ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ವೇದಿಕೆ ಮೇಲೆ ಭಾಷಣ ಮಾಡುವಾಗ ತಾಳ್ಮೆ ಕಳೆದುಕೊಂಡ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಮೇಲೆಯೇ ಕೈ ಎತ್ತಲು ಮುಂದಾಗಿರುವುದು ಸಾಕಷ್ಟು ಟೀಕೆಗೆ ಒಳಗಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣಕ್ಕೆ ಬಿಜೆಪಿಯ ಆರು ಕಾರ್ಯಕರ್ತೆಯರು ಅಡ್ಡಿಪಡಿಸಿದರು. ಕಪ್ಪು ಬಾವುಟ ಪ್ರದರ್ಶಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಮಾವೇಶದಲ್ಲಿ ಅವ್ಯವಸ್ಥೆ ಮತ್ತು ಗೊಂದಲ ಆಗಿರುವುದು ಕಂಡು ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು, ಭದ್ರತೆ ನಿಗಾ ವಹಿಸಿದ್ದ ಪೊಲೀಸರತ್ತ ಕೈ ಮಾಡಿದರು. ಧಾರವಾಡದ ಎಎಸ್‌ಪಿ ನಾರಾಯಣ ಭರಮನಿ ಅವರು ವೇದಿಕೆ ಏರಿ ಬರುತ್ತಿದ್ದಂತೆಯೇ, ಅವರ ಮೇಲೆ ಕೈ ಎತ್ತಲು ಸಿದ್ದರಾಮಯ್ಯ ಮುಂದಾದರು. ಭರಮನಿ ತಕ್ಷಣವೇ ಹಿಂದೆ ಸರಿದರು.
“ಯಾರಯ್ಯ ಬೆಳಗಾವಿ ಎಸ್‌ಪಿ? ಏನು ನಡೆಯುತ್ತಿದೆ ಇಲ್ಲಿ? ಏನ್ ಮಾಡುತ್ತಿದ್ದೀರಿ ನೀವೆಲ್ಲ” ಎಂದು ಸಿದ್ದರಾಮಯ್ಯ ರೇಗಿದರು. ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ನಾಸಿರ್ ಹುಸೇನ್ ಹಾಗೂ ಸಚಿವ ಎಚ್.ಕೆ.ಪಾಟೀಲ ಅವರು ಸಮಾಧಾನಪಡಿಸಿದರು. ಈ ಎಲ್ಲದರ ಮಧ್ಯೆ ವೇದಿಕೆಯತ್ತ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತೆಯರನ್ನು ಪೊಲೀಸರು ಹೊರಕ್ಕೆ ಎಳೆದೊಯ್ದರು. ಹೊರಗೆ ನಿಂತಿದ್ದ ಕಾಂಗ್ರೆಸ್‌ನ ಕಾರ್ಯಕರ್ತರು ಪೊಲೀಸ್ ವಾಹನಕ್ಕೆ ಮುತ್ತಿಗೆ ಹಾಕಿದರು. ಇದರಿಂದ ಸ್ಥಳದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಿದ್ದರಾಮಯ್ಯ ಅವರು ಕೆಲಹೊತ್ತು ಭಾಷಣ ನಿಲ್ಲಿಸಿದರು.
ಸಮಾವೇಶದ ಬಳಿಕ ಪೊಲೀಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ, “ನಮ್ಮ ಸಮಾವೇಶದಲ್ಲಿ ಬಿಜೆಪಿಯವರನ್ನು ಹೇಗೆ ಬಿಟ್ಟಿರಿ? ಇಷ್ಟು ಜನ ಪೊಲೀಸರು ಏನು ಮಾಡುತ್ತಿದ್ದೀರಿ? ಈ ಲೋಪಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಡಿಸಿಪಿ ರೋಹನ್ ಜಗದೀಶ ಅವರಿಗೆ ತಾಕೀತು ಮಾಡಿದರು. ಇದು ನಡೆದ ಘಟನೆ ವಿವರ.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ತವ್ಯನಿರತ ಅಧಿಕಾರಿಗಳ ಮೇಲೆ ಸಿಟ್ಟು ವ್ಯಕ್ತಪಡಿಸುವುದು ಹೊಸದಲ್ಲ. ಬೆಳಗಾವಿಯಲ್ಲಿ ತಾಳ್ಮೆ ಕಳೆದುಕೊಂಡ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿಯೇ ಬಿಟ್ಟರು. ಆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಸಾಕಷ್ಟು ವೈರಲ್ ಸಹ ಆಗುತ್ತಿದೆ. ತಪ್ಪಾಗಿದ್ರೆ ಕರೆದು ಬುದ್ಧಿ ಹೇಳಬಹುದಿತ್ತು. ಎಚ್ಚರಿಕೆ ಕೊಡಬಹುದಿತ್ತು. ಅದು ಬಿಟ್ಟು ಕರ್ತವ್ಯನಿರತ ಅಧಿಕಾರಿ ಮೇಲೆ ಸಾರ್ವಜನಿಕವಾಗಿ ಕೈ ಎತ್ತಲು ಮುಂದಾಗಿ ಈಗ ಸಿದ್ದರಾಮಯ್ಯ ಅವರೇ ಸಾಕಷ್ಟು ಮುಜುಗರ ಅನುಭವಿಸುವಂತಾಗಿದೆ.
ಸಿಎಂ ಕುರ್ಚಿಯಲ್ಲಿ ಕುಳಿತ ಮಾತ್ರಕ್ಕೆ ಆಡಳಿತ ವರ್ಗವನ್ನು ಮನಬಂದಂತೆ ನಡೆಸಿಕೊಳ್ಳುವ ಹಕ್ಕು ಸಿದ್ದರಾಮಯ್ಯ ಅವರಿಗೆ ಇಲ್ಲ. ಅಲ್ಲದೇ ಕೈ ಎತ್ತಿ ದಂಡಿಸುವ ಅಧಿಕಾರವಂತೂ ಇಲ್ಲವೇ ಇಲ್ಲ.
“ಸಂವಿಧಾನ, ಕಾನೂನು ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ತಾನೊಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ವೇದಿಕೆಯಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಂದಿಗೆ ಹೇಗೆ ವರ್ತಿಸಬೇಕು? ಅಧಿಕಾರಿ ಮೇಲೆಯೇ ಕೈಮಾಡಲು ಹೋದ ಸಿದ್ದರಾಮಯ್ಯ ಗೂಂಡಾಗಳಂತೆ ವರ್ತಿಸಿದ್ದಾರೆ. ಇದು ಸಿದ್ದರಾಮಯ್ಯನ ಅಹಂಕಾರ, ಅಧಿಕಾರದ ಮದ ತೋರಿಸುತ್ತದೆ” ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಭಾಗವತ್ ಅಹಿಂಸೆಯ ಮಾತಾಡಿದ್ದಾರೆ; ಅಂದಮೇಲೆ ಸಿದ್ದರಾಮಯ್ಯರ ಹೇಳಿಕೆಯಲ್ಲಿ ತಪ್ಪೇನಿದೆ?
“ಪೊಲೀಸರನ್ನು ಗೂಂಡಾಗಳು ಅಟ್ಟಾಡಿಸಿ ಹೊಡೆಯುವ ಪರಿಸ್ಥಿತಿ ಈಗಾಗಲೇ ಬಂದಿದೆ. ಇನ್ನು ಮುಂದೆಯೂ ಬರಲಿದೆ. ಇದೀಗ ಮುಖ್ಯಮಂತ್ರಿಗಳು ಜಿಲ್ಲಾ ಸಹ ಪೊಲೀಸ್ ವರಿಷ್ಠಾಧಿಕಾರಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಲು ಮುಂದಾಗಿದ್ದು, ಆ ಮೂಲಕ ಇಂಥ ಘಟನೆಗೆ ಪೀಠಿಕೆ ಹಾಕಿದಂತಿದೆ. ಕೆಲದಿನಗಳ ಹಿಂದೆ ಒಬ್ಬ ಜಿಲ್ಲಾಧಿಕಾರಿಯನ್ನು ತಾವು ಕುಳಿತ ವೇದಿಕೆ ಮೇಲೆ ಕುಳಿತಿದ್ಯಾಕೆ ಎಂದು ಪ್ರಶ್ನಿಸಿ ವೇದಿಕೆಯಿಂದ ಕೆಳಕ್ಕಿಳಿಸಿದ ಘಟನೆ ನಡೆದಿತ್ತು. ಆಡಳಿತ ನಡೆಸುವ ಅಧಿಕಾರಿಗಳನ್ನು ಈ ರೀತಿ ಸಾರ್ವಜನಿಕವಾಗಿ ಅಗೌರವದಿಂದ ನಡೆಸಿಕೊಂಡರೆ ಸರಕಾರದಲ್ಲಿ ಯಾವ ರೀತಿ ಚಟುವಟಿಕೆ ನಡೆಯುತ್ತದೆ ಎಂಬುದನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು” ಎಂದು ಅಶ್ವತ್ಥನಾರಾಯಣ ಕುಟುಕಿದ್ದಾರೆ.
“ಅಧಿಕಾರದ ಮದದಲ್ಲಿ ತೇಲುತ್ತಿರುವ ಸಿದ್ದರಾಮಯ್ಯನವರ ನಡೆ, ನುಡಿಗಳು ಇತ್ತೀಚಿನ ದಿನಗಳಲ್ಲಿ ವಿಪರೀತಕ್ಕೆ ಹೋಗುತ್ತಿದೆ. ಕೆಲ ತಿಂಗಳ ಹಿಂದೆ ಸಭೆಯೊಂದರಲ್ಲಿ ದಕ್ಷ ಜಿಲ್ಲಾಧಿಕಾರಿಯೊಬ್ಬರನ್ನು ಕೇವಲವಾಗಿ ಅಪಮಾನಿಸಿ, ತಮ್ಮ ಸಂಸ್ಕೃತಿ ಹೀನ ನಡವಳಿಕೆಯನ್ನು ಅನಾವರಣ ಮಾಡಿಕೊಂಡಿದ್ದರು. ಅವರ ವರ್ತನೆ ಇಂದು – ನಿನ್ನೆಯದಲ್ಲ, ತಮ್ಮ ಸ್ವಕ್ಷೇತ್ರದಲ್ಲಿ ಮಹಿಳೆಯೊಬ್ಬರ ಸೆರಗೆಳೆದು ರೌದ್ರಾವತಾರ ಪ್ರದರ್ಶಿಸಿದ ಘಟನೆ ಇನ್ನೂ ಹಸಿಯಾಗಿಯೇ ಇದೆ. ಅದೇ ರೀತಿ ಮೈಸೂರು ಭಾಗದ ಹಿರಿಯ ರಾಜಕಾರಿಣಿಯಾಗಿದ್ದ ನಂಜನಗೂಡಿನ ದಿವಂಗತ ಎಂ.ಮಹದೇವು ಅವರ ಮೇಲೂ ಹಲ್ಲೆ ನಡೆಸಿದ ಪ್ರಕರಣವನ್ನು ಮಾಧ್ಯಮಗಳು ʼಸಿದ್ದು-ಗುದ್ದುʼ ಪ್ರಕರಣ ಎಂದೇ ವ್ಯಾಖ್ಯಾನಿಸಿದ್ದವು. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರಿಗೆ ಅನುಭವದ ಹಿರಿತನ, ನಡವಳಿಕೆ, ಹಾಗೂ ಮಾತುಗಳನ್ನು ಮಾಗಿಸಬೇಕು, ಆದರೆ ಸಿದ್ದರಾಮಯ್ಯನವರ ವಿಷಯದಲ್ಲಿ ಇದು ತಿರುಗು-ಮುರುಗಾಗಿದೆ, ದಿನೇ ದಿನೇ ಅವರು ತಮ್ಮ ನಾಲಿಗೆಯ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಹತಾಶೆಯಿಂದ ಜನರು ಹಾಗೂ ಅಧಿಕಾರಿಗಳ ಮೇಲೆ ಅಹಂಕಾರ ಹಾಗೂ ತೋಳ್ಬಲ ಪ್ರದರ್ಶಿಸುತ್ತಿದ್ದಾರೆ” ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ ವೈ ವಿಜಯೇಂದ್ರ ಟೀಕಿಸಿದ್ದಾರೆ.
ಆದರೆ, ಕಾಂಗ್ರೆಸ್‌ನ ಯಾವುದೇ ಪ್ರಮುಖ ನಾಯಕರು ಸಿದ್ದರಾಮಯ್ಯ ಅವರ ನಡೆಯನ್ನು ಖಂಡಿಸಿ ಈವರೆಗೂ ಹೇಳಿಕೆ ನೀಡಿಲ್ಲ. ಮೋದಿ-ಅಮಿತ್ ಶಾ ಮುಂದೆ ನಡುಬಗ್ಗಿಸುವ ಬಿಜೆಪಿ ನಾಯಕರು ಎಂದು ಟೀಕಿಸುವ ಕಾಂಗ್ರೆಸ್ ನಾಯಕರು ಈಗ ಸಿದ್ದರಾಮಯ್ಯ ಅವರ ಮುಂದೆ ನಡುಬಗ್ಗಿಸಿದ್ದಾರಾ? ಸಿಎಂ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರಿಗೆ ಇಷ್ಟು ಸ್ವಾಮಿನಿಷ್ಠೆ ತೋರುವದು ಪ್ರಜಾಪ್ರಭುತ್ವಕ್ಕೆ ಎಸಗುವ ಅಪಚಾರ. ಅಧಿಕಾರಿ ವರ್ಗ ಎಂದರೆ ಪ್ರಭುತ್ವಕ್ಕೆ ಕಾಲು ಕಸವಲ್ಲ ಎಂಬುದನ್ನು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಬೇಕು.
ಬಿಜೆಪಿ ಕಾರ್ಯಕರ್ತೆಯರಿಗೆ ಜಾಮೀನು
ಕಪ್ಪು ಬಟ್ಟೆ ಪ್ರದರ್ಶಿಸಿದ್ದು ಅಲ್ಲದೇ ಸಮಾವೇಶದ ವೇದಿಕೆಯತ್ತ ನುಗ್ಗಲು ಯತ್ನಿಸಿದ ಬಿಜೆಪಿಯ ಶಿಲ್ಪಾ ಎಂಬುವರು ಸೇರಿ ಆರು ಕಾರ್ಯಕರ್ತೆಯರ ವಿರುದ್ಧ ಬಿಎನ್‌ಎಸ್ 189(1) (C), ಬಿಎನ್‌ಎಸ್ 352 ಅಡಿ ಪ್ರಕರಣ ದಾಖಲಿಸಲಾಗಿದೆ. ಶಿಲ್ಪಾ ಕೇಕ್ರೆ, ಪವಿತ್ರಾ ಹಿರೇಮಠ, ರೇಷ್ಮಾ ಬರಮೂಚೆ, ಮಂಜುಳಾ ಹಣ್ಣೀಕೇರಿ, ಅನ್ನಪೂರ್ಣಾ ಹವಳ ಮತ್ತು ಸುಮಿತ್ರಾ ಜಾಲಗಾರ್ ಆರೋಪಿಗಳು. ಕ್ಯಾಂಪ್ ಠಾಣೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಂತೆಯೇ ಬಿಜೆಪಿ ನಾಯಕರು ಜಾಮೀನು ಅರ್ಜಿ ಸಲ್ಲಿಸಿದರು. ಅವರಿಗೆ ಇಲ್ಲಿನ ಐದನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸ್ಪರ್ಷಾ ಡಿಸೋಜಾ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.