- ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಮಗಳ ಕನಸು ನನಸು ಮಾಡಲು ಮಗಳಿಗೆ ಸಹಕಾರ ನೀಡಿದ್ದ ಪೋಷಕರು
ರಾಜಧಾನಿ ಬೆಂಗಳೂರಿನಲ್ಲಿ ಪದವಿ ಪೂರ್ವ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಟ್ಯೂಷನ್ಗೆಂದು ತಂದೆ ಜತೆಗೆ ಸ್ಕೂಟರ್ನಲ್ಲಿ ತೆರಳುವಾಗ ಖಾಸಗಿ ಬಸ್ ಢಿಕ್ಕೆ ಹೊಡೆದಿದ್ದು, ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.
ದಿಶಾ (18) ಮೃತಪಟ್ಟ ವಿದ್ಯಾರ್ಥಿನಿ. ಸೋಮವಾರ ಬೆಳಿಗ್ಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಟ್ಯೂಷನ್ ಸೆಂಟರ್ಗೆ ತೆರಳುವ ವೇಳೆ ಜಾಲಹಳ್ಳಿ ಕ್ರಾಸ್ ಬಳಿ ಈ ಘಟನೆ ಸಂಬವಿಸಿದೆ.
ದಿಶಾ ಮಲ್ಲೇಶ್ವರದ ಎಂಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಳು. ಎಂಜಿನಿಯರ್ ಆಗಬೇಕೆಂದು ಆಸೆ ಇಟ್ಟುಕೊಂಡಿದ್ದಳು. ಹಾಗಾಗಿ, ಪ್ರತಿ ದಿನ ಬೆಳಿಗ್ಗೆ ಟ್ಯೂಷನ್ಗೆ ತೆರಳುತ್ತಿದ್ದಳು. ಮಗಳ ಕನಸನ್ನು ನನಸು ಮಾಡಲು ಪೋಷಕರು ಕೂಡ ಮಗಳಿಗೆ ಸಹಕಾರ ನೀಡುತ್ತಿದ್ದರು.
“ದಿಶಾ ತನ್ನ ತಂದೆಯೊಂದಿಗೆ ಯಶವಂತಪುರದ ಕಡೆಗೆ ಚಲಿಸುತ್ತಿದ್ದಳು. ಅದೇ ಮಾರ್ಗದಲ್ಲಿ ಖಾಸಗಿ ಬಸ್ ಚಲಿಸುತ್ತಿತ್ತು. ಸ್ಕೂಟರ್ ಸರ್ವೀಸ್ ರಸ್ತೆಯಲ್ಲಿ ಚಲಿಸುತ್ತಿದ್ದರೆ, ಖಾಸಗಿ ಬಸ್ ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿತ್ತು. ಸಿಗ್ನಲ್ ಬಿಟ್ಟಾಗ ಬಸ್ ಚಾಲಕ ಏಕಾಏಕಿ ಸರ್ವೀಸ್ ರಸ್ತೆಗೆ ಪಲ್ಟಿ ಹೊಡೆದಿದೆ. ದ್ವಿಚಕ್ರ ವಾಹನ ಬಸ್ಗೆ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನ ದಿಶಾ ಮೇಲೆ ಬಿದ್ದಿದೆ. ಈ ವೇಳೆ ಆಕೆಯ ಕಾಲಿಗೆ ಬಲವಾದ ಪೆಟ್ಟು ಬಿದ್ದು, ಮೂಳೆ ಕಾಣಿಸುತ್ತಿತ್ತು. ಸ್ಥಳೀಯರು ತಕ್ಷಣ ಆಕೆಯನ್ನು ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ” ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
“ಆಸ್ಪತ್ರೆ ಸಿಬ್ಬಂದಿ ದಿಶಾಳನ್ನು ಮತ್ತೊಂದು ಆಸ್ಪತ್ರೆಗೆ ಸೇರಿಸಬೇಕೆಂದು ಹೇಳಿದ ಹಿನ್ನೆಲೆ, ಆಂಬುಲೆನ್ಸ್ನಲ್ಲಿ ಗೊರಗುಂಟೆಪಾಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ವಿದ್ಯಾರ್ಥಿನಿ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ” ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬ್ರ್ಯಾಂಡ್ ಬೆಂಗಳೂರು | ನಾಗರಿಕ ಸಮಾಜ ಸಂಸ್ಥೆಗಳಿಂದ ಹರಿದು ಬಂದ ಸಲಹೆ ಸೂಚನೆಗಳು
“ದಿಶಾ ಅವರ ತಂದೆ ಸತೀಶ್ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದು, ಅವರು ರಸ್ತೆಯ ಇನ್ನೊಂದು ಬದಿಯಲ್ಲಿ ಬಿದ್ದಿದ್ದರು” ಎಂದು ಮತ್ತೊಬ್ಬರು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಬಸ್ ಚಾಲಕನ ಅಚಾತುರ್ಯದಿಂದಲೇ ಈ ಘಟನೆ ಸಂಬವಿಸಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಿ ಬಸ್ ಅನ್ನು ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಬಸ್ ಚಾಲಕನನ್ನು ಬಂಧಿಸಲಾಗಿದ್ದು, ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.