ಬೀದರ್‌ | ಸ್ವಾವಲಂಬಿ ಬದುಕಿಗೆ ಮನರೇಗಾ ಬಲ: ಬ್ಯಾಂಕ್ ಮ್ಯಾನೇಜರ್ ಹುದ್ದೆ ತೊರೆದು ಕುರಿ ಸಾಕಾಣಿಕೆಯತ್ತ ಪದವೀಧರ

Date:

Advertisements

ಬಹುತೇಕ ಪದವೀಧರ ಯುವಜನರು ಶಿಕ್ಷಣ ಪೂರೈಸಿದ ಬಳಿಕ ಸರ್ಕಾರಿ, ಖಾಸಗಿ ಉದ್ಯೋಗ ಅರಸುತ್ತಾ ನಗರ, ಹೊರ ರಾಜ್ಯಗಳಿಗೆ ಹೋಗುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಯುವಕ ಖಾಸಗಿ ಬ್ಯಾಂಕಿನ ಮ್ಯಾನೇಜರ್ ಹುದ್ದೆ ತೊರೆದು ಕುರಿ ಸಾಕಾಣಿಕೆಯತ್ತ ಮುಖಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.

ಹುಮನಾಬಾದ್‌ ತಾಲ್ಲೂಕಿನ ಬೇನಚಿಂಚೋಳಿ ಗ್ರಾಮದ ಬಿಕಾಂ ಪಧವೀಧರ ಬೀರೇಶ ವೀರಣ್ಣ ತಿಪ್ಪಗೊಂಡಾ ಅವರು ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ಬಯಸಿದ್ದರು. 2022ರಲ್ಲಿ ಬಿಕಾಂ ಪದವಿ ವ್ಯಾಸಂಗ ಪೂರೈಸಿದ ಬಳಿಕ ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಹುದ್ದೆ ಕೆಲಸಕ್ಕೆ ಸೇರಿದ್ದರು. ಈ ಕೆಲಸದಲ್ಲಿ ನೆಮ್ಮದಿ ಸಿಗುವುದಿಲ್ಲ ಎಂದು ಮನಗಂಡು ಕೆಲಸಕ್ಕೆ ರಾಜೀನಾಮೆ ನೀಡಿ ಮನೆಗೆ ಬಂದು ಕುರಿ ಸಾಕಾಣಿಕೆಗೆ ಮುಂದಾಗಿದ್ದಾರೆ.

ʼಬೀರೇಶ ಅವರ ತಂದೆ ವೀರಣ್ಣ ಅವರು ಮೂಲತಃ ಕೃಷಿಕರು. ಒಟ್ಟು 8 ಎಕರೆ ಜಮೀನುಯಿದ್ದು, ಕಬ್ಬು ಸೇರಿದಂತೆ ಇತರ ಬೆಳೆ ಬೆಳೆಯುತ್ತಾರೆ. ʼಓರ್ವ ಮಗ ದೇಶಕ್ಕಾಗಿ ಸೈನಿಕ, ಇನ್ನೋರ್ವ ಮಗ ಕೃಷಿಯಲ್ಲಿ ಶ್ರಮಿಕʼ ನಾಗಿ ಮಾಡಬೇಕೆಂಬ ತಂದೆ ವೀರಣ್ಣ ಅವರ ಕನಸಿಸಿತ್ತು. ಈಗ ಓರ್ವ ಮಗ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೀರೇಶ ಅವರು ಕುರಿ ಸಾಕಾಣಿಕೆಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisements

ದ್ವಿಗುಣ ಲಾಭ ನಿರೀಕ್ಷೆ :

2024-2025ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕುರಿ ಶೆಡ್ ನಿರ್ಮಾಣಕ್ಕಾಗಿ ಮಂಜೂರಾದ ₹70 ಸಾವಿರ ಸಹಾಯ ಧನ, ಒಂದಿಷ್ಟು ಸ್ವಂತದ ಹಣ ಸೇರಿಸಿ ಸುಸ್ಸಜಿತ ಕುರಿ ಶೆಡ್ ನಿರ್ಮಿಸಿ, ಹಾವು, ವಿಷ ಜಂತುಗಳ ಹಾವಳಿಯ ನಿಯಂತ್ರಣಕ್ಕೆ ಶೆಡ್‌ನ ಸುತ್ತಲೂ ಕಬ್ಬಿಣದ ತಂತಿ ಹಾಕಿದ್ದಾರೆ. ಕುರಿಗಳಿಗೆ ಅನುಕೂಲವಾಗುವಂತೆ ನೆಲದ ಮೇಲೆ ಸಿಮೆಂಟ್‌ ನೆಲ ಹಾಸು ಹಾಕಿದ್ದಾರೆ. ಕುರಿಗಳು ನಿರಂತರವಾಗಿ ಮೇಯಲು ಒಂದು ಕಬ್ಬಿಣದ ಗೊದಲಿ ನಿರ್ಮಿಸಿಕೊಂಡಿದ್ದಾರೆ.

WhatsApp Image 2025 04 29 at 1.00.09 PM
ಕುರಿಗಳೊಂದಿಗೆ ಬೀರೇಶ ತಿಪ್ಪಗೊಂಡಾ

ʼಶೆಡ್ ನಿರ್ಮಾಣವಾದ ಬಳಿಕ ಯಾದಗಿರಿ ಜಿಲ್ಲೆಯ ಶಹಾಪುರ ನಗರಕ್ಕೆ ತೆರಳಿ ಅಲ್ಲಿನ ಕುರಿಗಾಹಿಗಳಿಂದ ₹8 ಸಾವಿರಕ್ಕೆ ಒಂದರಂತೆ ಒಟ್ಟು 20 ಕೆಂಪು ಬಣ್ಣದ ಕುರಿ ಮರಿಗಳನ್ನು 2025ರ ಜನವರಿ ತಿಂಗಳಲ್ಲಿ ಖರೀದಿಸಿದ್ದೇನೆ. ಬಳಿಕ ಜಿಲ್ಲೆಯ ಜಾನುವಾರು ಅಂಗಡಿಗಳಲ್ಲಿ ₹6 ರಿಂದ 7 ಸಾವಿರಕ್ಕೆ ಒಂದರಂತೆ 20 ಕುರಿ ಮರಿ ಖರೀದಿಸಿದ್ದೇನೆ. ಈಗ ನಮ್ಮ ಶೆಡ್‌ನಲ್ಲಿ ಒಟ್ಟು 40 ಕುರಿಗಳಿವೆʼ ಎಂದು ಬೀರೇಶ ಹೇಳುತ್ತಾರೆ.

ʼಆಹಾರ ವ್ಯವಸ್ಥೆ : ದಿನಕ್ಕೆ ಎರಡ್ಮೂರು ಬಾರಿ ಮೇವು ಹಾಗೂ ಕಡಲೆ ಹಾಗೂ ತೊಗರಿ ಹಿಂಡಿಯನ್ನು ಬೆಳಿಗ್ಗೆ, ಸಂಜೆ ಕುರಿಗಳಿಗೆ ಆಹಾರವಾಗಿ ನೀಡಲಾಗುತ್ತಿದೆ. ‌ಮೆಕ್ಕೆಜೋಳದ ಕಾಳನ್ನು ಜಿನ್ನಗಿ ಹಾಕಿಸಿ ಅದರ ಹಿಟ್ಟನ್ನು ಹಿಂಡಿಯಾಗಿ ಮಾಡಿ ಕುರಿಗಳಿಗೆ ನೀಡಲಾಗುತ್ತಿದೆʼ ಎಂದು ಮಾಹಿತಿ ನೀಡಿದರು.

ಕಳೆದ ನಾಲ್ಕು ತಿಂಗಳಿಂದ ಕುರಿಗಳನ್ನು ಪೋಷಣೆ ಮಾಡುತ್ತಿದ್ದಾರೆ. ಹೊರಗಡೆ ಮೇಯಿಸಲು ತೆಗೆದುಕೊಂಡು ಹೋಗುವುದಿಲ್ಲ. ಶೆಡ್‌ನಲ್ಲಿಯೇ ಸಕಾಲಕ್ಕೆ ಆಹಾರ, ಔಷಧೋಪಚಾರ ಒದಗಿಸಿದ್ದರಿಂದ ಅವು ಸಮೃದ್ಧವಾಗಿ ಬೆಳದಿವೆ. ಕುರಿ ಖರೀದಿ ಸೇರಿ ಇನ್ನಿತರೆ ಒಟ್ಟು ₹3.50 ಲಕ್ಷ ಬಂಡವಾಳ ಹಾಕಿದ್ದಾರೆ. ಸದ್ಯ ಕುರಿ ಮಾರಾಟ ಮಾಡಿದರೆ ದ್ವಿಗುಣ ಲಾಭ ಆಗುವ ನಿರೀಕ್ಷೆಯಿದೆ ಎಂದು ಹೇಳುತ್ತಾರೆ ಬೀರೇಶ.

ನೆಮ್ಮದಿ ಬದುಕಿಗೆ ಹಳ್ಳಿ ಜೀವನ ಸೂಕ್ತ :

ನನ್ನ ಪದವಿ ಮುಗಿದ ಬಳಿಕ ಎಲ್ಲರಂತೆ ನಾನೂ ನೌಕರಿ ಮಾಡಬೇಕೆಂದು ಖಾಸಗಿ ಬ್ಯಾಂಕ್‌ ಉದ್ಯೋಗಕ್ಕೆ ಸೇರಿದ್ದೆ, ಅಲ್ಲಿ ಒಂದಿನವೂ ಬಿಡುವು ಇಲ್ಲದಂತೆ ದುಡಿಯುತ್ತಿದ್ದೆ. ಇದರಿಂದ ಮಾನಸಿಕ ಒತ್ತಡ ಜೊತೆಗೆ ಸಕಾಲಕ್ಕೆ ಊಟ ಮಾಡಲು ಸಮಯ ಸಿಗುತ್ತಿರಲಿಲ್ಲ. ʼಸಂಬಳ ಕಮ್ಮಿ…ಕಿರಿಕಿರಿ ಜಾಸ್ತಿ..ಈ ಪರಿಸ್ಥಿತಿಯಲ್ಲಿ ನೆಮ್ಮದಿ ಅನ್ನೋದೇ ಇರುತ್ತಿರಲಿಲ್ಲ. ಮೊದಲಿನಿಂದ ಅಪ್ಪ ಹೇಳಿದಂತೆ ʼಹೆಚ್ಚು ನೆಮ್ಮದಿ ಜೀವನ ಕೃಷಿಯಲ್ಲಿ ಮಾತ್ರ ಇದೆʼ ಎಂಬ ಮಾತಿನಂತೆ ಕೆಲಸ ತೊರೆದು ಮರಳಿ ಊರಿಗೆ ಬಂದು ಕುರಿ ಸಾಕಾಣಿಕೆ ಜೊತೆಗೆ ಅಪ್ಪನೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆʼ ಎಂದು ಬೀರೇಶ ಸಂತಸದಿಂದ ಮನದಾಳದ ಮಾತು ಹಂಚಿಕೊಳ್ಳುತ್ತಾರೆ.

ಬೀರೇಶ ಕಾರ್ಯಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಶ್ಲಾಘನೀಯ :

ಹುಮನಾಬಾದ್ ತಾಲ್ಲೂಕಿನ ಬೆನಚಿಂಚೋಳಿ ಗ್ರಾಮದ ಬೀರೇಶ್ ಬಿ.ಕಾಂ ಪದವೀಧರ, ಖಾಸಗಿ ಬ್ಯಾಂಕಿನ ಮ್ಯಾನೇಜರ್ ಕೆಲಸ ತೊರೆದು ತಮ್ಮ ಸ್ವಗ್ರಾಮದಲ್ಲಿ ನರೇಗಾ ಯೋಜನೆಯನ್ನು ಬಳಸಿಕೊಂಡು ಕುರಿ ಶೆಡ್ ನಿರ್ಮಿಸಿ ಕುರಿ ಸಾಕಾಣಿಕೆಯಲ್ಲಿ ಉತ್ತಮ ಆದಾಯ ಕಂಡುಕೊಂಡಿದ್ದಾರೆ. ಸಮುದಾಯ ಕಾಮಗಾರಿಗಳಲ್ಲಿ ಸಂಪಾದನೆ ಕಂಡುಕೊಂಡವರು ಒಂದೆಡೆಯಾದರೆ, ವೈಯಕ್ತಿಕ ಕಾಮಗಾರಿಗಳನ್ನು ಪಡೆದು ಬದುಕು ರೂಪಿಸಿಕೊಂಡವರು ಇನ್ನೊಂದೆಡೆ. ಒಟ್ಟಿನಲ್ಲಿ ನರೇಗಾ ಯೋಜನೆ ಗ್ರಾಮೀಣ ಜನರ ಬದುಕಿನ ಸಂಜೀವಿನಿ ಎಂದೇ ಹೇಳಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಬೀರೇಶ ಅವರ ಪೋಟೊದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆ : ರಾಜ್ಯದಲ್ಲಿ 3ನೇ ಸ್ಥಾನ ಪಡೆದ ಬೀದರ್‌ !

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಬೀದರ್‌ ಜಿಲ್ಲೆಯು ಮಾನವ ದಿನಗಳ ಸೃಜನೆಯಲ್ಲಿ ಗುರಿ ಮೀರಿದ ಸಾಧನೆ ತೋರಿ ಇಡೀ ರಾಜ್ಯದಲ್ಲಿಯೇ 3ನೇ ಸ್ಥಾನ ಪಡೆದು, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಮೊದಲ ಸ್ಥಾನ ಗಳಿಸಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ತಿಳಿಸಿದ್ದಾರೆ.

ʼ2024–25ನೇ ಸಾಲಿನಲ್ಲಿ ಬೀದರ್‌ ಜಿಲ್ಲೆಯಲ್ಲಿ 50 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಜಿಲ್ಲೆಯಲ್ಲಿ 65.28 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ130.58ರಷ್ಟು ಗುರಿ ಮೀರಿದ ಸಾಧನೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಕುಟುಂಬಗಳ ಆರ್ಥಿಕ ಪುನಶ್ಚೇತನಕ್ಕೆ ನೆರವಾಗುವುದಲ್ಲದೆ ಹೆಚ್ಚಿನ ಮಾನವ ದಿನಗಳನ್ನು ಸೃಷ್ಟಿಸಿದ ಪರಿಣಾಮ ಕೆಲಸ ಅರಸಿಕೊಂಡು ನೆರೆಯ ಹೈದರಾಬಾದ್‌, ಪುಣೆ, ಸೋಲಾಪೂರ, ಮುಂಬೈ ಸೇರಿದಂತೆ ಇತರೆ ಮಹಾನಗರಗಳಿಗೆ ವಲಸೆ ಹೋಗುವುದು ತಪ್ಪಿಸುವಲ್ಲಿ ಸಹಕಾರಿಯಾಗಿದೆʼ ಎಂದು ಹೇಳಿದರು.

‘2024–25ನೇ ಸಾಲಿನಲ್ಲಿ ಬೀದರ್‌ ಜಿಲ್ಲೆಯಲ್ಲಿ ಒಟ್ಟು 2.57 ಲಕ್ಷ ಉದ್ಯೋಗ ಚೀಟಿಗಳಿದ್ದು, ಅದರಲ್ಲಿ 1.27 ಲಕ್ಷ ಕುಟುಂಬಗಳಿಗೆ ಕೂಲಿ ನೀಡಲಾಗಿದೆ. ಇದರಲ್ಲಿ 31 ಸಾವಿರ ಪರಿಶಿಷ್ಟ ಜಾತಿ, 22 ಸಾವಿರ ಪರಿಶಿಷ್ಟ ಪಂಗಡದವರು ಸೇರಿದ್ದಾರೆ. ಅತಿ ಸಣ್ಣ ರೈತರು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ 74,217 ಕುಟುಂಬಗಳಿವೆ. ಒಟ್ಟು ಕೂಲಿ ಕಾರ್ಮಿಕರಲ್ಲಿ 1.07 ಲಕ್ಷ ಮಹಿಳೆಯರು ಹಾಗೂ 519 ಅಂಗವಿಕಲರು ಸೇರಿದ್ದಾರೆ. ಈ ವರ್ಷದಲ್ಲಿ 1,033 ಕುಟುಂಬಗಳ ಕೂಲಿಕಾರರು ಪೂರ್ಣ 100 ದಿನಗಳ ಕೆಲಸ ಪಡೆದಿದ್ದಾರೆʼ ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಬಿಸಿಲಿನ ತಾಪ : ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ, ಬಚ್ಚಲು ಗುಂಡಿ, ಕೃಷಿ ಹೊಂಡ, ಕುರಿ, ಕೋಳಿ, ಹಂದಿ ಶೆಡ್ ನಿರ್ಮಾಣಕ್ಕೆ ಅವಕಾಶಗಳಿವೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಬಹುದಾಗಿದ್ದು, ಅರ್ಹ ಫಲಾನುಭವಿಗಳು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹುಮನಾಬಾದ್‌ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಹೇಳಿದರು.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

2 COMMENTS

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X