ಮೊದಲು ಕಲ್ಲಡ್ಕ ಪ್ರಭಾಕರ್ ಅವರು ಆರ್.ಎಸ್.ಎಸ್‌ನ ಸ್ವಯಂ ಸೇವಕರೊಂದಿಗೆ ಕಾಶ್ಮೀರಿ ಕಣಿವೆಯಲ್ಲಿ ಉಗ್ರಗಾಮಿಗಳ ಬಂದೂಕು ಹಿಡಿದು ನಿಲ್ಲಲಿ, ಆನಂತರ ಹಿಂದೂಗಳು ನಿಮ್ಮ ಹಿಂದೆ ಬರುತ್ತಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಶಿಡ್ಲಘಟ್ಟ ತಾಲೂಕಿನಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಸಚಿವರು, ಕಲ್ಲಡ್ಕ ಪ್ರಭಾಕರ್ ಅವರು ಮೊದಲು ಕಾಶ್ಮೀರದ ಬೆಟ್ಟದಲ್ಲಿ ಹೋಗಿ ಉಗ್ರಗಾಮಿಗಳ ಮುಂದೆ ನಿಂತುಕೊಳ್ಳಲಿ, ಅಮಾಯಕ ಹಿಂದೂ ಯುವಕರನ್ನು ಪ್ರಚೋದಿಸಿ, ಅವರ ಬದುಕು ಕಸಿದುಕೊಳ್ಳುವ ಯತ್ನ ಸಲ್ಲದು ಎಂದು ಹೇಳಿದರು.
ದೇಶದ ಸ್ವಾತಂತ್ರ‍್ಯಕ್ಕಾಗಿ ಜಾತಿ, ಮತ, ಧರ್ಮ ಭೇದ ಮರೆತು ಹೋರಾಟ ಮಾಡಿದ್ದೇವೆ. ಆನಂತರ ನಮಗೆ ಸ್ವಾತಂತ್ರ‍್ಯ ಸಿಕ್ಕಿದೆ. ಆದರೆ, ಭಾರತೀಯ ಜನತಾ ಪಾರ್ಟಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಹಿಂದೂ-ಮುಸ್ಲೀಂ ಎಂಬ ಭೇದಭಾವವನ್ನು ಸೃಷ್ಟಿಸಿ ದ್ವೇಷವನ್ನು ಬೆಳೆಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರಗಾರಿಕೆ ನಡೆಸುತ್ತಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಗೊಂದಲದ ವಾತಾವರಣವನ್ನು ನಿರ್ಮಾಣ ಮಾಡುವುದೇ ಬಿಜೆಪಿ ಪಕ್ಷ ಮತ್ತು ನಾಯಕರ ಸಾಧನೆಯಾಗಿದೆ ಎಂದು ಕಿಡಿಕಾರಿದರು.
ಕಾಶ್ಮೀರದಲ್ಲಿ ನಡೆದ ಘಟನೆಯ ವಿಚಾರದಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರಶ್ನೆ ಮಾಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಉಗ್ರಗಾಮಿಗಳನ್ನು ಸದೆಬಡಿಯಲು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿಯವರು ಸರ್ಕಾರದ ನಿರ್ಧಾರಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಸಹ ಬಿಜೆಪಿ ಅನಗತ್ಯವಾಗಿ ಗೊಂದಲದ ವಾತಾವರಣ ಸೃಷ್ಟಿಸಿದೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ ರಾಜ್ಯದಲ್ಲಿ ಜನಿವಾರ ಧರಿಸಿ ಪರೀಕ್ಷೆ ಬರೆಯಬಾರದು ಎಂದು ಆದೇಶ ಹೊರಡಿಸಿರಲಿಲ್ಲ. ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸರ್ಕಾರವನ್ನು ಬೊಟ್ಟು ಮಾಡುವುದು ಸೂಕ್ತವಲ್ಲ. ಜೊತೆಗೆ ಈ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ಅವರನ್ನು ಎಳೆಯುವುದು ಕೂಡ ಸಮಂಜಸವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಕಾಂಗ್ರೆಸ್ ಸರ್ಕಾರವನ್ನು ದರಿದ್ರ ಸರ್ಕಾರ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಪ್ರಾಥಮಿಕ ಮಾಹಿತಿ ಇಲ್ಲ ಎಂದು ಟೀಕೆ ಮಾಡಿದ್ದಾರೆ. ಇವರ ಭಾಷೆ, ಪದ ಬಳಕೆಯಿಂದ ಗೊತ್ತಾಗುತ್ತದೆ. ಇವರಿಗೆ ಎಷ್ಟರಮಟ್ಟಿಗೆ ಜ್ಞಾನ ಇದೆ ಎಂದು ವಾಗ್ದಾಳಿ ನಡೆಸಿದರು.
ರೈಲ್ವೆ ಇಲಾಖೆಯಲ್ಲಿ ಮಾಂಗಲ್ಯವನ್ನು ಧರಿಸಬಾರದು ಎಂದು ಆದೇಶವನ್ನು ಹೊರಡಿಸಿದ್ದನ್ನು ನಾನು ಪ್ರಶ್ನಿಸಿದ್ದಕ್ಕೆ ವಿರೋಧ ಪಕ್ಷದ ನಾಯಕರು ಕೆಂಡಾಮಂಡಲವಾಗಿದ್ದಾರೆ. ಅವರು ನನ್ನ ಬಗ್ಗೆ ಕೀಳುಮಟ್ಟದ ಭಾಷೆಯನ್ನು ಬಳಸಿ ಕೀಳು ಅಭಿರುಚಿಯನ್ನು ಜನತೆಗೆ ತೋರಿಸಿದ್ದಾರೆ. ಇದು ಅವರ ಘನತೆಗೆ ಗೌರವಕ್ಕೆ ಶೋಭೆ ತರುವುದಿಲ್ಲ. ಮುಂದಿನ ದಿನಗಳಲ್ಲಿ ವಾಸ್ತವಿಕ ವಿಚಾರಗಳನ್ನು ಜನರಿಗೆ ತಿಳಿಸುವಂತಹ ಕೆಲಸವನ್ನು ವಿರೋಧಪಕ್ಷದ ನಾಯಕರು ಮಾಡಲಿ. ಅದು ಬಿಟ್ಟು ಅಧಿಕಾರದಾಹಕ್ಕಾಗಿ ಜನರಲ್ಲಿ ಗೊಂದಲದ ವಾತಾವರಣ ಸೃಷ್ಟಿಸುವ ಕೆಲಸವನ್ನು ಕೈಬಿಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ. ಇವತ್ತು ನಾವು ಅಧಿಕಾರದಲ್ಲಿದ್ದೇವೆ. ಮುಂದೆ ಬೇರೆಯವರು ಬರಬಹದು. ಸಾರ್ವಜನಿಕರ ಸೇವೆ ಮಾಡುವುದು ನಮ್ಮ ಕರ್ತವ್ಯ ಆಗಬೇಕು. ಜನಗಳಿಗೆ ದಿಕ್ಕು ತಪ್ಪಿಸುವ ರಾಜಕಾರಣವನ್ನು ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಸಂಘ ಮುಖಂಡರ ವಿರುದ್ಧ ಅಸಮಾಧಾನ:
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ವಿಚಾರದಲ್ಲಿ ರೈತ ಸಂಘಗಳಲ್ಲಿ ದ್ವಂದ್ವ ನಿಲುವು ಹೆಚ್ಚಾಗಿದೆ. ಹಸಿರು ಶಾಲು ಹಾಕಿಕೊಂಡವರು ಮಾತ್ರ ರೈತರ ಮಕ್ಕಳು ಎಂದು ಭಾವನೆ ಮೂಡಿಸುವುದು ಸರಿಯಲ್ಲ. ನಾವು ರೈತರ ಮಕ್ಕಳೇ. ಕೈಗಾರಿಕೆ ಸ್ಥಾಪನೆ ಮಾಡುವ ವಿಚಾರದಲ್ಲಿ ರೈತರ ಸಲಹೆ ಸೂಚನೆಗಳನ್ನು ಪಡೆಯಲು ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ನಾನು ಮತ್ತು ಶಾಸಕರು ಕೆಲಸ ಮಾಡಿದ್ದೇವೆ. ಮಾಹಿತಿ ಸಂಗ್ರಹ ಮಾಡುವ ವೇಳೆ ಶೇ.25ರಷ್ಟು ಜನ ಬಂದಿಲ್ಲ. ರೈತರು ಸಹಿತ ಎಲ್ಲಾ ವರ್ಗದ ಜನರ ಹಿತವನ್ನು ಕಾಪಾಡುವುದೇ ನಮ್ಮ ಧರ್ಮ. ಆದರೆ ರೈತ ಸಂಘದ ಮುಖಂಡರುಗಳು ಸರ್ವಾಧಿಕಾರಿಗಳಂತೆ ವರ್ತಿಸುವುದನ್ನು ನಾವು ಸಹಿಸುವುದಿಲ್ಲ. ಇದುವರೆಗೆ ನಾವು ನಿಮಗೆ ಗೌರವ ಕೊಡುವಂತಹ ಕೆಲಸ ಮಾಡಿದ್ದೇವೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುವ ದುಸ್ಸಾಹಸ ಮಾಡಬೇಡಿ. ರೈತರ ಬಗ್ಗೆ ನನಗಿರುವ ಬದ್ಧತೆ ಬಗ್ಗೆ ಕುರಿತು ಪ್ರಶ್ನೆ ಮಾಡಲು ನಿಮಗೆ ಯಾವುದೇ ರೀತಿಯ ಅರ್ಹತೆ ಇಲ್ಲ. ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದೆ ಎಂದು ರೈತ ಸಂಘದ ಮುಖಂಡರ ಅಸಮಾಧಾನ ಹೊರಹಾಕಿದರು.
ಈ ಸಂದರ್ಭದಲ್ಲಿ ಶಾಸಕ ಮೇಲೂರು ರವಿಕುಮಾರ್, ತಾಲೂಕು ಪಂಚಾಯತಿ ಇಓ ಹೇಮಾವತಿ, ಗ್ರೇಡ್ ೨ ತಹಸೀಲ್ದಾರ್ ಅರುಂದತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ರೆಡ್ಡಿ, ಕಾಂಗ್ರೆಸ್ ಯುವ ಮುಖಂಡ ಸುಗುಟೂರು ನಾಗೇಶ್, ನಗರಭೆಯ ಅಧ್ಯಕ್ಷ ವೆಂಕಟಸ್ವಾಮಿ, ನವೀನ್ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಉಪಾಧ್ಯಕ್ಷರು, ಇನ್ನಿತರರು ಉಪಸ್ಥಿತರಿದ್ದರು.