- ಬಿಎಂಆರ್ಸಿಎಲ್ನ ತಾಂತ್ರಿಕ ದೋಷಕ್ಕೆ ಜನರಿಂದ ದುಡ್ಡು ವಸೂಲಿ
- ತಾಂತ್ರಿಕ ಸಮಸ್ಯೆಗಳಿಂದಾಗಿ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ವಿಳಂಬ
ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಮೆಟ್ರೋ ಸಂಚಾರ ವ್ಯತ್ಯಯವಾಗಿದ್ದು, ನಿಲ್ದಾಣದಲ್ಲಿ ಜನಸಾಗರವೇ ತುಂಬಿದೆ. ಶಾಲೆ-ಕಾಲೇಜು, ಕಚೇರಿ ಕೆಲಸಕ್ಕೆ ತೆರಳುವ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಕೆಂಗೇರಿ-ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆಯಿಂದ ಮೆಟ್ರೋ ಸಂಚಾರ ಸ್ಥಗಿತವಾಗಿದೆ. ಹೆಚ್ಚು ಜನ ಸಂಚರಿಸುವ ಅವಧಿಯಲ್ಲಿ ಮೆಟ್ರೋ ಏಕಾಏಕಿ ಸ್ಥಗಿತಗೊಂಡಿದೆ. ಇದರಿಂದ ಕಚೇರಿ, ಶಾಲಾ-ಕಾಲೇಜಿಗೆ ಹೋಗಲು ಮೆಟ್ರೋ ಅವಲಂಬಿಸಿರುವ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.
ಇನ್ನೂ ಈ ಬಗ್ಗೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದು, “ಬೆಳಿಗ್ಗೆಯಿಂದ ಮೆಟ್ರೋ ಸಂಚಾರ ಸ್ಥಗಿತವಾಗಿದೆ. ಹೀಗಾಗಿ, ನಿಲ್ದಾಣದಲ್ಲಿ ಜನಸಾಗರವೇ ತುಂಬಿದೆ. ತಾಂತ್ರಿಕ ದೋಷದಿಂದ ರೈಲುಗಳು ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಜನರು ನಿಲ್ದಾಣದಿಂದ ವಾಪಾಸ ಬಂದ ದಾರಿಗೆ ಹಿಂತಿರುಗುವ ವೇಳೆ ಪ್ರತಿಯೊಬ್ಬರಿಂದಲೂ ₹9.50 ಕಟ್ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್ಸಿಎಲ್)ದ ತಾಂತ್ರಿಕ ದೋಷಕ್ಕೆ ಜನರಿಂದ ದುಡ್ಡು ವಸೂಲಿ ಮಾಡಲಾಗುತ್ತಿದೆ” ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂದಿನ ನಾಲ್ಕೈದು ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ
“ತಾಂತ್ರಿಕ ಸಮಸ್ಯೆಗಳಿಂದಾಗಿ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ವಿಳಂಬವಾಗಿದೆ. ಸಮಸ್ಯೆಯನ್ನು ಬಗೆಹರಿಸಲು ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ” ಎಂದು ಬಿಎಂಆರ್ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.