ಮುಂಗಾರು ಮಳೆ ಒಂದು ತಿಂಗಳು ತಡವಾಗಿ ರಾಜ್ಯ ಪ್ರವೇಶಿಸಿದೆ. ಕಳೆದ ಐದು ದಿನಗಳಿಂದ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯಾದ್ಯಂತ ಹಲವಾರು ಪ್ರದೇಶದಲ್ಲಿ ಸಾಧಾರಣ ಮಳೆಯಾಗಲಿದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂದಿನ ದಿನಗಳಲ್ಲಿ ಸುರಿಯುವ ಮಳೆಯಿಂದಾಗಿ ಬರದ ಆತಂಕ ಮತ್ತು ಕುಡಿಯುವ ನೀರಿನ ಹಾಹಾಕಾರ ನೀಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಜುಲೈ 1ರಿಂದ ಮುಂಗಾರು ಚುರುಕಾಗಿದೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ ಕರಾವಳುಇ ಭಾಗದಲ್ಲಿ ಗಾಳಿಯು ವೇಗವಾಗಿ ಬೀಸಲಿದೆ. ಉತ್ತಮ ಮಳೆಯಾಗಲಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹವಾಮಾನ ಇಲಾಖೆಯ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಕರಾವಳಿ ಕರ್ನಾಟಕದಲ್ಲಿ 12-20 ಸೆ.ಮೀ.ವರೆಗೆ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶದ 17 ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಯಾವುದೇ ಮುನ್ನೆಚ್ಚರಿಕೆಯನ್ನು ಘೋಷಿಸಲಾಗಿಲ್ಲ. ಉತ್ತರ ಒಳನಾಡು ಪ್ರದೇಶದಲ್ಲಿ ಸಾಧಾರಣೆ ಮಳೆ ಬೀಳಲಿದೆ ಎಂದು ಇಲಾಖೆ ಹೇಳಿದೆ.
ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಿ ಅಲ್ಲಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.