ವಾಣಿಜ್ಯ ಬೆಳೆಗೆ ಮಾರುಹೋಗದಿರಿ | ಅಡಿಕೆಯಿಂದ ಬಾಳೆ ಪ್ರದೇಶ ಕ್ಷೀಣ
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತೋಟಸಾಗರ ಗ್ರಾಮದ ರೈತ ಜಗದೀಶ್ ಹತ್ತನೇ ತರಗತಿ ವ್ಯಾಸಂಗ ಮಾಡಿದ್ದರೂ, ಮಿಶ್ರ ಕೃಷಿಗೆ ಮಾಸ್ಟರ್ ಆಗಿದ್ದಾರೆ. ಮಿಶ್ರ ಬೇಸಾಯ ಮಾಡುವ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಿಕೊಂಡಿದ್ದಾರೆ.
ಹೌದು, ಹತ್ತನೇ ತರಗತಿಗೆ ಕುಟುಂಬ ನಿರ್ವಹಣೆ ಮಾಡುವ ಜವಬ್ದಾರಿ ಹೊತ್ತ ಜಗದೀಶ್, ಒಲ್ಲದ ಮನಸ್ಸಿನಲ್ಲೆ ಶಾಲೆ ಬಿಟ್ಟು ಕೃಷಿಯನ್ನು ಅಪ್ಪಿಕೊಂಡರು. 4 ಎಕರೆ ಜಮೀನಿನಲ್ಲಿ ಕೃಷಿ ಮಾಡಲು ಆರಂಭಿಸಿ ತೋಟಗಾರಿಕೆ, ಪಶು ಸಂಗೋಪನೆ, ಜೇನು ಕೃಷಿ, ಅರಣ್ಯ ಕೃಷಿಯನ್ನು ಮಾಡುತ್ತಿದ್ದಾರೆ. ಹಾಗೆ ಸಮಗ್ರ ಕೃಷಿ ಅಳವಡಿಸಿಕೊಂಡು ಕೃಷಿ ಬೆಳೆಗಳು ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಿ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ತೋಟಗಾರಿಕ ಬೆಳೆಗಳಾದ ತೆಂಗು, ಬಾಳೆ, ಅಡಿಕೆ, ಹಲಸು, ನುಗ್ಗೆ, ಎಳ್ಳಿ, ಮಾವು ಹಾಗೂ ನಿಂಬೆ ಬೆಳೆಗಳಿಗೆ ಹನಿ ನೀರಾವರಿಯನ್ನು ಅಳವಡಿಸಿಕೊಂಡು ಉತ್ತಮ ಇಳುವರಿ ಕಾಣುತ್ತಿದ್ದಾರೆ.
600 ಬಾಳೆ ಸಸಿಗಳನ್ನು ನೆಟ್ಟು, 75 ಸಾವಿರ ಲಾಭ ಗಳಿಸಿದ್ದಾರೆ. ಬಾಳೆ ಫಸಲು ಚೆನ್ನಾಗಿರುವುದರಿಂದ ಪ್ರತಿ ವಾರವೂ ಹಣ ಸಿಗುತ್ತದೆ. ರೈತರ ಬದುಕನ್ನು ಹಸನುಗೊಳಿಸುವ ಬಾಳೆಯಿಂದ ಎಂದಿಗೂ ನಷ್ಟವಿಲ್ಲ.

ಬಾಳೆ ಬೆಳೆದವರ ಮನೆ ಬಂಗಾರವಾಗುತ್ತದೆ ಎಂಬ ಮಾತಿದೆ. ಆದರೆ, ಪ್ರಸ್ತುತ ರಾಜ್ಯದಲ್ಲಿ ಬಾಳೆ ಬೆಳೆಯುವ ಪ್ರದೇಶ ಕಡಿಮೆಯಾಗಿದೆ. ಬಾಳೆಗೆ ಬೆಂಕಿರೋಗ ಬಂದರೆ ಪೂರ್ಣ ಬೆಳೆನಾಶವಾಗುತ್ತದೆ. ಗೊಬ್ಬರದ ಖರ್ಚು ಹೆಚ್ಚಳವಾಗಿದೆ. ರೈತಾಪಿ ವರ್ಗ ವಾಣಿಜ್ಯ ಬೆಳೆ ಅಡಿಕೆಗೆ ಮಾರು ಹೋಗುತ್ತಿರುವುದು ಬಾಳೆ ಬೆಳೆ ಪ್ರದೇಶ ಕ್ಷೀಣಿಸುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ ಎಂಬುದು ರೈತರ ಅಭಿಪ್ರಾಯ.
ಜೇನು ಸಾಕಾಣಿಕೆ : ತೋಟಗಾರಿಕೆ ಇಲಾಖೆಯ ಜೇನು ತರಬೇತಿದಾರ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ, ಇಲಾಖೆಯ ಸಹಾಯ ಧನ ಪಡೆದು ಸುಮಾರು 30 ಜೇನು ಪೆಟ್ಟಿಗೆಗಳನ್ನು ಇಡಲಾಗಿದೆ. ಜೇನು ತುಪ್ಪವನ್ನು ಕೆಜಿಗೆ 800 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಜೇನು ತುಪ್ಪ ತೆಗೆಯುವುದಕ್ಕಿಂತ ಮೊದಲೇ ಸಂಬಂಧಿಕರು, ರೈತರು, ಸ್ನೇಹಿತರು ನನಗೆ ಇಂತಿಷ್ಟು ಬೇಕು ಎಂದು ಮೊದಲೇ ತಿಳಿಸುತ್ತಾರೆ. ಆದ್ದರಿಂದ ಜೇನು ತುಪ್ಪ ತೆಗೆದರೆ ಮಾರಾಟ ಮಾಡುವುದು ಕಷ್ಟವೇನಲ್ಲ ಎಂದು ಜಗದೀಶ್ ಈದಿನ ಡಾಟ್ ಕಾಮ್ ಗೆ ಮಾಹಿತಿ ನೀಡಿದರು.

ಜೇನು ಪೆಟ್ಟಿಗೆ ಎಲ್ಲಿ ಸಿಗುತ್ತದೆ: ಪ್ರತಿ ತಾಲೂಕಿನಲ್ಲಿ ತೋಟಗಾರಿಕೆ ಇಲಾಖೆ ಇರುತ್ತದೆ. ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿದರೆ ಜೇನು ಪೆಟ್ಟಿಗೆಗೆ ಸಹಾಯ ಧನವನ್ನು ಕೊಡಿಸುತ್ತಾರೆ. ಜಗದೀಶ್ ಜಿಲ್ಲಾ ಪಂಚಾಯಿತಿ ಯೋಜನೆಯಡಿ 10 ಬಾಕ್ಸ್, ಎನ್ ಹೆಚ್ ಎಂ ಯೋಜನೆಯಡಿ 20 ಬಾಕ್ಸ್ ಪಡೆದು ಜೇನು ಸಾಕಾಣಿಕೆ ಮಾಡುತ್ತಿದ್ದಾರೆ.
ಸಹಾಯಧನ : ಜೇನು ಪೆಟ್ಟಿಗೆಯನ್ನು ಪಡೆಯುವ ರೈತರು ಅನ್ ಲೈಲ್ ಮೂಲಕ ಒಂದು ಪಟ್ಟಿಗೆಗೆ 4500 ಹಣ ಕಟ್ಟಿದರೆ ಜೇನು ಪೆಟ್ಟಿಗೆ ಮತ್ತು ಸ್ಟ್ಯಾಂಡ್ ಕೊಡಲಾಗುತ್ತದೆ. ರೈತರು ಶೇ.25 ರಷ್ಟು ವಂತಿಕೆ ಕಟ್ಟಬೇಕು. ಉಳಿಕೆ ಶೇ.75 ರಷ್ಟು ಸರ್ಕಾರ ಬರಿಸಲಿದ್ದು, ಒಂದು ಬಾಕ್ಸ್ ಗೆ 3375 ರೂ. ರೈತರ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.
ಜೇನು ಸಾಕಣೆ ಮಾಡುವುದರಿಂದ ಬೆಳೆಗಳಲ್ಲಿ ಪರಾಗಸ್ಪರ್ಶ ಹೆಚ್ಚು ನಡೆಯುವುದರಿಂದ ತಾವು ಬೆಳೆಯುವ ಫಸಲಿನಲ್ಲಿ ಸುಮಾರು 20- 50 ರಷ್ಟು ಹೆಚ್ಚು ಉತ್ಪಾದನೆ ಪಡೆಯಬಹುದು. ಒಂದು ಜೇನು ಪಟ್ಟಿಗೆಯಲ್ಲಿ 5 ಕೆಜಿಯವರೆಗೆ ತುಪ್ಪ ತೆಗೆಯಬಹುದು ಎಂದು ಹೇಳುತ್ತಾರೆ ಜೇನು ತರಬೇತುದಾರ ಶ್ರೀಧರ್.
ಕುಂಬಳ ಬೆಳೆ : ಸ್ವಲ್ಪ ಜಾಗದಲ್ಲಿ ಸಿಹಿ ಕುಂಬಳಕಾಯಿ ಬೆಳೆದು ಸ್ವತಃ ತಾನೇ ಮೈಸೂರು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ದಾರೆ. ಇದರಿಂದ ಸುಮಾರು 60 ಸಾವಿರ ಆದಾಯ ಬಂದಿದೆ. ಇದರಲ್ಲಿ ಖರ್ಚು ಮಾಡಿದ್ದು ಹತ್ತು ಸಾವಿರ. ಒಟ್ಟಿನಲ್ಲಿ ಕುಂಬಳ ಬೆಳೆಯುವುದರಿಂದ ಲಾಭ ಗಳಿಸಬಹುದು.

ಮನೆಯಲ್ಲಿ ಇರುವ ಗಿರ್ ತಳಿಯ ಹಸುವಿನ ಸಗಣಿ ಹಾಗೂ ಜಮೀನಿನ ತ್ಯಾಜ್ಯಗಳನ್ನು ಬಳಸಿ ಗೊಬ್ಬರ ತಯಾರಿಸಿ ಸ್ವತಃ ತಾವೇ ಉಪಯೋಗಿಸಿ ತಮ್ಮ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿದ್ದಾರೆ. ಜೊತೆಗೆ ನೀರಿನ ನಿರ್ವಹಣೆ ಮಾಡಿ ಕೃಷಿಯಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ.
“ಮಿಶ್ರ ಬೆಳೆಯಿಂದ ರೈತನಿಗೆ ಲಾಭದಾಯಕ. ಶ್ರಮ, ರಸಗೊಬ್ಬರಗಳ ಮಿತವ್ಯಯ ಆಗಲಿದೆ. ಖಾಲಿ ಜಾಗ ಉಳಿಯುವುದಿಲ್ಲ. ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತರು ವಾಣಿಜ್ಯ ಬೆಳೆ ಅಡಿಕೆಗೆ ಮಾರುಹೋಗದೆ ಮಿಶ್ರ ಬೇಸಾಯ ಮಾಡಲು ಮುಂದಾಗಬೇಕು” ಎನ್ನುತ್ತಾರೆ ಪ್ರಗತಿಪರ ಕೃಷಿಕ ಜಗದೀಶ್.
