ವಿಧಾನಸಭೆಯಲ್ಲಿ ದಾಂಧಲೆ ನಡೆಸಿ, ಗದ್ದಲ ಸೃಷ್ಟಿಸಿ ಅಮಾನತಾಗಿರುವ 18 ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸಬೇಕೆಂದು ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ಪೀಕರ್ ಯು ಟಿ ಖಾದರ್ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರು, ಅಮಾನತನ್ನು ರದ್ದುಗೊಳಿಸಲು 18 ಶಾಸಕರು ಸಲ್ಲಿಸಿರುವ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕೆಂದು ಸಲಹೆ ನೀಡಿದ್ದಾರೆ.
ಇತ್ತೀಚೆಗೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಶಾಸಕರ ಅಮಾನತನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಸೂಚಿಸುವಂತೆ ಮನವಿ ಮಾಡಿತ್ತು. ಈ ಬೆನ್ನಲ್ಲೇ, ಮುಖ್ಯಮಂತ್ರಿ ಮತ್ತು ಸ್ಪೀಕರ್‌ಗೆ ರಾಜ್ಯಪಾಲರು ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.
“ಪ್ರಮುಖ ವಿರೋಧ ಪಕ್ಷಕ್ಕೆ ಸೇರಿದ 18 ಶಾಸಕರ ಅಮಾನತು ಆದೇಶವನ್ನು ಮರುಪರಿಶೀಲಿಸಬೇಕು. ರಾಜ್ಯದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಮೂಲ ತತ್ವಗಳನ್ನು ಎತ್ತಿಹಿಡಿಯಬೇಕು. ಅದಕ್ಕಾಗಿ, ಅಮಾನತುಗೊಂಡ ಶಾಸಕರು ಮತ್ತೆ ಜನ ಪ್ರತಿನಿಧಿಗಳಾಗಿ ತಮ್ಮ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಅಮಾನತು ರದ್ದುಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಹೇಳಿದ್ದಾರೆ.
“ಅಮಾನತು ರದ್ದತಿಯ ಕುರಿತು ಸರ್ಕಾರ ತೆಗೆದುಕೊಂಡ ನಿರ್ಧಾರ ಅಥವಾ ಕ್ರಮಗಳ ಬಗ್ಗೆ ನಮ್ಮ ಗಮನಕ್ಕೆ ತರಬಹುದು” ಎಂದೂ ರಾಜ್ಯಪಾಲರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ರಾಜ್ಯ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಗದ್ದಲ ಸೃಷ್ಟಿಸಿದ್ದರು. ಅಶಿಸ್ತು ಮತ್ತು ಸ್ಪೀಕರ್‌ಗೆ ಅಗೌರವ ತೋರಿದ್ದಕ್ಕಾಗಿ 18 ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಮಾರ್ಚ್ 21ರಂದು ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದರು. ಸಭೆಯಿಂದ ಹೊರಹೋಗಲು ನಿರಾಕರಿಸಿದ ಶಾಸಕರನ್ನು ಮಾರ್ಷಲ್‌ಗಳು ಎಳೆದೊಯ್ದು ಹೊರಹಾಕಿದ್ದರು.