ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ವರ್ಗೀಕರಣಕ್ಕಾಗಿ ಸಮೀಕ್ಷೆ ಕೈಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ಏಕ ಸದಸ್ಯ ಆಯೋಗವು ಒಳಮೀಸಲಾತಿ ಸಮೀಕ್ಷಾ ನಮೂನೆಯನ್ನು ಬಿಡುಗಡೆ ಮಾಡಿದ್ದು, ನಮೂನೆಯಲ್ಲಿ ಧರ್ಮದ ಕಾಲಂ ಅನ್ನು ಕೈಬಿಡುವ ಮೂಲಕ ಸಮೀಕ್ಷೆಯ ಆರಂಭದಲ್ಲಿ ಸಂವಿಧಾನ ಆಶಯಗಳನ್ನು ಗಾಳಿಗೆ ತೂರಿದೆ ಎಂದು ಬೌದ್ಧ ದಾಖಲಾತಿ ಆಂದೋಲನ ಕರ್ನಾಟಕ ಘಟಕವು ಆರೋಪಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬೌದ್ಧ ದಾಖಲಾತಿ ಆಂದೋಲನದ ರಾಜ್ಯ ಪ್ರತಿನಿಧಿ ಬುದ್ಧಘೋಷ್ ದೇವೇಂದ್ರ ಹೆಗ್ಗಡೆ, ‘ಈ ಸಂಬಂಧ ಬೌದ್ಧ ಸಮುದಾಯ ಸಂಘಟನೆಗಳು ನ್ಯಾಯಮೂರ್ತಿ ನಾಗಮೋಹನದಾಸ್ ಅವರನ್ನು ಭೇಟಿ ಮಾಡಿ ಧರ್ಮದ ಕಾಲಂ ಅನ್ನು ಸಮೀಕ್ಷೆಯಲ್ಲಿ ನಮೂದಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ ಆಯೋಗವು ಮನವಿಯನ್ನು ಪರಿಗಣಿಸಲ್ಲ. ಕ್ರೈಸ್ತ ಹಾಗೂ ಮುಸ್ಲಿಂ ಧರ್ಮಕ್ಕೆ ಮತಾಂತರವಾದ ಪರಿಶಿಷ್ಟ ಜಾತಿಯ ಅಸ್ಪೃಶ್ಯ ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಧರ್ಮದ ಕಾಲಂ ಅನ್ನೇ ಕೈಬಿಡಲಾಗಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
‘ದೇಶದಲ್ಲಿ ಈವರೆಗೆ ನಡೆದ ಎಲ್ಲ ಜಾತಿ ಜನಗಣತಿಯಲ್ಲೂ ಧರ್ಮದ ಕಾಲಂ ಅನ್ನು ಕಡ್ಡಾಯವಾಗಿ ನಮೂದಿಸಿ ಸಮೀಕ್ಷೆ ನಡೆಸಲಾಗಿದೆ. ಆದರೆ ಒಳಮೀಸಲಾತಿಯ ಸಮೀಕ್ಷೆಯ ಸಂದರ್ಭದಲ್ಲಿ ಧರ್ಮದ ಕಲಂ ಅನ್ನು ಕೈಬಿಟ್ಟಿರುವುದು ಸಂವಿಧಾನದ ಕಾಯ್ದೆ (ಪ್ರೆಸಿಡೆನ್ಸಿಯಲ್ ಆರ್ಡರ್) 1950,1956 ಹಾಗೂ 1990 ಸ್ಪಷ್ಟ ಉಲ್ಲಂಘನೆ’ ಎಂದು ಹೇಳಿದ್ದಾರೆ
‘ಬೌದ್ಧ ಧರ್ಮ ಸ್ವೀಕರಿಸಿದ ಪರಿಶಿಷ್ಟ ಜಾತಿಯ ಜನರನ್ನು ಬಲವಂತವಾಗಿ ಹಿಂದೂಗಳು ಎಂದು ಲೆಕ್ಕ ತೋರಿಸುವ ಸಂಘ ಪರಿವಾರದ ಯೋಜನೆಯೂ ಇದಾಗಿದೆ. ಡಾ. ಅಂಬೇಡ್ಕರ್ ಅವರ ಧಾರ್ಮಿಕ ಚಳವಳಿಯನ್ನು ಮಟ್ಟಹಾಕಲು ಮಾಡಿದ ಸಂಚು. ಇಂತಹ ಸಾಂವಿಧಾನಿಕ ವಂಚನೆಯನ್ನು ನಿಜವಾದ ಅಂಬೇಡ್ಕರ್ ಅನುಯಾಯಿಗಳು ಸಹಿಸಲು ಸಾಧ್ಯವಿಲ್ಲ. ಇದು ಖಂಡನೀಯ. ಹಾಗಾಗಿ ಸಮೀಕ್ಷೆಯಲ್ಲಿ ಧರ್ಮದ ಕಾಲಂ ಅನ್ನು ಕಡ್ಡಾಯವಾಗಿ ನಮೂದಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಬೌದ್ಧ ಸಮುದಾಯದ ಮನವಿಗಳನ್ನು ಪರಿಗಣಿಸದ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವು ಧರ್ಮದ ದಾಖಲೆಯ ಬಗ್ಗೆ ಅಸಡ್ಡೆ ತೋರಿರುವುದು ಅವರ ಪಕ್ಷಪಾತ ಧೋರಣೆ ಎತ್ತಿ ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಸಂವಿಧಾನ ವಿರೋಧಿ ನ್ಯಾಯಮೂರ್ತಿಗಳಿಂದ ಯಾವ ರೀತಿಯ ನ್ಯಾಯ ಸಿಗಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ