ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಮಡಿಕೇರಿ ನಗರದ ಗಾಂಧಿ ಭವನದಲ್ಲಿ ಇಂದು ನಡೆದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ‘ ಬಸವಣ್ಣನವರ ಆದರ್ಶ ಈಡೇರಿದೆಯೇ ಎಂಬುದನ್ನು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ ‘ ಎಂದರು.
” ಬಸವೇಶ್ವರರು 12 ನೇ ಶತಮಾನದಲ್ಲಿಯೇ ನಾಡಿನಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಆದರೆ, ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಎಲ್ಲರೂ ಸಮಾನವಾಗಿ ಬದುಕು ಕಟ್ಟಿಕೊಂಡಿದ್ದಾರೆಯೇ ಎಂಬ ಬಗ್ಗೆ ಆತ್ಮ ವಿಮರ್ಶೆ ಆಗಬೇಕು. ಸಮಾಜದಲ್ಲಿ ಇಂದಿಗೂ ಸಹ ಬಡವರು ಮತ್ತಷ್ಟು ಕಡು ಬಡವರಾಗಿ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿ ಬದುಕು ನಡೆಸುತ್ತಿದ್ದಾರೆ. ಆದರೆ, ಬಸವಣ್ಣ ಅವರ ಆಶಯ ಈಡೇರಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಚಿಂತಿಸಬೇಕು. ಜಾತಿ, ಮತ, ಧರ್ಮ, ಲಿಂಗ ತಾರತಮ್ಯ ಇಲ್ಲದೆ ಬಸವಣ್ಣ ಅವರ ಆಶಯದಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ ” ಎಂದರು.
ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ ” ಬಸವೇಶ್ವರರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಬಸವೇಶ್ವರ ವಚನ ಸಂದೇಶಗಳನ್ನು ತಿಳಿದುಕೊಂಡು, ಅದನ್ನು ಪಾಲಿಸುವಂತಾಗಬೇಕು. ಬಸವ ತತ್ವಗಳು ವಿಶಾಲತೆಯಿಂದ ಕೂಡಿದ್ದು, ಬಸವೇಶ್ವರರ ವಚನಗಳು ಎಲ್ಲರಿಗೂ ದಾರಿ ದೀಪವಾಗಿದೆ. ಪ್ರತಿಯೊಬ್ಬರಲ್ಲಿಯೂ ಅಂತರಂಗ ಮತ್ತು ಬಹಿರಂಗದಲ್ಲಿ ಬದಲಾವಣೆ ಕಾಣುತ್ತೇವೆ, ಅಂತರಂಗ ಶುದ್ದಿಯಾಗಿರಬೇಕು. ಆಚರಣೆ, ನುಡಿಯಲ್ಲಿ ಒಂದೇ ಇರಬೇಕು. ಎಲ್ಲರಲ್ಲಿಯೂ ಕಾಯಕ ಪ್ರಜ್ಞೆ ಇರಬೇಕೆಂದು ” ಆಶಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ ” ಬಸವೇಶ್ವರರು 12 ನೇ ಶತಮಾನದಲ್ಲಿ ಅನುಭವ ಮಂಟಪ ಮೂಲಕ ಪ್ರತಿಯೊಬ್ಬರೂ ಸಮಾನರು ಎಂಬ ಸಂದೇಶ ಸಾರಿದರು. ಸ್ತ್ರೀಯರಿಗೆ ಸಮಾನ ಅವಕಾಶ ಕಲ್ಪಿಸಿದರು. ವಚನ ಕ್ರಾಂತಿಯ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಶ್ರೇಣೀಕೃತ ವ್ಯವಸ್ಥೆ, ಮೂಡನಂಬಿಕೆ, ಕಂದಾಚಾರ ಹೋಗಲಾಡಿಸಲು ಶ್ರಮಿಸಿದ್ದಾರೆ. ಜಾತಿ, ಧರ್ಮ, ಲಿಂಗಬೇಧವಿಲ್ಲದೆ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಇತಿಹಾಸ ನೆನಪುಗಳನ್ನು ಜೀವಂತವಾಗಿರಿಸುತ್ತದೆ : ಎಲ್. ಎನ್. ಮುಕುಂದರಾಜ್
ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲಾನಂದ. ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಮೂರ್ತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಶಿವಪ್ಪ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಶಂಭಾ ಶಿವಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಪ್ರಸನ್ನ, ಆದಿ, ಟಿ.ಜಿ.ಪ್ರೇಮಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪಿ.ಪಿ.ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಇದ್ದರು.