಯಾಗಿದೆ. ಭಾರತದ ಸೇನೆ ಉತ್ತರಿಸುವುದಕ್ಕೂ ಮುನ್ನವೇ, ಕಾಶ್ಮೀರದ ಜನತೆ ತನ್ನ ದೇಶದ ಜನರ ನೋವಿಗೆ ಮಿಡಿಯುವ ಮೂಲಕ ಪಾಕಿಸ್ತಾನದ ಸೇನೆ ಹಾಗೂ ಬೇಹುಗಾರಿಕೆಗೆ ಕಪಾಳಮೋಕ್ಷ ಮಾಡಿದೆ.

ದ್ವಿರಾಷ್ಟ್ರದ ಪರಿಕಲ್ಪನೆ ಧರ್ಮದ ಆಧಾರದಲ್ಲಿ ತಳೆದಿದೆ ಎಂದು ಹೇಳುತ್ತಾ ಪರೋಕ್ಷವಾಗಿ ಕಾಶ್ಮೀರವನ್ನು ತನ್ನ ಕರುಳಬಳ್ಳಿಯಾಗಿಸಿಕೊಳ್ಳಲು ಹೊರಟ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸೀಮ್ ಮುನೀರ್‌ಗೆ ಕಾಶ್ಮೀರದ ಜನತೆ ತಕ್ಕ ಶಾಸ್ತಿ ಕಲಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯ ಕುಂಡಕ್ಕೆ ಕಾಶ್ಮೀರದ ಯವಕರನ್ನು, ಕಾಶ್ಮೀರದ ಭವಿಷ್ಯವನ್ನು ದೂಡುವ ಪಾಕಿಸ್ತಾನದ ಚಟವನ್ನು ಕಾಶ್ಮೀರದ ಬೀದಿಗಳಲ್ಲಿ ಅಲ್ಲಿನ ಜನತೆ ತೀವ್ರವಾಗಿ ಖಂಡಿಸಿದ್ದಾರೆ. ಕಾಶ್ಮೀರದ ಜನತೆಯ ಇಚ್ಛೆಯನ್ನು ಪಾಕಿಸ್ತಾನದಲ್ಲಿ ಕೂತ ಸೇನಾ ಮುಖ್ಯಸ್ಥ ನಿರ್ಧರಿಸಲಾರ ಎನ್ನುವ ದಿಟ್ಟ ಸಂದೇಶವನ್ನು ಈ ಪ್ರತಿಭಟನೆಗಳು ನೀಡಿವೆ.
ಪ್ರೌಢಿಮೆ ತೋರಲಿದೆಯೇ ಕೇಂದ್ರ ಸರ್ಕಾರ?
ಕಾಶ್ಮೀರದ ಜನತೆ ಹಾಗೂ ಅಲ್ಲಿನ ಆಡಳಿತಾರೂಢ ನ್ಯಾಷನಲ್ ಕಾನ್ಫೆರೆನ್ಸ್-ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರ್ಕಾರ ಪಹಲ್ಗಾಮ್ ಘಟನೆಯ ಸಂದರ್ಭದಲ್ಲಿ ತೋರಿರುವ ಪ್ರೌಢಿಮೆಯನ್ನು ಇಡೀ ದೇಶವೇ ಗಮನಿಸಿದೆ. ಕಾಶ್ಮೀರದ ಭದ್ರತೆಯ ಉಸ್ತುವಾರಿ ವಿಚಾರದಲ್ಲಿ ಅಲ್ಲಿನ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲದೆ ಹೋದರೂ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ರಾಜ್ಯಕ್ಕೆ ಅತಿಥಿಗಳಾಗಿ ಬಂದ ಪ್ರವಾಸಿಗರನ್ನು ಸುರಕ್ಷಿತವಾಗಿ ಮರಳುವಂತೆ ಮಾಡುವುದು ತಮ್ಮ ಜವಾಬ್ದಾರಿಯಾಗಿತ್ತು. ಆದರೆ, ಆ ಜವಾಬ್ದಾರಿಯಲ್ಲಿ ವಿಫಲರಾದ ಬಗ್ಗೆ ಶಾಸನಸಭೆಯಲ್ಲಿ ನಿಂತು ಗಾಢ ವಿಷಾದ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದ ಜನತೆ ತಮ್ಮ ಆಂತರ್ಯದಿಂದ ಮಡಿದವರಿಗೆ ಮಿಡಿದಿದ್ದಾರೆ, ಭಯೋತ್ಪಾದನೆಯನ್ನು ಖಂಡಿಸಿದ್ದಾರೆ. ಇದೆಲ್ಲವನ್ನೂ ದೇಶದ ಜನತೆ ಗುರುತಿಸಿದ್ದಾರೆ, ಇದೇ ವೇಳೆ ಕೇಂದ್ರ ಸರ್ಕಾರವು ಸಹ ಸೂಕ್ತ ರೀತಿಯಲ್ಲಿ ಇದನ್ನು ಗುರುತಿಸಬೇಕಿದೆ.
ಕಾಶ್ಮೀರವನ್ನು ಅದುಮಿ ಹಿಡಿದು ಸಹಜ ಸ್ಥಿತಿಗೆ ತರಲು ಪ್ರಯತ್ನಿಸುವ ತನ್ನ ಆಕ್ರಮಣಕಾರಿ ನೀತಿಯಲ್ಲಿ ಬದಲಾವಣೆ ತಂದುಕೊಂಡು, ಅಲ್ಲಿನ ಜನತೆ, ಆಡಳಿತದ ಮೇಲೆ ವಿಶ್ವಾಸವಿರಿಸಿ ಪ್ರಜಾಪ್ರಭುತ್ವವಾದಿ ಕ್ರಮಗಳ ಮೂಲಕವೇ ಸಹಜ ಸ್ಥಿತಿಗೆ ತರುವ ಪ್ರಯತ್ನ ಮಾಡಬೇಕಿದೆ.
ಇದೇ ವೇಳೆ ತನ್ನ ಹಿಂದುತ್ವವಾದಿ ಕಾರ್ಯಸೂಚಿ, ಧೋರಣೆಗಳನ್ನು ಬದಿಗಿರಿಸಿ ಕಾಶ್ಮೀರದಲ್ಲಿ ಸಂಭವಿಸಿದ ಈ ಘೋರ ಪಾತಕವನ್ನು ವಿಭಜನಕಾರಿ ಅಸ್ತ್ರವಾಗಿ ಬಳಕೆಯಾಗದಂತೆ ನೋಡಿಕೊಳ್ಳುವ ಪ್ರೌಢಿಮೆಯನ್ನು ಪ್ರದರ್ಶಿಸಬೇಕಿದೆ. ಪಾಕಿಸ್ತಾನದ ದುಷ್ಟ, ನೀಚ ಸಾಹಸಕ್ಕೆ ತಕ್ಕಶಾಸ್ತಿಯನ್ನು ಮಾಡಲು ಭಾರತೀಯ ಸೇನೆ ಸನ್ನದ್ಧವಾಗಿ ಕಾಯುತ್ತಿದೆ, ಅದಕ್ಕೆ ಒಪ್ಪಿಗೆ ನೀಡಿದರೆ ಸಾಕು, ಮುಂದಿನದನ್ನು ಸೇನೆ ನೋಡಿಕೊಳ್ಳುತ್ತದೆ. ಸರ್ಕಾರವೇನಿದ್ದರೂ ಸೇನೆ ಕೈಗೊಳ್ಳುವ ಕ್ರಮಗಳಿಗೆ ಜಾಗತಿಕವಾಗಿ ಮಾನ್ಯತೆ, ಸಮರ್ಥನೆ ದೊರಕಿಸಿಕೊಡುವ ಪ್ರಯತ್ನ ಮಾಡಬೇಕು. ಉಳಿದೆಲ್ಲಾ ಹೆಚ್ಚುಗಾರಿಕೆಯನ್ನು ಸೇನೆಗೆ ನೀಡಿ, ತಾನು ಗಂಭೀರವಾಗಿರುವುದನ್ನು ಕಲಿಯಬೇಕು.
ಮತೀಯ ಸಂಕಥನಗಳ ರಾಜಕಾರಣ ನಿಲ್ಲಲಿ
ಕೇಂದ್ರದಲ್ಲಿ 2014ರಿಂದ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರ ತನ್ನ ಹಿಂದುತ್ವವಾದಿ ಕಾರ್ಯಸೂಚಿಯ ಭಾಗವಾದ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವಿಕೆ, ಪೌರತ್ವ ತಿದ್ದುಪಡಿ ಕಾಯಿದೆ ಜಾರಿ, ನಾಗರಿಕರ ನೊಂದಣಿ, ಏಕರೂಪ ನಾಗರಿಕ ಸಂಹಿತೆ, ವಕ್ಫ್ ತಿದ್ದುಪಡಿ ಕಾಯಿದೆ – ಹೀಗೆ ತನ್ನ ಸಿದ್ಧಾಂತಕ್ಕೆ ಹತ್ತಿರವಾದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಪೂರ್ಣವಾಗಿ ಮಗ್ನವಾಗಿದೆ. ಹೀಗಿರುವಾಗ, ಪಹಲ್ಗಾಮ್ ಭಯೋತ್ಪಾದನಾ ದಾಳಿಯ ವಿಚಾರ ಹಾಗೂ ಅದಕ್ಕೆ ನೀಡುವ ಕಠಿಣ ಉತ್ತರವನ್ನು ಅದು ಭವಿಷ್ಯದಲ್ಲಿ ದೇಶಾದ್ಯಂತ ಯಾವ ಬಗೆಯ ಸಂಕಥನ ರೂಪಿಸಲು ಬಳಸಬಹುದು ಎನ್ನುವ ಪ್ರಶ್ನೆಗೆ ಉತ್ತರ ಕಷ್ಟವೇನಲ್ಲ.
ಭಾರತೀಯ ಮುಸ್ಲಿಮರ ದೇಶಪ್ರೇಮ, ಬದ್ಧತೆಯ ಬಗ್ಗೆ ಸದಾಕಾಲ ಸಂಶಯ, ಆಕ್ಷೇಪ, ಅವಿಶ್ವಾಸವನ್ನೇ ಬಿತ್ತುವ ಹಿಂದುತ್ವವಾದಿ ಬಲಪಂಥೀಯ ಸಂಘಟನೆಗಳು ಹಾಗೂ ಅವುಗಳೆಡೆಗೆ ಎಂದೂ ಕೆಂಗಣ್ಣು ಬೀರದ ಕೇಂದ್ರ ಸರ್ಕಾರ ಪಹಲ್ಗಾಮ್ ವಿಚಾರದಲ್ಲಿ ಎಂತಹ ಅಭಿಪ್ರಾಯ ದೇಶಾದ್ಯಂತ ರೂಪುಗೊಳ್ಳಲು ಪ್ರೇರೇಪಿಸಬಹುದು ಎನ್ನುವುದಕ್ಕೆ ಉತ್ತರ ಕಷ್ಟವೇನಲ್ಲ…

ಪಹಲ್ಗಾಮ್‌ನಂತಹ ಘಟನೆಗಳು ನಡೆದಾಗ ಬಿಜೆಪಿ ತನ್ನ ವೈಫಲ್ಯವನ್ನು ಮರೆಮಾಚಲು ಎಂತಹ ಕೆಟ್ಟ ತಂತ್ರಗಳನ್ನು ಅನುಸರಿಸುತ್ತದೆ ಎನ್ನುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತಿರುಚಿ ಬಿಜೆಪಿಯ ಮುಖಂಡರು ಕಳೆದೆರಡು ದಿನಗಳಿಂದ ನಡೆಸಿರುವ ಹೀನ ರಾಜಕಾರಣದ ವರಸೆಯನ್ನು ಗಮನಿಸಬಹುದು. ಭದ್ರತಾ ವೈಫಲ್ಯದ ಕುರಿತಾದ ಚರ್ಚೆಯನ್ನು ಮಾಡುವುದು, ಆಡಳಿತಾತ್ಮಕ ಲೋಪದ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ದೇಶದ್ರೋಹದ ಕೆಲಸ ಎನ್ನುವಂತೆ ಬಿಂಬಿಸುತ್ತಿರುವ ಬಿಜೆಪಿ ಹಾಗೂ ಕೆಲ ಬಲಪಂಥೀಯ ಹಿಂದುತ್ವವಾದಿ ಸಂಘಟನೆಗಳು ಸಿದ್ದರಾಮಯ್ಯ ಪಾಕಿಸ್ತಾನದೊಂದಿಗೆ ಯುದ್ಧವೇ ಬೇಡವೆಂದಿದ್ದಾರೆ ಎಂದು ಹಸಿಹಸಿ ಸುಳ್ಳುಗಳನ್ನು ಪ್ರಚಾರ ಮಾಡಿದರು. ಭದ್ರತಾ ವೈಫಲ್ಯದ ಬಗ್ಗೆ ಅಪ್ಪಿತಪ್ಪಿಯೂ ಚರ್ಚಿಸದ, ಬಿಜೆಪಿಯ ಕಾಲಬುಡದಲ್ಲಿ ಬಿದ್ದು ಹೊರಳಾಡುವುದನ್ನೇ ಪತ್ರಿಕೋದ್ಯಮ ಎಂದುಕೊಂಡಿರುವ ಕೆಲ ರಾಷ್ಟ್ರೀಯ ಸುದ್ದಿ ವಾಹಿನಿಗಳು ಸಿದ್ದರಾಮಯ್ಯನವರ ಹೇಳಿಕೆಯನ್ನು ತಮಗೆ ಬೇಕಾದಂತೆಲ್ಲಾ ತಿರುಚಿ ಜನರ ಗಮನವನ್ನು ಬೇರೆಡೆ ತಿರುಗಿಸುವ ತಂತ್ರ ಹೂಡಿದವು. ಇವುಗಳ ಕಣ್ಣಿಗೆ ಸರ್ವಪಕ್ಷದ ಸಭೆಗೆ ಹಾಜರಾಗದೆ, ಚುನಾವಣಾ ಪ್ರಚಾರಕ್ಕೆ ಹೋದ ಪ್ರಧಾನಿ ಮೋದಿಯವರು ಮಾತ್ರ ಕಾಣಲೇ ಇಲ್ಲ!
ವಿಶ್ವಗುರುವಿಗೆ ಜಾಗತಿಕ ಅಭಿಪ್ರಾಯ ರೂಪಿಸಲು ಆಗುತ್ತಿಲ್ಲವೇಕೆ?
ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಪಹಲ್ಗಾಮ್ ಕುರಿತಾಗಿ ನೀಡಿದ ಹೇಳಿಕೆಯಲ್ಲಿ ದಾಳಿಗೆ ಮೊದಲಿಗೆ ಹೊಣೆಹೊತ್ತು ನಂತರ ನುಣುಚಿಕೊಂಡ ಲಷ್ಕರ್-ಎ-ತೊಯ್ಬಾದ ಅಂಗ ಸಂಘಟನೆಯಾದ ‘ದ ರೆಸಿಸ್ಟೆನ್ಸ್ ಫ್ರಂಟ್’ನ ಹೆಸರು ಬಾರದಂತೆ ಪಾಕಿಸ್ತಾನ ನೋಡಿಕೊಂಡಿತು. ಅಷ್ಟೇ ಅಲ್ಲ, ಘಟನೆ ನಡೆದಿರುವ ಸ್ಥಳವಾದ ಪಹಲ್ಗಾಮ್‌ನ ಹೆಸರು ಸಹ ಬಾರದಂತೆ ಗಮನಿಸಿಕೊಂಡಿತು. ಆ ಮೂಲಕ ಘಟನೆಯ ಕುರಿತಾಗಿ ಉಗ್ರವಾದಿ ಸಂಘಟನೆಗಳು ಹೊಂದಿರುವ ನಂಟಾಗಲಿ, ಪಾಕಿಸ್ತಾನದ ಪಾತ್ರದ ಬಗ್ಗೆಯಾಗಲಿ ನೇರವಾಗಿ ಯಾವುದೇ ದಾಖಲೆಗಳು, ಸಾಕ್ಷ್ಯಗಳು ಇಲ್ಲ ಎಂದು ಹೇಳಿತು. ಈ ಹೇಳಿಕೆ ಆಧರಿಸಿ ಅಂತಾರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳನ್ನು ಒಳಗೊಂಡ ಸ್ವತಂತ್ರ ತನಿಖೆ ನಡೆಸಬೇಕೆಂದು ಅದು ಈಗ ಒತ್ತಾಯಿಸುತ್ತಿದೆ. ಚೀನಾವನ್ನು ಮುಂದಿರಿಸಿಕೊಂಡು ಪಾಕಿಸ್ತಾನ ನಡೆಸುವ ಇಂತಹ ಕುತಂತ್ರ ನಡೆಗಳನ್ನು ತಡೆಯುವಲ್ಲಿ ಭಾರತ ಯಶಸ್ವಿಯಾಗಿಲ್ಲ. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳುವುದಿಲ್ಲ!
ಜಾಗತಿಕವಾಗಿ ಭಾರತದ ಸ್ಥಾನಮಾನವನ್ನು ಇನ್ನಿಲ್ಲದಂತೆ ಎತ್ತರಿಸಿದ್ದೇನೆ ಎಂದು ಬೀಗುವ ಪ್ರಧಾನಿ ಮೋದಿಯವರ ವರ್ಚಸ್ಸಾಗಲಿ, ಪ್ರಭಾವಿ ಜಾಗತಿಕ ನಾಯಕರಿಗೆ ಅವರು ನೀಡುವ ಅಪ್ಪುಗೆಗಳಾಗಲಿ, ಕೈ ಕುಲುಕಿನ ಫಲುಕುಗಳಾಗಲಿ ಇದಾವುದೂ ಪಹಲ್ಗಾಮ್ ವಿಚಾರದಲ್ಲಿ ಪಾಕಿಸ್ತಾನದ ಕುರಿತಾಗಿ ಜಾಗತಿಕವಾಗಿ ಕಠಿಣ ಅಭಿಪ್ರಾಯ ರೂಪಿಸಲು ಸಾಲುತ್ತಿಲ್ಲ! ಅವರದೇ ಪಕ್ಷದಿಂದ ರಾಕ್ ಸ್ಟಾರ್ ವಿದೇಶಾಂಗ ಸಚಿವರೆಂದು ಬಣ್ಣಿಸಲ್ಪಟ್ಟಿರುವ ಎಸ್ ಜೈಶಂಕರ್ ಅವರ ಸ್ಟಾರ್‌ಗಿರಿಗೆ ಭದ್ರತಾ ಸಮಿತಿಯ ಹೇಳಿಕೆಯಲ್ಲಿ ಪಹಲ್ಗಾಮ್ ಎನ್ನುವ ಒಂದೇಒಂದು ಪದವನ್ನು ಸೇರಿಸಲು ಸಾಧ್ಯವಾಗಿಲ್ಲ! ಇದಾವುದೂ ಅರಚುವ ಮಾಧ್ಯಮಗಳ ಕಣ್ಣಿಗೆ ಕಾಣುತ್ತಿಲ್ಲ…
ಪಹಲ್ಗಾಮ್‌ನಲ್ಲಿ ನಡೆದ ಕೃತ್ಯದ ಬಗ್ಗೆ ಬಿಬಿಸಿ ಪಕ್ಷಪಾತಿಯಾಗಿ ವರದಿ ಮಾಡಿದೆ ಎಂದು ಬೊಬ್ಬಿರಿಯುವ ನಮ್ಮ ಮಾಧ್ಯಮಗಳು ತಾವು ದಿನಂಪ್ರತಿ ಎಂತಹ ವರದಿಗಾರಿಕೆ ಮಾಡುತ್ತಿದ್ದೇವೆ ಎಂದು ಕೇಳಿಕೊಳ್ಳಬೇಕು. ಬಿಜೆಪಿಯ ರಾಜಕೀಯ ಎದುರಾಳಿಗಳು, ಬಿಜೆಪಿಯೇತರ ಆಡಳಿತ ಹೊಂದಿರುವ ರಾಜ್ಯಗಳ ಸುದ್ದಿಗಳ ವಿಚಾರದಲ್ಲಿ ಎಷ್ಟು ಪಕ್ಷಪಾತಿಯಾಗಿ, ಕೀಳಾಗಿ ನಡೆದುಕೊಳ್ಳುತ್ತಿದ್ದೇವೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಉರಿ, ಪುಲ್ವಾಮಾ ದಾಳಿಗಳನ್ನು ಅದಕ್ಕೆ ನೀಡಿದ ಪ್ರತ್ಯುತ್ತರವನ್ನು ಬಿಜೆಪಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹೇಗೆ ರಾಜಕೀಯಕ್ಕೆ ಬಳಸಿಕೊಂಡಿದೆ ಎನ್ನುವುದು ಈ ದೇಶದ ಮುಂದಿದೆ. ಈ ಎರಡೂ ಘಟನೆಗಳಲ್ಲಿ ಭದ್ರತೆಯ ವೈಫಲ್ಯದ ಬಗ್ಗೆ ಆಗಬೇಕಾದಷ್ಟು ಚರ್ಚೆಯೂ ಆಗಲಿಲ್ಲ, ಆ ಘಟನೆಗಳ ನಂತರ ಏನು ಸುಧಾರಣೆ ಕೈಗೊಳ್ಳಲಾಗಿದೆ ಎನ್ನುವ ಬಗ್ಗೆಯೂ ಜನರಿಗೆ ತಿಳಿಯಲಿಲ್ಲ. ಪಹಲ್ಗಾಮ್ ನಲ್ಲಿ ನಡೆದಿರುವ ಭಯೋತ್ಪಾದಕ ಕೃತ್ಯ ಬಹುಶಃ ಮೇಲಿನ ಎರಡು ಘಟನೆಗಳಿಂದ ಹೆಚ್ಚೇನೂ ಸುಧಾರಣೆಯನ್ನು ಮಾಡಿಕೊಳ್ಳದೆ ಹೋಗಿರುವುದರ ಫಲವಿರಬಹುದು.
ಭದ್ರತಾ ವೈಫಲ್ಯದ ಬಗ್ಗೆಯಾಗಲಿ, ಬಿಜೆಪಿಯು ದೇಶದ ಭದ್ರತೆಯನ್ನು ತನ್ನ ರಾಜಕೀಯ ವರಸೆಗಳಿಗೆ ಬೇಕಾದಂತೆ ಬಳಸಿಕೊಳ್ಳುವ ಕುರಿತಾಗಲಿ ಈ ಎಲ್ಲದರ ಬಗ್ಗೆ ಪ್ರಜಾಪ್ರಭುತ್ವವಾದಿ ಭಾರತದಲ್ಲಿ ಒಂದಿಲ್ಲೊಂದು ದಿನ ಚರ್ಚೆ ನಡೆದೇ ತೀರುತ್ತದೆ. ಮೋಡಗಳ ಮರೆಯಲ್ಲಿ ನಿಂತಾಕ್ಷಣಕ್ಕೆ ಜನರ ಕ್ಷಕಿರಣಗಳಿಂದ ಪ್ರಧಾನಿ ಮೋದಿ ಹಾಗೂ ಅವರ ಸಚಿವ ಸಂಪುಟ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸುದ್ದಿಗಳನ್ನು ತಿರುಚಿ, ವಿಷಯಾಂತರ ಮಾಡಿಕೊಂಡು ಸದಾಕಾಲ ಬಿಜೆಪಿ ನಾಯಕರು ದೇಶದ ಜನರನ್ನು ದಿಕ್ಕುತಪ್ಪಿಸಲು ಸಾಧ್ಯವಿಲ್ಲ. ನಿಮ್ಮ ವೈಫಲ್ಯಗಳ ಗಣತಿ ದೇಶದ ಜನರ ಬಾಯಲ್ಲಿ ಶುರುವಾಗಿದೆ.
——————————————————————————————————————————————