ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಹೊರವಲಯದ ಕುಡುಪು ಎಂಬಲ್ಲಿ ಅಪರಿಚಿತ ಯುವಕನ ಮೇಲೆ 25 ರಿಂದ 30 ಜನರ ಗುಂಪು ಹಲ್ಲೆ ನಡೆಸಿದ ಪರಿಣಾಮ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ್, ‘ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕಾರಣ’ ಎಂದು ಮಂಗಳವಾರ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಬುಧವಾರ ಸ್ಪಷ್ಟನೆ ನೀಡಿದ್ದು, “ಪಾಕಿಸ್ತಾನ್ ಜಿಂದಾಬಾದ್ ಹೇಳಿಕೆ ನನ್ನದಲ್ಲ, ಕೊಲೆ ಆರೋಪಿಗಳದ್ದು” ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ನನ್ನ ಹೇಳಿಕೆಯು ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾದದ್ದು ನನ್ನ ಗಮನಕ್ಕೆ ಬಂದಿದೆ. ಹಾಗಾಗಿ, ಈ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ. ಪಾಕಿಸ್ತಾನ ಜಿಂದಾಬಾದ್ ಹೇಳಿದ ಅಂತ ಕೊಲೆ ಆರೋಪಿಗಳು ಹೇಳಿದ್ದು. ಅದು ನನ್ನದಲ್ಲ” ಎಂದು ತಿಳಿಸಿದ್ದಾರೆ.
“ಗುಂಪು ಹಲ್ಲೆ ನಡೆಸಿದ್ದವರ ಪೈಕಿ ಈವರೆಗೆ 20 ಮಂದಿಯನ್ನು ಬಂಧಿಸಲಾಗಿದೆ. ಅವರನ್ನು ಪೊಲೀಸರು ವಿಚಾರಣೆ ಮಾಡುವಾಗ ಮೃತಪಟ್ಟ ಯುವಕ ‘ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ’ ಎಂದು ಹೇಳಿಕೆ ನೀಡಿದ್ದರು. ನೀವೆಲ್ಲ(ಮಾಧ್ಯಮ) ನಾನು ಹೇಳಿದಂಗೆ ಹೇಳಿಬಿಟ್ಟಿದ್ದೀರ. ಆರೋಪಿಗಳ ಪ್ರತಿಕ್ರಿಯೆಯಲ್ಲಿ ಈ ಮಾತು ಬಂದಿದೆ ಅಂತ ನಾನು ಹೇಳಿಕೆ ನೀಡಿದ್ದೆ” ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಕ್ಕೆ ಯಾವುದೇ ಪುರಾವೆ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಹೇಳಿದ್ದಾರೋ ಬಿಟ್ಟಿದ್ದಾರೋ ಎಂಬ ಬಗ್ಗೆ ನಮ್ಮಲ್ಲಿ ಮಾಹಿತಿ ಇಲ್ಲ. ಇದಕ್ಕೂ ನಮಗೆ ಸಾಕ್ಷಿ ಬೇಕಾಗುತ್ತದೆ. ಅದು ಕೂಡ ದೃಢೀಕರಿಸಬೇಕಿದೆ. ಕ್ರಿಕೆಟ್ ಆಡಲು ಹೋದವರಲ್ಲಿ ಅನೇಕರಿದ್ದರು. ಹಾಗಾಗಿ, ಎಲ್ಲರನ್ನೂ ಕರೆದು ವಿಚಾರಿಸಲಾಗುತ್ತಿದೆ” ಎಂದು ಗೃಹ ಸಚಿವರು ಪ್ರತಿಕ್ರಿಯೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು ಗುಂಪು ಹತ್ಯೆ | ಮೃತಪಟ್ಟ ಅಶ್ರಫ್ ಅಂತ್ಯಸಂಸ್ಕಾರ; ಮಗನ ಮೃತದೇಹ ಕಂಡು ಕಣ್ಣೀರಿಟ್ಟ ತಾಯಿ ರುಕಿಯಾ
“ನನಗೆ ಘಟನೆಯ ಬಗ್ಗೆ ಇನ್ನೂ ಪೂರ್ಣ ವರದಿ ಬಂದಿಲ್ಲ. ಸಂಪೂರ್ಣ ವರದಿ ಬಂದ ನಂತರ ಎಲ್ಲ ಮಾಹಿತಿಯನ್ನು ಹಂಚುತ್ತೇನೆ. ಯಾವುದೇ ಪ್ರಕರಣವನ್ನು ನಾವು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚಿನ ತನಿಖೆಯನ್ನು ಮಾಡುತ್ತಿದ್ದೇವೆ.” ಎಂದು ತಿಳಿಸಿದ್ದಾರೆ.