ಪೊಲೀಸ್ ರಾಜ್ಯವೆಂಬ ಕುಖ್ಯಾತಿಯ ಹಣೆಪಟ್ಟಿ ಕಟ್ಟಿಕೊಂಡಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಕಸ್ಟಡಿ ಕೊಲೆ ಆರೋಪ ಕೇಳಿಬಂದಿದೆ. ಜೂಜಾಟದ ಶಂಕೆಯ ಮೇಲೆ ದಿನಗೂಲಿ ಕಾರ್ಮಿಕನನ್ನು ಬಂಧಿಸಿದ್ದ ಪೊಲೀಸರು, ಆತನನ್ನು ನಿರ್ದಯವಾಗಿ ಥಳಿಸಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ರತೌಲ್ ಗ್ರಾಮದ ನಿವಾಸಿ, 28 ವರ್ಷದ ಸಾಜಿದ್ ಅಬ್ಬಾಸಿಯನ್ನು ಜೂಜಾಟ ಆಡುತ್ತಿದ್ದ ಆರೋಪದ ಮೇಲೆ ಭಾನುವಾರ ಪೊಲೀಸರು ಬಂಧಿಸಿದ್ದರು. ಕೆಲವು ಗಂಟೆಗಳ ನಂತರ ಆತನನ್ನು ಬಿಡುಗಡೆ ಮಾಡಿದ್ದರು. ಯುವಕ ಹೊರ ಬಂದ ಅರ್ಧ ಗಂಟೆಯ ಬಳಿಕ ಸಾವನ್ನಪ್ಪಿದ್ದಾರೆ.
ಯುವಕನಿಗೆ ಪೊಲೀಸರು ಮನಸೋಯಿಚ್ಛ ಥಳಿಸಿದ್ದಾರೆ. ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ನೀಡಿದ್ದಾರೆ. ಇದರಿಂಗಾಗಿ ಗಾಯಗಳಾಗಿದ್ದು, ನೋವು ತಾಳಲಾರದೆ ಅ ಮೃತ ಪಟ್ಟಿದ್ದಾನೆ ಎಂದು ಮೃತ ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಪವನ್ನು ನಿರಾಕರಿಸಿರುವ ಪೊಲೀಸರು, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಸೋಮವಾರ ಅಮಾನತುಗೊಳಿಸಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಸಾಜಿದ್ ಅಬ್ಬಾಸಿನ್ನು ಬಂಧಿಸಿದ ಸ್ಥಳೀಯ ಪೊಲೀಸರು ಖೇಕ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪೋಸ್ಟ್‌ಗೆಕರೆದೊಯ್ದಿದ್ದಾರೆ. ಸ್ವಲ್ಪ ಸಮಯದ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅಬ್ಬಾಸಿ ಮೃತಪಟ್ಟಿದ್ದಾರೆ.
ಪೊಲೀಸ್ ಚೆಕ್ ಪೋಸ್ಟ್‌ನಲ್ಲಿ ತನ್ನ ಮಗನನ್ನು ಪೊಲೀಸರು ಅಮಾನುಷವಾಗಿ ಥಳಿಸಿದ್ದಾರೆ. ಆತನ ಸ್ಥಿತಿ ಹದಗೆಟ್ಟಾಗ ಬಿಡುಗಡೆ ಮಾಡಿದ್ದಾರೆ. ಮೂವರು ಪೊಲೀಸ್ ಪೇದೆಗಳು ಆತನನ್ನು ನಿರ್ದಯವಾಗಿ ಥಳಿಸುತ್ತಿರುವುದನ್ನು ಗ್ರಾಮಸ್ಥರು ಸಹ ನೋಡಿದ್ದಾರೆ ಎಂದು ಅಬ್ಬಾಸಿ ತಂದೆ ಬಾಬು ಅಬ್ಬಾಸಿ ಆರೋಪಿಸಿದ್ದಾರೆ.
ಅಬ್ಬಾಸಿ ಸಾವಿನ ಬಳಿಕ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಸ್ತೆ ತಡೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಬಂದ ಬಾಗ್‌ಪತ್ ಜಿಲ್ಲಾ ವರಿಷ್ಠಾಧಿಕಾರಿ ಅರ್ಪಿತ್ ವಿಜಯವರ್ಗಿಯ, ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವನೆ ನೀಡಿದ್ದಾರೆ. “ಅಬ್ಬಾಸಿಯನ್ನು ಜೂಜಾಟದ ಶಂಕೆಯ ಮೇಲೆ ಬಂಧಿಸಲಾಗಿತ್ತು. ಆದರೆ, ಪೊಲೀಸರ ಬಳಿ ಆತನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ, ಬಿಡುಗಡೆ ಮಾಡಿದ್ದಾರೆ” ಎಂದು ಎಸ್‌ಪಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮಣಿಪುರ ಹಿಂಸಾಚಾರ | ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿಸ್ತೃತ ವರದಿ ಸಲ್ಲಿಕೆಗೆ ಸುಪ್ರೀಂ ಕೋರ್ಟ್ ಸೂಚನೆ
“ಮೃತನ ಕುಟುಂಬಸ್ಥರು ದೂರು ದಾಖಲಿಸದ ಕಾರಣ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಘಟನೆಯ ಬಗ್ಗೆ ಈಗಾಗಲೇ ತನಿಖೆ ಪ್ರಾರಂಭಿಸಲಾಗಿದೆ. ಶವಪರೀಕ್ಷೆ ವರದಿಯ ನಂತರ ಸಾವಿನ ಕಾರಣವನ್ನು ಸ್ಪಷ್ಟಪಡಿಸಲಾಗುವುದು” ಎಂದು ಬಾಗ್‌ಪತ್ ಎಎಸ್‌ಪಿ ಮನೀಶ್ ಕುಮಾರ್ ಹೇಳಿದ್ದಾರೆ.
“ಇಸ್ಪೀಟ್ ಆಡುತ್ತಿದ್ದ ಜಾಗದಲ್ಲಿ ಅಬ್ಬಾಸಿ ನಿಂತಿದ್ದರು. ಅಲ್ಲಿಗೆ ಬಂದ ಮೂವರು ಪೊಲೀಸ್ ಪೇದೆಗಳು ಆತನೂ ಜೂಜಾಟ ಆಡುತ್ತಿದ್ದಾನೆಂದು ಭಾವಿಸಿ, ಎಳೆದೊಯ್ದರು. ಆತನಿಗೆ ಅಮಾನವೀಯ ಥಳಿಸಿದ್ದಾರೆ. ಆತನಿಗೆ ನಿಲ್ಲಲೂ ಸಾಧ್ಯವಾಗದೆ, ಬಾಯಲ್ಲಿ ನೊರೆ ಬರಲು ಪ್ರಾರಂಭವಾದ ಬಳಿಕ ಬಿಡುಗಡೆ ಮಾಡಿದ್ದಾರೆ” ಎಂದು ಮೃತನ ಸಹೋದರ ಮೊಹಮ್ಮದ್ ವಾಜಿದ್ ಅಬ್ಬಾಸಿ ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ 41 ಕಸ್ಟಡಿ ಕೊಲೆಗಳಾಗಿವೆ ಎಂದು ಅಂಕಿಅಂಶಗಳು ಹೇಳಿವೆ.