ವಾಹನಗಳು ಸಂಚರಿಸುವ ಜನದಟ್ಟಣೆಯ ರಸ್ತೆಗಳಿಗೆ ಅಂಟಿಕೊಂಡಿರುವ ವಿದ್ಯುತ್ ಕಂಬಗಳು ರಸ್ತೆಗೆ ಬಾಗಿಕೊಂಡಿದ್ದು, ಆಗಲೋ ಈಗಲೋ ನೆಲಕ್ಕುರುಳಿ ಬೀಳುವ ಸ್ಥಿತಿಯಲ್ಲಿರುವ ಪರಿಣಾಮ ಸಾರ್ವಜನಿಕರು, ವಾಹನ ಸವಾರರು ಆತಂಕದಲ್ಲಿ ಓಡಾಡುವಂತಾಗಿದೆ. ವಾಹನ ಸವಾರರು ಭಯದಿಂದಲೇ ಸಂಚರಿಸುವ ವಾತಾವರಣ ಸೃಷ್ಟಿಯಾಗಿದೆ.
ಧಾರವಾಡ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಲ್ಲಿ ಜನದಟ್ಟಣೆಯ ಮುಖ್ಯ ಮತ್ತು ಒಳದಾರಿಗಳಲ್ಲಿ ಇರುವ ವಿದ್ಯುತ್ ಕಂಬಗಳು ರಸ್ತೆಗೆ ಬೀಳುವಂತೆ ಬಾಗಿದ್ದು, ಜನರು ಜೀವಭಯದಲ್ಲಿ ಓಡಾಡುತ್ತಿದ್ದಾರೆ. ಆ ಪೈಕಿ ಕುಂದಗೋಳ ತಾಲೂಕಿನ ಸಂಶಿ-ಅತ್ತಿಗೇರಿ, ಬಸಾಪುರ, ಚಾಕಲಬ್ಬಿ-ನಲವಡಿ, ಕುಂದಗೋಳ-ಗುಡೇನಕಟ್ಟೆ, ಕಮಡೊಳ್ಳಿ-ರಾಮನಕೊಪ್ಪ, ತರ್ಲಘಟ್ಟ, ಕುಂದಗೋಳ-ಬಿಡನಾಳ ರಸ್ತೆ, ಅದಷ್ಟೇ ಅಲ್ಲದೇ ಹುಬ್ಬಳ್ಳಿ ತಾಲೂಕಿನ ನಲವಡಿ-ಉಮಚಗಿ ಮಾರ್ಗ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಕೆಲವು ಹಳ್ಳಿಗಳ ರಸ್ತೆ, ಕಲಘಟಗಿ ತಾಲೂಕಿನ ವಿವಿಧ ಗ್ರಾಮಗಳ ಮುಖ್ಯ ರಸ್ತೆಗಳಲ್ಲಿ ರಸ್ತೆಗೆ ಹೊಂದಿಕೊಂಡಿರು ವಿದ್ಯುತ್ ಕಂಬಗಳು ಬಾಗಿವೆ. ಇತ್ತೀಚಿಗೆ ಶುರುವಾದ ಮಳೆ, ಗಾಳಿಗೆ ಸಿಕ್ಕು ಮತ್ತಷ್ಟು ಬೀಳುವ ವಾತಾವರಣದಲ್ಲಿವೆ. ಸವಾರರು ಸಂಚರಿಸುವಾಗ ಬಾಗಿದ ಕಂಬಗಳು ಕುಸಿದು ಬಿದ್ದು, ಅನಾಹುತಗಳು ಸಂಭವಿಸಿದರೆ ಹೋದ ಜೀವಕ್ಕೆ ಜವಾಬ್ದಾರರು ಯಾರು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇನ್ನು ಕುಂದಗೋಳ ತಾಲೂಕಿನ ಸಂಶಿ-ಚಾಕಲಬ್ಬಿ ಮಾರ್ಗಮಧ್ಯದಲ್ಲಿ ಸುಮಾರು 15 ವಿದ್ಯುತ್ ಕಂಬಗಳು ಒಂದೇ ಕಡೆಗೆ ಗುಂಪಾಗಿರುವಂತೆ ಕ್ರೂಡಿಕರಣಗೊಂಡು, ವಿದ್ಯುತ್ ತಂತಿಗಳೂ ಹರಿದು ಜೋತುಬಿದ್ದಿವೆ. ಮತ್ತು ಅದೆಷ್ಟೋ ಹೊಲಗಳಲ್ಲಿರುವ ವಿದ್ಯುತ್ ಕಂಬಗಳು ಸಂಪೂರ್ಣ ಬಾಗಿದ್ದು ಹೊಲದಲ್ಲಿರುವ ರೈತರಿಗೆ ಏನಾದರೂ ಅನಾಹುತ ಸಂಭವಿಸಿದರೆ; ಯಾರೂ ಕೇಳುವವರೇ ಇರುವುದಿಲ್ಲ ಎನ್ನುತ್ತಾರೆ ರೈತರೊಬ್ಬರು. ವಿದ್ಯುತ್ ಕಂಬಗಳು ಬಾಗಿದುದರಲ್ಲಿ ಯಾರ ತಪ್ಪೂ ಇರುವುದಿಲ್ಲ. ಆದರೆ ಈ ಕುರಿತು ಸಂಬಂಧಪಟ್ಟ ಇಲಾಖೆಯು ಹಾಗಾಗ ಪರಿಶೀಲಿಸಿ, ಪರಿವೀಕ್ಷೀಸುತ್ತಿರಬೇಕು. ಅನಾಹುತ ಸಂಭವಿಸಿದ ಮೇಲೆ ಪರಿಹಾರ ಯಾರಿಗೆ ಬೇಕು? ಆದ್ದರಿಂದ ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕು ಎಂದು ಸಾರ್ವಜನಿಕರೊಬ್ಬರು ಮಾತನಾಡುತ್ತಿದ್ದರು.

ನಾವು ದಿನಂಪ್ರತಿ ಬೆಳಗಾದರೆ ಇದೇ ರಸ್ತೆ ಮಾರ್ಗವಾಗಿ ಹೊಲಕ್ಕೆ ಬರಬೇಕು. ಚಕ್ಕಡಿ ಗಾಡಿಯ ಮೂಲಕ ನಾವು ಬರುವಾಗ ಬಾಗಿದ ಕಂಬಗಳನ್ನು ಕಂಡರೆ ಭಯಯವಾಗುತ್ತದೆ. ಕೆಲವೊಂದು ಸಲ ಜೀವ ಕೈಯಲ್ಲಿ ಹಿಡಿದಂತೆ ಇರಬೇಕು. ಈಗಾಗಲೇ ಸಂಪೂರ್ಣ ರಸ್ತೆಗೆ ಬಾಗಿದ್ದ ಎರಡು ವಿದ್ಯುತ್ ಕಂಬಗಳನ್ನು ಅಧಿಕಾರಿಗಳು ಬಂದು ನೋಡಿದ ಮೇಲೆ ತೆಗಸಿದ್ದಾರೆ. ಆದರೆ; ಇನ್ನೂ ಎರಡು ಮೂರು ಕಂಬಗಳು ಹೀಗೆಯೇ ರಸ್ತೆಗೆ ಬಾಗಿದ ಸ್ಥಿತಿಯಲ್ಲಿವೆ. ಸಮಸ್ಯೆ ಆಗುವ ಮೊದಲು ಜಾಗೃತ ವಹಿಸಬೇಕು ಎಂದು ಕುಂದಗೋಳದಿಂದ ಬಿಡನಾಳ (ಹುಬ್ಬಳ್ಳಿ) ಕಡೆಗೆ ಹೋಗುವ ಮಾರ್ಗಮಧ್ಯದಲ್ಲಿ ರೈತರೊಬ್ಬರು ಹೇಳಿದರು.
ನಾವು ಬೈಕ್ ಮೂಲಕ ದಿನಂಪ್ರತಿ ಸಂಚರಿಸುವಾಗ ನಮ್ಮ ಮೇಲೆ ಬಿದ್ದು ಬಿಡುತ್ತದೋ ಏನೋ ಎಂಬಂತೆ ಬಾಗಿದ ವಿದ್ಯುತ್ ಕಂಬಗಳನ್ನು ನೋಡಿದರೆ ಬಹಳ ಭಯವಾಗುತ್ತದೆ. ಆದರೂ ಓಡಾಡಲೇಬೇಕು ಅನ್ನುವ ಅನಿವಾರ್ಯತೆ ಒಂದು ಕಡೆಗೆ. ಈಗ ಮಳೆಗಾಲ ಶುರುವಾಗಿದೆ. ವಿಪರೀತ ಗಾಳಿಯು ಬೀಸುತ್ತದೆ. ಸಾರ್ವಜನಿಕರು ಓಡಾಡುವಾಗಲೇ ಬಾಗಿದ ಕಂಬ ಬಿದ್ದರೆ; ಹೋದ ಜೀವ ಮರಳಿ ಬರುವುದಿಲ್ಲ ಎನ್ನುತ್ತಾರೆ ಸಂಶಿ-ಶಿಶುವಿನಾಳ ಮಾರ್ಗಮಧ್ಯದಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರೊಬ್ಬರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಪಹಲ್ಗಾಮ್ ದಾಳಿ; ಭಯೋತ್ಪಾದಕರ ದಾಳಿ ತಡೆಗೆ ಆಟೋ ಚಾಲಕರ ಒತ್ತಾಯ
ಈ ಕುರಿತು ಸಂಬಂಧಿಸಿದ ಅಧಿಕಾರಿಗಳು, ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಮುಂಜಾಗೃತೆ ವಹಿಸುವುದೆ? ಮುಂದೆ ಸಂಭವಿಸಬಹುದಾದ ಅನಾಹುತಗಳಿಗೆ ಕಡಿವಾಣ ಹಾಕುವುದೇ? ಎಂಬುದು ಕಾದುನೋಡಬೇಕಿದೆ.
