ಹಲವು ವರ್ಷಗಳಿಂದ ಸರ್ಕಾರದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೆಂದ್ರಗಳಲ್ಲಿ ಎರಡು ವರ್ಷಗಳ ಕಾಲ ಎ.ಎನ್.ಎಂ ತರಬೇತಿ ಪಡೆದು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಆರೋಗ್ಯ ಸೇವೆಯಲ್ಲಿ ಆರೋಗ್ಯ ಸಹಾಯಕಿಯರ ಮಾತ್ರ ಮಹತ್ವದಾಗಿದೆ. ಎಎನ್‌ಎಂ ತರಬೇತಿ ಪಡೆದವರು ದಶಕಗಳಿಂದಲೂ ಗ್ರಾಮಗಳಲ್ಲಿ ವೈದ್ಯರಂತೆಯೇ ಪ್ರಾಥಮಿಕ ಚಿಕಿತ್ಸೆ, ಆರೋಗ್ಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಪ್ರಸಕ್ತ 2024-25 ನೇ ಸಾಲಿನಲ್ಲಿ ಕಿ.ಮ.ಆ.ಸ ತರಬೇತಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿನಿಯರನ್ನು ರಾಜ್ಯ ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಸಂಸ್ಥೆ ಬೆಂಗಳೂರು ದಿನಾಂಕ: 22-04-2025ರಂದು ಎ.ಎನ್.ಎಂ ತರಬೇತಿಗಳನ್ನು ನಿಲ್ಲಿಸಲಾಗುವುದು ರಾಜ್ಯದ 18 ಜಿ.ಎನ್.ಎಂ ತರಬೇತಿ ಕೇಂದ್ರಗಳಿಗೆ ಈ ವಿದ್ಯಾರ್ಥಿನೀಯರು ಸೇರ್ಪಡೆಗೊಳ್ಳಬಹುದುದೆಂದು ಅಧಿಕೃತ ಜ್ಞಾಪನಾ ಪತ್ರದ ಹೊರಡಿಸಲಾಗಿದೆ. ಎರಡು ವರ್ಷಗಳ ಈ ಕೋರ್ಸ್‌ಗೆ ಜನವರಿ ತಿಂಗಳಲ್ಲಿಯೇ ಪ್ರವೇಶ ಪಡೆದು, ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿ ಯರು, ಇದೇ ತಿಂಗಳ 28ರಿಂದ ಅಂತರಿಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ತರಬೇತಿ ಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಕೇಂದ್ರಗಳನ್ನೇ ಮುಚ್ಚಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ ಎಂದು ಡಿವೈಫ್ ಐ ಪೃಥ್ವಿ ತಿಳಿಸಿದರು.

ಹಾಸನದ ಕಿ.ಮ.ಆ.ಸ ತರಬೇತಿ ಕೇಂದ್ರದಲ್ಲಿ 19 ವಿದ್ಯಾರ್ಥಿನಿಯರು ತರಬೇತಿ ಪಡೆಯುತ್ತಿದ್ದು, ಇವರು ಹಾಸನದ ಗ್ರಾಮೀಣ ಭಾಗದ ಹಾಗು ದೂರದ ಕಲಬುರಗಿ, ಹಾವೇರಿ ಮತ್ತಿತರ ಜಿಲ್ಲೆಯವರೂ ಇದ್ದಾರೆ. ಸರ್ಕಾರದ ಈ ಕ್ರಮದಿಂದಾಗಿ ಈ ಎಲ್ಲರ ಭವಿಷ್ಯ ಮತ್ತು ಬದುಕು ಅತಂತ್ರವಾಗುತ್ತದೆ. ಈ ವಿಧ್ಯಾರ್ಥಿಗಳು ಇಲಾಖೆಯ ನಿಯಮಾವಳಿಗಳ ಆಧಾರದಲ್ಲಿಯೇ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಏಕಾಏಕಿಯಾಗಿ ಮಧ್ಯಂತರದಲ್ಲಿ ಸರ್ಕಾರವೇ ತನ್ನ ನಿಯಮಗಳನ್ನು ಬದಲಿಸಿ ತರಬೇತಿ ವಿಧ್ಯಾರ್ಥಿಗಳ ಬದುಕಿನಲ್ಲಿ ಚಲ್ಲಾಟವಾಡುತ್ತಿದೆ. ರಾಜ್ಯದ ಒಟ್ಟು 20 ತರಬೇತಿ ಕೇಂದ್ರಗಳ 580 ವಿಧ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗ ಪಡೆಯುವ ಅವಕಾಶ ನಿರಾಕರಿಸಲಾಗಿದೆ. ಇಲಾಖೆಯು ತರಬೇತಿಯನ್ನು ನಿಯಮಗಳಿಗೆ ವಿರುದ್ಧವಾಗಿ ಕಾನೂನು ಬಾಹಿರವಾಗಿ ಅರ್ಧಕ್ಕೆ ಸ್ಥಗಿತಗೊಳಿಸುತ್ತಿರುವುದಲ್ಲದೇ ವಿಧ್ಯಾರ್ಥಿಗಳಿಗೆ ಬೆದರಿಸಿ ಅವರಿಂದ ಬಲವಂತವಾಗಿ ಸಮ್ಮತಿ ಪತ್ರಕ್ಕೆ ಸಹಿ ಪಡೆದುಕೊಂಡಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದರು.
ಎ.ಎನ್.ಎಂ. ತರಬೇತಿ ಎರಡು ವರ್ಷ ಇರುತ್ತದೆ. ಕನ್ನಡದಲ್ಲೂ ಪಾಠ, ಓದಿಗೆ ಅವಕಾಶ ಇದೆ. ಜಿ.ಎನ್.ಎಮ್. ತರಬೇತಿ ಮೂರು ವರ್ಷ ಇರುತ್ತದೆ. ಇದರಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಮಾತ್ರ ಅವಕಾಶವಿದೆ. ಗ್ರಾಮಿಣ ಪ್ರದೇಶದಿಂದ ಬಂದು ಕನ್ನಡ ಮಧ್ಯಮ ಕಲಿತ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. 2024ರ ನವೆಂಬರ್‌ನಲ್ಲಿ ಅರ್ಜಿ ಕರೆದಾಗ ಪದವಿ ವಿಧ್ಯಾಭ್ಯಾಸವನ್ನು ಅರ್ಧದಲ್ಲಿಯೇ ತೊರೆದು ಎ.ಎನ್.ಎಂ. ತರಬೇತಿಗೆ ವಿಧ್ಯಾರ್ಥಿಗಳು ಸೇರಿದ್ದಾರೆ. ಅರ್ಜಿ ಕರೆಯುವ ಮೊದಲೇ ಈ ನಿರ್ಧಾರ ತೆಗೆದುಕೊಂಡಿದ್ದರೆ ವಿಧ್ಯಾರ್ಥಿಗಳು ಅಲ್ಲೇ ಓದು ಮುಂದುವರಿಸುತ್ತಿದ್ದರು. ಈಗ ಸರ್ಕಾರವೇ ಬಡ, ದಲಿತ ಮತ್ತು ಗ್ರಾಮೀಣ ಭಾಗದ ವಿಧ್ಯಾರ್ಥಿನಿಯರ ಬದುಕನ್ನು ಅತಂತ್ರಕ್ಕೆ ತಳ್ಳಿದೆ. ಹಾಸನದಲ್ಲಿ ಜಿ.ಎನ್.ಎಂ ತರಬೇತಿ ಕೇಂದ್ರ ಹಾಸನದಲ್ಲಿ ಇಲ್ಲ. ಆದ್ದರಿಂದ ವಿದ್ಯಾರ್ಥಿನಿಯರಿಗೆ ಮೂರು ವರ್ಷಗಳ ಜಿ.ಎನ್.ಎಂ. ತರಬೇತಿ ಪಡೆಯುವುದು ಸಾಧ್ಯವಾಗುವುದಿಲ್ಲ. ಸರ್ಕಾರದ ಈ ಕ್ರಮ ಅತ್ಯಂತ ಅವೈಜ್ಞಾನಿಕವಾಗಿದೆ.
ಸರ್ಕಾರ ಮತ್ತು ರಾಜ್ಯ ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಸಂಸ್ಥೆಯು ಕಿ.ಮ.ಆ.ಸ ತರಬೇತಿ ಕೇಂದ್ರದ ಎ.ಎನ್.ಎಂ ತರಬೇತಿಯನ್ನು ರದ್ದುಗೊಳಿಸುವ ಆದೇಶವನ್ನು ತಕ್ಷಣದಲ್ಲೇ ಹಿಂಪಡೆಯಬೇಕು. ಈಗಾಗಲೇ ಕಿ.ಮ.ಆ.ಸ ತರಬೇತಿ ಕೇಂದ್ರದ ಎರಡು ವರ್ಷಗಳ ಎ.ಎನ್.ಎಂ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿನಿಯರ ಯಾವುದೇ ತೊಂದರೆಯಾಗದಂತೆ ಕೋರ್ಸ್ ಮುಂದುವರೆಸಬೇಕು. ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಈ ಎಲ್ಲರಿಗೂ ಉದ್ಯೋಗಾವಕಾಶ ಸಿಗುವಂತೆ ನೇಮಕಾತಿ ಮಾಡಿಕೊಳ್ಳಬೇಕೆಂದು ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟವು ಒತ್ತಾಯಿಸಲಾಯಿತು.
ಇದನ್ನೂ ಓದಿದ್ದೀರಾ?ಹಾಸನ l ಆನೆ ದಾಳಿ: ತೋಟದ ಮಾಲೀಕ ಸಾವು
ಈ ವೇಳೆ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ, ರೂಪಾ ಹಾಸನ, ಧರ್ಮೇಶ್ , ಟಿ. ಆರ್ ವಿಜಯ್ ಕುಮಾರ್ , ಎಚ್. ಆರ್ ನವೀನ್ ಕುಮಾರ, ಪೃಥ್ವಿ ಎಂ.ಜಿ., ಹಾಗೂ ಇನ್ನಿತರರಿದ್ದರು.