ಸಣ್ಣ ನೀರಾವರಿ ಇಲಾಖೆ ಸಚಿವ ಎನ್ ಎಸ್ ಬೋಸರಾಜು ಅವರನ್ನು ವಿಧಾನ ಪರಿಷತ್ತಿನ ಸಭಾನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸೋಮವಾರ ಪತ್ರ ಬರೆದು, ಎನ್ ಎಸ್ ಬೋಸರಾಜು ಅವರನ್ನು ವಿಧಾನ ಪರಿಷತ್ತಿನ ಸಭಾನಾಯಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡಲಾಗಿದೆ. ಈ ಕುರಿತು ಸೂಕ್ತ ವಿಧಿ ವಿಧಾನಗಳನ್ನು ಅನುಸರಿಸಬೇಕು” ಎಂದು ಕೋರಿದ್ದಾರೆ.
ಬೋಸರಾಜು ಆಯ್ಕೆ ಬಗ್ಗೆ ಟ್ವೀಟ್ ಮಾಡಿ ಶುಭಾಶಯ ತಿಳಿಸಿರುವ ಸಿದ್ದರಾಮಯ್ಯ, “ವಿಧಾನ ಪರಿಷತ್‌ನ ಸಭಾನಾಯಕರಾಗಿ ನಾಮನಿರ್ದೇಶನಗೊಂಡಿರುವ ಸಂಪುಟ ಸಹೋದ್ಯೋಗಿ ಎನ್ ಎಸ್ ಬೋಸರಾಜು ಅವರಿಗೆ ಅಭಿನಂದನೆಗಳು. ಮೇಲ್ಮನೆಯಲ್ಲಿ ನಮ್ಮ ಸರ್ಕಾರದ ನೀತಿ ನಿರ್ಧಾರಗಳನ್ನು ಅತ್ಯಂತ ಸಮರ್ಥವಾಗಿ ಮಂಡಿಸಲಿದ್ದೀರಿ ಎಂಬ ವಿಶ್ವಾಸವಿದೆ” ಎಂದಿದ್ದಾರೆ.
ಧನ್ಯವಾದ ತಿಳಿಸಿದ ಭೋಸರಾಜು
“ವಿಧಾನ ಪರಿಷತ್ತಿನ ಸಭಾನಾಯಕನ ಸ್ಥಾನ ನೀಡಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಪಕ್ಷದ ಹಿರಿಯರಿಗೆ ತುಂಬು ಹೃದಯದ ಧನ್ಯವಾದಗಳು. ಪಕ್ಷ ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ” ಎಂದು ಟ್ವೀಟ್ ಮೂಲಕ ಬೋಸರಾಜು ಧನ್ಯವಾದ ಹೇಳಿದ್ದಾರೆ.