ಕೊಡಗು ಜಿಲ್ಲೆ,ಕುಶಾಲನಗರ ಸಮೀಪದ ಚಿಕ್ಕ ಅಳುವಾರ ಕೊಡಗು ವಿಶ್ವವಿದ್ಯಾಲಯದ ಹಾರಂಗಿ ಸಭಾಂಗಣದಲ್ಲಿ, ಕೊಡಗು ದಲಿತ ಸಾಹಿತ್ಯ ಪರಿಷತ್ತು, ಕೊಡಗು ವಿಶ್ವ ವಿದ್ಯಾಲಯ, ಮಾನವ ಬಂಧುತ್ವ ವೇದಿಕೆ, ಸಹಮತ ವೇದಿಕೆ ಹಾಗೂ ಅಹಿಂದ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ‘ ಸಮಗ್ರ – ಸಮತೆಯೆಡೆಗೆ ಸಾಹಿತ್ಯ ‘ ಎಂಬ ವಿಷಯದ ರಾಷ್ಟಿಯ ವಿಚಾರ ಸಂಕಿರಣದಲ್ಲಿ, ಸಾಹಿತಿ ಅರ್ಜುನ್ ಮೌರ್ಯರವರ “ ಬೆಂದೊಡಲ ಕುಣಿತ ” ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ‘ ಇತಿಹಾಸ ನೆನಪುಗಳನ್ನು ಜೀವಂತವಾಗಿರಿಸುತ್ತದೆ ‘ ಎಂದು ಅಭಿಮತ ವ್ಯಕ್ತಪಡಿಸಿದರು.
” ವಿಜ್ಞಾನ – ತಂತ್ರಜ್ಞಾನ ರಂಗದಲ್ಲಿ ಮುಂದುವರಿದಿದ್ದೇವೆ ಎಂದು ಹೇಳಿಕೊಳ್ಳುವ ನಾವೇ ಶಿಕ್ಷಣ ರಂಗದಲ್ಲಿ ಕಳೆದ 75 ವರ್ಷಗಳಲ್ಲಿ ಹಿಂದುಳಿದವರಾಗಿಯೇ ಉಳಿದಿದ್ದೇವೆ. ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ್ದರು. ಮಹಿಳೆಯರ ಸುರಕ್ಷಿತತೆ ಮತ್ತು ಸಮಾನತೆಯ ದೃಷ್ಟಿಯಲ್ಲಿ ನಮ್ಮ ರಾಷ್ಟ್ರ ಇನ್ನೂ ಹಿಂದುಳಿದ ರಾಷ್ಟ್ರಗಳ ಪಟ್ಟಿಯಲ್ಲೇ ಉಳಿದಿದೆ. ಶಿಕ್ಷಣ ಎಂಬುದು ಶೋಷಣೆಯನ್ನು ಪ್ರಶ್ನಿಸಲು ಕಲಿಸುತ್ತದೆ. ಆದರೆ, ಇಂದು ನಾವು ಪ್ರಶ್ನಿಸಲು ಇರುವ ಹಕ್ಕನ್ನೇ ಪರೋಕ್ಷವಾಗಿ ಕಳೆದುಕೊಳ್ಳುತ್ತಿದ್ದೇವೆ. ನಾವು ತಿಳಿದೂ ತಿಳಿಯದೆಯೂ ಗುಲಾಮಗಿರಿಗೆ ದೂಡಲ್ಪಡುತ್ತಿದ್ದೇವೆ ” ಎಂದರು.
ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಆರ್.ಗಂಗಾಧರ ಕಾರ್ಯಕ್ರಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿ ”ಸಾಹಿತ್ಯ ಮನುಷ್ಯ ವಿರೋಧಿಯಾಗಿರಲು ಸಾಧ್ಯವಿಲ್ಲ. ಮನುಷ್ಯ ವಂಶದ ಉದ್ದಾರ ಮತ್ತು ಏಳಿಗೆ ಸಾಹಿತ್ಯದ ಮೂಲಕ ಮಾತ್ರ ಸಾಧ್ಯವಾಗಿದೆ. ಸಾಹಿತ್ಯ ಸಮಾಜವನ್ನು ಒಡೆಯುವಂತದ್ದು ಆಗಬಾರದು. ಸಾಹಿತ್ಯ ಮನುಷ್ಯನನ್ನು ಒಂದುಗೂಡಿಸುವಂತಾಗಬೇಕು. ದೇಶದ ಸ್ವಾಭಿಮಾನ ಮತ್ತು ಹೆಮ್ಮೆ ಭೌತಿಕ ಸೌಕರ್ಯಗಳಿಂದ ಅಳೆಯಬಾರದು. ದೇಶದ ಸ್ವಾಭಿಮಾನ ಮತ್ತು ಘನತೆಗೆ ಸಾಹಿತ್ಯ ಅಳತೆಗೋಲು ಆಗಬೇಕು”ಎಂದರು.

ಕೊಡಗು ವಿಶ್ವವಿದ್ಯಾಲಯ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಮಾತನಾಡಿ ” ಅಭಿವೃದ್ಧಿಯೆಂಬುದು ಶಿಕ್ಷಣದಿಂದ ಮಾತ್ರ ಸಾಧ್ಯ. ಮೌಲ್ಯಯುತ ಶಿಕ್ಷಣವೇ ಇಂದಿನ ಅಗತ್ಯ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣದ ಮೂಲಕ ಮೌಲ್ಯಯುತ ಸಮಾಜದ ಕನಸು ಕಂಡಿದ್ದರು ” ಎಂದರು.
ಸಾಮಾಜಿಕ ಚಿಂತಕ ವಿ.ಪಿ.ಶಶಿಧರ್ ಮಾತನಾಡಿ ‘ ಮಾನವ ಪ್ರೀತಿ ಮತ್ತು ಮಾನವ ಐಕ್ಯತೆಗೆ ಸಾಹಿತ್ಯಗಳು ನೆರವಾಗಿವೆ. ಸಾಹಿತ್ಯಗಳು ನಮ್ಮನ್ನು ಉತ್ತಮ ಸಮಾಜದೆಡೆಗೆ ಕೈಹಿಡಿದು ನಡೆಸಿಕೊಂಡು ಹೋಗುತ್ತದೆ. ನಮ್ಮ ಸಮಾಜವು ಅತಿಯಾದ ಅಗ್ನಿ ಪರೀಕ್ಷೆಯನ್ನು ಎದುರು ನೋಡುತ್ತಿದೆ. ಯುದ್ಧಗಳು ಸಮಸ್ಯೆಗೆ ಪರಿಹಾರವಾಗುವುದಿಲ್ಲ ‘ ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಅಧಿಕಾರಿಗಳ ತಪ್ಪು ನಿರ್ಧಾರವೇ ಹೊರಗುತ್ತಿಗೆ ನೌಕರರ ಅಭದ್ರತೆಗೆ ಕಾರಣ : ಸಂಕೇತ್ ಪೂವಯ್ಯ

ದಸಂಸ ಹೋರಾಟಗಾರ ಹರೀಶ್ ಮಾಗಲು,ಸಾಹಿತಿ ಅರ್ಜುನ್ ಮೌರ್ಯ, ಕೊಡಗಿನ ಕವಯಿತ್ರಿ ಕೆ.ಜಿ.ರಮ್ಯ, ಪರಿವರ್ತನಾ ಚಳವಳಿಯ ಮೋಹನ್ ಮೌರ್ಯ, ಡಾ..ಹೇಮಂತ್ ಕುಮಾರ್, ಡಾ.ಝಮೀರ್ ಅಹಮದ್, ಪಿ.ಕೆ.ಅಬ್ದುಲ್ ರೆಹೆಮಾನ್, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜನಾರ್ಧನ್, ಅಹಿಂದ ಒಕ್ಕೂಟದ ಸಂಘಟಕ ಟಿ.ಎಂ ಮುದ್ದಯ್ಯ, ಜೆ ಸೋಮಣ್ಣ, ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಇದ್ದರು.