ನಿಮ್ಮ ಧರ್ಮದ ಜನರು ನನ್ನ ಧರ್ಮದ ಜನರನ್ನು ಕೊಲ್ಲುತ್ತಿದ್ದಾರೆ, ನೀವು ಕೊಲೆಗಾರರು. ಹಿಂದುಗಳು ನಿಮ್ಮ ಗಂಡನನ್ನು ಕೊಲ್ಲುತ್ತಾರೆ ಎಂದು ವೈದ್ಯೆ ಮುಸ್ಲಿಂ ಗರ್ಭಿಣಿಯರನ್ನು ಉದ್ದೇಶಿಸಿ ಕೋಮುದ್ವೇಷದ ಮಾತನಾಡಿರುವ, ಬೆದರಿಕೆ ಹಾಕಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಏಪ್ರಿಲ್ 22ರ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ಬೆನ್ನಲೇ, ಈ ಘಟನೆ ನಡೆದಿದೆ. ಮುಸ್ಲಿಂ ಗರ್ಭಿಣಿಯ ಮನಸ್ಸಿನಲ್ಲಿ ಭಯವನ್ನು ಬಿತ್ತುವ ಯತ್ನವನ್ನು ಕೋಲ್ಕತ್ತಾದ ಸ್ತ್ರೀರೋಗ ತಜ್ಞೆ ಡಾ. ಚಂಪಾಕಲಿ ಸರ್ಕಾರ್ ಮಾಡಿದ್ದಾರೆ.
ಇತ್ತೀಚೆಗೆ, ಮುಸ್ಲಿಂ ಗರ್ಭಿಣಿಯೊಬ್ಬರು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಾಗ, ಆಕೆಯನ್ನು ಪರೀಕ್ಷಿಸಲು ಡಾ. ಚಂಪಾಕಲಿ ಸರ್ಕಾರ್ ನಿರಾಕರಿಸಿದ್ದಾರೆ. “ನಿಮ್ಮ ಗಂಡನನ್ನು ಹಿಂದುಗಳು ಕೊಲ್ಲಬೇಕು. ಅದರಿಂದ, ಹಿಂದುಗಳು ಅನುಭವಿಸಿದ ನೋವನ್ನು ನೀವೂ ಅನುಭವಿಸಬಹುದು. ಮುಸ್ಲಿಮರು ಭಯೋತ್ಪಾದಕರಾಗಲು ಕಲಿಸುವ ಮದರಸಾಗಳು ಮತ್ತು ಮಸೀದಿಗಳಿಗೆ ಮಾತ್ರ ನೀವು ಚಿಕಿತ್ಸೆಗೆ ಹೋಗಬೇಕು” ಎಂದು ವೈದ್ಯೆ ದ್ವೇಷಪೂರಿತ ಮಾತನಾಡಿದ್ದಾರೆ.
ಮುಸ್ಲಿಂ ಗರ್ಭಿಣಿಯು ಕಳೆದ 7 ತಿಂಗಳಿನಿಂದ ಇದೇ ವೈದ್ಯೆಯ ಬಳಿ ಚಿಕಿತ್ಸೆ ಮತ್ತು ಪರೀಕ್ಷೆಗಾಗಿ ತೆರಳುತ್ತಿದ್ದರು. ಇದೇ ವೈದ್ಯೆ ಆ ಗರ್ಭಿಣಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಪಹಲ್ಗಾಮ್ ದಾಳಿ ಬಳಿಕ ಅವರ ವರ್ತನೆ ಬದಲಾಗಿದೆ.
ವೈದ್ಯೆಯ ಮಾತಿನಿಂದ ನೊಂದು ಮರಳಿಬಂದ ಗರ್ಭಿಣಿ, ಬಳಿಕ ವೈದ್ಯೆಗೆ ಕರೆ ಮಾಡಿದ್ದಾರೆ. ‘ನಿಮ್ಮ ಮಾತಿನಿಂದ ನನಗೆ ನೋವಾಗಿದೆ. ಅವಮಾನವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ವೈದ್ಯೆ, ತನ್ನ ಮಾತಿಗೆ ಬದ್ದವಾಗಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ವರದಿ ಓದಿದ್ದೀರಾ?: ಕಾಶ್ಮೀರಿಯೊಬ್ಬಳ ನಿತ್ಯ ನಿಜಾಯಿತಿಯ ಸತ್ಯ ಸ್ವಗತ
“ಇತರರನ್ನು ಕೊಲ್ಲುವ ಜನರಿಗೆ ನಾನು ಚಿಕಿತ್ಸೆ ನೀಡಲು ಇಷ್ಟಪಡುವುದಿಲ್ಲ. ನಿಮ್ಮ ಧರ್ಮದ ಜನರು ನನ್ನ ಧರ್ಮದ ಜನರನ್ನು ಕೊಲ್ಲುತ್ತಿದ್ದಾರೆ. ನಾನು ಯಾವುದೇ ಮುಸ್ಲಿಮರಿಗೆ ಚಿಕಿತ್ಸೆ ನೀಡುವುದಿಲ್ಲ” ಎಂದಿದ್ದಾರೆ.
”ವೈದ್ಯೆಯಾಗಿ ಈ ರೀತಿ ಹೇಗೆ ಮಾತನಾಡುತ್ತೀರಾ” ಎಂಬ ಗರ್ಭಿಣಿಯ ಪ್ರಶ್ನೆಗೆ ಉತ್ತರಿಸಿದ ವೈದ್ಯೆ, “ಹಿಂತಿರುಗಿ ಬರಬೇಡಿ, ನೀವೆಲ್ಲರೂ ಒಂದೇ” ಎಂದಿದ್ದಾರೆ. ಅವರ ಮಾತುಗಳ ವಿಡಿಯೋ ದೊರೆತಿರುವುದಾಗಿ ‘ದಿ ಕ್ವಿಂಟ್’ ವರದಿ ಮಾಡಿದೆ.
ವೈದ್ಯೆಯ ಮಾತು ಕೇಳಿದ ಬಳಿಕ ಮುಸ್ಲಿಂ ಗರ್ಭಿಣಿ ಮಾನಸಿಕವಾಗಿ ಕುಗ್ಗಿದ್ದಾರೆ. ದಾಳಿಯ ಭಯದಲ್ಲಿ ತಮ್ಮ ಮನೆಯವರನ್ನು ಎಲ್ಲಿಯೂ ಹೋಗದಂತೆ ತಡೆಯುತ್ತಿದ್ದಾರೆ. ಗರ್ಭಿಣಿಯ ಸಂಬಂಧಿ ಮೆಹ್ಭುಜಾ ಅವರು, ”ನಮ್ಮ ಮೇಲೆ ದಾಳಿಗಳು ನಡೆಯಬಹುದು ಎಂಬ ಭಯದಿಂದ ನಮ್ಮನ್ನು ಹೊರ ಹೋಗಲು ಆಕೆ ಬಿಡುತ್ತಿಲ್ಲ. ಎಲ್ಲಿಯೂ ಹೋಗಬೇಡಿ, ಏನನ್ನೂ ಮಾಡಬೇಡಿ ಎಂದು ತಡೆಯುತ್ತಿದ್ದಾರೆ. ವೈದ್ಯೆ ಚಿಕಿತ್ಸೆ ನೀಡಲು ನಿರಾಕರಿಸಬಹುದಿತ್ತು. ಆದರೆ, ಅವರು ದ್ವೇಷಪೂರಿತ, ಕೋಮುದ್ವೇಷದ ಮಾತನ್ನಾಡುವ ಅಗತ್ಯವಿರಲಿಲ್ಲ” ಎಂದು ಹೇಳಿದ್ದಾರೆ.
ಗರ್ಭಿಣಿಯ ಸಂಬಂಧಿಗಳು ಮಹೇಶತಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈದ್ಯೆಯ ಮೇಲೆ ಮಾನನಷ್ಟ, ಕೋಮು ದ್ವೇಷ ಮತ್ತು ವೃತ್ತಿಪರ ದುಷ್ಕೃತ್ಯದ ಆರೋಪಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಆದರೆ, ವೈದ್ಯೆ ಚಂಪಾಕಲಿ ಸರ್ಕಾರ್ ಅವರು ಆರೋಪವನ್ನು ನಿರಾಕರಿಸಿದ್ದಾರೆ. ”ನಾನು ಎಂದಿಗೂ ಅಂತಹ ಕೋಮುವಾದಿ ಹೇಳಿಕೆಗಳನ್ನು ನೀಡಿಲ್ಲ. ಅನೇಕ ಮುಸ್ಲಿಂ ರೋಗಿಗಳು ನನ್ನ ಬಳಿ ಚಿಕಿತ್ಸೆ ಪಡೆಯುತ್ತಾರೆ. ನಾನು ಮುಸ್ಲಿಂ ರೋಗಿಗಳನ್ನು ಪರೀಕ್ಷಿಸುವುದಿಲ್ಲವೆಂದು ಹೇಳಿಲ್ಲ. ಅವರು ನನ್ನನ್ನು ಬೆದರಿಸುತ್ತಿದ್ದಾರೆ. ನನ್ನ ಕಡೆಯಿಂದ ನಾನು ಅವರಿಗೆ ಕ್ಷಮೆಯಾಚನೆಯನ್ನೂ ಕಳುಹಿಸಿದ್ದೇನೆ” ಎಂದಿದ್ದಾರೆ.