- 1952ರಿಂದ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕನಿಲ್ಲ
- ಜುಲೈ 20 ರಿಂದ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನ ಆರಂಭ
ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದರೂ ಪ್ರತಿಪಕ್ಷವಾಗಿರುವ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಘೋಷಣೆ ಮಾಡದೇ ಇರುವ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಸೋಮವಾರ (ಜುಲೈ 3) ವ್ಯಂಗ್ಯವಾಡಿದ್ದು ಬಿಜೆಪಿಯನ್ನು ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಈಗಾಗಲೇ ವಿಧಾನ ಮಂಡಲ ಅಧಿವೇಶನ ಆರಂಭವಾಗಿದೆ. ಆದರೆ ಬಿಜೆಪಿ ಇನ್ನೂ ಶಾಸಕಾಂಗ ಪಕ್ಷದ ನಾಯಕನನ್ನು ಆರಿಸಿಲ್ಲ. ಇದನ್ನು ಜೈರಾಮ್ ರಮೇಶ್ ಅವರು ಪ್ರಶ್ನಿಸಿದ್ದಾರೆ.
ಜೈರಾಮ್ ರಮೇಶ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, “ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು 1952ರ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಪ್ರಮುಖ ಪ್ರತಿಪಕ್ಷವಿಲ್ಲದೆ ಅಧಿವೇಶನ ಆರಂಭಗೊಂಡಿದೆ. ಈ ಹಿನ್ನೆಲೆ ಕರ್ನಾಟಕದಲ್ಲಿ ಬಿಜೆಪಿಯು ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಘೋಷಿಸಬೇಕಿದೆ. ಈ ಬಿಜೆಪಿಯು ಗೆದ್ದಾಗ ಅಬ್ಬರಿಸುತ್ತದೆ. ಸೋತಾಗ ಕುಸಿದು ಗೋಳಾಡುತ್ತದೆ” ಎಂದು ಕುಟುಕಿದ್ದಾರೆ.
ಕರ್ನಾಟಕ ವಿಧಾನ ಮಂಡಲದ ಜಂಟಿ ಅಧಿವೇಶನವು ಸೋಮವಾರ ಆರಂಭಗೊಂಡಿದ್ದು, 10 ದಿನಗಳವರೆಗೆ ನಡೆಯಲಿದೆ. ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 20 ರಿಂದ ಆರಂಭವಾಗಲಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಐದು ‘ಗ್ಯಾರಂಟಿ’ಗಳ ಅನುಷ್ಠಾನದಲ್ಲಿನ ಗೊಂದಲ, ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು (ಮತಾಂತರ ನಿಷೇಧ) ಕಾಯ್ದೆ ರದ್ದತಿಗೆ ಮಸೂದೆ ಮಂಡನೆ ಮತ್ತಿತರ ವಿಚಾರಗಳು ಉಭಯ ಸದನಗಳಲ್ಲಿ ಚರ್ಚೆಯಾಗಲಿವೆ ಎಂದು ವರದಿಯಾಗಿದೆ.
ಪ್ರತಿಪಕ್ಷದ ನಾಯಕನ ಆಯ್ಕೆ ಸಂಬಂಧ ಕೇಂದ್ರದ ವೀಕ್ಷಕರಾಗಿ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವೆ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇಮಕ ಮಾಡಿದ್ದಾರೆ. ಈ ಬೆನ್ನಲ್ಲೇ ಜೈರಾಮ್ ರಮೇಶ್ ಅವರು ಬಿಜೆಪಿಯನ್ನು ಟೀಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ ಏಕನಾಥ್ ಶಿಂಧೆಗೆ ಇಂದಿನಿಂದ ಕಷ್ಟದ ದಿನಗಳು ಶುರು: ಸಂಜಯ್ ರಾವುತ್
ಮೇ 10 ರಂದು ನಡೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಹುಮತಗಳಿಂದ ಕಾಂಗ್ರೆಸ್ ಜಯಿಸಿ ಸರ್ಕಾರ ರಚಿಸಿದೆ. ಎರಡನೇ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದು ಪ್ರಮುಖ ಪ್ರತಿಪಕ್ಷವಾಗಿದೆ.
ಜೈರಾಮ್ ರಮೇಶ್ ಸೇರಿ ಅನೇಕ ನಾಯಕರು ಸಂಸತ್ತಿನ ಅಧಿವೇಶನದಲ್ಲಿ ಮಣಿಪುರ ಹಿಂಸಾಚಾರ ಸೇರಿ ಅನೇಕ ವಿಷಯಗಳಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ.