ಗೋಮೂತ್ರ ರೋಗ ಪರಿಹಾರಕವೇ? ಸಂಶೋಧನೆಗಳು ಏನು ಹೇಳಿವೆ?

Date:

Advertisements

2022ರಲ್ಲಿ ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಭೋಜ್ ರಾಜ್ ಸಿಂಗ್ ಇವರು ಹಸು ಮತ್ತು ಎತ್ತುಗಳಲ್ಲಿ ಕನಿಷ್ಟ 14 ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾಗಳಿದ್ದು, ಆ ಮೂತ್ರವು ಇನ್ನಾವುದೇ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು (ಅಂಟಿ ಬ್ಯಾಕ್ಟೀರಿಯಾದಂತೆ) ತಡೆಯಲು ಸಾಧ್ಯವಿಲ್ಲ ಎಂದಿರುವುದು ವರದಿಯಾಗಿದೆ. ಗೋಮೂತ್ರ ಬ್ಯಾಕ್ಟೀರಿಯಾಗಳ ಸೋಂಕಿಗೆ ಒಳಗಾದರೆ, ಅಂತಹವರು ಮಾರಣಾಂತಿಕ ಸ್ಥಿತಿ ತಲುಪಬಹುದು ಎಂದಿದ್ದಾರೆ.

‘ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೇ ವಿಭೂತಿಯಾದೆ, ತಟ್ಟದೆ ಹಾಕಿದರೆ ಮೇಲುಗೊಬ್ಬರವಾದೆ’ ಎಂಬ ಎಸ್.ಜಿ. ನರಸಿಂಹಚಾರ್ ಇವರ ಪದ್ಯವು ಗೋವಿನ ಹಲವು ಉಪಕಾರಗಳನ್ನು ಸ್ಮರಿಸುತ್ತದೆ. ಇಂದಿನ ಕೆಲವು ಘನ ಸಂಶೋಧನೆಗಳು ಆಗಲೇ ದೊರಕಿದ್ದರೆ, ಕವಿವರ್ಯರು ‘ಕುಡಿದು ಗಂಜಲವ ಮನುಜ ತಾ ನಿರೋಗಿಯಾದ’ ಎಂದೆಲ್ಲಾ ಬರೆಯತ್ತಿದ್ದರೇನೋ?

ಇತ್ತೀಚೆಗೆ ದೇಹಲಿ ವಿಶ್ವವಿದ್ಯಾಲಯದ ಲಕ್ಷ್ಮೀಬಾಯಿ ಕಾಲೇಜಿನ ಪ್ರಾಂಶುಪಾಲರು ಸಗಣಿಯು ಬಿಸಿಲಿನ ತಾಪವನ್ನು ತಡೆದು ತಂಪು ತರುವುದೆಂಬ ತಮ್ಮ ಸಂಶೋಧನೆಯನ್ನು ನಿರೂಪಿಸಲು ಕಾಲೇಜಿನ ತರಗತಿಯ ಕೊಠಡಿಯೊಂದರ ಗೋಡೆಗೆ ಸಗಣಿ ಬಳಿಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಕೇವಲ ವಿದ್ಯಾರ್ಥಿಗಳಷ್ಟೇ ತಂಪಾಗಿದ್ದರೆ ಸಾಕೇ, ಮೇಡಂ ಸಹ ತಂಪಿರಲೆಂದು ವಿದ್ಯಾರ್ಥಿಗಳು ಪ್ರಾಂಶುಪಾಲರ ಕೊಠಡಿ ಗೋಡೆಗೂ ಸಹ ಸಗಣಿ ಬಳಿದಿದ್ದಾರೆ. ಮಣ್ಣಿನ ಗೋಡೆಗಳಿಗೆ ಮತ್ತು ನೆಲಕ್ಕೆ ಸಗಣಿ ಬಳಿಯುವುದು ಹೊಸದೇನಲ್ಲ. ಇದು ಸ್ವಲ್ಪಮಟ್ಟಿಗೆ ತಂಪನ್ನು ನೀಡಬಹುದು. ಸಗಣಿ ಜೊತೆಗೆ ಇತರೆ ನೈಸರ್ಗಿಕ ವಸ್ತುಗಳನ್ನು ಸೇರಿಸಿದ ವೇದಿಕ್ ಪ್ಲಾಸ್ಟರ್ ಅಥವಾ ಗೊಕ್ರಿಟ್ ಎಂಬ ಇಟ್ಟಿಗೆಗಳನ್ನು ಈಗಾಗಲೇ ಬಳಸಲಾಗುತ್ತಿದೆ. ಆದರೆ ಸಿಮೆಂಟ್ ಅಥವಾ ಬಣ್ಣ ಬಳಿದಿರುವ ಗೋಡೆಗಳಿಗೆ ಸಗಣಿ ಹಿಡಿದುಕೊಳ್ಳುತ್ತದೆಯೇ? ಹಿಡಿದರೂ ಶಾಖವನ್ನು ತಡೆಯಬಹುದೇ ಎಂಬ ಬಗ್ಗೆ ಖಚಿತ ವೈಜ್ಞಾನಿಕ ಮಾಹಿತಿ ಇರುವುದಿಲ್ಲ.

Advertisements

ಗೋಮೂತ್ರ ಸೇವನೆ ಅನೇಕ ರೋಗಗಳಿಗೆ ಮದ್ದು ಎಂಬ ನಂಬಿಕೆ ಪೂರ್ವದಿಂದಲೂ ಇದ್ದರೂ, ಈ ಬಗ್ಗೆ ಸುಮಾರು ಎಂಟು ವರ್ಷಗಳಿಂದ ಸಂಶೋಧನೆಗಳು ಹೆಚ್ಚಾಗಿವೆ. ಈ ಸಂಶೋಧನೆಗಳು ಗೋಮೂತ್ರವು ಹೇಗೆ ಆರೋಗ್ಯಕ್ಕೆ ಉಪಯೋಗ ಎಂಬುದನ್ನು ವೈಜ್ಞಾನಿಕವಾಗಿ ಸ್ಪಷ್ಟ ಪಡಿಸುವುದಕ್ಕಿಂತ ಹೆಚ್ಚಾಗಿ ವಾಟ್ಸ್ಯಾಪ್ ವಿಶ್ವವಿದ್ಯಾಲಯಗಳಲ್ಲಿ ನಮ್ಮ ಪ್ರೀತಿಯ ಹಸುವಿನ ಗಂಜಲ ಮತ್ತು ಸಗಣಿಗೆ ಪ್ರಚಾರವು ಹೆಚ್ಚಾಗುವಂತೆ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಅನೇಕರು ಹಸುವಿನ ಸಗಣಿ ಮತ್ತು ಗಂಜಲವನ್ನು ಮೈಗೆ ಬಳಿದುಕೊಂಡು ‘ಗೋಸಗಣಿ ಚಿಕಿತ್ಸೆ’ ಮಾಡಿಕೊಂಡ ವಿಡಿಯೋಗಳು ನೆನಪಾಗಬಹುದು. ಈ ಚಿಕಿತ್ಸೆಯಿಂದ ಕೋವಿಡ್ ವಾಸಿಯಾಯಿತೆ? ಗೊತ್ತಿಲ್ಲ!

ವಾಟ್ಸ್ಯಾಪ್ ಸುದ್ದಿಗಳಷ್ಟೇ ಅಲ್ಲದೆ ಅನೇಕ ನಾಯಕರುಗಳು (ಪ್ರಜ್ಞಾ ಠಾಕೂರ್, ಶಂಕರ್‌ಭಾಯಿ ವಗದ್, ಆಶ್ವಿನಿ ಚೌಬೆ, ಸಂಜಯ್ ಸಿಂಘ್) ಗೋಮೂತ್ರ ಸೇವನೆಯಿಂದ ಕ್ಯಾನ್ಸರ್ ವಾಸಿಯಾಗುವುದೆಂದು ಖಚಿತ ಹೇಳಿಕೆ ನೀಡಿದ್ದಾರೆ. ಆದರೆ, ಕ್ಯಾನ್ಸರ್ ವಾಸಿಯಾಗಿರುವ ಬಗ್ಗೆ ವೈಜ್ಞಾನಿಕವಾಗಿ ಪ್ರಮಾಣಿಕರಿಸಿದ ಖಚಿತ ಮಾಹಿತಿ ನೀಡಿರುವುದಿಲ್ಲ. ಇನ್ನೂ ಕೆಲ ನಾಯಕರಂತೂ ಗೋಮೂತ್ರದಲ್ಲಿ ಪ್ಲೂಟೋನಿಯಮ್ ಇದೆ, ಅಸ್ತಮಾ ವಾಸಿಯಾಗುತ್ತದೆ, ಅದು ಕೊಹಿನೂರ್ ವಜ್ರಕ್ಕಿಂತ ಹೆಚ್ಚು ಬೆಲೆಯುಳ್ಳದ್ದು….. ಇತ್ಯಾದಿಯಾಗಿ ಹೇಳುತ್ತಾ ಬಂದಿದ್ದಾರೆ. ಇವೆಲ್ಲಾ ಸುದ್ಧಿಗಳು ಯಥೇಚ್ಚವಾಗಿ ಸುದ್ಧಿ ಮಾಧ್ಯಮಗಳಲ್ಲಿ ಹರಿದಾಡಿ ಜನರಲ್ಲಿ ಇಗಾಗಲೇ ಇದ್ದ ನಂಬಿಕೆಯನ್ನು ತಮ್ಮ ಆರೋಗ್ಯಕ್ಕೂ ವಿಸ್ತರಿಸಿಕೊಳ್ಳುವಂತೆ ಮಾಡಿದೆ.

ಕೇಂದ್ರದ ಬಿಜೆಪಿ ಸರ್ಕಾರವು ಹೆಚ್ಚಿನ ಆಸಕ್ತಿ ವಹಿಸಿ ಇದರ ಸಂಶೋಧನೆಗೆ ಹಲವು ಇಲಾಖೆಗಳನ್ನು ತೊಡಗಿಸಿದೆ. ಅವೈಜ್ಞಾನಿಕ ಸುದ್ಧಿಗಳ ಪ್ರೇರಣೆಯಿಂದ ಜನರು ಮೋಸಹೋಗುವುದನ್ನು ತಡೆಯಲು ವೈಜ್ಞಾನಿಕ ಸಂಶೋಧನೆಗಳ ಅಗತ್ಯವಿದ್ದು, ಸರ್ಕಾರದ ಈ ಪ್ರಯತ್ನವು ಸ್ವಾಗತಾರ್ಹವಾಗಿದೆ. ಕಳೆದ ಸುಮಾರು ಒಂದು ದಶಕದಿಂದ, ವಿಜ್ಞಾನ ಮತ್ತು ತಂತ್ರ ಜ್ಞಾನ, ಕೃಷಿ ಸಂಶೋಧನೆ, ಆರೋಗ್ಯ ಸಂಶೋಧನೆ, ಕೈಗಾರಿಕೆ ಸಂಶೋಧನಾ ಕೌನ್ಸಿಲ್, ವೈಜ್ಞಾನಿಕ ಮತ್ತು ಕೈಗಾರಿಕಾ ಅಧ್ಯಯನ, ಬಯೋ ಟೆಕ್ನಾಲಜಿ – ಹೀಗೆ ಅನೇಕ ಇಲಾಖೆಗಳು ಮತ್ತು ಆಯುಷ್ ಸಚಿವಾಲಯವು ಗೋಮೂತ್ರ ಸಂಶೋಧನೆಯಲ್ಲಿ ತೊಡಗಿಕೊಂಡಿವೆ. ಇದಲ್ಲದೆ ರಾಷ್ಟ್ರೀಯ ಕಾಮಧೇನು ಆಯೋಗವನ್ನು ರಚಿಸಿದ್ದು, ಪ್ರಾರಂಭಿಕ ಉದ್ಯಮಗಳಿಗೆ ಶೇ 60 ಸಹಾಯಧನ ಘೋಷಿಸಲಾಗಿದೆ.

ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುತ್ತಿರುವ ಈ ಸಂಶೋಧನೆಗಳು ಎತ್ತ ಸಾಗಿವೆ ?

2021ರಲ್ಲಿ ಗುಜರಾತಿನ ಸೌರಾಷ್ಟ್ರ ವಿಶ್ವವಿದ್ಯಾಲಯದ ಕೆಲವು ವಿಜ್ಞಾನಿಗಳು ಸಂಶೋಧನೆ ನಡೆಸಿ ತಯಾರಿಸಿದ ಸಗಣಿಯ ಚಿಪ್ (ವಿದ್ಯುನ್ನಾನ ಬಿಲ್ಲೆ) ಮೊಬೈಲ್‌ನಿಂದ ಹೊರಸೂಸುವ ವಿಕಿರಣದಿಂದ ರಕ್ಷಣೆ ನೀಡುತ್ತದೆಂದು ಹೇಳಲಾಗುತ್ತದೆ. ಇದನ್ನು ಮಾಜಿ ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷರಾಗಿದ್ದ ವಲ್ಲಬ್‍ಭಾಯಿ ಕಥೇರಿಯಾರವರು ಬಿಡುಗಡೆಗೊಳಿಸಿ ಸುದ್ಧಿ ಮಾಡುತ್ತಾರೆ! ಆದರೆ, ನಂತರವೇನು? ಗೊತ್ತಿಲ್ಲ!! ಭಾರತಕ್ಕೆ ಅತಿ ದೊಡ್ಡ ಮಾರುಕಟ್ಟೆ ಆಗಬಹುದಿದ್ದ ಮತ್ತು ಉದ್ಯೋಗ ಹೆಚ್ಚಿಸುವಂತಹ ಇಷ್ಟೊಂದು ಮಹತ್ವದ ವಸ್ತುವನ್ನು ಪೇಟೆಂಟ್ ಮಾಡಿ ಮಾರುಕಟ್ಟೆಗೆ ತರಲಿಲ್ಲವೇಕೆ? ಈ ಸಂಶೋಧನೆಯನ್ನು ಇನ್ನಿತರ ವಿಜ್ಞಾನಿಗಳು ಅಲ್ಲಗೆಳೆದಿದ್ದು, ಸಂಶೋಧನೆಯ ವಿಧಾನ ಮತ್ತು ವೈಜ್ಞಾನಿಕ ಖಚಿತತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ.

2019ರಲ್ಲಿ ಉತ್ತರ ಪ್ರದೇಶದ ಪಶುವೈದ್ಯ ವಿಜ್ಞಾನ ಮತ್ತು ಪಶುಸಂಗೋಪನಾ ಕಾಲೇಜಿನ ನಾಲ್ಕು ಅಧ್ಯಾಪಕರ ತಂಡವು ಪ್ರಕಟಿಸಿದ ಸಂಶೋಧನಾ ಲೇಖನದ ಪ್ರಕಾರ ಗೋಮೂತ್ರವು ಸಕ್ರಿಯವಾದ ಜೈವಿಕ ಪೆಪ್ಟೈಡಿಸ್‍ಗಳನ್ನು ಹೊಂದಿದ್ದು, ಅವು ಅಂಟಿ-ಮೈಕ್ರೋಬಿಯಲ್ ಕ್ರಿಯೆಗೆ ಸಹಕಾರಿಯಾಗಿರುವುದಲ್ಲದೆ, ಅಂಟಿಅಕ್ಷಿಡೆಂಟ್ ಮೌಲ್ಯವನ್ನೂ ಸಹ ಹೊಂದಿರುತ್ತದೆ ಎಂದು ಹೇಳಲಾಗಿದೆ. ಆದರೆ ಇದು ಮಾನವ ಸೇವನೆಗೆ ಯೋಗ್ಯವೇ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲವೆನ್ನಲಾಗಿದೆ.

ಗೋಮೂತ್ರದಲ್ಲಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಅಂಶಗಳ ಪತ್ತೆಯಲ್ಲಿ 2016ರಿಂದ ಆಯುಷ್ ಸಚಿವಾಲಯವು ತೊಡಗಿಕೊಂಡಿದ್ದು, ಇನ್ನೂ ಗುರುತರವಾದ ಅವಿಷ್ಕಾರವು ಹೊರಬರಬೇಕಿದೆ. 2018ರಲ್ಲಿ ಗುಜರಾತಿನ ಜುನಾಘಡ್ ಕೃಷಿವಿದ್ಯಾಲಯವು ಗೋಮೂತ್ರದಲ್ಲಿ ನಾಲ್ಕು ಬಗೆಯ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಅಂಶಗಳು ಇರುವುದಾಗಿ ತಮ್ಮ ಸಂಶೋಧನೆಯಲ್ಲಿ ಕಂಡುಬಂದಿದೆಯೆಂದು ಹೇಳಿದ್ದರೂ, ಆ ಬಗ್ಗೆ ವೈಜ್ಞಾನಿಕ ಪುರಾವೆಗಳನ್ನು ನೀಡಿರುವುದಿಲ್ಲವೆಂದು ವರದಿಯಾಗಿದೆ.

ಐಐಟಿ – ಬಾಂಬೆ ಹಾಗೂ ಜೆ.ಡಿ. ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜು – ನಾಗಪುರ ಇಲ್ಲಿನ ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿ ನಡೆಸಿದ ಅಧ್ಯಯನದಲ್ಲಿ ಗೋಮೂತ್ರವು ವಿಷಕಾರಿಯಲ್ಲದ ದ್ರವವಾಗಿದ್ದು, ಸುಲಭವಾಗಿ ಜೀರ್ಣವಾಗುವ ಇದನ್ನು ಕ್ಯಾನ್ಸರ್‌ಗೂ ಬಳಸಲಾಗುತ್ತಿದೆ ಎಂಬಿತ್ಯಾದಿಯಾಗಿ ಹೇಳಿಕೊಂಡಿರುವ ಈ ಲೇಖನವು ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ, ತಾಂತ್ರಿಕ ಮತ್ತು ಎಂಜಿನಿಯರಿಂಗ್ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದು ಇತರೆ ಅಧ್ಯಯನಗಳನ್ನು ಅವಲೋಕಿಸಿ, ಭಾರತದಲ್ಲಿನ ವಿವಿಧ ಹಸು ತಳಿಗಳು ಮತ್ತವುಗಳ ಉಪಯೋಗ ಇತ್ಯಾದಿ ಕುರಿತು ಹೇಳುತ್ತಾ, ಜಗತ್ತಿನಾದ್ಯಂತ ಔಷಧಿಯಾಗಿಯೂ ಬಳಸುವ ಗೋಮೂತ್ರವು ಮನುಷ್ಯನ ಗ್ರಹಿಕೆಯನ್ನೂ ಸುಧಾರಿಸುತ್ತದೆಂದು ಹೇಳಿಕೊಳ್ಳುತ್ತದೆ!? ಆದರೆ ಇದೆಲ್ಲವು ಹೇಗೆ, ಯಾವ ಸಂದರ್ಭದಲ್ಲಿ ಮತ್ತು ಯಾವ ರೀತಿ ನಡೆಯುತ್ತದೆ ಎಂಬ ವಿವರಗಳು ಇರುವುದಿಲ್ಲ.

Untitled design 2023 06 19T213453 844
ವಿ. ಕಾಮಕೋಟಿ

ಇಂತಹ ಉನ್ನತ ವಿದ್ಯಾ ಸಂಸ್ಥೆಗಳಿಂದ ಹೀಗೆ ಅಧ್ಯಯನಗಳು ಹೊರಬರುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಯಲ್ಲಿ ಪ್ರಕಟವಾಗುವುದು ಒಂದು ಸೋಜಿಗವೇ ಸರಿ. ಅದರಂತೆ ಕಳೆದ ಜನವರಿಯಲ್ಲಿ ಮತ್ತೊಂದು ಸೋಜಿಗ ನಡೆಯುತ್ತದೆ. ಮದ್ರಾಸ್ ಐಐಟಿಯು ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಯಾಗಿದ್ದು, ಇದರ ನಿರ್ದೇಶಕರಾದ ವಿ. ಕಾಮಕೋಟಿಯವರು ಗೋಮೂತ್ರವು ಔಷಧಿ ಗುಣಗಳನ್ನು ಹೊಂದಿ, ಬ್ಯಾಕ್ಟೀರಿಯ ಮತ್ತು ಶಿಲೀಂದ್ರ (ಫಂಗಸ್) ನಿರೋಧಕವಾಗಿದೆ. ಇದು ಜೀರ್ಣಕಾರಿ ಲಕ್ಷಣಗಳನ್ನು ಹೊಂದಿದ್ದು, ನಾನು ಸಹ ಪಂಚಗವ್ಯದ ಮೂಲಕ ಇದನ್ನು ಬಳಸುತ್ತೇನೆ ಎಂಬಿತ್ಯಾದಿ ಹೇಳಿಕೆ ನೀಡಿ ಅದರ ಪುಷ್ಠೀಕರಣಕ್ಕೆ ಹಲವು ಸಂಶೋಧನಾ ಅಧ್ಯಯನಗಳನ್ನು ಹೆಸರಿಸಿ ವಿವಾದಕ್ಕೆ ಒಳಗಾಗುತ್ತಾರೆ.

ಇವರು ಹೆಸರಿಸಿದ ಒಂದು ಸಂಶೋಧನಾ ಅಧ್ಯಯನವು ಹೆಸರಾಂತ ಪತ್ರಿಕೆ ‘ನೇಚರ್’ ನಲ್ಲಿ ಪ್ರಕಟಿತವಾಗಿದೆ ಎಂದು ಹೇಳಿದ್ದರೂ ಅದು ನಿಜವಾಗಿ ವರದಿಯಾಗಿರುವುದು ‘ವೈಜ್ಞಾನಿಕ ವರದಿಗಳು’ ಎಂಬ ಪತ್ರಿಕೆಯಲ್ಲಿ. ಈ ಕುರಿತು ಹೋಮಿಬಾಬ ವಿಜ್ಞಾನ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಅಂಕಿತ್ ಸೂಲೆ ಇವರು ‘ಎಲ್ಲಾ ಸಸ್ತನಿಗಳ ಮೂತ್ರದಿಂದ ಪೆಪ್ಟೈಡಿಸ್ ಎಂಬ ಬ್ಯಾಕ್ಟೀರಿಯಾ ಹರಿದುಬರುತ್ತದೆ. ಇದು ಕತ್ತೆಯ ಮೂತ್ರದಲ್ಲಿಯೂ ಸಹ ಇರುತ್ತದೆ. ಮನುಷ್ಯರ ಆರೋಗ್ಯದ ಲಕ್ಷಣಗಳನ್ನು ತಿಳಿದುಕೊಳ್ಳುವ ಸಲುವಾಗಿ ಅವರ ಮೂತ್ರವನ್ನು ವಿಶ್ಲೇಷಣೆ ಮಾಡುವಂತೆ, ಗೋಮೂತ್ರದ ವಿಶ್ಲೇಷಣೆಯನ್ನೂ ಸಹ ಮಾಡಲಾಗಿದೆಯೇ ಹೊರತು, ಅದಕ್ಕೂ ಮೀರಿ ಮತ್ತೇನನ್ನೂ ಈ ಅಧ್ಯಯನದಲ್ಲಿ ಹೇಳಿಲ್ಲ ಎಂದಿರುವುದು ವರದಿಯಾಗಿದೆ. ಹಸುವಿನ ಸಗಣಿ ಮತ್ತು ಗೋಮೂತ್ರವನ್ನು ಗೊಬ್ಬರವಾಗಿ ಬಳಸಿದಾಗ ಉಪಯೋಗವಿದೆ ನಿಜ, ಹಾಗೆಂದು ಮನುಷ್ಯನು ಅದನ್ನು ಸೇವಿಸಲಾಗದು. ಬ್ಯಾಕ್ಟೀರಿಯಾ ನಾಶಪಡಿಸಲು ಬ್ಲಿಚಿಂಗ್ ಪುಡಿ ಬಳಸುತ್ತೆವೆಂದು, ಅದನ್ನು ಔಷಧಿಯಂತೆ ಕುಡಿಯಲು ಬಳಸಲಾಗದು ಎಂದಿದ್ದಾರೆ ಅಂಕಿತ್ ಸೂಲೆಯವರು.

ವಿ.ಕಾಮಕೋಟಿಯವರು ತಮ್ಮ ಹೇಳಿಕೆಗೆ ಬೆಂಬಲಿತವಾಗಿ ನೀಡಿದ ಇನ್ನೊಂದು ಸಂಶೋಧನಾ ಲೇಖನವು ಗೋಮೂತ್ರವು ಅನೇಕ ರೋಗಗಳನ್ನು ವಾಸಿಮಾಡುತ್ತದೆಂದೂ, ಅದು ಉತ್ತಮ ಜೈವಿಕವಿಸ್ತರಣೆ (ಬಯೋಎನ್‍ಹಾನ್ಸರ್) ಆಗಿದ್ದು, ಅಮೇರಿಕಾವು ಗೋಮೂತ್ರದ ಔಷಧಿಯುಕ್ತ ಗುಣಗಳಿಗೆ ಪೇಟೆಂಟ್ ನೀಡಿದೆ ಎಂದೆಲ್ಲಾ ಹೇಳಿದ್ದರೂ, ಇದರ ಗುಣವನ್ನು ಸಾಬೀತುಗೊಳಿಸಲು ಇನ್ನೂ ಹೆಚ್ಚಿನ ಅಧ್ಯಯನ ನಡೆಸಿ, ಜನರಲ್ಲಿ ಗೋಮೂತ್ರ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದಷ್ಟೇ ಹೇಳಿದೆ ಎನ್ನಲಾಗಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸ್‍ಸಿ) ಸೂಕ್ಷ್ಮ ಜೀವ ವಿಜ್ಞಾನ ಮತ್ತು ಕೋಶ ಜೀವಶಾಸ್ತ್ರ ವಿಭಾಗದ ಪ್ರೊಫೆಸರ್ ದೀಪ್ಶೀಕಾ ಚಕ್ರವರ್ತಿ ಇವರು ಯಾವುದೇ ಮೂತ್ರ ಸೇವನೆಯು ಆರೋಗ್ಯಯುತ ವ್ಯಕ್ತಿಯ ಆರೋಗ್ಯಕ್ಕೂ ಅತಿ ಹಾನಿಕರವಾಗಿದೆ ಎಂದು ಹೇಳುತ್ತಾ, ಈ ಇನ್ನೊಂದು ಲೇಖನದ ಗುಣಮಟ್ಟವನ್ನು ಶಂಕಿಸಿ ದಿ ಹಿಂದು ಪತ್ರಿಕೆಗೆ ಲಿಖಿತವಾಗಿ ತಿಳಿಸಿರುವ ಬಗ್ಗೆ ವರದಿಯಾಗಿದೆ.

Gomutra Benefits Benefits of Drinking Cow Urine Daily

2022ರಲ್ಲಿ ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಭೋಜ್ ರಾಜ್ ಸಿಂಗ್ ಇವರು ಹಸು ಮತ್ತು ಎತ್ತುಗಳಲ್ಲಿ ಕನಿಷ್ಠ 14 ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾಗಳಿದ್ದು, ಆ ಮೂತ್ರವು ಇನ್ನಾವುದೇ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು (ಅಂಟಿ ಬ್ಯಾಕ್ಟೀರಿಯಾದಂತೆ) ತಡೆಯಲು ಸಾಧ್ಯವಿಲ್ಲ ಎಂದಿರುವುದು ವರದಿಯಾಗಿದೆ. ಗೋಮೂತ್ರ ಬ್ಯಾಕ್ಟೀರಿಯಾಗಳ ಸೋಂಕಿಗೆ ಒಳಗಾದರೆ, ಅಂತಹವರು ಮಾರಣಾಂತಿಕ ಸ್ಥಿತಿ ತಲುಪಬಹುದು ಎಂದಿದ್ದಾರೆ. ಔಷಧವಾಗಿ ಮಾರ್ಪಟ್ಟ ಮೂತ್ರವನ್ನು ಪರೀಕ್ಷೆಗೆ ಒಳಪಡಿಸಿಲ್ಲ ಎಂಬ ಟೀಕೆ ಕೇಳಿಬಂದ ಕಾರಣ, ಭೋಜ್ ರಾಜ್ ಸಿಂಗ್ ತಂಡವು ಮತ್ತೊಮ್ಮೆ ಔಷಧವಾಗಿ ಮಾರ್ಪಟ್ಟ ಮೂತ್ರವನ್ನೇ ಪರೀಕ್ಷಿಸಿ, ಇದೇ ಫಲಿತಾಂಶ ಪಡೆದಿರುವ ಬಗ್ಗೆಯೂ ಸಹ ವರದಿ ಆಗಿರುತ್ತದೆ.

ಕಾಮಕೋಟಿಯವರು ಆಗಸ್ಟ್ 2020ರಲ್ಲಿ ಪ್ರಕಟಿಸಿದ ಮತ್ತೊಂದು ಸಂಶೋಧನಾ ಪತ್ರಿಕೆಯನ್ನು ತಮ್ಮ ಹೇಳಿಕೆಗೆ ಪುರಾವೆಯಾಗಿ ನೀಡಿದ್ದರು. ಅದರಲ್ಲಿ ಗೋಮೂತ್ರವು ಒಂದು ದೈವಿಕ ಔಷಧಿಯಾಗಿದ್ದು, ಇದು ಕ್ಯಾನ್ಸರ್ ಮತ್ತು ಏಡ್ಸ್‌ ನಂತಹ ಇನ್ನೂ ಅನೇಕ ರೋಗಗಳನ್ನು ವಾಸಿಮಾಡುತ್ತದೆಂದು ಹೇಳಲಾಗಿದೆ. ಈ ಬಗ್ಗೆ ವಿಚಾರಿಸಿದಾಗ, ಕಾಮಕೋಟಿಯವರು ಇದು ಸಂಶೋಧನಾ ಪತ್ರಿಕೆಯಲ್ಲ, ನಂಬಿಕೆಗಳ ಆಧಾರದಲ್ಲಿ ಬರೆದ ಸಾಂಪ್ರದಾಯಿಕ ಸಾಹಿತ್ಯದಿಂದ ಸಂಗ್ರಹಿಸಲಾದ ಲೇಖನವಾಗಿದೆ ಎಂದಿರುವುದನ್ನು ದಿ ಹಾರ್ಮೋನಿಕ್ ಟೈಮ್ಸ್ ಕಳೆದ ಜನವರಿ 24ರಂದು ವರದಿ ಮಾಡಿದೆ.

ವೈದ್ಯರ ಸಂಘದ ಜನರಲ್ ಸೆಕ್ರೆಟರಿ ಡಾ ಜಿ ಆರ್ ರವಿಂದ್ರನಾಥ ಇವರು ಗೋಮೂತ್ರವು ಜ್ವರ ಮತ್ತು ಉದರ ಕಿವುಚುವಿಕೆಯನ್ನು ವಾಸಿಮಾಡುತ್ತದೆ ಎಂಬ ಕಾಮಕೋಟಿಯವರ ಹೇಳಿಕೆಯನ್ನು ಕಟುವಾಗಿ ವಿರೋಧಿಸಿದ್ದಾರೆ. ಗೋಮೂತ್ರದಲ್ಲಿರುವ ಇ-ಕೋಲಿಯೆಂಬ ಬ್ಯಾಕ್ಟೀರಿಯಾವು ಹೆಚ್ಚು ಸೋಂಕನ್ನು ಉಂಟುಮಾಡುವ ಮೂಲಕ ವಾಂತಿ ಮತ್ತು ಬೇಧಿಯನ್ನು ತರುತ್ತದೆ ಎಂದಿರುವ ಅವರು, ಕಾಮಕೋಟಿಯವರು ಐಐಟಿ ವಿದ್ಯಾಸಂಸ್ಥೆಯನ್ನು ರಾಜಕೀಯ ಉದ್ದೇಶವನ್ನು ಹರಡಲು ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿರುವುದಾಗಿ ನ್ಯೂಸ್ ಚಕ್ಕರ್ ವರದಿ ಮಾಡಿದೆ.

ಜನರ ತೆರಿಗೆ ಹಣದಲ್ಲಿ ಈ ಪರಿಯಾಗಿ ಸಂಶೋಧನೆಗಳು ನಡೆಯುತ್ತಿವೆ. ಇವೆಲ್ಲವೂ ರೋಗ ವಾಸಿಯಾಯಿತು ಎಂದು ಹೇಳಿಕೊಳ್ಳುವ ಅಲೊಂದು ಇಲ್ಲೊಂದು ಕಥೆಗಳ ಆಧಾರದಲ್ಲಿ, ಅಥವಾ ಜನರು ಬಳಸುತ್ತಿದ್ದಾರೆ ಅಥವಾ ನಂಬಿದ್ದಾರೆ ಎಂದೋ, ಅಥವಾ ಆಯುರ್ವೇದ ಶಾಸ್ತ್ರಗಳಲ್ಲಿ ಹೇಳಲಾಗಿದೆ ಎಂದೋ ಮತ್ತು ಗೋಮೂತ್ರದಲ್ಲಿ ಅನೇಕ ರೋಗನಿರೋಧಕ ಅಂಶಗಳಿವೆ ಎಂಬ ಕಾರಣಕ್ಕಾಗಿ ಗೋಮೂತ್ರ ಸೇವನೆಯು ರೋಗ ಪರಿಹಾರಕ ಎಂದು ಹೇಳಿಕೊಳ್ಳುತ್ತಿವೆ. ಈ ಸಂಶೋಧನೆ ಮತ್ತು ಪ್ರಯೋಗಗಳು ಸಿಮೀತ ಮಟ್ಟದಲ್ಲಿ ನಡೆದಿದ್ದು, ಅವು ಮುಂದುವರೆದು ದೊಡ್ಡ ಮಟ್ಟದ ಕ್ಲಿನಿಕಲ್ ಹಂತದಲ್ಲಿ ಪ್ರಯೋಗಗೊಳ್ಳುತ್ತಿಲ್ಲ. ಬದಲಿಗೆ, ರೋಗ ಪರಿಹಾರಗಳಿಗೆ ಗೋಮೂತ್ರವು ಹೊಂದಿರುವ ಸಂಭಾವ್ಯ ಸಾಮರ್ಥ್ಯದ ಬಗೆಗಿನ ಹಳೆಯ ಮಾಹಿತಿಯನ್ನೇ ಮತ್ತೆ ವಿಸ್ತರಿಸಿ ಹೇಳುತ್ತಿವೆಯೇ ಹೊರತು, ಅದನ್ನು ವೈಜ್ಞಾನಿಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣೀಕರಿಸಲು ಇನ್ನೂ ಸಾಧ್ಯವಾಗಿಲ್ಲ ಎನ್ನುವುದೇ ನಿಜಸ್ಥಿತಿಯಾಗಿದ್ದು, ಇದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

ನಿಯಂತ್ರಿತ ಅಥವಾ ಪಾಂಡಿತ್ಯಪೂರ್ಣ ಪೀರ್ ವಿಮರ್ಶೆಗಳಿಂದ ಪ್ರತಿಪಾದಿತಗೊಂಡ ವಿದ್ವತ್‍ಪೂರ್ಣ ವೈಜ್ಞಾನಿಕ ಲೇಖನಗಳನ್ನು ತರುವ ಸಾಮರ್ಥ್ಯ ನಮ್ಮ ಈ ಶ್ರೇಷ್ಟ ಶಿಕ್ಷಣ ಸಂಸ್ಥೆಗಳಿಗಿಲ್ಲವೇ? ಗೋಮೂತ್ರದಿಂದ ಯಾವ ಅಂಶಗಳು, ಯಾವ ರೋಗವನ್ನು, ಯಾವ ರೀತಿ ವಾಸಿ ಮಾಡುತ್ತದೆ ಮತ್ತು ಅದನ್ನು ಯಾವ ರೀತಿಯಲ್ಲಿ ಸೇವಿಸಬೇಕು ಎಂಬುದನ್ನು ಈ ಸಂಶೋಧನೆಗಳು ಪುರಾವೆಯುಕ್ತವಾದ ವೈಜ್ಞಾನಿಕ ಪ್ರಯೋಗಗಳ ಮೂಲಕ ಪ್ರಮಾಣೀಕರಿಸಿದ ಫಲಿತಾಂಶವನ್ನು ಅಂತಾರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳ ಮುಂದೆ ಪ್ರಸ್ತುತಪಡಿಸುತ್ತಿಲ್ಲವೇಕೆ? ಸಂಶೋಧನೆಗಳಲ್ಲಿ ಕಂಡುಬಂದ ಗೋಮೂತ್ರದ ರೋಗನಿರೋಧಕ (ಅಂಟಿ-ಬಯೋಟಿಕ್, ಅಂಟಿ ಫಂಗಲ್, ಅಂಟಿ-ಅಕ್ಷಿಡೆಂಟ್, ಅಂಟಿ-ಮೈಕ್ರೊಬಿಯಲ್ ಇತ್ಯಾದಿ) ಅಂಶಗಳನ್ನು ಔಷಧಿಯಾಗಿ ಪರಿವರ್ತಿಸುವ ಪ್ರಯತ್ನಗಳು ಯಾಕೆ ನಡೆಯುತ್ತಿಲ್ಲ? ಕ್ಯಾನ್ಸರ್‌ನಂತಹ ಕಾಯಿಲೆಗಳು ವಾಸಿಯಾಗುವುದಾದರೆ, ಅದನ್ನು ಬಳಸುವ ಬಗ್ಗೆ ಗಂಭೀರ ಚರ್ಚೆ ಮತ್ತು ಕೆಲಸಗಳು ಮುಂದುವರಿಯದೇ, ಕೇವಲ ಒಂದು ವಿಜ್ಞಾನ ಪತ್ರಿಕೆಗೆ ಲೇಖನ ಬರೆದು ಪ್ರಕಟಿಸಿದರೆ ಸಾಕೇ? ಅಥವಾ ಈಗಾಗಲೇ ‘ರೋಗನಿರೋಧಕ’ ಎಂದು ಪ್ರಚಾರಗೊಳಿಸಿರುವ ಸುದ್ಧಿಯನ್ನು ಸತ್ಯವೆಂದು ಸಾಬೀತು ಪಡಿಸಲು ಮಾಡುತ್ತಿರುವ ಪ್ರಯತ್ನಗಳೇ?

ಇತ್ತಿಚೆಗೆ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾದ ಪಿಯೂಶ್ ಗೋಯಲ್ ಅವರು ಚೈನಾವು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮೇಲುಗೈ ಸಾಧಿಸಿರುವಾಗ, ಭಾರತದ ಸ್ಟಾರ್ಟಪ್‌ಗಳು ಹೆಚ್ಚಿನದೇನನ್ನು ಮಾಡುತ್ತಿಲ್ಲ, ಸಂಶೋಧನೆಗಳು ಹೊಸ ತಂತ್ರಜ್ಞಾನ ಅಥವಾ ವಸ್ತುಗಳನ್ನು ಹುಟ್ಟುಹಾಕಿಲ್ಲ ಎಂಬುದಾಗಿ ಹೇಳಿರುವುದು ನಿಜವಾದರೂ, ಅದಕ್ಕೇ ಪೂರಕ ಪರಿಸರದ ವಾತಾವರಣವನ್ನು ಕಲ್ಪಿಸಲಾಗಿದೆಯೇ ಎಂಬುದು ವಿಮರ್ಶೆಗೆ ಒಳಪಡಬೇಕಿದೆ. ಅವಿಷ್ಕಾರಗಳು ಹೊರಬರಲು ಸಂಶೋಧನೆ ಮತ್ತು ಅಭಿವೃದ್ಧಿ ವಲಯಕ್ಕೆ ಸಾಕಷ್ಟು ಹಣಕಾಸು ಒದಗಿಸಬೇಕಾಗುತ್ತದೆ. 2023-24ರ ಎಕಾನಾಮಿಕ್ ಸರ್ವೆ ಪ್ರಕಾರ ಈ ವಲಯಕ್ಕೆ ನಿಗದಿಪಡಿಸಿದ ಬಜೆಟ್ ಕೇವಲ ಒಟ್ಟು ಜಿಡಿಪಿಯ 0.64% ಆಗಿದ್ದರೆ, ಚೈನಾವು 2.41% ಮತ್ತು ಅಮೆರಿಕ 3.47%ನ್ನು ನಿಗದಿಪಡಿಸಿರುತ್ತವೆ. ಭಾರತವು ನಿಗದಿಪಡಿಸಿರುವ ಈ ಚಿಕ್ಕ ಮೊತ್ತವೂ ಸಹ ಮೇಲಿನಂತಹ ವ್ಯರ್ಥ ಸಂಶೋಧನೆಗಳಿಗೆ ವ್ಯಯವಾಗುತ್ತಿದ್ದರೆ, ಉಳಿದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುವುದಾದರೂ ಹೇಗೆ?

ಗೋಮೂತ್ರ ಮತ್ತು ಸಗಣಿಯ ಉಪಯೋಗವಿಲ್ಲವೆಂದು ಹೇಳುತ್ತಿಲ್ಲ. ಇದು ಕೃಷಿಗೆ ಅತ್ಯಂತ ಉಪಯುಕ್ತವೆಂದು ಸಾಬಿತಾಗಿರುವ ಪುರಾತನ ವಿಷಯ. ಅಂತೆಯೇ, ಹಸುವಿನ ಬಗೆಗಿನ ಜನರ ಭಾವನಾತ್ಮಕ ಅಥವಾ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸುವುದು ಈ ಲೇಖನದ ಉದ್ದೇಶವಲ್ಲ.

ಆದರೆ, ಇನ್ನೂ ಸೂಕ್ತ ವೈಜ್ಞಾನಿಕ ಪುರಾವೆಗಳಿಲ್ಲದ ಗೋಮೂತ್ರವನ್ನು ಕೆಲವು ಔಷಧ ಅಂಗಡಿಗಳು ಮಾರುತ್ತಿದ್ದು, ಇದು ಜನರ ಆರೋಗ್ಯಕ್ಕೆ ಹಾನಿಕಾರಕವಾದ ಕಾರಣ ಅತ್ಯಂತ ಕಳಕಳಿಯ ವಿಷಯವಾಗಿದೆ. ರೋಗಪರಿಹಾರಕವೆಂದು ವೈಜ್ಞಾನಿಕವಾಗಿ ಇನ್ನೂ ಖಚಿತವಾಗದ ಗೋಮೂತ್ರದ ಮಾರಾಟಕ್ಕೆ ಅನುಮತಿ ದೊರಕಿರುವ ಬಗ್ಗೆ ಅನುಮಾನಗಳಿದ್ದು, ಈ ಬಗ್ಗೆ ಸರ್ಕಾರವು ವಿಚಾರಣೆ ನಡೆಸುವುದು ಅಗತ್ಯವಿದೆ.

ವೈಜ್ಞಾನಿಕ ದೃಷ್ಟಿಕೋನ ಮತ್ತು ಸೂಕ್ತ ಸಂಶೋಧನಾ ಕ್ರಮವನ್ನು ಹೊಂದಿರಬೇಕಾದ ಈ ದೇಶದ ಶ್ರೇಷ್ಠ ಶಿಕ್ಷಣಸಂಸ್ಥೆಗಳೂ ಸಹ ವೈಜ್ಞಾನಿಕ ಪುರಾವೆಗಳಿಲ್ಲದೆ ಇನ್ನೂ ಸಾಬೀತಾಗದ ವಿಷಯವನ್ನು ಹರಡುವುದರಲ್ಲಿ ವಾಟ್ಸ್ಯಾಪ್‌ ವಿಶ್ವವಿದ್ಯಾಲಯದ ಸಮನಾಗಿ ಭಾಗಿಯಾಗುತ್ತಿರುವುದು ದುರಂತವಾದರೆ, ಈ ಬಗೆಗಿನ ಸರ್ಕಾರದ ಮೌನವು ಚಿಂತನೆಯ ವಿಷಯವಾಗಿದೆ.

ಲತಾಮಾಲ
ಲತಾಮಾಲ
+ posts

ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X