ಸುಮಾರು 3 ಕೋಟಿ ಮೌಲ್ಯದ ಮೊಬೈಲ್ ಫೋನ್ಗಳನ್ನು ನೋಯ್ಡಾದಿಂದ ಬೆಂಗಳೂರಿಗೆ ಕಂಟೇನರ್ ಮೂಲಕ ತಂದಿದ್ದ ಲಾರಿಯನ್ನು ನಡುರಸ್ತೆಯಲ್ಲೇ ಬಿಟ್ಟು, ಅದರಲ್ಲಿದ್ದ ಮೊಬೈಲ್ ಫೋನ್ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಲಾರಿ ಚಾಲಕ ಮತ್ತು ಇತರೆ 6 ಮಂದಿ ಆರೋಪಿಗಳನ್ನು ಸೆನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹರಿಯಾಣ ಮೂಲದ ರಾಹುಲ್ ಅಲಿ, ಇಮ್ರಾನ್, ಮೊಹಮದ್ ಮುಸ್ತಾಫ ಅಲಿಯಾಸ್ ಭುರ್ರ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ, ಯೂಸಫ್ ಖಾನ್ ಬಂಧಿತ ಆರೋಪಿಗಳು.

ಘಟನೆ ಹಿನ್ನೆಲೆ : 2024ರ ನವೆಂವರ್ 22ರಂದು ನೋಯ್ಡಾದಿಂದ ಬೆಂಗಳೂರಿಗೆ ಕಂಟೇನರ್ ವಾಹನದಲ್ಲಿ ಸೇಫ್ ಸೀಡ್ ಕ್ಯಾರಿಯರ್ಸ್ ಪ್ರೈ.ಲಿ ಮಾಲೀಕರು ರೆಡ್ಮಿ ಮೊಬೈಲ್ 170 ಬಾಕ್ಸ್ಗಳು(3400 ಮೊಬೈಲ್ ಫೋನ್), ಪೊಕೊ ಮೊಬೈಲ್ 163 ಬಾಕ್ಸ್ಗಳನ್ನು(3260 ಮೊಬೈಲ್ ಫೋನ್ಗಳು) ತಂದಿದ್ದು, ಕಂಟೇನರ್ ಲಾರಿ ಚಾಲಕ ಹಾಗೂ ಆತನ ಸಹಚರರು ಕಂಟೇನರ್ನಲ್ಲಿದ್ದ ಮೊಬೈಲ್ ಫೋನ್ಗಳನ್ನು ಕಳವು ಮಾಡಿಕೊಂಡು ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿ ಗೊಲ್ಲರಹಳ್ಳಿ ಗ್ರಾಮದ ಬಳಿಯ ಹೆಚ್ಪಿ ಡಾಬಾ ಬಳಿ ಕಂಟೇನರ್ ವಾಹನವನ್ನು ಬಿಟ್ಟು ಪರಾರಿಯಾಗಿದ್ದರು.
ಈ ಕುರಿತು ಸೇಫ್ ಸೇಡ್ ಕ್ಯಾರಿಯರ್ಸ್ ಪ್ರೈ.ಲಿ ಮಾಲೀಕರು ಪೆರೇಸಂದ್ರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೂಡಲೇ ಎಚ್ಚೆತ್ತ ಇನ್ಸ್ಪೆಕ್ಟರ್ ನಯಾಜ್ ಅವರು ಪ್ರಕರಣದ ಎ1 ಆರೋಪಿ ರಾಹುಲ್ ಎಂಬಾತನನ್ನು ಬಂಧಿಸಿದ್ದರು. ಬಳಿಕ ಜನವರಿಯಲ್ಲಿ ಕೇಸನ್ನು ಚಿಕ್ಕಬಳ್ಳಾಪುರ ಸೆನ್ ಠಾಣೆಗೆ ವರ್ಗಾಯಿಸಲಾಗಿತ್ತು. ತನಿಖೆ ಮುಂದುವರಿಸಿದ ಸೆನ್ ಠಾಣೆ ರವಿಕುಮಾರ್ ಹಾಗೂ ಸೂರ್ಯ ಪ್ರಕಾಶ್ ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಒಟ್ಟು 56 ಮೊಬೈಲ್ಗಳು ಹಾಗೂ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕಳವು ಮಾಡಿರುವ ಮೊಬೈಲ್ಗಳನ್ನು ದೇಶದ ಎಲ್ಲಾ ರಾಜ್ಯಗಳಿಗೂ ಬಿಡಿ ಬಿಡಿಯಾಗಿ ಮಾರಾಟ ಮಾಡಿದ್ದು, ಒಟ್ಟು 4084 ಮೊಬೈಲ್ಗಳ ಐಎಂಇಐ ನಂಬರ್ಗಳನ್ನು ಡಿಒಟಿ ಮೂಲಕ ಬ್ಲಾಕ್ ಮಾಡಲಾಗಿದೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.