ಈ ವರ್ಷ ಬಂಗಾಳ ಕೊಲ್ಲಿಯಲ್ಲಿ ನಾನಾ ಚಂಡಮಾರುತಗಳ ಪರಿಚಲನೆ ಇದ್ದ ಕಾರಣ, ಭಾರತದ ನಾನಾ ರಾಜ್ಯಗಳಲ್ಲಿ ಮುಂಗಾರು ಪೂರ್ವ ಮಳೆಯಾಗಿದೆ. ಬೇಸಿಗೆಯಲ್ಲೂ ಸುರಿದ ಮಳೆ ಕರ್ನಾಟಕವೂ ಸೇರಿದಂತೆ ನಾನಾ ಭಾಗಗಳಲ್ಲಿ ಅವಾಂತರಗಳನ್ನೂ ಸೃಷ್ಟಿಸಿದೆ. ಇನ್ನು, ಜೂನ್ ಮತ್ತು ಸೆಪ್ಟೆಂಬರ್ ನಡುವಿನ ನೈಋತ್ಯ ಮಾನ್ಸೂನ್ ಋತುವಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದ್ದು, ದೀರ್ಘಾವಧಿಯ ಸರಾಸರಿ (LPA) 105%ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಈ ಬಾರಿಗೆ ಮುಂಗಾರು ಪೂರ್ವ ಮಳೆ ಮತ್ತು ವಾಡಿಕೆಗಿಂತ ಹೆಚ್ಚು ಮಳೆಯಾಗಲು ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಏಳುತ್ತಿರುವ ಎಲ್ ನಿನೋ ದಕ್ಷಿಣ ಆಸಿಲೇಷನ್ (ENSO) ಮತ್ತು ಹಿಂದು ಮಹಾಸಾಗರದ ದ್ವಿಧ್ರುವಿ (IOD) ಕಾರಣವಾಗಲಿವೆ ಎಂದು ಇಲಾಖೆ ಹೇಳುತ್ತಿದೆ.
ಸಾಮಾನ್ಯವಾಗಿ, ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಮಳೆ ಋತುವಿನಲ್ಲಿ ಭಾರತದಲ್ಲಾಗುವ ವಾರ್ಷಿಕ ಮಳೆಯ ಸುಮಾರು 70% ಮಳೆ ಸುರಿಯುತ್ತದೆ. ಈ ಅವಧಿಯಲ್ಲಿನ ಮಳೆ ಕೃಷಿ, ಬೆಳೆ, ಜಲಾಶಯಗಳ ಭರ್ತಿ, ಜಲಚರಗಳು ಸೇರಿದಂತೆ ಒಟ್ಟಾರೆ ಆರ್ಥಿಕತೆಗೆ ಕೊಡುಗೆ ನೀಡುತ್ತದೆ. ಈ ಬಾರಿ ಅಧಿಕ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಇದರಿಂದ, ಅತಿವೃಷ್ಟಿಯೂ ಎದುರಾಗುವ ಸಾಧ್ಯತೆಗಳಿವೆ.
ಮಳೆಯ ಸಾಧ್ಯತೆಗಳನ್ನು ಹವಾಮಾನ ಇಲಾಖೆ ಹೇಗೆ ಅಂದಾಜಿಸುತ್ತದೆ – ಮುನ್ಸೂಚನೆಗಳನ್ನು ಹೇಗೆ ನೀಡುತ್ತದೆ?
ಭಾರತದಲ್ಲಿ ಹವಾಮಾನ ಇಲಾಖೆ ಆರಂಭವಾಗಿದ್ದು, 1875ರಲ್ಲಿ. ಅದಾದ ಎರಡು ವರ್ಷಗಳ ಬಳಿಕ, 1877ರಲ್ಲಿ ಬ್ರಿಟಿಷ್ ಹವಾಮಾನಶಾಸ್ತ್ರಜ್ಞ ಹೆನ್ರಿ ಫ್ರಾನ್ಸಿಸ್ ಬ್ಲಾನ್‌ಫೋರ್ಡ್ ಅವರು ಭಾರತದ ಮೊದಲ ಹವಾಮಾನ ವರದಿಗಾರರಾಗಿ ನೇಮಕಗೊಂಡು ಭಾರತಕ್ಕೆ ಬಂದರು.
ಅವರು ಭಾರತಕ್ಕೆ ಬರಲು ಕಾರಣವಾದದ್ದು- 1876ರಲ್ಲಿ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಮಳೆ ಕೊರತೆಯಿಂದ ಬೆಳೆ ರೈತರ ಕೈಸೇರಿರಲಿಲ್ಲ. ಪರಿಣಾಮವಾಗಿ, ದೇಶದಲ್ಲಿ ಮಹಾ ಕ್ಷಾಮ ಉಂಟಾಗಿತ್ತು. ಕ್ಷಾಮದ ಪರಿಣಾಮಗಳು 1877ರಲ್ಲಿ ಇಡೀ ದೇಶವನ್ನು ಕಾಡಲಾರಂಭಿಸಿತು. ಆಗ, ವಸಾಹತುಶಾಹಿ (ಬ್ರಿಟಿಷ್) ಆಡಳಿತಕ್ಕೆ ಮಾನ್ಸೂನ್‌ನ ಆಗಮನ ಮತ್ತು ದೇಶದಾದ್ಯಂತ ಬೀಳುವ ಮಳೆ ಪ್ರಮಾಣವನ್ನು ಅರಿತುಕೊಳ್ಳುವುದು ಅಗತ್ಯವಾಗಿ ಕಾಣಿಸಿತು. ಅದಕ್ಕಾಗಿ, ಹೆನ್ರಿ ಫ್ರಾನ್ಸಿಸ್ ಅವರನ್ನು ಭಾರತಕ್ಕೆ ಕರೆತಂದಿತು.
”ಮಾನ್ಸೂನ್‌ಗಳ ಯಶಸ್ಸು ಕೃಷಿ ಉತ್ಪಾದನೆ ಮತ್ತು ನದಿಗಳು, ಕರಾವಳಿಗಳು ಮತ್ತು ಹಡಗು ಮಾರ್ಗಗಳ ಆರೋಗ್ಯವನ್ನು ನಿರ್ದೇಶಿಸುತ್ತದೆ. ಅಂದರೆ, ಬ್ರಿಟಿಷ್ ಹಿತಾಸಕ್ತಿಗಳಿಗಾಗಿ ಆದಾಯ ಉತ್ಪಾದನೆಗೆ ಅವರು ಮಳೆ ಸಾಧಕ-ಬಾಧಕಗಳನ್ನು ಅರಿತುಕೊಳ್ಳುವುದು ಅನಿವಾರ್ಯವಾಗಿತ್ತು” ಎಂದು ಯುಎಸ್‌ನ ಕ್ವಿನ್ನಿಪಿಯಾಕ್ ವಿಶ್ವವಿದ್ಯಾಲಯದ ರಮೇಶ್ ಸುಬ್ರಮಣಿಯನ್ ಅವರು ತಮ್ಮ ‘ಮಾನ್ಸೂನ್ಸ್, ಕಂಪ್ಯೂಟರ್ಸ್, ಸ್ಯಾಟಲೈಟ್ಸ್: ಹಿಸ್ಟರಿ ಅಂಡ್ ಪಾಲಿಟಿಕ್ಸ್ ಆಫ್ ವೆದರ್ ಮಾನಿಟರಿಂಗ್ ಇನ್ ಇಂಡಿಯಾ’ (2021) ಪ್ರಬಂಧದಲ್ಲಿ ಬರೆದಿದ್ದಾರೆ.
ಹಿಮ ಮತ್ತು ಮಳೆ: ಮಾನ್ಸೂನ್‌ನ ಮೊದಲ ತಾತ್ಕಾಲಿಕ ಮುನ್ಸೂಚನೆಗಳನ್ನು ಹೆನ್ರಿ ಫ್ರಾನ್ಸಿಸ್ ಅವರು 1882 ಮತ್ತು 1885ರ ನಡುವೆ ಒದಗಿಸಿದರು. ಆ ಸೂಚನೆಗಳಲ್ಲಿ, ಅವರು ಹಿಮಾಲಯದ ಹಿಮದ ಹೊದಿಕೆ ಮತ್ತು ಭಾರತೀಯ ಪ್ರದೇಶದ ಮಳೆಯ ಪ್ರಮಾಣಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸಿದ್ದರು.
ಹೆನ್ರಿ ಫ್ರಾನ್ಸಿಸ್ ಅವರ ಮುನ್ಸೂಚನೆಗಳು: “ಹಿಮಾಲಯದಲ್ಲಿ ಚಳಿಗಾಲ ಮತ್ತು ವಸಂತಕಾಲದ ಹಿಮ ಸಂಗ್ರಹಣೆ ಮತ್ತು ಬೇಸಿಗೆಯ ನಂತರದ ಮಾನ್ಸೂನ್ ಮಳೆಯು ಪರಸ್ಪರ ವಿಲೋಮ ಸಂಬಂಧವನ್ನು ಆಧರಿಸಿವೆ. ಸಾಮಾನ್ಯವಾಗಿ, ಹಿಮಾಲಯದ ಹಿಮದ ವಿವಿಧ ವ್ಯಾಪ್ತಿ ಮತ್ತು ದಪ್ಪವು ವಾಯವ್ಯ ಭಾರತದ ಬಯಲು ಪ್ರದೇಶಗಳ ಹವಾಮಾನ ಪರಿಸ್ಥಿತಿಗಳು ಮತ್ತು ಹವಾಮಾನದ ಮೇಲೆ ಹೆಚ್ಚಿನ ಹಾಗೂ ದೀರ್ಘಕಾಲೀನ ಪ್ರಭಾವ ಬೀರುತ್ತದೆ” ಎಂದು ಹೇಳಿದ್ದರು.
ಹೆನ್ರಿ ಫ್ರಾನ್ಸಿಸ್ ಅವರ ನಂತರ, ಸರ್ ಜಾನ್ ಎಲಿಯಟ್ ಅವರು 1889ರಲ್ಲಿ ಭಾರತೀಯ ಹವಾಮಾನ ಇಲಾಖೆಗೆ ನೇಮಕಗೊಂಡರು. ಅದೇ ವರ್ಷದ ಮೇನಲ್ಲಿ ಅವರನ್ನು ಹವಾಮಾನ ಇಲಾಖೆಯ ಮುಖ್ಯಸ್ಥ ಸ್ಥಾನಕ್ಕೆ ಸಮನಾದ ಭಾರತೀಯ ವೀಕ್ಷಣಾಲಯದ ಮೊದಲ ಮಹಾನಿರ್ದೇಶಕರಾಗಿ ನೇಮಿಸಲಾಯಿತು.
ಎಲಿಯಟ್ ಅವರು ಹವಾಮಾನ ಇಲಾಖೆಯ ಜವಾಬ್ದಾರಿ ಹೊತ್ತು, ಕೆಲಸ ಮುಂದುವರೆಸಿದರು. ಅವರು ಹಿಮಾಲಯದ ಹಿಮದ ದತ್ತಾಂಶವನ್ನು ಏಪ್ರಿಲ್-ಮೇ ತಿಂಗಳಿನಲ್ಲಿ ಸ್ಥಳೀಯ, ಹಿಂದು ಮಹಾಸಾಗರ ಹಾಗೂ ಆಸ್ಟ್ರೇಲಿಯಾದ ಹವಾಮಾನ ಪರಿಸ್ಥಿತಿಗಳ ಜೊತೆಗೆ ಸಂಯೋಜಿಸಿ ತಮ್ಮ LRF ಗಳನ್ನು ಬಿಡುಗಡೆ ಮಾಡಿದರು.
ಆದರೆ, ಅವರಿಗೆ ಹೆನ್ರಿ ಫ್ರಾನ್ಸಿಸ್ ಅವರಂತೆ ಬರಗಾಲ ಅಥವಾ ಕ್ಷಾಮಗಳನ್ನು ಪರಿಣಾಮಕಾರಿಯಾಗಿ ಊಹಿಸಲು ಸಾಧ್ಯವಾಗಲಿಲ್ಲ. ಅವರು 1899-1900ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುತ್ತದೆ ಎಂದು ಅಂದಾಜಿಸಿದ್ದರು. ಆದರೆ, ಆ ವರ್ಷ ಭೀಕರ ಕ್ಷಾಮ ಎದುರಾಯಿತು. ಪರಿಣಾಮ, ಸುಮಾರು 15ರಿಂದ 45 ಲಕ್ಷ ಜನರು ಬಲಿಯಾದರು ಎಂದು ಅಂದಾಜಿಸಲಾಗಿದೆ.
ಎಲಿಯಟ್ ನಂತರ, 1904ರಲ್ಲಿ ಭೌತಶಾಸ್ತ್ರಜ್ಞ ಮತ್ತು ನಿಯತಾಂಕ ತಜ್ಞ ಸರ್ ಗಿಲ್ಬರ್ಟ್ ವಾಕರ್ ಅವರು ಹವಾಮಾನ ಇಲಾಖೆಗೆ ನೇಮಕಗೊಂಡರು. ಅವರು, ಭಾರತದ ಮಾನ್ಸೂನ್‌ನ ಮೇಲೆ ಜಾಗತಿಕ ಅಂಶಗಳ ಪ್ರಭಾವವನ್ನು ಸಂಯೋಜಿಸುವ ಪ್ರಯತ್ನ ಮಾಡಿದರು.
ಮಾನ್ಸೂನ್ ಮಳೆ ಮತ್ತು ಹಿಂದಿನ ಜಾಗತಿಕ ವಾತಾವರಣ ಹಾಗೂ ಭೂಮಿ ಮತ್ತು ಸಾಗರ ನಿಯತಾಂಕಗಳ ನಡುವಿನ ನಿಯತಾಂಕ ಸಂಬಂಧಗಳ ಆಧಾರದ ವಾಕರ್ ಅವರು ಮಾದರಿಯೊಂದನ್ನು ರಚಿಸಿದರು. ಆ ಮಾದರಿಯೊಂದಿಗೆ ಮಳೆಯ ಮುನ್ಸೂಚನೆಗಳನ್ನು ಅಂದಾಜಿಸಿ, ಮಾಹಿತಿ ಒದಗಿಸಲು ಮಾನ್ಸೂನ್ ಕುರಿತು ಗಮನಾರ್ಹ ಕೆಲಸ ಮಾಡಿರುವ 28 ನಿಯತಾಂಕ ತಜ್ಞರು ಮತ್ತು ಮುನ್ಸೂಚಕರನ್ನು ಗುರುತಿಸಿ, ಪಟ್ಟಿ ಮಾಡಿದರು.
ವಾಕರ್ ಅವರು ಜಾಗತಿಕ ಒತ್ತಡದ ಮಾದರಿಗಳಲ್ಲಿ ಮೂರು ದೊಡ್ಡ ಪ್ರಮಾಣದ ಸೀ-ಸಾ ವ್ಯತ್ಯಾಸಗಳನ್ನು ವಿವರಿಸಿದರು. 1. ದಕ್ಷಿಣ ಆಸಿಲೇಷನ್ (SO), 2. ಉತ್ತರ ಅಟ್ಲಾಂಟಿಕ್ ಆಸಿಲೇಷನ್ (NAO) ಮತ್ತು 3. ಉತ್ತರ ಪೆಸಿಫಿಕ್ ಆಸಿಲೇಷನ್ (NPO). ಇವುಗಳಲ್ಲಿ, SO ಭಾರತದ ಹವಾಮಾನ ವ್ಯತ್ಯಾಸದ ಮೇಲೆ ಮತ್ತು ಜಗತ್ತಿನ ಹಲವು ಭಾಗಗಳ ಮೇಲೆ ಅತ್ಯಂತ ಮಹತ್ವದ ಪ್ರಭಾವ ಬೀರಿದೆ ಎಂದು ಕಂಡುಬಂದಿದೆ.
ಮಳೆಯ ಅಳತೆಯನ್ನು ಮುನ್ಸೂಚಿಸುವ ಉದ್ದೇಶಕ್ಕಾಗಿ ಭಾರತೀಯ ಉಪಖಂಡವನ್ನು ಅವಿಭಜಿತವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ವಾಕರ್ ತರ್ಕಿಸಿದ್ದರು. ಭಾರತೀಯ ಒಟ್ಟು ಭೂ ಪ್ರದೇಶವನ್ನು ಮೂರು ಉಪಪ್ರದೇಶಗಳಾಗಿ ವಿಂಗಡಿಸಿದರು; ಪರ್ಯಾಯ ದ್ವೀಪ, ಈಶಾನ್ಯ ಮತ್ತು ವಾಯವ್ಯ ಭಾರತ.
ಸ್ವಾತಂತ್ರ್ಯದ ನಂತರ
ಭಾರತೀಯ ಹವಾಮಾನ ಇಲಾಖೆಯು ವಾಕರ್ ಅವರು ಸಿದ್ದಪಡಿಸಿದ್ದ ಮಾನ್ಸೂನ್ ಮುನ್ಸೂಚನೆಯ ಮಾದರಿಯನ್ನೇ ಅಳವಡಿಸಿಕೊಂಡು 1987ರವರೆಗೆ ಕೆಲಸ ಮಾಡಿತು. ಆದರೆ, ಆ ಅವಧಿಗಾಗಲೇ ಮುನ್ಸೂಚನೆಗಳು ಹೆಚ್ಚು ನಿಖರವಾಗಿ ಬರುತ್ತಿಲ್ಲ ಎಂಬುದನ್ನೂ ಇಲಾಖೆ ಅರಿತುಕೊಂಡಿತ್ತು.
“1932-1987 ನಡುವಿನ ಅವಧಿಗಳಲ್ಲಿ ಮಳೆಯ ಮುನ್ಸೂಚನೆಗಳು ಮತ್ತು ಸುರಿದ ಮಳೆಯ ನಡುವಿನ ವ್ಯತ್ಯಾಸಗಳು ಪರ್ಯಾಯ ದ್ವೀಪ ಭಾಗದಲ್ಲಿ ಸರಾಸರಿ (ಪ್ರತಿ ವರ್ಷ) 12.33 ಸೆಂ.ಮೀ ಮತ್ತು ವಾಯವ್ಯ ಭಾರತದಲ್ಲಿ 9.9 ಸೆಂ.ಮೀ ಆಗಿತ್ತು” ಎಂದು ಭೂ ವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಂ. ರಾಜೀವನ್ ಮತ್ತು ಐಎಂಡಿ ವಿಜ್ಞಾನಿ ಡಿ.ಆರ್ ಪಟ್ಟನಾಯಕ್ ಅವರು ತಮ್ಮ ಇತ್ತೀಚಿನ ‘ನೈಋತ್ಯ ಮಾನ್ಸೂನ್‌ನ ಮೇಲ್ವಿಚಾರಣೆ ಮತ್ತು ಮುನ್ಸೂಚನೆಯ ವಿಕಸನ’ ಎಂಬ ಪ್ರಬಂಧದಲ್ಲಿ ಬರೆದಿದ್ದಾರೆ.
ಇದನ್ನು ಓದಿದ್ದೀರಾ?: ಕಾಶ್ಮೀರಿಯೊಬ್ಬಳ ನಿತ್ಯ ನಿಜಾಯಿತಿಯ ಸತ್ಯ ಸ್ವಗತ
ಮುಖ್ಯ ಸಮಸ್ಯೆಯೆಂದರೆ ವಾಕರ್ ಗುರುತಿಸಿದ ಹಲವಾರು ನಿಯತಾಂಕಗಳು ಕಾಲಾನಂತರದಲ್ಲಿ ಮಹತ್ವವನ್ನು ಕಳೆದುಕೊಂಡಿವೆ. ಅಂದರೆ, ಕಾಲ ಬದಲಾದಂತೆ, ಹವಾಮಾನವೂ ಬದಲಾಗಲಾರಂಭಿಸಿತು. ಅದಕ್ಕೆ ತಕ್ಕಂತೆ ಮಾನ್ಸೂನ್ ಕೂಡ ಏರಿಳಿತ ಕಾಣಲಾರಂಭಿಸಿತು. ಹೀಗಾಗಿ, ಮಾನ್ಸೂನ್ ವಿಚಾರದಲ್ಲಿ ವಾಕರ್ ಗುರುತಿಸಿದ್ದ ನಿಯತಾಂಕಗಳನ್ನು ಹಾಗೆಯೇ ಮುಂದುವರೆಸಲು ಸಾಧ್ಯವಿರಲಿಲ್ಲ. ಇದನ್ನು ಅರಿತ ಐಎಮ್‌ಡಿ ವಿಜ್ಞಾನಿಗಳು ವಾಕರ್ ಸಿದ್ದಪಡಿಸಿದ್ದ ಮಾದರಿಗೆ ಹಲವಾರು ಬದಲಾವಣೆಗಳನ್ನು ತರಲು ಪ್ರಯತ್ನಿಸಿದರು. ಆದರೂ, ಮಳೆ ಮುನ್ಸೂಚನೆಗಳ ನಿಖರತೆಯು ಹೆಚ್ಚು ಸುಧಾರಿಸಲಿಲ್ಲ.
ಗೋರಿಕರ್ ಮಾದರಿ: 1988ರಲ್ಲಿ, ವಸಂತ್ ಆರ್ ಗೋರಿಕರ್ ನೇತೃತ್ವದ ವಿಜ್ಞಾನಿಗಳು ಹೊಸದಾಗಿ, ‘ಪವರ್ ರಿಗ್ರೀಷನ್ ಮಾಡೆಲ್’ (ವಿದ್ಯುತ್ ಹಿಂಜರಿತ ಮಾದರಿ)ಯನ್ನು ಅಭಿವೃದ್ಧಿಪಡಿಸಿದರು. ಹೊಸ ಮಾದರಿಯನ್ನು ಆಧರಿಸಿ, ಐಎಂಡಿ ಮಾನ್ಸೂನ್ ಕಾರ್ಯಾಚರಣೆಯ ಮುನ್ಸೂಚನೆಗಳನ್ನು ನೀಡಲು ಪ್ರಾರಂಭಿಸಿತು. ಈ ವೇಳೆ, ಭಾರತವನ್ನು ಮೂರು ಭಾಗಗಳಾಗಿ ವಿಂಗಡಿಸಿ, ಮಾನ್ಸೂನ್‌ಅನ್ನು ಅಂದಾಜಿಸುವುದನ್ನು ನಿಲ್ಲಿಸಲಾಯಿತು.
ಆದಾಗ್ಯೂ, 11 ವರ್ಷಗಳ ನಂತರ, 1999ರಲ್ಲಿ ಮತ್ತೆ ‘ವಾಯವ್ಯ ಭಾರತ, ಪರ್ಯಾಯ ದ್ವೀಪ ಭಾರತ ಮತ್ತು ಈಶಾನ್ಯ ಭಾರತ’ ಎಂಬ ಮೂರು ಭಾಗಗಳನ್ನು ಮರಳಿ ಅಳವಡಿಸಿಕೊಂಡಿತು. ಆದರೆ, ಈ ಪ್ರದೇಶಗಳ ಭೌಗೋಳಿಕ ಗಡಿಗಳು ವಿಭಿನ್ನವಾಗಿದ್ದವು.
ಇದೆಲ್ಲದರ ನಡುವೆ, ಹೊಸ ಮಾದರಿಯಲ್ಲಿಯೂ ಸಮಸ್ಯೆಗಳು ಕಾಣಿಸಿಕೊಂಡವು, ನಿಖರ ಮುನ್ಸೂಚನೆಗಳನ್ನು ನೀಡಲು ಸಾಧ್ಯವಾಗಲಿಲ್ಲ. “ಹೊಸ ಮಾದರಿಯಲ್ಲಿ ಅಳವಡಿಸಿಕೊಳ್ಳಲಾಗಿದ್ದ 16 ನಿಯತಾಂಕಗಳ ಪೈಕಿ 4 ನಿಯತಾಂಕಗಳು ಮಾನ್ಸೂನ್‌ನೊಂದಿಗೆ ಸಂಬಂಧವನ್ನು ಕಳೆದುಕೊಂಡಿವೆ ಎಂಬುದನ್ನು 2000ನೇ ಇಸವಿಯಲ್ಲಿ ಕಂಡುಕೊಳ್ಳಲಾಯಿತು. ಬಳಿಕ, ಅವುಗಳನ್ನು ಇತರ ಮುನ್ಸೂಚಕಗಳ ನೆರವಿನಿಂದ ಬದಲಾಯಿಸಲಾಯಿತು. ಆದಾಗ್ಯೂ, 2002ರಲ್ಲಿ ಎದುರಾದ ಬರಗಾಲವನ್ನು ಊಹಿಸಲು ಇಲಾಖೆಯು ವಿಫಲವಾಯಿತು” ಎಂದು ಸೂರ್ಯಚಂದ್ರ ಎ ರಾವ್, ಪ್ರಶಾಂತ್ ಎ ಪಿಳ್ಳೈ, ಮಹೇಶ್ವರ ಪ್ರಧಾನ್ ಮತ್ತು ಅಂಕುರ್ ಶ್ರೀವಾಸ್ತವ ಅವರು ಮೌಸಮ್ ಪತ್ರಿಕೆಗೆ ಬರೆದ ತಮ್ಮ 2019 ರ ‘ಭಾರತದಲ್ಲಿ ಭಾರತೀಯ ಬೇಸಿಗೆ, ಮಾನ್ಸೂನ್‌ನ ಋತುಮಾನದ ಮುನ್ಸೂಚನೆ: ಭೂತ, ವರ್ತಮಾನ ಮತ್ತು ಭವಿಷ್ಯ’ ಪ್ರಬಂಧದಲ್ಲಿ ತಿಳಿಸಿದ್ದಾರೆ.
2002ರ ಕ್ಷಾಮದ ಪರಿಣಾಮವಾಗಿ, ಹವಾಮಾನ ಇಲಾಖೆಯು 2003ರಲ್ಲಿ 8 ಮತ್ತು 10 ನಿಯತಾಂಕಗಳೊಂದಿಗೆ ಎರಡು ಹೊಸ ಮಾದರಿಗಳ ಮಾನ್ಸೂನ್ ಮುನ್ಸೂಚನೆಯನ್ನು ಪರಿಚಯಿಸಿತು. ಇದು, ಎರಡು ಹಂತದ ಮುನ್ಸೂಚನೆ ತಂತ್ರವನ್ನು ಅಳವಡಿಸಿಕೊಂಡಿತು. ಮೊದಲ ಹಂತದ ಮುನ್ಸೂಚನೆಯನ್ನು ಏಪ್ರಿಲ್ ಮಧ್ಯದಲ್ಲಿ ನೀಡುವುದು, ಎರಡನೇ ಹಂತದಲ್ಲಿ ಜೂನ್ ಅಂತ್ಯದ ವೇಳೆಗೆ ಮತ್ತೊಂದು ಮುನ್ಸೂಚನೆ ನೀಡುವುದು.
ಹೊಸ ಮಾದರಿಗಳು 2003ರ ಮಾನ್ಸೂನ್ಅನ್ನು ನಿಖರವಾಗಿ ಊಹಿಸಿದವು. ಆದರೆ, 2004ರ ಬರಗಾಲವನ್ನು ಮುನ್ಸೂಚಿಸುವಲ್ಲಿ ವಿಫಲವಾದವು. ನಂತರದಲ್ಲಿ ಮತ್ತೆ ತನ್ನ ಮಾದರಿಗಳನ್ನು ಇಲಾಖೆ ಮರು-ಮೌಲ್ಯಮಾಪನ ಮಾಡಿತು.
ನಿಯತಾಂಕ ಮುನ್ಸೂಚನೆ ವ್ಯವಸ್ಥೆ: 2007ರಲ್ಲಿ, ಇಲಾಖೆ ತನ್ನ ಎರಡು-ಹಂತದ ಮುನ್ಸೂಚನೆ ತಂತ್ರವನ್ನು ಮತ್ತಷ್ಟು ಬಲಗೊಳಿಸಲು ‘ನಿಯತಾಂಕ ಸಮೂಹ ಮುನ್ಸೂಚನೆ ವ್ಯವಸ್ಥೆ’ (SEFS)ಅನ್ನು ಅಳವಡಿಸಿಕೊಂಡಿತು. ಜೊತೆಗೆ, ಮಾದರಿಗಳಲ್ಲಿ ನಿಯತಾಂಕಗಳ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡಿತು.
ಈ ವರದಿ ಓದಿದ್ದೀರಾ?: ದಲಿತ ಸಂಘಟನೆ ಮತ್ತು ರಾಜಕೀಯ ಅಸ್ಮಿತೆ
ಏಪ್ರಿಲ್‌ನಲ್ಲಿ ನೀಡಲಾಗುವ ಮೊದಲ ಮುನ್ಸೂಚನೆಗಾಗಿ ಎಂಟು ಪ್ಯಾರಾಮೀಟರ್ ಮಾದರಿಯ ಬದಲಿಗೆ, ಐದು ಪ್ಯಾರಾಮೀಟರ್ ಮಾದರಿಯನ್ನು ಬಳಸಲಾರಂಭಿಸಿತು. ಅಂತೆಯೇ, ಜೂನ್‌ನಲ್ಲಿ ನೀಡುವ ಮುನ್ಸೂಚನೆಗೆ 10 ಪ್ಯಾರಾಮೀಟರ್ ಮಾದರಿ ಬದಲಿಗೆ, ಆರು ಪ್ಯಾರಾಮೀಟರ್ ಮಾದರಿಯನ್ನು ತಂದಿತು. ಜೊತೆಗೆ, ಸಮಗ್ರ ಮುನ್ಸೂಚನೆಗಳ ಪರಿಕಲ್ಪನೆಯನ್ನು ಸಹ ಪರಿಚಯಿಸಿತು. ಈ ವಿಧಾನದಲ್ಲಿ, ಮುನ್ಸೂಚಕಗಳ ಎಲ್ಲ ಸಂಭಾವ್ಯ ಮುನ್ಸೂಚನಾ ಮಾದರಿಗಳನ್ನು ಒಗ್ಗೂಡಿಸಿ, ಹೆಚ್ಚು ದೃಢವಾದ ಮುನ್ಸೂಚನೆಯನ್ನು ರಚಿಸಲು ಪ್ರಯತ್ನಿಸಿತು.
ಇದರಿಂದ, ಹವಾಮಾನ ಇಲಾಖೆಯು ತನ್ನ ಮುನ್ಸೂಚನೆಗಳಲ್ಲಿ ಗಮನಾರ್ಹವಾಗಿ ಸುಧಾರಣೆ ತರಲು ಸಾಧ್ಯವಾಯಿತು. 2007 ಮತ್ತು 2018ರ ನಡುವಿನ ಸರಾಸರಿ ಸಂಪೂರ್ಣ ದೋಷ – LPA (ಮುನ್ಸೂಚನೆ ಮತ್ತು ನಿಜವಾದ ಮಳೆಯ ನಡುವಿನ ವ್ಯತ್ಯಾಸ) 5.95%ಗೆ ಇಳಿಯಿತು. (ಈ ವ್ಯತ್ಯಾಸವು 1995 ಮತ್ತು 2006ರ ನಡುವೆ ಸರಾಸರಿ 7.94% ಇತ್ತು.)
ಇತ್ತೀಚಿನ ವರ್ಷಗಳಲ್ಲಿ ಮುನ್ಸೂಚನೆಗಳು
ಕಪ್ಲೆಡ್ ಡೈನಾಮಿಕ್ ಮಾದರಿ: 2012ರಲ್ಲಿ ‘ಮಾನ್ಸೂನ್ ಮಿಷನ್ ಕಪ್ಲೆಡ್ ಫೋರ್ಕಾಸ್ಟಿಂಗ್ ಸಿಸ್ಟಮ್’ (MMCFS) ಅನ್ನು ಪ್ರಾರಂಭಿಸಿತು. ಇದರಿಂದ, ಮಾನ್ಸೂನ್ ಮುನ್ಸೂಚನೆಯಲ್ಲಿ ಸುಧಾರಣೆ ಕಂಡುಬಂದಿದೆ. ಇದೊಂದು ‘ಕಪ್ಲೆಡ್ ಡೈನಾಮಿಕ್ ಮಾದರಿ’ಯಾಗಿದ್ದು, ಸಾಗರ, ವಾತಾವರಣ ಮತ್ತು ಭೂಮಿಯಿಂದ ಡೇಟಾವನ್ನು ಸಂಯೋಜಿಸಿ ಹೆಚ್ಚು ನಿಖರವಾದ ಮುನ್ಸೂಚನೆ ನೀಡಲು ಸಹಾಯವಾಗುತ್ತದೆ ಎಂಬುದನ್ನು ಇಲಾಖೆ ಕಂಡುಕೊಂಡಿತು.
ಬಹು-ಮಾದರಿ ಸಮಗ್ರ ವ್ಯವಸ್ಥೆ: ಇಲಾಖೆಯು 2021ರಲ್ಲಿ ‘ಬಹು-ಮಾದರಿ ಸಮಗ್ರ’ (MME) ವ್ಯವಸ್ಥೆಯನ್ನು ಅಳಡಿಸಿಕೊಳ್ಳುವ ಮೂಲಕ ಮುನ್ಸೂಚನೆಗಳ ನಿಖರತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿತು. ಈ ಹೊಸ ವ್ಯವಸ್ಥೆಯಲ್ಲಿ ಭಾರತದ ಸ್ವಂತ MMCFS ಮಾದರಿ ಹಾಗೂ ವಿವಿಧ ಜಾಗತಿಕ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರಗಳಿಂದ ಸಂಯೋಜಿತ ಜಾಗತಿಕ ಹವಾಮಾನ ಮಾದರಿಗಳನ್ನು (CGCMs) ಒಳಗೊಳ್ಳಲಾಗಿದೆ.
2007ರಲ್ಲಿ SEFS ಮತ್ತು 2021ರಲ್ಲಿ MME ವ್ಯವಸ್ಥೆಯನ್ನು ಅಳವಡಿಸಿಕೊಂಡ ಬಳಿಕ, ಹವಾಮಾನ ಇಲಾಖೆಯ ಮೂನ್ಸೂಚನೆಗಳು ಗಮನಾರ್ಹವಾಗಿ ಸುಧಾರಿಸಿವೆ ಎಂದು ಭೂ ವಿಜ್ಞಾನ ಸಚಿವಾಲಯವು 2025ರ ಫೆಬ್ರವರಿಯಲ್ಲಿ ಸಂಸತ್ತಿಗೆ ತಿಳಿಸಿದೆ.
ಹವಾಮಾನ ಇಲಾಖೆಯ ಏಪ್ರಿಲ್ ಮುನ್ಸೂಚನೆಗಳು ಈಗ ಹೆಚ್ಚು ನಿಖರವಾಗಿವೆ. ಹಿಂದಿನ ನಾಲ್ಕು ವರ್ಷಗಳಲ್ಲಿ (2021-2024) ಇಲಾಖೆ ಅಂದಾಜಿಸಿದ ಮುನ್ಸೂಚನೆ ಮತ್ತು ಸುರಿದ ಮಳೆಯ ನಡುವಿನ ವ್ಯತ್ಯಾಸವು ಕೇವಲ 2.27% ಮಾತ್ರವೇ ಇದೆ.
ಆದಾಗ್ಯೂ, ಹವಾಮಾನ ಇಲಾಖೆಯು ಮತ್ತಷ್ಟು ಸುಧಾರಿಸಿಕೊಳ್ಳಲು ಇನ್ನೂ ಹೆಚ್ಚಿನ ಅವಕಾಶವಿದೆ. ENSO ನಂತಹ ಜಾಗತಿಕ ಹವಾಮಾನ ವಿಧಾನಗಳೊಂದಿಗೆ ವ್ಯವಸ್ಥಿತ ದೋಷಗಳು ಮತ್ತು ದೂರಸಂಪರ್ಕವನ್ನು ಸುಧಾರಿಸುವ ಮೂಲಕ ಇಲಾಖೆಯು ತನ್ನ ಕ್ರಿಯಾತ್ಮಕ ಮಾದರಿಗಳನ್ನು ಪರಿಷ್ಕರಿಸಬಹುದು. ಇದು, ಇಲಾಖೆಗೆ ಮತ್ತಷ್ಟು ನಿಖರತೆಯನ್ನು ತಂದುಕೊಡುತ್ತದೆ ಎಂದು ರಾಜೀವನ್ ಮತ್ತು ಪಟ್ಟನಾಯಕ್ ಸೂಚಿಸಿದ್ದಾರೆ.
ಕೃಪೆ: ದಿಇಎ