ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಮಟಮಟ ಮಧ್ಯಾಹ್ನ. ಅಂಥ ಬಿಸಿಲಿನಲ್ಲಿ ಆ ಹಳ್ಳಿಯಲ್ಲಿ ಕೂಡ ಯಾರೂ ಮನೆಯಿಂದ ಹೊರಬೀಳಲಾರರು. ಆದರೆ ಶಾಸ್ತ್ರಿಗಳ ಸೊಸೆಯು ಮಧ್ಯಾಹ್ನ ಕುಡಿಯುವ ನೀರು ತರಲು ಊರ ಹೊರಗಿನ ಭಾವಿಗೆ ಹೊರಟಳು. ಏನು ದಿವ್ಯಮಾಡಿದಳು? ಎಂದು ಯಾರಾದರೂ ಕೇಳಬಹುದು. ಬಾವಿಯಿಂದ ಹಳ್ಳಿಯ ಕೊನೆಯ ಮನೆ ಅರ್ಧಮೈಲು ದೂರವಿತ್ತು. ಆಲದ ಹಾಗೂ ಹುಣಿಸೆಯ ಎರಡು ದೆವ್ವದಂಥ ಮರಗಳ ಹೊರತು ಆ ಭಾವಿಯ ಸಮೀಪಕ್ಕೆ ಬೇರೆ ಉಲಿವು ಯಾವುದೂ ಇರಲಿಲ್ಲ. ಹಳೆಯ ಕೋಟೆಯ ಹಾಗೂ ಕಂದಕದೊಳಗಿಂದ ಹೊರಬೀಳುವ ಕಾಡುಮಿಕಗಳು ಹಳ್ಳಕ್ಕೆ ನೀರು ಕುಡಿಯಲು ಹೊರಟಿದ್ದರೇನೋ ಅದೇ ಸದ್ದು ಭಾವಿಯ ಬಳಿ ಕೇಳಿಸಬೇಕು. ಆದರೆ ಆ ಸದ್ದು ಎಂಥ ಸದ್ದು! ಹೆದರಿಸುವ ಸದ್ದು. ಮರಗಳ ನೆರೆಯಾದರೂ ಆ ಭಾವಿಯ ಭಯಾನಕತೆಯನ್ನೆ ಹೆಚ್ಚಿಸುತ್ತಿದ್ದವು. ಕುಡಿಯುವ ನೀರಿನ ಭಾವಿಯು ಆ ಊರಿಗೆ ಅದೊಂದೆ. ಎಲ್ಲರಂತೆ ಶಾಸ್ತ್ರಿಗಳ ಮನೆಯವರೂ ಪ್ರಾತಃಕಾಲಕ್ಕೆ ತಮಗೆ ಬೇಕಾಗುವ ನೀರು-ನೀಡಿ ತಂದುಕೊಂಡಿದ್ದರು. ಆದರೆ ಮಡಿಯೊಳಗೆ ಇದ್ದ ಒಂದೇ ಒಂದು ಕೊಡವು ಶಾಸ್ತ್ರಿಗಳ ಮನೆಯ ಸಂದಿಯ ಸಮಾರಾಧನೆಯಲ್ಲಿ ಉರುಳಿತು. ಅದರಿಂದ ಅಡುಗೆಯ ಮನೆಯಲ್ಲಿಯೇ ಆದ ತೊಂದರೆ ಇರಲಿ, ಶಾಸ್ತ್ರಿಗಳ ಸೊಸೆ ನೀರಿಗೆ ಹೊರಡಬೇಕಾಯಿತು.
ಇದನ್ನು ಓದಿದ್ದೀರಾ?: ‘ಕ್ಷೀರಸಾಗರ’ ಅವರ ಕತೆ | ನಮ್ಮೂರಿನ ಪಶ್ಚಿಮಕ್ಕೆ
ಶಾಸ್ತ್ರಿಗಳ ಮನೆಯ ತೊಂದರೆಯನ್ನು ಅದನ್ನು ನೋಡಿದವರೆ ತಿಳಿಯಬಲ್ಲರು. ಪುರಾತನ ಕಾಲದಲ್ಲಿ ಬಹಳ ದೊಡ್ಡ ಮನೆಯಂತೆ. ಈಗ ಅಣ್ಣತಮ್ಮಂದಿರಲ್ಲಿ ನಿಜವಾಗಿಯೆ ನೂರಾರು ಪಾಲಾಗಿ ಅವರ ಪಾಲಿಗೆ ಎರಡುವರೆ ಗೇಣಿನ ತುಂಡೊಂದು ಬಂದಿತ್ತು. ಅಷ್ಟರಲ್ಲಿ ಅವರು, ಅವರ ಕುಟುಂಬ, ಹಿರಿಯ ಮಗ, ಸೊಸೆ, ವಿಧವೆಯಾಗಿ ಮನೆಗೆ ಬಂದ ತರುಣ ಮಗಳೊಬ್ಬಳು, ಇಷ್ಟು ಜನರು ಮಾನದಿಂದ ಬದುಕು ಮಾಡುತ್ತಿದ್ದರು. ಶಾಸ್ತ್ರಿಗಳ ದುರ್ದೈವದಿಂದ ಅವರ ಹಿರಿಯ ಮಗನು ವ್ಯಾಧಿಯಿಂದಲೋ ಬಾಧೆಯಿಂದಲೋ ಮನೆಯ ಒಂದು ಭಾಗವನ್ನು (ಇದ್ದ ಒಂದು ಅಡಕಲಕೋಣೆ) ಹಿಡಿದು ನರಳುತ್ತಿದ್ದ. ಚೊಚ್ಚಿಲ ಮೊಮ್ಮಗನು ಮೊನ್ನೆ ಮೊನ್ನೆ ಬಂದು ಅಡಿಗೆ ಮನೆಯ ಒಂದು ಭಾಗವನ್ನು ಕಟ್ಟಿಕೊಂಡಿದ್ದ. ಪಡಸಾಲೆಯೆಂಬ ಹೆಸರಿನ ಭಾಗವು (ಆ ಮನೆಗೆ ನಡುಮನೆಯೇ ಇರಲಿಲ್ಲ) ಶಾಸ್ತ್ರಿಗಳ ಅಧ್ಯಯನ-ಅಧ್ಯಾಪನ-ಶಯನ-ವಿಶ್ರಾಂತಿ ಇವೆಲ್ಲಕ್ಕೂ ಆಶ್ರಯವಾಗಿತ್ತು. ಮಡಿಯ ಸಾಮ್ರಾಜ್ಯವೆಲ್ಲ ಅಡಿಗೆಮನೆಯನ್ನು ಸೇರಿತ್ತು. ಅಲ್ಲಿಯೇ ಮೊಮ್ಮಗನು ಬಿಡಾರ ಬಿಟ್ಟಿದ್ದನು. ಅಡಿಗೆಯ ಒಲೆಯ ಉರಿಯನ್ನೇ ಧೂಪ-ದೀಪವೆಂದೂ, ಅದೇ ಅಡಿಗೆಯನ್ನೇ ನೈವೇದ್ಯ ಎಂದೂ ತೋರಿಸುವಷ್ಟು ಸಮೀಪ, ದೇವರ ಸಾನ್ನಿಧ್ಯವಿತ್ತು. ಮೀಸಲು ನೀರು ಈ ಸಂದಿಯಲ್ಲಿಯೇ ತನ್ನ ಪ್ರತ್ಯೇಕ ಪ್ರತಿಷ್ಠೆಯನ್ನು ಸಾರಿತ್ತು. ಶಾಸ್ತ್ರಿಗಳ ಸೊಸೆಯು ಮಡಿಯ ನುಸುಳಾಟದಲ್ಲಿ ಇಣಚಿಗಿಂತ ಹೆಚ್ಚಿನ ಚಪಲತೆಯನ್ನು ತೋರಿಸುತ್ತಿದ್ದಳು. ಆದರೂ ಅವಳ ಕಾಲು ತಾಕಿ ಕೊಡ ಉರುಳಿ ಅಗ್ನಿದೇವರು ಶಾಂತರಾಗಿ, ದೇವರು ಜಲಸಮಾಧಿ ಹೊಂದಿದರು. ಪೂಜೆಯು ಆಗಿತ್ತು, ಅಡಿಗೆಯೂ ತೀರುತ್ತ ಬಂದಿತ್ತು. ಊಟಕ್ಕೆ ಕೂತ ಕಾಲಕ್ಕೆ ಹಳ್ಳ ಬಂದಂತೆ ಈ ಅನಾಹುತವಾಗಿ, ಶಾಸ್ತ್ರಿಗಳ ಮುಖದಲ್ಲಿ ಬೆಂಕಿ ಕಾಣದಿದ್ದರೂ ಹೊಗೆ ಮುಸುಕಿತು. ಅವರು ತಮ್ಮ ಹೆಂಡತಿಯನ್ನೆ ಸಿಟ್ಟಿನ ಅಸಮಾಧಾನದಿಂದ ನೋಡಿದರು. ಶಾಸ್ತ್ರಿಗಳ ಪತ್ನಿ ಶಾಂತಸ್ವಭಾವದವರಾದರೂ ”ಮಹಾರಾಯತೀ, ಏನು ಮಾಡಿಟ್ಟೇ! ಎಲ್ಲಿಯಾದರೂ ನೀರು ತಂದು ನಮ್ಮ ಇಲ್ಲಿಯ ಸೆರೆ ಬಿಡಿಸು, ಮುಂಜಾವಿನಿಂದ ಒಲೆಹಿಡಿದು ಕೂತಿದ್ದೇನೆ. ಹೊಗೆಯಾಗದೆ ಉರಿಯಾಗಬೇಕು. ಬಿಸಿ ಹತ್ತದೆ ಬೆಂಕಿ ಇರಬೇಕು, ಇಷ್ಟಾಗಿ ಎಲ್ಲರಿಗೂ ಬೇಗನೆ ಪ್ರಸಾದ ಸಿಗಬೇಕು. ನಾನಾದರೂ ಏನು ಸಾಯಲಿ!” ಎಂದು ತುಸು ರಂಭಾಟವನ್ನೇ ಮಾಡಿದರು. ಸೊಸೆ ಪಿಟ್ಟನ್ನದೆ ಕೂಡಲೇ ಕೊಡ, ಹಗ್ಗ ತಕ್ಕೊಂಡು ನೀರಿಗೆ ಹೊರಟಳು.

ಇದನ್ನು ಓದಿದ್ದೀರಾ?: ಟೇಂಗ್ಸೆ ಗೋವಿಂದರಾವ್ ಅವರ ಕತೆ | ಗಂಗೆಯ ಗುತ್ತಿಗೆ
ನಾದಿನಿ ಅತ್ತಿಗೆಯ ಕೂಡ ಹೊರಡಲಿಲ್ಲ. ಏನೋ ಮುಸುಗುಟ್ಟಿದಳು. ಶಾಸ್ತ್ರಿಗಳ ಸೊಸೆಗೆ ತಾನು ಚೊಚ್ಚಲ ಗಂಡು ಹಡೆದು ಬಂದ ಸುಖ ಇರಲಿ, ಹಡದದ್ದೇ ಮಹಾಪರಾಧವಾಗಿದೆಯೇನೋ ಎನಿಸಿತ್ತು. ಅತ್ತೆಯ ಮನೆಗೆ ಬಂದಂದಿನಿಂದ, ಹುಡುಗನ ಕಾಲಗುಣ ಕೆಟ್ಟ ಎಂದು ಯಾರೋ ಅಂದಿದ್ದರು ಬೇರೆ. ಯಾಕಂದರೆ ಹುಡುಗನ ತಂದೆಗೆ ಭ್ರಮೆ ಹಿಡಿದಂತಾಗಿತ್ತು. ಎರಡು ತಿಂಗಳಿಂದ ಶಾಸ್ತ್ರಿಗಳ ಹೆಂಡತಿಗೆ ತಮ್ಮ ಮಗನ ಕಷ್ಟದಿದಿರು ಮೊಮ್ಮಗನ ಸುಖ ಮಸುಕಾಗಿತ್ತು. ಬಡವರ ಸೊಸೆಗೆ ನಾಲಿಗೆ ಸಡಿಲು ಬಿಡಬಲ್ಲವರೆಲ್ಲ ಅತ್ತೆಗಳೇ! ನೆರೆಮನೆಯ ಗುಬ್ಬೆಯೊಬ್ಬಳು “ಅವಳಿಗೆ ಹುಚ್ಚಗಂಡ ಬೇಕಾಗಿದ್ದನೆಲ್ಲಿ?” ಎಂದು ಇವಳ ಕಿವಿಗೆ ಬೀಳುವಂತೆ ಆಡಿದ್ದಳು. ಊರ ಅತ್ತೆಯೊಬ್ಬಳು “ಹುಡುಗನ ಮುಖ ಅತ್ತೆಯ ಮನೆಯವರಾರಂತೆಯೂ ಇಲ್ಲ. ಅಜ್ಜನಂತೆ ಇಲ್ಲ?” ಎಂದು ಪ್ರಕಟನೆ ಹೊರಡಿಸಿದ್ದಳು. ಹಾಳುಗುಡಿಯ ಒಕ್ಕಣ್ಣ ಪೂಜಾರಿಯೊಬ್ಬ ಈಕೆಯನ್ನು ಕಂಡಾಗ್ಗೆ ಪಿಸಿ ಪಿಸಿ ನಕ್ಕಿದ್ದ. ಯಾರಾರೋ ಏನೇನೋ ಅಂದಿದ್ದರು. ಮಟಮಟ ಮಧ್ಯಾಹ್ನದಲ್ಲಿ ಮಸಣದ ನಾಲ್ಕು ಭೂತಗಳು ಕವಕ್ಕೆಂದು ಬಂದಂತೆ ಅವಳ ಜೀವ ಹೆದರಿಕೊಂಡಿತು. ನೆನೆಸಿದಂತೆ ರೋಸಿಗಿಟ್ಟಿತು. ತಾನು ಯಾರಿಗೆ ಬೇಕಾಗಿದ್ದೇನೆ? ನನ್ನ ತಾಯಿಗೆ? ಅಯ್ಯೋ ಪಾಪ, ಅವಳಿಗೆ ತಾನೊಂದು ಭಾರ. ಮದುವೆಯಾಗುವ ಮುಂಚೆ ಒಂದು ರೀತಿ; ಆದಮೇಲೆ ಇನ್ನೊಂದು ರೀತಿ. ತನ್ನ ತಾಯಿಗೆ ತಾನಲ್ಲದೆ ಯಾರಿದ್ದಾರೆ? ಹೌದು, ಅಂತೆಯೇ ತಾನು ಭಾರ. ಸಂಸಾರ ಸುಖವಾಗಿ ಇದ್ದರೆ ಅದೆಲ್ಲ ಸರಿಯಿತ್ತು. ಈಗ? ತಾನು ಅವಳೆದೆಗೆ ಹುಣ್ಣು. ತನ್ನ ಗಂಡನಿಗೆ ತಾನು ಬೇಡವಾಗಿರುವೆನೆ? ಇಲ್ಲ. ಬೇಕಾಗಿರುವೆನೆ? ಅದೂ ಇಲ್ಲ. ಅವರಿಗೆ ಅವರ ಜೀವ ಸಾಕಾಗಿದೆ. ಕೂಸು ಬಂದು ತಿಂಗಳಾಗಿ, ಅವರು ಅದರ ಹೆಸರನ್ನೆತ್ತಿಲ್ಲ. ಕಣ್ಣೆತ್ತಿ ನೋಡಿರುವರೋ ಇಲ್ಲವೋ, ಪಾಪ! ಅವರೆಚ್ಚರ ಅವರಿಗಿಲ್ಲ. ಹೌದು. ನಾನು ಹೆಂಗಸು. ಊರವರೂ ಮನೆಯವರೂ ಕೂಡಿಯೇ ಹರಿದು ತಿಂದರೆ ನಾನೇನು ಮಾಡಬೇಕು? ಅತ್ತೆ-ಮಾವಂದಿರಿಗೆ ನಾನಾರು? ಮಗ ಬೇಕಾದರೆ ಜಗ ಬೇಕು. ತಾನಾರಿಗೂ ಬೇಕಾಗಿಲ್ಲ. ತನಗಾರಾದರೂ ಕರುಣೆ ನೀಡುವರೇ? ಎಂದು ಆಕೆ ಸುತ್ತು ಮುತ್ತು ನೋಡಿದಳು. ಹುಣಿಸೆಮರ, ಹಾಳುಗೋಡೆ, ಬೀಳು ಹೊಲ-ನೀನು ಹಾಳು ಭಾವಿ ಬಿದ್ದರೆ ನಮಗೇನು-ಎನ್ನುವವರಂತೆ ತಟಸ್ಥಭಾವದಿಂದಿದ್ದವು. ಭಾವಿಯಲ್ಲಿ ಗೂಡು ಮಾಡಿದ ಹಕ್ಕಿಗಳು ಜಕ್ಕಣಿ-ಕರೆದಂತೆ ಗುಬ್ಬಳಿಸಿದವು. “ನೀರಿನ ತಳವೇ ನಿನಗೆ ತವರು, ಬಾ,” ಎನ್ನುವಂತೆ ತಣ್ಣನೆಯ ನೀರು ಕಣ್ಣ ಸೆಳೆದಿತು. ಈಕೆ ಭಾವಿಯನ್ನು ಹಣಿಕಿ ಹಾಕಿದಾಗ ಬಿದ್ದ ಕಣ್ಣೀರಿಗೆ ನೀರು ನಡುಗಿತು. ಈಗಾಗಲೇ ತನ್ನ ಜೀವ ನೀರಿನ ತಳಕ್ಕೆ ಹೋಗಿ ಕುಳಿತಂತೆ ತನ್ನ ಪ್ರತಿಬಿಂಬ ತೋರಿತು. ಹೌದು ತಾನು ಅಲ್ಲಿಗೆ ಹೋಗಬೇಕು. ಅಲ್ಲಿ ಬಯ್ಯುವವರಿಲ್ಲ, ಬಾರಿಸುವವರಿಲ್ಲ. ಎಲ್ಲವೂ ತಣಿವು, ತಣ್ಣಗೆ; ಅವಳ ಪ್ರೇತವು ಅವಳನ್ನು ಈಗಲೇ ಪಾಣಿಗ್ರಹಣ ಮಾಡಿ ಎಳೆಯುತ್ತಿತ್ತು.
ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ
ತಾನು ನೀರಿಗೆ ಬಂದವಳು, ಎಷ್ಟು ಹೊತ್ತಾಯಿತು, ಏನು ಮಾಡುತ್ತಿರುವಳೆಂಬ ಅರಿವು ಅವಳಿಗಿರಲಿಲ್ಲ. ಒಂದು ಲೋಕದ ಗುರುತ್ವಾಕರ್ಷಣದ ತಕ್ಕೆಯನ್ನು ತಪ್ಪಿಸಿಕೊಂಡ ಧೂಮಕೇತುವೊಂದು ಅಧೋಲೋಕಕ್ಕೆ ಧುಮುಕಲು ಹೊರಟಂತೆ ಅವಳ ಜೀವದ ಚಿಕ್ಕೆಯು ತನ್ನ ಬಂಧುಗಳನ್ನೆಲ್ಲ ತಟತಟನೆ ಹರಿದುಕೊಂಡು ಬೇರೆ ಸೆಳವಿಗೆ ಬಿದ್ದಿತ್ತು. ಕೊಡಕ್ಕೆ ಕಟ್ಟಬೇಕಾಗದ ಉಕ್ಕಡವನ್ನು ಅವಳು ತನ್ನ ಕೊರಳಿಗೆ ಕಟ್ಟಿಕೊಂಡಳು. ನೆರೆಯ ಹುಣಿಸೆಯ ಮರದಿಂದ ಹಾಲಕ್ಕಿಗಳೆರಡು ಚಿಲಿಪಿಲಿಗುಟ್ಟಿದವು. ಈಕೆ ತಾನಿದೇನು ಮಾಡುತ್ತೇನೆಂದು ಕೊರಳಿನ ಕುಣಿಕೆಯನ್ನು ನಡುವಿಗೆ ಬಿಗಿದು ಸರಿಮಾಡಿದಳು. ಅವಳ ಕೆಲಸವೆಲ್ಲ ಮೈದುಂಬಿದಂತೆ ಆವೇಶದಿಂದ ಸಾಗಿತ್ತು. ಹಗ್ಗದ ಒಂದು ತುದಿಯನ್ನು ಅವಳು ಮೇಲಿನ ತೊಲೆಯ ಅಡ್ಡಗಂಬಕ್ಕೆ ಬಿಗಿದಳು. ಭಾವಿಗೆ ನಮಸ್ಕಾರ ಮಾಡಿದಳು. ಸೂರ್ಯನಿಗೆ ನಮಸ್ಕಾರ ಮಾಡಿದಳು. ತನ್ನ ಸೆರಗು, ಕೂದಲು ಸಾವರಿಸಿಕೊಂಡಳು. ಭಾವಿಯ ತುದಿಗೆ ತನ್ನ ಪಾದ ಇಟ್ಟಳು. ಹಿಂದೆ ಯಾರದೋ ಕಾಲ ಸಪ್ಪಳವಾಯಿತು. ಹಿಂದಿರುಗಿ ನೋಡಿದಳು. ಯಾರೂ ಇರಲಿಲ್ಲ. ಅವಳು ಹಗ್ಗವನ್ನು ಮೈಗೆ ಸುತ್ತಿಕೊಂಡಳು. ಭಾವಿಯಲ್ಲಿ ಇಳಿಯಲು ಸಿದ್ಧಳಾದಳು. ಯಾರೋ ಅತ್ತಂತಾಯಿತು. ಅದಾರು? ಯಾರ ಗೊಡವೆ ಇವಳಿಗೇನು? ಇವಳಿಗಾರಿದ್ದಾರೆ? ಅವಳು ಹಗ್ಗವನ್ನು ನಮಸ್ಕರಿಸಿದಳು. ಯಾರೋ ಕೂಗಿದರೇನು? ಕೂಗಿದರೋ-? ಅತ್ತರೊ-? ತನ್ನ ಕೂಸೇನು? ಕುಡಿದು ಮಲಗಿ ಬಹಳ ಹೊತ್ತಾಯಿತು. ಎದ್ದಿರಬಹುದು. ಹಸಿದಿದ್ದೀತು. ಏಕೆ ಅತ್ತಿರಲಾರದು? ಅವಳು ತನ್ನ ಹಗ್ಗದ ಸುತ್ತನ್ನು ಬಿಡಿಸಿದಳು, ಉಕ್ಕಡವನ್ನು ಉಚ್ಚಿದಳು. ಬರಿ ಕೊಡವನ್ನು ಬಗಲಿಗೆತ್ತಿ ಹೊರಟಳು. ಎಲ್ಲಿಗೆ? ಎಲ್ಲಿ ಮನೆ? ಎಲ್ಲಿ ಭಾವಿ? ಕೂಗುವವರಾರು? ಕೇಳಿಸಿದ್ದೇನು? ಈಗಾರೂ ಅಳುತ್ತಿಲ್ಲ, ಕರೆಯುತ್ತಿಲ್ಲ. ತಾನು ಹುಚ್ಚಿ, ತನ್ನ ಭ್ರಮೆ ಇದು. ಆಕೆ ಮತ್ತೆ ಭಾವಿಯತ್ತ ಹೊರಳಿದಳು. ಅಗೋ ಕಾಳ್ ಕಾಳ್ ಎಂದು ಮಗುವಿನ ಅಳುವು, ಕರೆ! ಆಕೆ ಮತ್ತೆ ಮನೆಯತ್ತ ಹೊರಳಿದಳು. ಅತ್ತ ನೋಡಿದಳು, ಇತ್ತ ನೋಡಿದಳು; ಮಟಮಟ ಮಧ್ಯಾಹ್ನ! ಭಾವಿಯಲ್ಲಿ ಗೂಡು ಮಾಡಿದ ಹಕ್ಕಿಗಳೆರಡು ಕೂಜಿಸುತ್ತ ಅತ್ತ ಹೋದವು. ತನ್ನ ಕೊಡ ಬರಿದು. ತಾನು ಬಂದು ಎಷ್ಟು ಹೊತ್ತಾಯಿತು! ಆಕಾಶವಾಣಿ ಬಂದಂತೆ ಇನ್ನೂ ಕೂಸು ಕರೆಯುತ್ತಿದೆ. ಪಾಪ, ಅದಕ್ಕೆ ತಾನಲ್ಲದೇ ಯಾರು? ಅತ್ತೆಯವರಿಗೆ ಮಾವನವರಿದ್ದಾರೆ. ಮಾವನವರಿಗೆ ಅವರ ಮಗನಿದ್ದಾನೆ. ಅವರಿಗೆ ತಾನಿಲ್ಲದಿದ್ದರೆ ಇನ್ನೊಬ್ಬಳು ಮಾಲೆ ಹಿಡಿದು ಕುಳಿತಿದ್ದಾಳು! ತನ್ನ ಮಗುವಿಗೆ ತಾನಲ್ಲದೆ ಯಾರು? ಹೌದು, ತನ್ನ ತಾಯಿಗೆ ತಾನಲ್ಲದೆ ಯಾರು? ಬರುವವಳು ಬಂದಾಗ ಬರಲಿ, ಭ್ರಮೆ ಹಿಡಿದವರ ಕೈ ಬಿಡುವದೇ? ಅವರು ತನಗೆ ಏನೂ ಅಂದಿಲ್ಲವಲ್ಲ! ತನ್ನನ್ನು ಕಣ್ಣೀರ್ತಂದು ನೋಡುತ್ತಾರೆ. ಹೌದು, ಅವರೂ ಹಸಿದಿದ್ದಾರೆ. ಮಾವನವರು ಏನಂದಾರು? ಅತ್ತೆಯವರು ಏನೆಂದುಕೊಂಡಿರಬಹುದು? ಏನು ನೊಂದುಕೊಂಡಿರಬಹುದು!
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ವಾತ್ಸಲ್ಯ, ಪತಿಭಕ್ತಿ, ಕೃತಜ್ಞತೆ, ಆದರ, ಇವೆಲ್ಲ ನಾಲ್ಕೆಳೆಯ ಹಗ್ಗವಾಗಿ ಹೊಸೆದು ಆಕೆಯನ್ನು ಮನೆಯತ್ತ ಎಳೆಯಹತ್ತಿದವು. ಆಕೆ ಭಾವಿಗೆ ಬಂದು ಕೊಡ ಸೇದಿದಳು. ಬಿರಬಿರನೆ ಮನೆಗೆ ಹೊರಟಳು. ಕೂಸಿನ ದನಿ ಕಿವಿದುಂಬಿತ್ತು. ವಾತ್ಸಲ್ಯವು ಎದೆದುಂಬಿ ಬಂದಿತ್ತು.

ಹಾದಿಯಲ್ಲಿ ಒಬ್ಬ ಮುತ್ತೈದೆ ಎಷ್ಟೊತ್ತಿಗವ್ವಾ ನೀರಿಗೆ ಹೋಗೋದು ಎಂದಳು. ಗುಡಿಯ ಹತ್ತಿರ ಬೆಕ್ಕೊಂದು ಬಲಕ್ಕೆ ಹೋಯಿತು. ಈಕೆ ದೇವರಿಗೆ ತಲೆ ಬಾಗಿಸಿದಳು. ಕೈ ಜೋಡಿಸುವ ಸನ್ನೆ ಮಾಡಿದಳು. ಮನೆಗೆ ಬಂದಾಗ ಮಾವನವರು ತಾಂಬೂಲ ಮೆಲ್ಲುತ್ತಿದ್ದರು. ಕೂಸು ಯಜಮಾನರ ತೊಡೆಯ ಮೇಲಿತ್ತು. ಅತ್ತೆ ”ಬಾ, ತಾಯಿ, ಬಿಸಿಲಲ್ಲಿ ಹೋಗಿದ್ದಿ, ಭಾವಿಯ ಮೇಲೆ ಯಾರಿರತಾರ? ನಾನೇ ಕಳಿಸಬಾರದಿತ್ತು” ಎಂದು ಮರುಗಿದಳು.
ಕೊಡವನ್ನು ದೇವರ ಬದಿಗಿಟ್ಟು ಮೈಯ ಮುಖದ ಬೆವರೊರೆಸುವಾಗ ನಾದಿನಿ ಮಗುವನ್ನು ತಂದು ಮಡಿಲಲ್ಲಿಟ್ಟಳು. ಅದು ಆಗ ಅಳಹತ್ತಿತು. ತನಗಾಗಿ ಒಂದು ಜೀವಂತ ಜಗತ್ತು ಅಳುತ್ತಿರುವಾಗ, ಯಾರದೋ ಮಾತಿಗಾಗಿ, ಮಧ್ಯಾಹ್ನದ ಬೇಸರಕ್ಕೆ, ತಾನು ಜೀವಕ್ಕೆರವಾಗುತ್ತಿದ್ದೆನಲ್ಲಾ ಎಂದು ಆಕೆಗೆ ಎನಿಸಿತು. ತಾಯಿಯ ನೆನಪಾಗಿ ಕಣ್ಣೀರು ಬಂತು. ಅದನ್ನೊರಿಸಿ ತಮ್ಮ ಕುಲದೇವರಿಗೆ ಮನದಲ್ಲಿಯೇ ಆಕೆ ಬಾಗಿದಳು. ಅತ್ತೆ, ಅತ್ತಿಗೆ, ನಾದಿನಿಯರು ಊಟಕ್ಕೆ ಕುಳಿತಾಗ ಮಗುವೂ, ಮನೆಯೂ ನಲಿಯುತ್ತಿತ್ತು.
(ಕೃಪೆ: ಮಲ್ಲಿಗೆ ಮಾಸಪತ್ರಿಕೆ; “ನಿರಾಭರಣಸುಂದರಿ”, ಸಮನ್ವಯ ಪ್ರಕಾಶನ, ಗದಗ, 1956)
ಬೇಂದ್ರೆಯವರ ‘ಮಗುವಿನ ಕರೆ’
‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ದಿವಂಗತ ದ.ರಾ. ಬೇಂದ್ರೆಯವರು (ದತ್ತಾತ್ರೇಯ ರಾಮಚಂದ್ರ ಬೇಂದ್ರೆ: 1896-1981) ನಾಡಿನ ಉದ್ದಗಲಕ್ಕೂ ಕವಿ ಎಂದೇ ಪರಿಚಿತರಾಗಿದ್ದಾರೆ. ಇತ್ತೀಚೆಗೆ ಅವರ ನಾಟಕಗಳ ಬಗೆಗೆ ಜನರಲ್ಲಿ ಸ್ವಲ್ಪ ಆಸಕ್ತಿ ಮೂಡಿದೆಯಾದರೂ, ಬೇಂದ್ರೆಯವರು ಸಣ್ಣ ಕತೆ ಹಾಗೂ ಹರಟೆಗಳನ್ನೂ ಬರೆದಿದ್ದಾರೆಂದು ಅನೇಕ ಓದುಗರಿಗೆ ಗೊತ್ತೇ ಇಲ್ಲ. ಅವರ ಕಥೆ ಹರಟೆಗಳ ಕಡೆಗೆ ವಿಮರ್ಶಕರ ಲಕ್ಷ್ಯವೂ ಅಷ್ಟಾಗಿ ಹರಿದಿಲ್ಲವೆಂದೇ ಹೇಳಬೇಕು. ಕುರ್ತಕೋಟಿಯವರು ಬರೆದಿರುವ (ಯುಗ ಧರ್ಮ ಹಾಗೂ ಸಾಹಿತ್ಯದರ್ಶನ, ಪುಟ: 159) ಕೆಲವು ಮಾತುಗಳನ್ನು ಬಿಟ್ಟರೆ ಅವರ ಕತೆಗಳ ಬಗೆಗೆ ಯಾವ ವಿಶೇಷ ವಿಮರ್ಶೆಯೂ ಬಂದಿಲ್ಲ. ಬೇಂದ್ರೆಯವರ ‘ನಿರಾಭರಣ ಸುಂದರಿ'(1940) ಎಂಬ ಹೆಸರಿನ ಪುಸ್ತಕವೊಂದು ಬಹಳ ದಿನಗಳ ಹಿಂದೆಯೇ ಪ್ರಕಟವಾಗಿದೆ. ಇದರಲ್ಲಿ 7 ಕತೆಗಳು, 8 ಹರಟೆಗಳು, 6 ನಗೆವಾಡುಗಳು ಸೇರಿವೆ. 1956ರಲ್ಲಿ ಈ ಪುಸ್ತಕ ಪುನರ್ಮುದ್ರಣವನ್ನು ಕಂಡಿದೆಯಾದರೂ ಈಗ ಲಭ್ಯವಿಲ್ಲ. ಬೇಂದ್ರೆಯವರೂ ಮುಂದೆ ಕಥೆಗಳನ್ನಾಗಲಿ, ಹರಟೆಗಳನ್ನಾಗಲಿ ಬರೆಯದೇ ಹೋದುದರಿಂದ ಅವರ ಹಿಂದಿನ ಬರಹಗಳೂ ನಿರ್ಲಕ್ಷ್ಯಕ್ಕೀಡಾದಂತೆ ಕಾಣುತ್ತದೆ.
‘ನಿರಾಭರಣ ಸುಂದರಿ’ಯ ಏಳು ಕಥೆಗಳಲ್ಲಿ ಒಂದು ಮಾತ್ರ ಬೇರೆ ಕಡೆ ಮೊದಲು ಪ್ರಕಟವಾಗಿತ್ತೆಂದೂ, ಉಳಿದ ಆರು ಕಥೆಗಳು ಈ ಪುಸ್ತಕದಲ್ಲಿಯೇ ಮೊದಲಬಾರಿ ಅಚ್ಚಾದವೆಂದೂ ಬೇಂದ್ರೆಯವರೇ ತಮ್ಮ ಮಾತಿನಲ್ಲಿ ತಿಳಿಸಿದ್ದಾರೆ. ಅವುಗಳನ್ನು ಬರೆದ ಮೇಲೆ ಕೆಲವು ವರ್ಷ ಅವು ಹಾಗೇ ಬಿದ್ದುಕೊಂಡಿದ್ದವೆಂದೂ ಅವರೇ ತಿಳಿಸಿದ್ದಾರೆ. ಬಹುಶಃ 1935ರ ಸುಮಾರಿನಲ್ಲಿ ಒಂದೆರಡು ವರ್ಷಗಳ ಅಂತರದಲ್ಲಿ ಈ ಕಥೆಗಳನ್ನು ಅವರು ಬರೆದಿರಬೇಕು.
ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ
ಬೇಂದ್ರೆಯವರು ಬರೆದದ್ದು ಒಟ್ಟಿನಲ್ಲಿ ಏಳೇ ಕಥೆಗಳನ್ನಾದರೂ ಅವರಿಗೆ ಕಥೆಗಾರಿಕೆಯ ಹಿಡಿತ ಸಿಕ್ಕಿತ್ತೆನ್ನುವುದಕ್ಕೆ, ಇನ್ನೂ ಹೆಚ್ಚು ಕಥೆಗಳನ್ನು ಬರೆದಿದ್ದರೆ ಕನ್ನಡದಲ್ಲಿ ವಿಶಿಷ್ಟ ರೀತಿಯ ಕಥನ ಪರಂಪರೆಯೊಂದು ಬೆಳೆಯಬಹುದಾಗಿತ್ತೆಂಬುದಕ್ಕೆ ಈ ಕಥೆಗಳಲ್ಲಿ ಸಾಕಷ್ಟು ಆಧಾರಗಳು ಸಿಗುತ್ತವೆ.
ಸಣ್ಣಕಥೆಯನ್ನು ‘ಗದ್ಯದಲ್ಲಿಯ ಭಾವಗೀತೆ’ ಎಂದು ಕೆಲವರು ವರ್ಣಿಸಿದ್ದಾರೆ. ಈ ಮಾತಿನ ಸತ್ಯಾಸತ್ಯ ಏನೇ ಇರಲಿ. ಇಂಥ ಭಾವಗೀತಾತ್ಮಕವಾದ ಸಣ್ಣ ಕಥೆಗಳು ಕನ್ನಡದಲ್ಲಿ ಹೆಚ್ಚಾಗಿ ಬಂದಿಲ್ಲವೆಂದೇ ಹೇಳಬೇಕು! ಮೂಲತಃ ಕವಿಗಳಾದ ಕುವೆಂಪು, ಪು.ತಿ.ನ. ಮೊದಲಾದವರು ಬರೆದಿರುವ ಒಂದೋ ಎರಡೋ ಕಥೆಗಳು, ಕೃಷ್ಣಕುಮಾರ ಕಲ್ಲೂರರ ಕೆಲವು ಕಥೆಗಳು ಕಾವ್ಯಗುಣಗಳನ್ನು ಪ್ರಧಾನವಾಗಿ ಹೊಂದಿವೆ. ಆದರೂ ಕಾವ್ಯಾತ್ಮಕ ಕಥೆಗಳೆಂದು ಸ್ಪಷ್ಟವಾಗಿ ಗುರುತಿಸಿ ವಿಂಗಡಿಸಬಹುದಾದಷ್ಟು ಪ್ರಮಾಣದಲ್ಲಿ ಕಾವ್ಯಾತ್ಮಕ ಕಥೆಗಳು ನಮ್ಮಲ್ಲಿ ಕಡಿಮೆ. ಬೇಂದ್ರೆಯವರ ‘ಮಗುವಿನ ಕರೆ’ ಈ ವಿರಳ ಗುಂಪಿಗೆ ಸೇರುವ ಒಂದು ಶ್ರೇಷ್ಠ ಕಥೆ.
‘ಮಗುವಿನ ಕರೆ’ಯಲ್ಲಿ ನವೋದಯ ಕಥೆಗಳ ಮುಖ್ಯ ಲಕ್ಷಣವೆಂದು ಹೇಳಬಹುದಾದ ಗಟ್ಟಿಮುಟ್ಟಾದ ಕಥೆಯ ಹಂದರ ಇಲ್ಲ. ಸಂಭವಿಸುವ ಘಟನೆಗಳಲ್ಲೂ ಸಾಂಪ್ರದಾಯಿಕ ಅರ್ಥದ ಕಥೆಯ ಬೆಳವಣಿಗೆ ಇಲ್ಲ. ಮುಖ್ಯವಾಗಿ ಈ ಕಥೆ ನಾಯಕಿಯ ಮನಸ್ಸಿನಲ್ಲಿ ಮೂಡಿ, ಬೆಳೆದು, ವ್ಯಗ್ರವಾಗಿ, ಮತ್ತೆ ಉಪಶಮನಗೊಳ್ಳುವ ಭಾವವೊಂದರ ಬೆಳವಣಿಗೆಯ ವಿವಿಧ ಹಂತಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಕಥೆಯ ಪರಿಸರ, ವರ್ಣನೆಗಳು, ಉಳಿದ ಪಾತ್ರಗಳು, ಸನ್ನಿವೇಶಗಳು ಈ ಭಾವದ ಬೆಳವಣಿಗೆಯಲ್ಲಿ ಅನಿವಾರ್ಯವಾದ ಕವಿತೆಯ ಪ್ರತಿಮೆಗಳಂತೆ ಕೆಲಸ ಮಾಡುತ್ತವೆ.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ಒಬ್ಬಂಟಿಯಾಗಿ ದೂರದ ಭಾವಿಗೆ ನೀರು ತರಲು ಹೊರಟಿರುವ ಶಾಸ್ತ್ರಿಗಳ ಸೊಸೆಯ ದೃಶ್ಯದೊಂದಿಗೆ ಕಥೆ ಆರಂಭವಾಗುತ್ತದೆ. ಮಧ್ಯಾಹ್ನದ ಬಿಸಿಲು, ನಿರ್ಜನವಾದ ದೂರದ ದಾರಿ, ದೆವ್ವದಂಥ ಮರಗಳು, ಕಾಡುಮಿಕಗಳ ಭಯ ಮುಂತಾದ ವಿವರಗಳು ಒಂದು ಬಗೆಯ ಭೀತಿಯ ವಾತಾವರಣವನ್ನು ನಿರ್ಮಿಸುತ್ತವೆ. ಬದುಕಿನಲ್ಲಿ ಆಕೆ ಏಕಾಕಿ ಎಂಬ ಭಾವನೆಯನ್ನು ಹುಟ್ಟಿಸುತ್ತವೆ.

ಇದರ ನಂತರ ಬರುವ ಶಾಸ್ತ್ರಿಗಳ ಮನೆಯ ಬಡತನ, ಇಕ್ಕಟ್ಟಿನ ವಿವರಗಳು ಆಕೆಯ ಬದುಕಿನ ಒಟ್ಟು ಸ್ಥಿತಿಯನ್ನು ಸೂಚಿಸುವಂತಿವೆ. ತೀರಾ ಇಕ್ಕಟ್ಟಿನ ಮನೆಯಲ್ಲಿಯಂತೆ ಆಕೆ ಬದುಕಿನಲ್ಲಿಯೂ ಇಕ್ಕಟ್ಟಿನಲ್ಲಿಯೇ ನುಸುಳಿಕೊಂಡು ನಡೆದಾಡಬೇಕಾಗಿದೆ. ಕಿತ್ತುತಿನ್ನುವ ಬಡತನ, ಯಾಕೆಂದು ಕೇಳದ ಬೇನೆ ಬಿದ್ದ ಗಂಡ, ದಿಕ್ಕಿಲ್ಲದ ತವರು, ನೆರೆಹೊರೆಯವರ ಹರಲಿಯ ಮಾತು, ಮುಸುಗುಟ್ಟುವ ನಾದಿನಿ, ಮಡಿಯ ಅವಾಂತರ, ಇವೆಲ್ಲವುಗಳ ನಡುವೆ ಆಕೆಗೆ ತಾನು ಪರದೇಶಿ, ತಾನು ಯಾರಿಗೂ ಬೇಕಾಗಿಲ್ಲವೆಂಬ ಭಾವನೆ ಬಂದಿದೆ. ಇಂಥ ಮನಃಸ್ಥಿತಿಯಲ್ಲಿ ಆಕಸ್ಮಿಕವಾಗಿ ಅವಳ ಕಾಲು ತಾಗಿ ಇದ್ದ ಒಂದು ನೀರಿನ ಕೊಡ ಉರುಳಿ ಮನೆಯಲ್ಲಿ ನೀರಾಗಿ ರಂಬಾಟವಾಗುತ್ತದೆ. ಶಾಸ್ತ್ರಿಗಳ ಕೋಪ, ಅತ್ತೆಯ ಬಿರುಸುಮಾತು ಅವಳ ಮನಃಸ್ಥಿತಿಯನ್ನು ಇನ್ನಷ್ಟು ವ್ಯಗ್ರಗೊಳಿಸುತ್ತವೆ. ನೀರಿಗೆ ಹೋಗುವ ದಾರಿಯಲ್ಲಿಯ ಪ್ರತಿಯೊಂದು ವಿವರವೂ, ಮೂಡುವ ಆಲೋಚನೆ-ನೆನಪುಗಳೂ ಅವಳ ವ್ಯಗ್ರತೆಯನ್ನು ಇನ್ನಷ್ಟು ಉತ್ಕಟಗೊಳಿಸುತ್ತವೆ. ಈ ಉತ್ಕಟತೆಯಲ್ಲಿ ಅವಳು ಆತ್ಮಹತ್ಯೆಯ ನಿರ್ಧಾರಕ್ಕೆ ಬರುವದು ಇಲ್ಲಿಯ ಕೇಂದ್ರಭಾವದ ಬೆಳವಣಿಗೆಯ ಶಿಖರವಾಗಿದೆ.
ಈ ಶಿಖರದಲ್ಲಿಯೇ ಭಾವದ ತಿರುವೂ ಆರಂಭವಾಗುತ್ತದೆ. ಸಾವಿನ ಕ್ಷಣದಲ್ಲಿಯೇ ಆಕೆಗೆ ಒಮ್ಮೆಲೆ ಬದುಕಿನ ಕರೆ ಕೇಳುತ್ತದೆ. ಅವಳಿಗೆ ತಕ್ಷಣ ಮನೆಯಲ್ಲಿ ಬಿಟ್ಟುಬಂದಿರುವ ಮಗುವಿನ ನೆನಪಾಗುತ್ತದೆ. ಮಗುವಿನ ಅಳು ಕೇಳಿಸಿದಂತಾಗುವದರಲ್ಲೇ ಈ ತಿರುವಿನ ಆರಂಭವಿದೆ. ಇದರಿಂದಾಗಿ, ತನಗೆ ಯಾರೂ ಇಲ್ಲ ಎಂಬ ವ್ಯಗ್ರ ಭಾವದಲ್ಲಿ ಜಗತ್ತಿನ ಜೊತೆಗೆ ಸಂಬಂಧ ಕಳೆದುಕೊಂಡವಳಿಗೆ ಒಮ್ಮೆಲೇ ಕೊಂಡಿಯೊಂದು ಸಿಕ್ಕಂತಾಗುತ್ತದೆ. ತಾನು ಒಂಟಿಯಲ್ಲ ಎನಿಸುತ್ತದೆ. ಆ ಮಗು ಅವಳನ್ನು ಇಡಿಯ ಜಗತ್ತಿನೊಂದಿಗೆ ಮತ್ತೆ ಬೆಸೆಯುತ್ತದೆ. ಈ ಹೊಸ ಅನುಭವದ ಬೆಳಕಿನಲ್ಲಿ ಅವಳ ಆಲೋಚನೆಯ ತರ್ಕವೇ ಬೇರೆಯಾಗುತ್ತದೆ. ತನಗೆ ಯಾರು ಏನು ಅನ್ಯಾಯ ಮಾಡಿದ್ದಾರೆ ಎನಿಸುತ್ತದೆ. ಗಂಡ, ತಾಯಿ, ಮಾವ, ಅತ್ತೆಯರ ನಡತೆಯಲ್ಲಿ ಸಮರ್ಥನೆ ಕಾಣುತ್ತದೆ.
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?
ಈ ಬದಲಾದ ಮನಃಸ್ಥಿತಿಯಲ್ಲಿ ಅವಳಿಗೆ ಜಗತ್ತೇ ಬೇರೆಯಾಗಿ ಕಾಣುತ್ತದೆ. ತನ್ನ ಹಾಗೂ ಜಗತ್ತಿನ ನಡುವೆ ಹೊಸ ಸಂಬಂಧಗಳು ಗೋಚರಿಸುತ್ತವೆ. ಕಂಡದ್ದನ್ನಾಡುವ ‘ಅತ್ತೆ’ಯ ಬದಲು ‘ಎಷ್ಟೊತ್ತಿಗವ್ವಾ ನೀರಿಗೆ ಹೋಗೋದು’ ಎನ್ನುವ ಅನುಕಂಪದ ‘ಮುತ್ತೈದೆ’ ಎದುರಾಗುತ್ತಾಳೆ. ಮನೆಗೆ ಬಂದಾಗ ಮಾವನವರ ಊಟ ಮುಗಿದಿರುತ್ತದೆ. ಎಂದೂ ಮಗುವನ್ನು ಎತ್ತದ ಗಂಡನ ತೊಡೆಯ ಮೇಲೆ ಮಗು ಮಲಗಿರುತ್ತದೆ. ಬಿಸಿಲಲ್ಲಿ ನೀರಿಗೆ ಕಳಿಸಿದ ಅತ್ತೆ ಅದಕ್ಕಾಗಿ ಮರುಗುತ್ತಾಳೆ. ಹೋಗುವಾಗ ಮುಸುಗುಟ್ಟಿದ್ದ ನಾದಿನಿ ಕೂಸು ತಂದುಕೊಡುತ್ತಾಳೆ. ಮಗು ಅತ್ತಾಗ ತನಗೆ ಯಾರೂ ಇಲ್ಲವೆಂಬ ಭಾವದ ಬದಲು ತನಗಾಗಿ ಒಂದು ಜೀವಂತ ಜಗತ್ತೇ ಅಳುತ್ತಿದೆ ಎಂಬ ಹೊಸ ಅರ್ಥ ಹೊಳೆಯುತ್ತದೆ. ಅತ್ತೆ, ನಾದಿನಿಯರೊಡನೆ ಆಕೆ ಊಟಕ್ಕೆ ಕುಳಿತಾಗ ಮಗುವೂ, ಮನೆಯೂ ನಲಿಯುತ್ತಿರುವ ಅನುಭವವಾಗುತ್ತದೆ.
ಹೀಗೆ ಜೀವನವಿಮುಖತೆಯಂಥ ತತ್ಕಾಲೀನ ವ್ಯಗ್ರತೆಯಿಂದ ಜೀವನಸಮ್ಮುಖವಾದ ಶಾಂತಸ್ಥಾಯಿಗೆ ಕಥೆ ಬಂದು ನಿಲ್ಲುತ್ತದೆ. ಈ ಬೆಳವಣಿಗೆ ಕೇವಲ ಭಾವಗೋಚರವೆನಿಸುವಷ್ಟು ಕಥೆಯ ಬರವಣಿಗೆ ಸೂಕ್ಷ್ಮವಾಗಿದೆ. ಕೇವಲ ಮೇಲುನೋಟಕ್ಕೆ ಸಾಂಪ್ರದಾಯಿಕ ರೀತಿಯ ತಾಯಿಯ ಕರುಳಿನ ಕಥೆಯಂತೆ ಕಂಡರೂ ಒಳಗಿನ ಸೂಕ್ಷತೆಯಲ್ಲಿ ಈ ಕತೆ ಹೆಚ್ಚಿನ ಅರ್ಥವನ್ನು ಒಳಗೊಂಡಿರುವುದನ್ನು ಇಲ್ಲಿ ಗಮನಿಸಬಹುದು.
ಈ ಸೂಕ್ಷ್ಮತೆಯನ್ನು ಸರಿಯಾಗಿ ಹಿಡಿದಿಡಬಲ್ಲಷ್ಟು ಬೇಂದ್ರೆಯವರ ಬರವಣಿಗೆಯೂ ಸಮರ್ಥವಾಗಿದೆ. ಅವರ ಇತ್ತೀಚಿನ ಗದ್ಯದ ಜಟಿಲತೆಯನ್ನು ನೋಡಿದವರಿಗೆ ಈ ಕಥೆಯ ಗದ್ಯದ ಸರಳತೆ, ಧ್ವನಿರಮ್ಯತೆಗಳು ಆಶ್ಚರ್ಯವನ್ನುಂಟುಮಾಡುವಂತಿವೆ.
ಇದರ ಜೊತೆಗೆ ನಾಯಕಿಯ ಮನಃಸ್ಥಿತಿಯ ವಿಶ್ಲೇಷಣೆಯನ್ನೂ ಇಲ್ಲಿ ಗಮನಿಸಬೇಕು. ಆ ಕಾಲದ ಬರವಣಿಗೆಗೆ ಇದೊಂದು ಹೊಸ ಆಯಾಮ. ನಾಯಕಿಯ ಮನಸ್ಸಿನ ವ್ಯಗ್ರತೆ, ತುಮಲ, ತಿರುವುಗಳನ್ನೂ, ಆಲೋಚನೆಯ ಲಯವನ್ನೂ ಕಥೆ ಸಮರ್ಥವಾಗಿ ಸೆರೆಹಿಡಿದಿದೆ.
ಹೀಗೆ ವಸ್ತುವಿನ ಸೂಕ್ಷ್ಮತೆಯಲ್ಲಿ, ಕಥಾಂಶದ ಗೌಣತೆಯಲ್ಲಿ, ಮಾನಸಿಕ ವಿಶ್ಲೇಷಣೆಯಲ್ಲಿ, ಕಾವ್ಯಾತ್ಮಕ ಕಥೆಯಲ್ಲಿ ‘ಮಗುವಿನ ಕರೆ’ ನಂತರದ ನವ್ಯ ಕಥೆಗಳನ್ನು ನೆನಪಿಗೆ ತರುತ್ತದೆ.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)