ಮುಂಗಾರು ಮಳೆ ಕೈ-ಕೊಟ್ಟಿರುವ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಬರಗಾಲದ ಪರಿಹಾರ ಮತ್ತು ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು. ಹಿಂದಿನ ತೊಗರಿ ಬೆಳೆ ನಷ್ಟ ಪರಿಹಾರದ ಹಣ ಬಿಡುಗಡೆ ಸೇರಿದಂತೆ ದನಕರುಗಳಿಗೆ ಕಣಿಕಿ ವಿತರಣೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ಕಾರ್ಯಕರ್ತರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಶರಣಬಸಪ್ಪ ಮಮಶೆಟ್ಟಿ, “ಹಳ್ಳಿಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಲ್ಬಣಗೊಂಡಿದೆ. ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಮುಂದಾಗಬೇಕು. ಕೃಷಿಕರ ಆದಾಯ ನಿರಂತರವಾಗಿ ಕುಸಿಯುತ್ತಿದೆ. ಹತ್ತಿ ಬೆಳೆ ಉತ್ಪಾದನಾ ವೆಚ್ಚ ವಿಪರೀತವಾಗಿ ಏರಿಕೆಯಾಗುತ್ತಿದ್ದರೂ ಕನಿಷ್ಠ ಬೆಂಬಲ ಬೆಲೆ ನಿಗದಿಯಲ್ಲಿ ಮೀನಾಮೇಷ ಎಣಿಸಲಾಗುತ್ತಿದೆ” ಎಂದು ಆರೋಪಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಕೃಷಿ ಇಲಾಖೆ ಹತ್ತಿಗೆ ಲಾಭದಾಯಕ ಬೆಂಬಲ ಬೆಲೆಯಾಗಿ ₹14,000 ನೀಡುವಂತೆ ಶಿಪಾರಸು ಮಾಡಿತ್ತು. ಆದರೆ, ಕೇಂದ್ರ ಬಿಜೆಪಿ ಸರ್ಕಾರ ಬೆಂಬಲ ಬೆಲೆಯಾಗಿ ಕೇವಲ ₹6600 ಘೋಷಣೆ ಮಾಡಿದೆ. ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಂಬಲ ಬೆಲೆ ನಿಗದಿ ಮಾಡಿದ್ದು, ರೈತರನ್ನು ದಿವಾಳಿ ಮಾಡುವ ದುರುದ್ದೇಶದ್ದಾಗಿದೆ” ಎಂದು ಆರೋಪಿಸಿದರು.
“ಮುಂಗಾರು ಮಳೆ ಕೈ ಕೊಟ್ಟಿದ್ದು, ರೈತರು ಕಂಗಾಲಾಗಿದ್ದಾರೆ. ಕಲಬುರ್ಗಿ ಜಿಲ್ಲೆ ಒಣ ಬರಗಾಲವೆಂದು ಘೋಷಿಸಬೇಕು. ಪ್ರತಿ ಎಕರೆಗೆ ₹25,000 ಪರಿಹಾರ ಕೊಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ಅತಿವೃಷ್ಟಿ ಮಳೆಯಿಂದ ಹಾನಿಯಾದ ಹಿಂದಿನ ತೊಗರಿ ಬೆಳೆಗಾರರಿಗೆ ಕೂಡಲೇ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು” ಎಂದು ಆಗ್ರಹಿಸಿದರು.
“ಬೆಳೆವಿಮೆ ಹಣ ಕಟ್ಟಿದ ಎಲ್ಲ ರೈತರಿಗೆ ವಿಮೆ ಹಣ ಬಿಡುಗಡೆ ಮಾಡಬೇಕು. ತಪ್ಪಿತಸ್ಥ ಇನ್ಸೂರೆನ್ಸ್ ಕಂಪನಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು. ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕಿನಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ರೈತರಿಗೆ ಸುಳ್ಳು ಹೇಳಿ ಮೋಸ ಮಾಡಿದ್ದು, ರೈತರ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ನುಂಗಿ ನೀರು ಕುಡಿದಿದ್ದಾರೆ. ಡಿಸಿಸಿ ಬ್ಯಾಂಕ್ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಒತ್ತಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೋತಿಗಳು ಬಿದ್ದು ಸಾವನ್ನಪ್ಪಿದ್ದ ನೀರು ಕುಡಿದ ಗ್ರಾಮಸ್ಥರು; ಕೆಲವರು ಅಸ್ವಸ್ಥ
“ಕ್ವಿಂಟಾಲ್ ಹತ್ತಿಗೆ ಕನಿಷ್ಠ ₹12,000 ಬೆಂಬಲ ಬೆಲೆ ನೀಡಬೇಕು. ಸಾರ್ವಜನಿಕ ಕ್ಷೇತ್ರ ಹತ್ತಿ ಸಂಶೋಧನೆಗೆ ಹೆಚ್ಚಿನ ಅನುದಾನ ಕೊಡಬೇಕು. ನಕಲಿ ಹತ್ತಿ ಬೀಜ, ಕ್ರಿಮಿನಾಶಕ, ರಸಗೊಬ್ಬರ ಉತ್ಪಾದಕರು ಮತ್ತು ಮಾರಾಟಾಗಾರರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ, ಹತ್ತಿ ಬೀಜ ಕಾಳಸಂತೆ ಮಾರಾಟ ತಡೆಗಟ್ಟಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಇನಾಂದಾರ್, ಸಾಯಿಬಣ್ಣ ಗುಡುಬಾ, ಸುಭಾಷ್ ಹೊಸಮನಿ ಅಲ್ತಾಫ್, ದಿಲೀಪ್ ಕುಮಾರ್ ನಾಗೂರೆ, ರಾಯಪ್ಪ ಹುರಮುಂಜಿ, ರೇವಣಸಿದ್ದಪ್ಪ ಪಾಟೀಲ್, ರಾಮಣ್ಣ ಅವರಾದಿ, ಅಂಬ್ರಿಶ ಮೋಘಾ, ಜಾವೇದ್ ಹುಸೈನ್ ಇದ್ದರು.