ಮನುವಾದಿಗಳು ಬಸವತತ್ವದ ವಿರೋಧಿಗಳು. ಮನುಷ್ಯತ್ವ ಬಸವವಾದಿ ಶರಣರ ಪ್ರಾಣ. ಮನುವಾದಿಗಳು ಬೇಕೋ, ಬಸವವಾದಿಗಳು ಬೇಕೋ ನೀವೇ ನಿರ್ಧರಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಸವ ಜಯಂತಿ ಪ್ರಯುಕ್ತ ಕೂಡಲಸಂಗಮದಲ್ಲಿ ಆಯೋಜಿಸಿದ್ದ “ಶರಣರ ವೈಭವ-2025” ನ್ನು ಉದ್ಘಾಟಿಸಿ, ಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
“ವಚನ ಎಂದರೆ ಮಾತು. ಶರಣರ ವಚನ ಜನರ ಭಾಷೆಯಲ್ಲಿವೆ. ಆದ್ದರಿಂದ ವಚನ ಸಾಹಿತ್ಯ, ಜನರ ಸಾಹಿತ್ಯ ಆಗಿದೆ. ಹಿಂದೆ ಸಂಸ್ಕೃತ ಕಲಿತರೆ ಕಲಿಯುವ ಶೂದ್ರರ ಕಿವಿಗೆ ಕಾದ ಸೀಸ ಉಯ್ಯುವ ಶಿಕ್ಷೆ ಇತ್ತು. ಇದರಿಂದಲೇ ಭಾರತೀಯ ಶೂದ್ರ ಸಮುದಾಯ ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಶಿಕ್ಷಣ ಇಲ್ಲದ ಕಾರಣಕ್ಕೆ ಅಸಮಾನತೆ ಬೆಳೆಯಿತು” ಎಂದರು.
“ನಮ್ಮ ಸಂವಿಧಾನ ವೈರುದ್ಯತೆ ಇರುವ ಸಮಾಜದಲ್ಲಿ ಜಾರಿ ಆಗುತ್ತಿದೆ. ಪ್ರಜಾಪ್ರಭುತ್ವದ ಕಾರಣದಿಂದ ರಾಷ್ಟ್ರಪತಿಯಿಂದ ಪೌರ ಕಾರ್ಮಿಕರವರೆಗೂ ಎಲ್ಲರಿಗೂ ಒಂದೇ ಮತ ಎನ್ನುವ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಇದು ಸಿಗದೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಇಲ್ಲ” ಎಂದು ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದರು.
“ಇವನಾರವ.. ಇವನಾರವ.. ಎಂದು ವಚನ ಹೇಳೋದು, ಈ ಕಡೆ ಬಂದು ಅವನು ಯಾವ ಜಾತಿ ಎಂದು ಕೇಳೋದು ನಡೆಯುತ್ತಿದೆ. ಹೀಗಾದರೆ ಬಸವಣ್ಣನವರ ಆಶಯದಂತೆ ಜಾತಿ ನಿರ್ಮೂಲನೆ ಆಗಲ್ಲ. ಬಸವಣ್ಣನವರು ಮತ್ತು ಶರಣರು ಕರ್ಮಸಿದ್ಧಾಂತದ ವಿರುದ್ಧ ಹೋರಾಟ ನಡೆಸಿದರು. ಆದರೆ ಈಗ ಶಿಕ್ಷಣ ಪಡೆದವರೇ ಜನ್ಮ ಜನ್ಮಗಳಲ್ಲಿ ನಂಬಿಕೆ ಇಟ್ಟು ಕರ್ಮಸಿದ್ಧಾಂತ ಆಚರಿಸುತ್ತಿದ್ದಾರೆ. ಒಂದು ಕಡೆ ಬಸವ ಜಯಂತಿ ಆಚರಿಸೋದು ಮತ್ತೊಂದು ಕಡೆ ಕರ್ಮಸಿದ್ಧಾಂತ ಆಚರಿಸೋದು ಮಾಡಿದರೆ ಬಸವ ಜಯಂತಿಗೆ ಅರ್ಥ ಇಲ್ಲ” ಎಂದರು.
“ಗೋರುಚ ಅವರ ಸಮಿತಿ ವರದಿಯಂತೆ ಅನುಭಾವಿಗಳ ಅನುಭವ ಮಂಟಪ ಮಾಡುವ ಕೆಲಸ ಆಗಿದ್ದು ನಮ್ಮಿಂದ. ಇದನ್ನು ಈ ವರ್ಷವೇ ಪೂರ್ಣಗೊಳಿಸುತ್ತೇವೆ. ಬಸವಣ್ಣರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ನಾವೇ. ಅಕ್ಕಮಹಾದೇವಿ ವಿಶ್ವ ವಿದ್ಯಾಲಯ ನಾಮಕಾರಣ ಮಾಡಿದ್ದು ನಾವೇ” ಎಂದು ಹೇಳಿದರು.
“ಮನ್ ಕಿ ಬಾತ್ ನಲ್ಲಿ ಚರ್ಚೆ ಇಲ್ಲ. ಏಕಮುಖವಾಗಿ ಹೇಳಿದ್ದನ್ನು ಕೇಳಬೇಕು ಎನ್ನುವ ಧೋರಣೆ ಇದೆ. ಇದು ಸರ್ವಾಧಿಕಾರಿ ಲಕ್ಷಣ. ಪ್ರಜಾಪ್ರಭುತ್ವದಲ್ಲಿ ಚರ್ಚೆ ಇರುತ್ತದೆ. ಸರ್ವಾಧಿಕಾರದಲ್ಲಿ ಚರ್ಚೆಗೆ ಅವಕಾಶ ಇಲ್ಲ. ಏಕಮುಖವಾಗಿ “ನಾನು ಹೇಳಿದ್ದನ್ನು ನೀವು ಕೇಳಿ” ಎನ್ನುವುದಷ್ಟೆ. “ಮನ್ ಕಿ ಬಾತ್” ರೀತಿ ನಾನು ಹೇಳ್ತೀನಿ, ನೀವು ಕೇಳಿ ಅನ್ನೋದು ಸರ್ವಾಧಿಕಾರಿ ಧೋರಣೆ” ಎಂದು ಟೀಕಿಸಿದರು.
ಸಚಿವರಾದ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ಶಿವರಾಜ್ ತಂಗಡಗಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.