ನ್ಯಾಯಾಂಗದ ಮೇಲೆ ಮುಂದುವರೆದ ಬಿಜೆಪಿಗರ ದಾಳಿ; ಸಾಂವಿಧಾನಿಕ ನೈತಿಕ ಮೌಲ್ಯ ಮರೆತರೇ ಸಂಸದರು?

Date:

Advertisements
ವಿಚಾರ ಭಿನ್ನತೆ ಪ್ರಜಾಪ್ರಭುತ್ವದ ಅವಿಭಾಜ್ಯ ಭಾಗವೇ ಆಗಿದ್ದರೂ, ನ್ಯಾಯಾಂಗದ ವಿರುದ್ಧ ನಡೆಯುವ ಕೀಳುಮಟ್ಟದ ಭಾಷೆಯ ದಾಳಿಗಳು ದೇಶದ ನೈತಿಕ ಬುನಾದಿಯನ್ನು ಕದಲಿಸಿಬಿಡುತ್ತವೆ. ರಾಜಕೀಯ ನಾಯಕರು ಈ ನೈತಿಕ ಹೊಣೆಗಾರಿಕೆಯನ್ನು ಅರಿತು ನಡೆದುಕೊಳ್ಳಬೇಕಿದೆ.

ದೇಶದ ನ್ಯಾಯಾಂಗ ವ್ಯವಸ್ಥೆಯು ಇತ್ತೀಚೆಗೆ ಬಿಜೆಪಿ ನಾಯಕರಿಂದ ತೀವ್ರ ದಾಳಿಗೆ ಒಳಗಾಗಿದ್ದು, ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಣ ಅಧಿಕಾರ ಸಮತೋಲನದ ಚರ್ಚೆಗೆ ದಾರಿ ಮಾಡಿದೆ.

“ಭಾರತದ ಸಂವಿಧಾನದ ಪ್ರಕಾರ ರಾಷ್ಟ್ರಪತಿಗಳು ʼಸರ್ವೋಚ್ಚʼ ರಾಷ್ಟ್ರಪತಿ ಭವನವನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ ಖಂಡನೀಯ. ಭಾರತದ ಸಂವಿಧಾನದಲ್ಲಿ ಯಾವುದೇ ಸ್ಥಾನ ಅಥವಾ ವ್ಯಕ್ತಿಯನ್ನು ʼಸರ್ವೋಚ್ಚʼ (Absolute or Supreme beyond question) ಎಂದು ಪರಿಗಣಿಸಲಾಗಿಲ್ಲ. ರಾಷ್ಟ್ರಪತಿಯಾಗಲಿ, ಪ್ರಧಾನಮಂತ್ರಿ  ಅಥವಾ ನ್ಯಾಯಮೂರ್ತಿಯಾಗಲಿ ಸಂವಿಧಾನದ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸಬೇಕು. ಅನುಚ್ಛೇದ 52 ರಿಂದ 62ರ ತನಕ ರಾಷ್ಟ್ರಪತಿ ಹುದ್ದೆಯ ವಿವರವಿದೆ. ರಾಷ್ಟ್ರಪತಿ ಭಾರತದ ರಾಜತಾಂತ್ರಿಕ ಮುಖ್ಯಸ್ಥರಾಗಿದ್ದರೂ, ಅವರ ಅಧಿಕಾರಗಳು ನಿರ್ದಿಷ್ಟವಾಗಿವೆ. ಮುಖ್ಯವಾಗಿ ಸಂವಿಧಾನ ಮತ್ತು ಸಚಿವರ ಪರಾಮರ್ಶನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾರೆ.

ಭಾರತದ ಪ್ರಜಾಪ್ರಭುತ್ವದಲ್ಲಿ, ಯಾವುದೇ ಹುದ್ದೆಯ ವ್ಯಕ್ತಿಯೂ ಅಥವಾ ಸಂಸ್ಥೆಯೂ ಪ್ರಶ್ನೆಗೊಳಗಾಗದಿರಬೇಕು ಎಂಬುದು ಸಂವಿಧಾನಾತ್ಮಕ ರೀತಿಯಲ್ಲ. ಸಂವಿಧಾನಾತ್ಮಕ ನಿರೀಕ್ಷೆಯ ಪ್ರಕಾರ, ಯಾವುದೇ ನಿರ್ಧಾರ ಅಥವಾ ನಡವಳಿಕೆಗೆ ಪ್ರಶ್ನೆಯುಂಟಾಗಬಹುದು ಮತ್ತು ಪ್ರಶ್ನೆ ಮಾಡಬೇಕು ಎಂಬುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ.

Advertisements

ಇಂತಹ ಹೇಳಿಕೆಗಳು ಜನತೆಯ ಹಕ್ಕುಗಳನ್ನೂ, ಮತ್ತು ಹುದ್ದೆದಾರರ ಹೊಣೆಗಾರಿಕೆಗಳನ್ನೂ ಹತ್ತಿಕ್ಕುವ ಭಯವನ್ನು ಉಂಟುಮಾಡುತ್ತವೆ. ಇದು ಸಾರ್ವಜನಿಕ ನಂಬಿಕೆಗೆ ಹಾನಿಮಾಡುವ ಮತ್ತು ನೈತಿಕ ಬೆಲೆ ತೆರಬೇಕಾದ ಸಾಧ್ಯತೆ ಕೂಡ ಇದೆ.

ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ನೀಡಿರುವ ಹೇಳಿಕೆಗಳ ಮೇಲೆ ಕಾನೂನಾತ್ಮಕ ನಿಯಂತ್ರಣಗಳಿವೆ ಎನ್ನುವುದರ ಪೂರಕವಾಗಿ, ಮತ್ತೊಂದು ಗಂಭೀರವಾದ ನೈತಿಕ ಸವಾಲು ಕೂಡ ಇದೆ. ಭಾರತೀಯ ಸಂವಿಧಾನದ ಅನುಚ್ಛೇದ 69ರ ಅನ್ವಯ, ಉಪರಾಷ್ಟ್ರಪತಿ ಅವರು ʼʼಸಂವಿಧಾನ ಮತ್ತು ಕಾನೂನುಗಳನ್ನು ಸಂರಕ್ಷಿಸುವುದು, ರಕ್ಷಿಸುವುದು ಮತ್ತು ರಕ್ಷಣೆ ನೀಡುವುದುʼʼ ಎಂಬುದರ ಕುರಿತು ಪ್ರಮಾಣ ವಚನ ಮಾಡುತ್ತಾರೆ.

ಅದೇ ರೀತಿಯಲ್ಲಿ, ಸಂಸತ್ ಸದಸ್ಯರೂ ಕೂಡ ಸಂವಿಧಾನದ ಅನುಸೂಚಿ 3ರೊಂದಿಗೆ ಅನುಚ್ಛೇದ 99ರ ಅಡಿಯಲ್ಲಿ ಕಡ್ಡಾಯಗೊಳಿಸಿದಂತೆ ʼʼಸಂವಿಧಾನ ಕುರಿತು ನಿಜವಾದ ನಂಬಿಕೆ ಮತ್ತು ಬದ್ಧತೆ(ನಿಷ್ಠೆ) ಹೊಂದಲು, ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಕಾಪಾಡುವುದು ಹಾಗೂ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನೆರವೇರಿಸುವುದು ತಮ್ಮ ಕರ್ತವ್ಯ”ವೆಂದು ಪ್ರಮಾಣ ಮಾಡುತ್ತಾರೆ.

ಈ ಪ್ರಮಾಣ ವಚನಗಳು ಔಪಚಾರಿಕ ಭ್ರಮೆಯ ಪದಗಳಲ್ಲ. ಇವು ಸಂವಿಧಾನಾತ್ಮಕ ಹುದ್ದೆಯನ್ನು ಅಲಂಕರಿಸಿರುವವರು ಸಂವಿಧಾನದ ಗೌರವವನ್ನು ಉಳಿಸುವುದು ಮತ್ತು ಅದರ ಅಂಗಸಂಸ್ಥೆಗಳ ಗೌರವವನ್ನು ಕಾಯುವಂತಹ ಗಂಭೀರವಾದ ಕರ್ತವ್ಯವನ್ನು ವಿಧಿಸುತ್ತವೆ. ಇದರ ಜತೆಗೆ, ಈ ಹುದ್ದೆಗಳು ಕೇವಲ ಕಾನೂನಾತ್ಮಕ ಹೊಣೆಗಾರಿಕೆಯನ್ನು ಮಾತ್ರವಲ್ಲದೆ, ಸಂಯಮ, ವಿನಮ್ರತೆ ಮತ್ತು ಪ್ರಬುದ್ಧತೆ ಎಂಬ ನೈತಿಕ ನಿರೀಕ್ಷೆಯನ್ನೂ ಒಳಗೊಂಡಿವೆ.

ಆದುದರಿಂದ, ಸುಪ್ರೀಂ ಕೋರ್ಟ್ ವಿರುದ್ಧ ರಾಜಕೀಯ ಉದ್ದೇಶಿತ ಟೀಕೆಗಳನ್ನು ಮಾಡುವುದು, ಈ ಪ್ರಮಾಣ ವಚನದಲ್ಲಿ ನಿಖರವಾಗಿ ಪ್ರತಿಪಾದಿಸಿರುವ ಸಂವಿಧಾನಾತ್ಮಕ ಕರ್ತವ್ಯಗಳಿಗೆ ವಿರುದ್ಧವಾಗಿದೆ. ಅಷ್ಟೇ ಅಲ್ಲ, ಸಾರ್ವಜನಿಕ ಹುದ್ದೆಯನ್ನು ಹೊಂದುವ ಮೂಲಕ ಬರುವ ಘನತೆ ಮತ್ತು ಜವಾಬ್ದಾರಿಗೆ ದ್ರೋಹ ಬಗೆದಂತಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೆಲವು ರಾಜಕೀಯ ತೀರ್ಮಾನಗಳನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸಂಸತ್ತೇ ಶ್ರೇಷ್ಠ ಎಂದು ವಾದಿಸಿದ್ದಾರೆ. ʼನ್ಯಾಯಾಂಗವು ತನ್ನ ಮಿತಿ ಮೀರುತ್ತಿದ್ದು, ಪಾರ್ಲಿಮೆಂಟ್‌ನ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸಿ ತಿರಸ್ಕರಿಸುತ್ತಿದೆʼ ಎಂದು ಆರೋಪಿಸಿದ್ದರು.

ತಮಿಳುನಾಡು ಮತ್ತು ರಾಜ್ಯಪಾಲರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಟೀಕಿಸಿದ ಉಪರಾಷ್ಟ್ರಪತಿ “ಸುಪ್ರೀಂ ಕೋರ್ಟ್‌ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ತನ್ನ ವಿಶೇಷಾಧಿಕಾರವಾದ ʼ142ನೇ ವಿಧಿಯನ್ನು ಪರಮಾಣು ಕ್ಷಿಪಣಿʼಯನ್ನಾಗಿ ಬಳಸಿದೆ. ದೇಶದಲ್ಲಿ ಧಾರ್ಮಿಕ ಯುದ್ಧಗಳನ್ನು ಪ್ರಚೋದಿಸಲು ಕಾರಣೀಭೂತವಾಗಿದೆ” ಎಂದಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಧನಕರ್ ನ್ಯಾಯಾಂಗದ ಮೇಲೆ ದಾಳಿ ಮಾಡಿ ಆಡಿರುವ ಈ ಮಾತುಗಳು ಆತಂಕವನ್ನು ಹೆಚ್ಚಿಸಿದ್ದವು. ಅವರ ಈ ಟೀಕೆ ಟಿಪ್ಪಣಿಯು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಧನಕರ್ ಮಾತಿನಿಂದ ಉತ್ತೇಜನ ಪಡೆದಿರುವಂತೆ ಕಂಡು ಬಂದಿರುವ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ ಮತ್ತು ದಿನೇಶ್ ಶರ್ಮಾ ಅವರು ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆಡಳಿತ ಪಕ್ಷ ಬಿಜೆಪಿ ಈ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿದೆ. ಆದರೂ ದುಬೆ ಮತ್ತು ಶರ್ಮಾ ಹೇಳಿಕೆಯು ನ್ಯಾಯಾಲಯದ ಇತ್ತೀಚಿನ ತೀರ್ಪುಗಳ ಕುರಿತು ಮೋದಿ ಸರ್ಕಾರ ಹಾಗೂ ಆಡಳಿತ ಪಕ್ಷದ ಅಸಮಾಧಾನವನ್ನು ಪ್ರತಿಬಿಂಬಿಸುತ್ತದೆ.

ʼಸುಪ್ರೀಂ ಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದು, ಎರಡು ವಿಷಯಗಳಲ್ಲಿ ಕಾರ್ಯಾಂಗದ ವ್ಯಾಪ್ತಿಯನ್ನು ಅತಿಕ್ರಮಿಸಿದೆʼ ಎಂಬುದು ಬಿಜೆಪಿಯ ಅಸಮಾಧಾನ. ಮೊದಲನೆಯದು, ಮಸೂದೆಗಳ ಸ್ವೀಕಾರ ಅಥವಾ ತಿರಸ್ಕಾರಕ್ಕೆ ಗಡುವು ನಿಗದಿಪಡಿಸುವ ಮೂಲಕ ರಾಜ್ಯಪಾಲರೊಂದಿಗೆ ರಾಷ್ಟ್ರಪತಿಯನ್ನು ಎಳೆದು ತರುವುದು ಮತ್ತು ಎರಡನೆಯದು, ಸಂಸತ್ತು ಅಂಗೀಕರಿಸಿದ ವಕ್ಫ್ ಕಾಯ್ದೆಯ ಬಗ್ಗೆ ಮಧ್ಯಂತರ ತಡೆಯಾಜ್ಞೆಯ ಆದೇಶವನ್ನು ನೀಡಿರುವುದರ ಕುರಿತು ಬಿಜೆಪಿ ಸಂಸದರು ಸುಪ್ರೀಂ ಕೋರ್ಟ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

2025 ರ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿಚಾರಣೆಯ ಸಮಯದಲ್ಲಿ ಕಾನೂನಿನ ಕೆಲವು ಅಂಶಗಳನ್ನು ಹಾಗೂ ಪ್ರಮುಖ ನಿಬಂಧನೆಗಳನ್ನು ತಡೆಹಿಡಿಯಲು ಸಿಜೆಐ ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠವು ಮುಂದಾಗಿ ಒಲವು ವ್ಯಕ್ತಪಡಿಸಿದ್ದು ಮೋದಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿತು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲವರು ದೇಶದಲ್ಲಿನ ಗಲಭೆಗಳು ಮತ್ತು ಅಶಾಂತಿಗೆ ಸಿಜೆಐ ಖನ್ನಾ ಅವರನ್ನು ದೂಷಿಸುವ ಅಪಾಯಕಾರಿ ಹಂತಕ್ಕೆ ಹೋಗಿದ್ದಾರೆ. ಅಲ್ಲದೆ ನಾಲ್ಕು ಬಾರಿ ಬಿಜೆಪಿ ಸಂಸದರಾಗಿರುವ ದುಬೆ ಅವರು ʼಸುಪ್ರೀಂ ಕೋರ್ಟ್ ಕಾನೂನುಗಳನ್ನು ರೂಪಿಸಲು ಆರಂಭಿಸಿದರೆ ಸಂಸತ್ತಿಗೆ ಕೆಲಸವೇನು ಉಳಿಯುತ್ತದೆ, ಅದನ್ನು ಮುಚ್ಚಬೇಕುʼ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ವ್ಯಂಗ್ಯವಾಗಿ ಬರೆದುಕೊಂಡಿದ್ದರು.

“ವಕ್ಫ್‌ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಲು ಸಂವಿಧಾನವು ಯಾವುದೇ ಕಾಲಮಿತಿಯನ್ನು ವಿಧಿಸಿಲ್ಲ. ಆದರೆ ಇಂದು ಸುಪ್ರೀಂ ಕೋರ್ಟ್ ಒಂದು ಅಥವಾ ಮೂರು ತಿಂಗಳ ಕಾಲಮಿತಿ ಇರಬೇಕು ಎಂದು ಹೇಳಿದರೆ, ಅದು ಸಾಂವಿಧಾನಿಕ ತಿದ್ದುಪಡಿಯಾಗುತ್ತದೆ. ಸಾಂವಿಧಾನಿಕ ತಿದ್ದುಪಡಿಯನ್ನು ನ್ಯಾಯಾಲಯವು ಮಾಡುತ್ತಿದ್ದರೆ, ಶಾಸಕಾಂಗ ಮತ್ತು ಸಂಸತ್ತು ಏಕೆ ಬೇಕು?” ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದುಬೆ ಹೇಳಿದರು.

ಸಲಿಂಗಕಾಮವನ್ನು ಅಪರಾಧ ಮುಕ್ತಗೊಳಿಸುವುದು ಮತ್ತು ಐಟಿ ಕಾಯ್ದೆಯ ಸೆಕ್ಷನ್ 66(ಎ)ನ್ನು ರದ್ದುಗೊಳಿಸುವಂತಹ ತೀರ್ಪುಗಳನ್ನು ಉದಾಹರಣೆಗಳಾಗಿ ಉಲ್ಲೇಖಿಸಿ, ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗದ ಪಾತ್ರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆಯೆಂದು ಆರೋಪಿಸಿದರು.

“ತಿದ್ದುಪಡಿಗಳನ್ನು ಮಾಡುವುದು ಸಂಸತ್ತಿನ ಹಕ್ಕು. ತಿದ್ದುಪಡಿಯ ಪರವಾಗಿ ನೀವು ಮೂರನೇ ಎರಡರಷ್ಟು ಬಹುಮತವನ್ನು ಹೊಂದಿರಬೇಕು. ಆ ಅಲ್ಲಿ ಕುಳಿತಿರುವ ಇಬ್ಬರು ನ್ಯಾಯಾಧೀಶರು, ಅವರು ಸಾಂವಿಧಾನಿಕ ನಿಬಂಧನೆಯ ಭವಿಷ್ಯವನ್ನು ನಿರ್ಧರಿಸುತ್ತಾರೆ? ನನಗೆ ಇದು ಅರ್ಥವಾಗುತ್ತಿಲ್ಲ. ಇದು ನ್ಯಾಯಾಂಗದ ಅತಿರೇಕದ ವರ್ತನೆ. ಹೀಗೆ ಮಾಡಬಾರದಿತ್ತು” ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

ಅಂತೆಯೇ, ಉತ್ತರ ಪ್ರದೇಶದ ಮಾಜಿ ಉಪಮುಖ್ಯಮಂತ್ರಿ, ರಾಜ್ಯಸಭಾ ಸಂಸದ ದಿನೇಶ್ ಶರ್ಮಾ ಅವರು, “ಭಾರತದ ಸಂವಿಧಾನದ ಪ್ರಕಾರ ರಾಷ್ಟ್ರಪತಿಗಳೇ ʼಸರ್ವೋಚ್ಚʼ. ರಾಷ್ಟ್ರಪತಿ ಭವನವನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ” ಎಂದು ಟೀಕಿಸಿದ್ದರು.

ಈ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ಸಂಸದರಾದ ನಿಶಿಕಾಂತ್ ದುಬೆ ಮತ್ತು ದಿನೇಶ್ ಶರ್ಮಾ ಅವರ ಸುಪ್ರೀಂ ಕೋರ್ಟ್ ಟೀಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದ್ದು, ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ” ಎಂದಿದ್ದರು.

“ನ್ಯಾಯಾಂಗ ಮತ್ತು ಮುಖ್ಯ ನ್ಯಾಯಮೂರ್ತಿಗಳ ಕುರಿತ ಅವರ ಕಾಮೆಂಟ್‌ಗಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಇವು ಅವರ ವೈಯಕ್ತಿಕ ಹೇಳಿಕೆಯಾಗಿವೆ. ಆದರೆ ಬಿಜೆಪಿ ಅವುಗಳನ್ನು ಒಪ್ಪುವುದಿಲ್ಲ. ಅಂತಹ ಹೇಳಿಕೆಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ. ಬಿಜೆಪಿ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ” ಎಂದು ಸಾರಿದ್ದರು.

ದುಬೆ ಮತ್ತು ಶರ್ಮಾ ಅವರ ಹೇಳಿಕೆಗಳಿಂದ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಪಕ್ಷವನ್ನು ದೂರವಿಟ್ಟಿದ್ದರೂ, ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ʼನ್ಯಾಯಾಂಗ ಅತಿರೇಕದಿಂದ ವರ್ತಿಸಿದೆʼ ಎಂದು ಬಿಜೆಪಿಯ ಹಲವು ಹಿರಿಯ ನಾಯಕರು ಖಾಸಗಿಯಾಗಿ ಹೇಳುತ್ತಾರೆ.

ರಾಜ್ಯಪಾಲರ ಪರಿಗಣನೆಗೆ ಕಾಯ್ದಿರಿಸಿದ ಮಸೂದೆಗಳನ್ನು ತೆರವುಗೊಳಿಸಲು ಮೂರು ತಿಂಗಳ ಗಡುವು ನಿಗದಿಪಡಿಸುವ ಮೊದಲು ರಾಷ್ಟ್ರಪತಿಯವರ ಅಭಿಮತವನ್ನೂ ಸುಪ್ರೀಂ ಕೋರ್ಟ್ ಕೇಳಬೇಕಿತ್ತು ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಈ ಹಿಂದೆ ತಿಳಿಸಿದ್ದರು.

ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ತಮಿಳುನಾಡು ರಾಜ್ಯಪಾಲರ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ʼಅತಿರೇಕʼ ಎಂದು ಹೇಳಿರುವ ʼಆತಂಕʼದ ಸೂಚನೆ ಸ್ಪಷ್ಟವಾಗಿ ಕಾಣುತ್ತದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ವಕ್ಫ್ (ತಿದ್ದುಪಡಿ) ಮಸೂದೆಯ ಸಂಸತ್ತಿನ ಜಂಟಿ ಸಮಿತಿಯ ಮುಖ್ಯಸ್ಥ, ಬಿಜೆಪಿ ಸಂಸದ ಜಗದಾಂಬಿಕಾ ಪಾಲ್, ನ್ಯಾಯಾಲಯವು ವಕ್ಫ್‌ ಕಾಯ್ದೆಯನ್ನು ತಡೆಹಿಡಿದರೆ ಜೆಪಿಸಿಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

“ನ್ಯಾಯಾಲಯದ ಎಲ್ಲ ಕಳವಳಗಳನ್ನು ಈಗಾಗಲೇ ಜೆಪಿಸಿಯಲ್ಲಿ ಪರಿಹರಿಸಲಾಗಿದೆ, ಅದು ಮಸೂದೆಯನ್ನು ವ್ಯಾಪಕವಾಗಿ ಪರಿಶೀಲಿಸಿದೆ. ಏನಾದರೂ ನ್ಯೂನತೆ ಇದ್ದರೆ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಮತ್ತು ಮುಸ್ಲಿಮರನ್ನು ದಾರಿ ತಪ್ಪಿಸುತ್ತಿವೆ. ಅವರು ದೇಶದ ವಿಭಜನೆಯನ್ನು ಬಯಸುತ್ತಿದ್ದಾರೆ” ಎಂದು ಪಾಲ್ ಹೇಳಿದ್ದಾರೆ.

“ಸರ್ಕಾರ ಮತ್ತು ಪಕ್ಷದೊಳಗಿನ ಅಸಮಾಧಾನದ ಹೊರತಾಗಿಯೂ, ಸುಪ್ರೀಂ ಕೋರ್ಟ್ ಮೇಲೆ ದಾಳಿ ಮಾಡಲು ತನ್ನ ಕಾರ್ಯಕರ್ತರಿಗೆ ಅವಕಾಶ ನೀಡುತ್ತಿದ್ದೇವೆ ಎಂಬ ಸಂದೇಶವನ್ನು ಕಳುಹಿಸಲು ಸರ್ಕಾರ ಬಯಸುವುದಿಲ್ಲ. ಆದ್ದರಿಂದ, ಈ ಸಂದೇಶವನ್ನು ವಕ್ತಾರರ ಬದಲು ಬಿಜೆಪಿ ಮುಖ್ಯಸ್ಥರು ಪ್ರಸಾರ ಮಾಡಿದ್ದಾರೆ” ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದರು.

“ಸಾಂವಿಧಾನಿಕ ಪ್ರಾಧಿಕಾರವು ಈ ವಿಷಯದ ಬಗ್ಗೆ ಮಾತನಾಡಿದರೆ, ಅದು ಬೇರೆ ವಿಷಯ… ಆದರೆ ಸಿಜೆಐ ಮೇಲೆ ದಾಳಿ ಮಾಡಲು ಕಾರ್ಯಕರ್ತರಿಗೆ ಅವಕಾಶ ನೀಡುವುದು ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ. ನ್ಯಾಯಾಂಗದ ಮೇಲೆ ದಾಳಿ ಮಾಡುವುದನ್ನು ಪಕ್ಷವು ಸಾರ್ವಜನಿಕವಾಗಿ ನೋಡಲು ಬಯಸುವುದಿಲ್ಲ” ಎಂದು ಅವರು ಹೇಳಿದರು.

ರಾಜ್ಯಸಭಾ ಸಂಸದ ಡಾ. ದಿನೇಶ್ ಶರ್ಮಾ ಅವರ ಹೇಳಿಕೆಯನ್ನು ಸಂವಿಧಾನದ ದೃಷ್ಟಿಕೋನದಿಂದ ನೋಡಿದರೆ, ಅದು ಅತಿರೇಕದ ಪ್ರತಿಬಿಂಬವಾಗಬಹುದು. ರಾಷ್ಟ್ರಪತಿ ಹುದ್ದೆಗಿಂತಲೂ ಮೇಲಿರುವುದು ಸಂವಿಧಾನ ಎಂಬ ಸತ್ಯವನ್ನು ನಾವು ಮರೆಯಬಾರದು. ಏಕೆಂದರೆ ಭಾರತದ ಪ್ರಜಾಪ್ರಭುತ್ವವು ವ್ಯಕ್ತಿಗಳಿಗಿಂತ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ.

ರಾಜಕೀಯ ಲಾಭಕ್ಕಾಗಿ ಸುಪ್ರೀಂ ಮೇಲೆ ಮಾಡಿರುವಂತಹ ವಾಗ್ದಾಳಿಗಳಿಗಳಿಗೆ ಸಾಂವಿಧಾನಿಕ ನೈತಿಕ ಬೆಲೆ ತೆರಬೇಕಾಗುತ್ತದೆ.

1. ನ್ಯಾಯಾಂಗದ ವಿಶ್ವಾಸಾರ್ಹತೆ ಕಳೆದುಹೋಗುವ ಅಪಾಯ: ಯಾವುದೇ ಪಕ್ಷ ಅಥವಾ ನಾಯಕ ನ್ಯಾಯಾಂಗದ ನಿರ್ಣಯಗಳನ್ನು ನಿರಂತರವಾಗಿ ಸಾರ್ವಜನಿಕವಾಗಿ ಟೀಕಿಸುವುದರಿಂದ ಜನಸಾಮಾನ್ಯರೂ ಕೂಡ ನ್ಯಾಯಾಲಯಗಳ ಪ್ರಾಮಾಣಿಕತೆ ಮತ್ತು ಸ್ವಾತಂತ್ರ್ಯವನ್ನು ನಂಬದೆಹೋಗುವ ಸ್ಥಿತಿ ಉಂಟಾಗಬಹುದು.

2. ತ್ರಿವರ್ಣ ವ್ಯವಸ್ಥೆಯ ಸಮತೋಲನ ಹಾನಿ: ಭಾರತದ ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎನ್ನುತ್ತ ಈ ಮೂರು ಅಂಗಗಳ ಸಮನ್ವಯವನ್ನು ಒತ್ತಿಹೇಳುತ್ತದೆ. ಈ ಸಮತೋಲನದ ಮೇಲೆ ಧಕ್ಕೆ ಬಿದ್ದರೆ, ರಾಜ್ಯದ ಕಾರ್ಯವೈಖರಿಯೇ ಕುಸಿಯಬಹುದು.

3. ಪ್ರಜಾಪ್ರಭುತ್ವದ ಧ್ಯೇಯಗಳಿಗೆ ಧಕ್ಕೆ: ವಿದ್ಯಮಾನ ಸಂಘಟನೆಯ ಪ್ರತಿಯೊಂದು ಅಂಗವು ತನ್ನ ನೈತಿಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾದಾಗ, ರಾಜಕೀಯ ಪಕ್ಷಗಳಿಂದ ಬರುವ ಅತಿರೇಕದ ಟೀಕೆಗಳು ನ್ಯಾಯವ್ಯವಸ್ಥೆಯ ಧೈರ್ಯವನ್ನು ಕುಗ್ಗಿಸುತ್ತವೆ. ಇದು ಭವಿಷ್ಯದ ತೀರ್ಮಾನಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿದ್ದೀರಾ? ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆಗಳು ನಿಲ್ಲಬೇಕಿದ್ದರೆ ಜಾತಿವಿನಾಶ ಆಗಲೇಬೇಕು

4. ಜನಮಾನಸದಲ್ಲಿ ಗೊಂದಲ: ನ್ಯಾಯಾಲಯವು ಯಾರ ಪರ, ಯಾರ ವಿರುದ್ಧ ಎಂಬ ಸಂಶಯ ಜನರಲ್ಲಿ ಮೂಡುವುದು ಒಂದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಸತ್ಯ, ನ್ಯಾಯ, ಧರ್ಮಗಳ ಮೌಲ್ಯ ಕುಗ್ಗುತ್ತದೆ. ಬಿಜೆಪಿ ನಾಯಕರು ಮೇಲಿಂದ ಮೇಲೆ ಸುಪ್ರೀಂ ಕೋರ್ಟಿನ ತೀರ್ಪನ್ನು ಪ್ರಶ್ನಿಸುತ್ತ, ಟೀಕಿಸುತ್ತ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರಬುದ್ಧತೆ ಮೆರೆಯುವ ನಾಯಕರೇ ಇವರ ಮೂಗಿನ ನೇರಕ್ಕೆ ನ್ಯಾಯಾಂಗವನ್ನು ಅಲ್ಲಗಳೆದರೆ ನ್ಯಾಯಾಲಯ ಘನತೆ ವಿಶ್ವಾಸಾರ್ಹತೆ ಕುರಿತು ಜನಸಾಮಾನ್ಯರಿಗೆ ಯಾವ ರೀತಿಯ ಸಂದೇಶ ರವಾನಿಸುತ್ತಾರೆ?

ರಾಜಕೀಯ ನಾಯಕರು ತಾವು ಮಾಡಿದ್ದೇ ಸರಿ ನಡೆದಿದ್ದೇ ದಾರಿ ಎಂದು ಸಮಾಜ ಕೋಲೆಬಸವನಂತೆ ತಲೆಯಾಡಿಸಿ ಕೂತರೆ, ʼನ್ಯಾಯʼವೆಂಬ ಪದಕ್ಕೆ ಯಾವ ಅರ್ಥ ದಕ್ಕೀತು. ವಿಚಾರ ಭಿನ್ನತೆ ಪ್ರಜಾಪ್ರಭುತ್ವದ ಅವಿಭಾಜ್ಯ ಭಾಗವೇ ಆಗಿದ್ದರೂ, ನ್ಯಾಯಾಂಗದ ವಿರುದ್ಧ ನಡೆಯುವ ಕೀಳುಮಟ್ಟದ ಭಾಷೆಯ ದಾಳಿಗಳು ದೇಶದ ನೈತಿಕ ಬುನಾದಿಯನ್ನು ಕದಲಿಸಿಬಿಡುತ್ತವೆ. ಈ ನೈತಿಕ ಬೆಲೆ ತೆರಬೇಕಾದ ಅಂಶ ತಕ್ಷಣ ಗಮನಕ್ಕೆ ಬಾರದೇ ಇದ್ದರೂ, ಅದು ದೇಶದ ನ್ಯಾಯ ವ್ಯವಸ್ಥೆಯ ಭವಿಷ್ಯ ಮತ್ತು ಪ್ರಜಾಪ್ರಭುತ್ವದ ಮೇಲೆ ದೀರ್ಘಕಾಲಿಕ ಅಡ್ಡ ಪರಿಣಾಮ ಬೀರಲಿದೆ. ರಾಜಕೀಯ ನಾಯಕರು ಈ ನೈತಿಕ ಹೊಣೆಗಾರಿಕೆಯನ್ನು ಅರಿತು ನಡೆದುಕೊಳ್ಳಬೇಕಿದೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X