2008ರಲ್ಲಿ ಒಬ್ಬರು ಶಿಕ್ಷಕರು, 8 ಮಂದಿ ಮಕ್ಕಳೊಂದಿಗೆ ಆರಂಭವಾದ ಈ ಶಾಲೆಗೆ 2016ರಲ್ಲಿ ಇನ್ನೊಬ್ಬರು ಶಿಕ್ಷಕರು ನೇಮಕವಾದರು. 2021ರಲ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಮೇಲ್ದರ್ಜೆಗೇರಿತು. ವರ್ಷದಿಂದ ವರ್ಷಕ್ಕೆ ಮಕ್ಕಳ ಪ್ರವೇಶಾತಿ ಹೆಚ್ಚಾಗುತ್ತಿದ್ದು, ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಕಲಿಯುತ್ತಿದ್ದ ಮಕ್ಕಳೂ ಕೂಡ ಈ ಶಾಲೆ ಬರುತ್ತಿದ್ದಾರೆ.
2024-25ನೇ ಸಾಲಿನಲ್ಲಿ 148 ಮಂದಿ ಮಕ್ಕಳಿದ್ದರು. ಮುಖ್ಯ ಶಿಕ್ಷಿಕ ಆರ್ ಎ ನದಾಫ್, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ ಎಚ್ ಲಷ್ಕರಿ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಿ ಎಂ ಬಾಗೇವಾಡಿಯವರ ಕ್ರಿಯಾಶೀಲ ಚಟುವಟಿಕೆಯಿಂದ ಶಾಲೆ ಪ್ರಗತಿಯತ್ತ ದಾಪುಗಾಲು ಇಡುತ್ತಿದೆ.
ಶಿಕ್ಷಕರ ಶ್ರಮ, ದಾನಿಗಳ ನೆರವು ಸಮುದಾಯದ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿರುವ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಎಲ್ ಟಿ ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿದೆ.
ಹುನಗುಂದ-ವಿಜಯಪುರ ಟೋಲ್ ಪ್ರೈವೇಟ್ ಲಿಮಿಟೆಡ್‌ನಿಂದ ₹2.65 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಪ್ಯಾನೆಲ್ ಬೋರ್ಡ್, 50 ಕುರ್ಚಿ ಮತ್ತು 150 ಸ್ಕೂಲ್ ಬ್ಯಾಗ್ ನೀಡಿದೆ.

ಪಂಪ ಸದಸ್ಯ ಸಂಜೀವ ರಾಥೋಡ, ಗುತ್ತಿಗೆದಾರರ ಸಹಯೋಗದೊಂದಿಗೆ ₹2 ಲಕ್ಷದಲ್ಲಿ ಗ್ರಾನೈಟ್ ಕಲ್ಲಿನ ವೇದಿಕೆ ನಿರ್ಮಿಸಲಾಗಿದೆ. ಕೆಎನ್‌ಆರ್ ಕಂಪೆನಿಯಿಂದ ಪ್ರವೇಶ ದ್ವಾರದ ಕಮಾನು, ಶಿಕ್ಷಕರು ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ₹50,000ದ ಗೇಟ್ ನಿರ್ಮಾಣ, ಎಸ್‌ಡಿಎಂಸಿಯಿಂದ ಕಾರ್ಯಾಲಯದ ಪೀಠೋಪಿಕರಣಕ್ಕೆ ₹1 ಲಕ್ಷ, ಶಿಕ್ಷಕ ಲಸ್ಕರಿ ಅವರಿಂದ ಸ್ಮಾರ್ಟ್ ಟಿವಿ, ಮುಖ್ಯ ಶಿಕ್ಷಕ ನದಾಫ್ ಅವರಿಂದ ನಲಿಕಲಿ ಟೇಬಲ್‌ಗಳು ಹೀಗೆ ಇನ್ನೂ ಅನೇಕ ದಾನಿಗಳು ಅಲ್ಮಾರು, ಆರ್ ಓ ಪ್ಲಾಂಟ್, ಪಾದರಕ್ಷೆ ಬಿಡುವ ಫ್ರೇಮ್, ಸಿಂಟೆಕ್ಸ್ ಸೇರಿದಂತೆ ನಾನಾ ಸೌಲಭ್ಯಗಳ ಕೊಡುಗೆ ನೀಡಿದ್ದಾರೆ.
ಬಂಜಾರ ಸಮಾಜ ಹಾಗೂ ಭಿಕ್ಷಾಟನೆನಿರತ ಮಕ್ಕಳು ಮಾತ್ರ ಹೋಗುವ ಶಾಲೆ ಎಂದೇ ಮೂಗು ಮುರಿಯುತ್ತಿದ್ದವರಿಗೆ ಶಾಲಾ ಪ್ರವೇಶಕ್ಕೆ ಮುಗಿ ಬೀಳುತ್ತಿದ್ದಾರೆ. ಶೇ.40 ರಷ್ಟು ಮಕ್ಕಳು ಪಟ್ಟಣದ ನಾನಾ ಭಾಗಗಳಿಂದ ತಾವೇ ವಾಹನ ವ್ಯವಸ್ಥೆ ಮಾಡಿಕೊಂಡು ಶಾಲೆಗೆ ಬರುತ್ತಿದ್ದಾರೆ.

ಬೆಳಿಗ್ಗೆ 10ರಿಂದ ಸಂಜೆ 4-20ರವರೆಗಿನ ಶಾಲಾ ಅವಧಿ ಬದಲು ಬೆಳಿಗ್ಗೆ 9ರಿಂದ ಸಂಜೆ 5-20ರವರೆಗೆ ನಡೆಯುತ್ತದೆ. ಶುಕ್ರವಾರ ವಿಶೇಷ ಶೈಕ್ಷಣಿಕ ಚಟುವಟಿಕೆ ಕೈಗೊಂಡು ವಿಜೇತರಿಗೆ ಶಿಕ್ಷಕರು ಸ್ವಂತ ಹಣದಿಂದ ಪ್ರೋತ್ಸಾಹ ಧನ ನೀಡುತ್ತಾರೆ. ಕೇವಲ ಎರಡು ಕೊಠಡಿಗಳನ್ನು ಹೊಂದಿದ್ದು ಏಳು ತರಗತಿ ನಿಭಾಯಿಸುತ್ತಿರುವುದು ವಿಶೇಷ. ಶಾಲೆಗೆ ಭೇಟಿ ನೀಡಿದ ಕ್ಷೇತ್ರದ ಸಚಿವ ಶಿವಾನಂದ ಪಾಟೀಲ ಅವರು ₹2 ಲಕ್ಷ ಕೊಡುಗೆ ಕೊಟ್ಟು ಮೂರು ಕೊಠಡಿ, ಹೈಟೆಕ್ ಶೌಚಾಲಯ ಮಂಜೂರು ಮಾಡಿಸಿದ್ದಾರೆ.
ನಲಿಕಲಿ ಎಂ ಎಚ್ ಲಷ್ಕರಿ ಎಂಬ ಹೆಸರಿನ ಯುಟ್ಯೂಬ್ ಚಾನೆಲ್ ಹೊಂದಿದ್ದು, ನಿಮ್ಮ ಮಕ್ಕಳ ಮೌಲ್ಯ ಶಿಕ್ಷಣ ಚಟುವಟಿಕೆ ಆಧಾರಿತ ಕಲಿಕೆಗಾಗಿ ಸರ್ಕಾರಿ ಶಾಲೆಗಳನ್ನು ಅವಲಂಬಿಸಿ ಎಂಬ ಹ್ಯಾಶ್ ಟ್ಯಾಗ್ ಹೊಂದಿದೆ. ನಾನಾ ಶೈಕ್ಷಣಿಕ ಚಟುವಟಿಕೆ, ಪಾಠಗಳ 160 ವಿಡಿಯೋಗಳನ್ನು ನೋಡಬಹುದಾಗಿದೆ. ಕೆಲ ವಿಡಿಯೋಗಳು 8 ಲಕ್ಷಕ್ಕೂ ಹೆಚ್ಚಿನ ವ್ಯೂಸ್ ಹೊಂದಿದೆ.

“ಜಿಲ್ಲಾಮಟ್ಟ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯಿಂದ ಬಂದ ಮೊತ್ತ 55,000ದ ಜೊತೆಗೆ ಮತ್ತಷ್ಟು ಹಣ ಸೇರಿಸಿ ಶಾಲಾ ಪ್ರಯೋಗಾಲಯ ಹಾಗೂ ಆಟೋಟ ಸಾಮಗ್ರಿಗಳನ್ನು ಒದಗಿಸಿದ್ದೇನೆ” ಎನ್ನುತ್ತಾರೆ ಶಿಕ್ಷಕ ಎಂ ಎಚ್ ಲಷ್ಕರಿ.
“ಸರ್ಕಾರದ ನಾನಾ ಯೋಜನೆಗಳ ಸದ್ಬಳಕೆ, ಶಿಕ್ಷಕ ಎಂ ಎಚ್ ಲಷ್ಕರಿ, ಡಿಎಂ ಬಾಗೇವಾಡಿ ಅವರದು ಉತ್ತಮ ಕಾರ್ಯ ನಿರ್ವಹಣೆ, ಎಸ್‌ಡಿಎಂಸಿ ಹಾಗೂ ಸ್ಥಳೀಯ ಸರ್ಕಾರದಿಂದ ನಮ್ಮ ಶಾಲೆ ಪ್ರಗತಿಯತ್ತ ಸಾಗುತ್ತಿದೆ” ಎನ್ನುತ್ತಾರೆ ಮುಖ್ಯ ಶಿಕ್ಷಕ ನದಾಫ್.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಮಕ್ಕಳಿಗೆ ನೈತಿಕ ಶಿಕ್ಷಣ ಬಹಳ ಮುಖ್ಯ : ಲಕ್ಷ್ಮೀ ಹಿರೇಮಠ
“ಮೊದಲು ತಾಂಡಾದ ಮಕ್ಕಳು ಪಟ್ಟಣದ ಶಾಲೆಗೆ ಹೋಗುತ್ತಿದ್ದರು. ಶಿಕ್ಷಕರ ಪರಿಶ್ರಮದಿಂದ ಈಗ ತಾಂಡ ಶಾಲಾ ಮಕ್ಕಳು ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಪಟ್ಟಣದ ಮಕ್ಕಳೂ ಕೂಡ ಇಲ್ಲಿಗೆ ಬರುತ್ತಿದ್ದಾರೆ” ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವ ರಾಠೋಡ.
ಇಂದಿನ ದಿನಮಾನಗಳಲ್ಲಿ ಶಿಕ್ಷಣವು ದುಡ್ಡಿಗೆ ಬಿಕರಿಯಾಗುವದನ್ನು ಕಾಣುತ್ತೇವೆ. ಆದರೆ ವಿಜಯಪುರ ಜಿಲ್ಲೆಯ ನಿಡಗುಂದಿ ಎಲ್ ಟಿ ಯ ತಾಂಡಾ ಶಾಲೆಯು ಬಡಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಒದಗಿಸುತ್ತಿರುವುದು ಸಂತೋಷದಾಯಕ ಬೆಳವಣಿಗೆ.