- ಕುಕಿ ಹಾಗೂ ಮೇತೀ ಸಮುದಾಯಗಳ ನಡುವಿನ ಘರ್ಷಣೆಯಿಂದ ರಾಜ್ಯದಲ್ಲಿ ಹಿಂಸಾಚಾರ
- ರಾಜ್ಯದಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ
ಮಣಿಪುರ ಹಿಂಸಾಚಾರ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಸ್ತೃತ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಜುಲೈ 3) ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದ್ದು ವರದಿಯಾಗಿರುವ ಹಿಂಸಾಚಾರ ಘಟನೆಗಳು, ನಿರಾಶ್ರಿತರ ಪುನರ್ವಸತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೈಗೊಂಡ ಕ್ರಮಗಳ ಬಗ್ಗೆ ಏಳು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮಣಿಪುರ ಸರ್ಕಾರಕ್ಕೆ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಮಣಿಪುರ ಹಿಂಸಾಚಾರ ಸಂಬಂಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿತು. ಮಣಿಪುರದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುವಂತೆ ಪೀಠ ರಾಜ್ಯ ಸರ್ಕಾರಕ್ಕೆ ಕೇಳಿತು. ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ.
ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉತ್ತರಿಸಿ. ರಾಜ್ಯ ಸರ್ಕಾರ ಎಲ್ಲ ರೀತಿಯ ಭದ್ರತೆಯನ್ನು ಒದಗಿಸಿದೆ. ಪರಿಸ್ಥಿತಿ ಹಂತ ಹಂತವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಭದ್ರತೆಗೆ ಸಿವಿಲ್ ಪೊಲೀಸರ ಹೊರತಾಗಿ ಮಣಿಪುರ ರೈಫಲ್‌ಗಳು, ಸಿಎಪಿಎಫ್‌ನ ಕಂಪನಿಗಳು, ಸೇನೆಯ 114 ಗುಂಡುಗಳು ಮತ್ತು ಮಣಿಪುರ ಕಮಾಂಡೊಗಳನ್ನು ನಿಯೋಜಿಸಲಾಗಿದೆ. ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಂಡಾಯ ನನಗೆ ಹೊಸದಲ್ಲ, ಮತ್ತೆ ಪಕ್ಷ ಸಂಘಟಿಸುತ್ತೇನೆ; ಅಜಿತ್ ನಡೆಗೆ ಶರದ್ ಪವಾರ್ ಪ್ರತಿಕ್ರಿಯೆ
ಅಲ್ಪಸಂಖ್ಯಾತ ಕುಕಿ ಬುಡಕಟ್ಟು ಜನಾಂಗದವರಿಗೆ ಸೇನೆಯ ರಕ್ಷಣೆ ಮತ್ತು ಅವರ ಮೇಲೆ ದಾಳಿ ನಡೆಸುತ್ತಿರುವ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎನ್‌ಜಿಒ ಸಲ್ಲಿಸಿದ್ದ ಮನವಿ ಸೇರಿದಂತೆ ಮಣಿಪುರ ಹಿಂಸಾಚಾರ ಕುರಿತ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಸಂಬಂಧ ಮಣಿಪುರದಲ್ಲಿ ಮೇ 3ರಂದು ಪ್ರಾರಂಭವಾದ ಮೇತೀ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ಸುಮಾರು 120 ಜನರು ಮೃತಪಟ್ಟಿದ್ದು 3 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಿಂಸಾಚಾರದ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹಿಂಸಾಚಾರ ತಡೆಗೆ ರಾಜ್ಯದ ಅನೇಕ ಕಡೆ ಸೇನೆ ನಿಯೋಜಿಸಲಾಗಿದೆ.