ಪಾಕಿಸ್ತಾನ ಸತತ 6ನೇ ದಿನವೂ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮು ಹಾಗೂ ಕಾಶ್ಮೀರದ ನಾಲ್ಕು ಗಡಿ ಜಿಲ್ಲೆಗಳಾದ್ಯಂತ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿ ಉದ್ದಕ್ಕೂ ಅಪ್ರಚೋದಿತ ಗುಂಡಿನ ನಡೆಸಿದೆ. ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.
ಸಣ್ಣ ಶಸ್ತ್ರಾಸ್ತ್ರಗಳೊಂದಿಗೆ ಗುಂಡಿನ ದಾಳಿ ಪ್ರಾರಂಭವಾಗಿದ್ದು, ಜಮ್ಮು ಜಿಲ್ಲೆಯ ಪರ್ಗ್ವಾಲ್ ವಲಯದ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಹಾಗೂ ರಾಜೌರಿ ಜಿಲ್ಲೆಯ ಸುಂದರ್‌ಬಾನಿ ಮತ್ತು ನೌಶೇರಾ ವಲಯಗಳಲ್ಲೂ ಗುಂಡಿನ ದಾಳಿ ನಡೆಸಿರುವ ವರದಿಯಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಪರ್ಗ್ವಾಲ್ ವಲಯದ ಅಂತಾರಾಷ್ಟ್ರೀಯ ಗಡಿಯನ್ನು ಪಾಕ್ ಉಲ್ಲಂಘಿಸಿದೆ. ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
“ಏಪ್ರಿಲ್ 29ರ ತಡರಾತ್ರಿ ಪಾಕಿಸ್ತಾನ ಸೇನಾ ನೆಲೆಗಳು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿರುವ ನೌಶೇರಾ, ಸುಂದರ್‌ಬಾನಿ ಮತ್ತು ಅಖ್ನೂರ್ ಸೆಕ್ಟರ್‌ಗಳ ಎದುರಿನ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದವು. ಇದಕ್ಕೆ ಭಾರತೀಯ ಸೇನೆ ತ್ವರಿತವಾಗಿ ತಕ್ಕ ಉತ್ತರ ನೀಡಿತ್ತು. ಕಾಶ್ಮೀರ ಕಣಿವೆಯ ಬಾರಾಮುಲ್ಲಾ ಮತ್ತು ಕುಪ್ವಾರ ಜಿಲ್ಲೆಗಳಲ್ಲಿನ ನಿಯಂತ್ರಣ ರೇಖೆಯಾದ್ಯಂತ ಮತ್ತು ಪರ್ಗ್ವಾಲ್ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಾದ್ಯಂತ ಪಾಕಿಸ್ತಾನಿ ನೆಲೆಗಳಿಂದಲೂ ಅಪ್ರಚೋದಿತ ಗುಂಡಿನ ದಾಳಿಯ ಘಟನೆಗಳು ವರದಿಯಾಗಿವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಗುಂಡಿನ ದಾಳಿ ಪ್ರಾರಂಭವಾಯಿತು. ನಂತರ ಪೂಂಚ್ ಹಾಗೂ ಅಖ್ನೂರ್ ವಲಯ ಅಲ್ಲಿಂದ ಮುಂದುವರೆದು, ರಾಜೌರಿ ಜಿಲ್ಲೆಯ ಸುಂದರ್‌ಬಾನಿ ಮತ್ತು ನೌಶೇರಾ ವಲಯಗಳಲ್ಲೂ ಗುಂಡಿನ ದಾಳಿ ನಡೆದಿದೆ. ಬಳಿಕ ಜಮ್ಮುವಿನ ಪರ್ಗ್ವಾಲ್ ವಲಯದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಪಡೆ ಗುಂಡು ಹಾರಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾಗವತ್ ಅಹಿಂಸೆಯ ಮಾತಾಡಿದ್ದಾರೆ; ಅಂದಮೇಲೆ ಸಿದ್ದರಾಮಯ್ಯರ ಹೇಳಿಕೆಯಲ್ಲಿ ತಪ್ಪೇನಿದೆ?
ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತು. ಇದಾದ ಸ್ವಲ್ಪ ಸಮಯದ ನಂತರ ಏಪ್ರಿಲ್ 24ರಂದು ರಾತ್ರಿ ಪಾಕಿಸ್ತಾನಿ ಪಡೆಗಳು ಕದನ ವಿರಾಮವನ್ನು ಉಲ್ಲಂಘಿಸಿ ಕಾಶ್ಮೀರ ಕಣಿವೆಯಿಂದ ಪ್ರಾರಂಭಿಸಿ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ವಿವಿಧ ಸ್ಥಳಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ಪ್ರಾರಂಭಿಸಿವೆ.
ಅದೇ ದಿನ ಪಾಕ್, ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ವ್ಯಾಪಾರ ವಹಿವಾಟುಗಳ ಸ್ಥಗಿತ, ವಾಘಾ ಗಡಿ ದಾಟುವಿಕೆಗೆ ನಿರ್ಬಂಧ ಹೇರಿತು.
2003ರಲ್ಲಿ ಕದನ ವಿರಾಮ
ಭಾರತ ಮತ್ತು ಪಾಕಿಸ್ತಾನ ಫೆಬ್ರವರಿ 2021ರಲ್ಲಿ ನವೀಕರಿಸಿದ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದವು. ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು 2003ರ ಕದನ ವಿರಾಮ ಒಪ್ಪಂದಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದರು. ಭಾರತ ಪಾಕಿಸ್ತಾನದ ಜೊತೆಗೆ 3,323 ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಇದರಲ್ಲಿ ಗುಜರಾತ್‌ನಿಂದ ಜಮ್ಮುವಿನ ಅಖ್ನೂರ್‌ವರೆಗೆ ಸುಮಾರು 2,400 ಕಿಮೀ ಅಂತಾರಾಷ್ಟ್ರೀಯ ಗಡಿ,ಜಮ್ಮುವಿನಿಂದ ಲೇಹ್‌ವರೆಗಿನ 740 ಕಿಮೀ ಉದ್ದದ ಎಲ್‌ಒಸಿ ಮತ್ತು ಸಿಯಾಚಿನ್ ಪ್ರದೇಶದಲ್ಲಿ 110 ಕಿಮೀ ವಾಸ್ತವಿಕ ನೆಲದ ಸ್ಥಾನ ರೇಖೆ ಸೇರಿವೆ.