ಯುವರಾಜ್ ಎಂಬುವನು ಗೋಕುಲ್ ರಾಜ್ ಎಂಬ ದಲಿತ ಯುವಕನ ತಲೆ ಕಡಿದು ಸಿಬಿ-ಸಿಐಡಿಗೆ ಶರಣಾಗುತ್ತಾನೆ. ದಲಿತನ ತಲೆ ಕಡಿದ ಯುವರಾಜನನ್ನು ಆ ಜಾತಿಯ ಜನ ಹೆಗಲ ಮೇಲೆ ಹೊತ್ತು ಸಂಭ್ರಮಿಸಿ ಸನ್ಮಾನಿಸುತ್ತಾರೆ. ಜಾತಿಯ ಈ ವಿಷಸರ್ಪ ಫೂತ್ಕಾರಕ್ಕೆ ಭೌಗೋಳಿಕ ಮೇರೆಗಳಿಲ್ಲ. ಉತ್ತರ- ದಕ್ಷಿಣ, ಪೂರ್ವ-ಪಶ್ಚಿಮದ ಭೇದ ಭಾವಗಳಿಲ್ಲ.
ಜಾತಿಯನ್ನು ದಾಟಿ ಪ್ರೇಮಿಸಿದ ತಮಿಳುನಾಡಿನ ಯುವದಂಪತಿಯ ಘೋರ ಹತ್ಯೆಯ ದುರಂತ ಕತೆಯಿದು. ಕಡಲೂರು ಜಿಲ್ಲೆಯ ಪುದುಕೂರಪೇಟ್ಟೈ ಎಂಬ ಹಳ್ಳಿಯಲ್ಲಿ ದಲಿತ ಮುರುಗೇಶನ್ ಮತ್ತು ವಣ್ಣಿಯಾರ್ ಜಾತಿಯ ಕಣ್ಣಗಿಯ ನಡುವೆ ಅರಳಿದ ಪ್ರೇಮ ಅಲ್ಲಿಯೇ ಮುದುಡಿ ಮಣ್ಣಾಯಿತು ‘ಮರ್ಯಾದೆ ಹತ್ಯೆ’ ಎಂದು ಕರೆಯಲಾಗುವ ಮರ್ಯಾದೆಗೇಡಿನ ವ್ಯಥೆ. 22 ವರ್ಷಗಳ ಹಿಂದೆ ನಡೆದದ್ದು.
ಈ ಪ್ರಕರಣ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿತ್ತು. ತೀರ್ಪು ಮೊನ್ನೆ ಹೊರಬಿದ್ದಿದೆ. ಹೈಕೋರ್ಟು ಮತ್ತು ಕೆಳ ಹಂತದ ನ್ಯಾಯಾಲಯ ನೀಡಿದ್ದು ತೀರ್ಪುಗಳನ್ನೇ ತುಸು ಹೆಚ್ಚು ಕಡಿಮೆ ಸುಪ್ರೀಂ ಕೂಡ ಎತ್ತಿ ಹಿಡಿದಿರುವುದು ಸ್ವಾಗತಾರ್ಹ.
“ಮರ್ಯಾದೆಗೇಡು ಹತ್ಯೆ ದುಷ್ಟ ಮತ್ತು ಅಸಹ್ಯಕರ ಅಪರಾಧವು ನಮ್ಮ ಜಾತಿಗ್ರಸ್ತ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಕುರೂಪಿ ವಾಸ್ತವ. ಮರ್ಯಾದೆ ಹತ್ಯೆಯೆಂದು ಕರೆಯಲಾಗುವ ಈ ಹತ್ಯೆಗಳನ್ನು ಅತ್ಯಂತ ಕಠಿಣ ಶಿಕ್ಷೆಯಿಂದ ದಂಡಿಸಬೇಕು” ಎಂದು ಸುಪ್ರೀಮ್ ಕೋರ್ಟು ಸಾರಿದೆ.
ಮಗಳು ಕಣ್ಣಗಿ ಮತ್ತು ಆಕೆ ವರಿಸಿದ್ದ ಮುರುಗೇಶನಿಗೆ ವಿಷ ಕುಡಿಸಿದ ತಂದೆ ಮತ್ತು ಸೋದರ ಮತ್ತಿತರರಿಗೆ ಜೀವಾವಧಿ ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟು 2022ರ ಜೂನ್‌ನಲ್ಲಿ ತೀರ್ಪು ನೀಡಿತ್ತು. ಸೋದರನಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ತಗ್ಗಿಸಿತ್ತು.
Honour Killing ಅಥವಾ ಮರ್ಯಾದೆ ಹತ್ಯೆ ಪದ ಮೊದಲ ಸಲ ಬಳಕೆಯಾದ ಪ್ರಕರಣ ಇದು. ಈ ಮರ್ಯಾದೆ ಹತ್ಯೆಗಳ ಸಂಖ್ಯೆ ಮತ್ತೆ ಮತ್ತೆ ವರದಿಯಾಗತೊಡಗಿದಾಗ Honour Killing ಅಥವಾ ಮರ್ಯಾದೆ ಹತ್ಯೆ ಪದಗಳ ಕುರಿತು ಮೀಡಿಯಾದ ಒಂದು ವರ್ಗದಲ್ಲಿ ಅಸಹ್ಯ ಬೆಳೆಯುತ್ತದೆ. ಮರ್ಯಾದೆ ಹತ್ಯೆಯ ಜಾಗದಲ್ಲಿ ಮರ್ಯಾದೆಗೇಡು ಹತ್ಯೆ ಎಂಬ ಪದಗಳ ಬಳಕೆ ರೂಢಿಗೆ ಬರುತ್ತದೆ.
ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಕುರಿತು ಮಾತಾಡುತ್ತಿದ್ದ ಪಾಟಾಳಿ ಮಕ್ಕಳ್ ಕಚ್ಚಿ ಪಕ್ಷದ ಎಸ್.ರಾಮದಾಸ್ ದಲಿತ ವಿರೋಧಿ ವೇದಿಕೆಯೊಂದನ್ನು ಸ್ಥಾಪಿಸುತ್ತಾರೆ. ದಲಿತರ ಮೇಲಿನ ದೌರ್ಜನ್ಯ ತಡೆ ಕಾಯಿದೆಯನ್ನು ಸಡಿಲಗೊಳಿಸಬೇಕು ಎಂಬುದಾಗಿ ಆಗ್ರಹಿಸುತ್ತಾರೆ.
ಜೀನ್ಸ್, ಟಿ-ಶರ್ಟ್ಸ್ ಮತ್ತು ತಂಪು ಕನ್ನಡಕಗಳನ್ನು ತೊಡುವ ದಲಿತ ಯುವಕರು ಇತರೆ ಜಾತಿಗಳ ಹುಡುಗಿಯರನ್ನು ತಮ್ಮತ್ತ ಸೆಳೆದುಕೊಂಡು ಆನಂತರ ಅವರನ್ನು ಕೈಬಿಡುತ್ತಾರೆ. ದಲಿತರನ್ನು ಒಳಗೊಂಡ ಅಂತರ್ಜಾತಿ ಮದುವೆಗಳನ್ನು ವಿರೋಧಿಸುವ ‘ಮೇಲ್ಜಾತಿ’ಗಳ ವೇದಿಕೆಯಿದು. ಅಂತರ್ಜಾತಿ ಮದುವೆಗಳು ಮುರಿದು ಬಿದ್ದಿವೆ. ಯಾಕೆಂದರೆ ಅವುಗಳ ತಳಹದಿ ಜಾತಿವ್ಯವಸ್ಥೆಯ ಉಲ್ಲಂಘನೆ ಆಗಿರುತ್ತದೆಯೇ ವಿನಃ ಪ್ರೀತಿ ಪ್ರೇಮ ಅಲ್ಲ ಎಂಬ ಗೊತ್ತುವಳಿಯೊಂದನ್ನು ಈ ವೇದಿಕೆ ಅಂಗೀಕರಿಸುತ್ತದೆ.
ಈ ಬೆಳವಣಿಗೆಯ ನಂತರ ಯುವರಾಜ್ ಎಂಬುವನು ಗೋಕುಲ್ ರಾಜ್ ಎಂಬ ದಲಿತ ಯುವಕನ ತಲೆ ಕಡಿದು ಸಿಬಿ-ಸಿಐಡಿಗೆ ಶರಣಾಗುತ್ತಾನೆ. ದಲಿತನ ತಲೆ ಕಡಿದ ಯುವರಾಜನನ್ನು ಆ ಜಾತಿಯ ಜನ ಹೆಗಲ ಮೇಲೆ ಹೊತ್ತು ಸಂಭ್ರಮಿಸಿ ಸನ್ಮಾನಿಸುತ್ತಾರೆ.
ಜಾತಿಯ ಈ ವಿಷಸರ್ಪ ಫೂತ್ಕಾರಕ್ಕೆ ಭೌಗೋಳಿಕ ಮೇರೆಗಳಿಲ್ಲ. ಉತ್ತರ- ದಕ್ಷಿಣ, ಪೂರ್ವ-ಪಶ್ಚಿಮದ ಭೇದ ಭಾವಗಳಿಲ್ಲ. ದಲಿತ ಹುಡುಗನನ್ನು ಪ್ರೀತಿಸಿದ ತಪ್ಪಿಗೆ ನಮ್ಮದೇ ಮಂಡ್ಯ ಜಿಲ್ಲೆಯ ಒಕ್ಕಲಿಗರ ಹುಡುಗಿ ಕೊಲೆಯಾಗಿದ್ದಳಲ್ಲ?
ದಲಿತ ಹುಡುಗ ಇಳವರಸನ್ ಮಧುರೈ ನಗರದಲ್ಲಿ ರೈಲಿಗೆ ತಲೆ ಕೊಟ್ಟು ಸತ್ತಿದ್ದ. ವಣ್ಣಿಯಾರ್ ‘ಮೇಲ್ಜಾತಿ’ಗೆ ಸೇರಿದ ಹುಡುಗಿ ದಿವ್ಯಾ ನಾಗರಾಜನ್ ಮತ್ತು ಇಳವರಸನ್ ಪ್ರೀತಿಸಿ ಮದುವೆಯಾದವರು. ವಣ್ಣಿಯಾರ್ ಕಣ್ಣು ಕೆಂಪಾಗಿಸಿದ ಈ ವಿವಾಹ ಧರ್ಮಪುರಿ ಜಿಲ್ಲೆಯ ಮೂರು ದಲಿತ ಗ್ರಾಮಗಳನ್ನು ಸುಟ್ಟು ಬೂದಿ ಮಾಡಿತ್ತು. ಸರೀಕರ ನಿಂದೆಯನ್ನು ಭರಿಸಲಾರದೆ ದಿವ್ಯಾಳ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಕೆರಳಿದ ವಣ್ಣಿಯಾರರು ದಲಿತರ ನೂರಾರು ಮನೆಗಳು, ಗುಡಿಸಿಲುಗಳು ಮತ್ತು ಬದುಕುಗಳಿಗೆ ಬೆಂಕಿ ಇಟ್ಟಿದ್ದರು. ಈ ಭುಗಿಲೆಬ್ಬಿಸಿದ್ದು ಕೂಡ ಪಾಟಾಳಿ ಮಕ್ಕಳ್ ಕಚ್ಚಿ ಎಂಬ ವಣ್ಣಿಯಾರ್ ಜಾತಿಯ ರಾಜಕೀಯ ಪಕ್ಷವೇ.
ಒಂದೇ ಜಾತಿಗೆ ಸೇರಿದ್ದರೂ ತಮ್ಮ ಹುಡುಗಿಯನ್ನು ಮದುವೆಯಾದ ಹುಡುಗ ಬಡವನೆಂದು ಆತನ ತಲೆ ಕಡಿದು ಹಾಕಿದ ಪ್ರಕರಣ ತಿರುನಲ್ವೇಲಿ ನಂಗುನೇರಿ ಗ್ರಾಮದ ಘಟನೆ. ದಲಿತ ಜಾತಿಗಳ ನಡುವೆಯೂ ಮರ್ಯಾದೆಗೇಡು ಹತ್ಯೆಗಳು ನಡೆದಿವೆ. ತೂತ್ತುಕುಡಿ ಜಿಲ್ಲೆಯ ಸೊಲೈರಾಜ್ ಮತ್ತು ಪೇಚಿಯಮ್ಮಾಳ್ ಮದುವೆ ಈ ಮಾತಿಗೆ ನಿದರ್ಶನ. ಈ ಇಬ್ಬರು ದಿನಗೂಲಿಗಳ ಪೈಕಿ ಸೊಲೈರಾಜ್ ಪರಯರ್ ಜಾತಿಗೂ, ಪೇಚಿಯಮ್ಮಾಳ್ ಪಲ್ಲರ್ ಜಾತಿಗೂ ಸೇರಿದವರು. ಈ ದಂಪತಿಗಳನ್ನು ಪೋಷಕರೇ ಹತ್ಯೆ ಮಾಡುತ್ತಾರೆ. ದಲಿತ ಸರಣ್ಯ ಹಿಂದುಳಿದ ಜಾತಿಗೆ ಸೇರಿದ ಮೋಹನ್‌ನನ್ನು ವರಿಸುತ್ತಾಳೆ. ಆದರೆ ಸರಣ್ಯಳ ಸೋದರ ಈ ದಂಪತಿಯನ್ನು ಕ್ರೂರವಾಗಿ ಕೊಲೆ ಮಾಡುತ್ತಾನೆ. ನಂದೀಶ್ ಮತ್ತು ಸ್ವಾತಿ ದಂಪತಿ ಹತ್ಯೆ ಪ್ರಕರಣದಲ್ಲಿ ಸ್ವಾತಿಯ ಗರ್ಭದಲ್ಲಿನ ಮೂರು ತಿಂಗಳ ಭ್ರೂಣವನ್ನೂ ಇರಿಯಲಾಗುತ್ತದೆ. ಅವರ ದೇಹಗಳನ್ನು ನದಿಗೆ ಎಸೆಯಲಾಗುತ್ತದೆ.
ಇದನ್ನೂ ಓದಿದ್ದೀರಾ? ಪಹಲ್ಗಾಮ್ ದಾಳಿ | ಭದ್ರತಾ ವೈಫಲ್ಯ ಮರೆಮಾಚಲು ‘ದೇಶದ್ರೋಹ’ದ ದುಷ್ಟ ತಂತ್ರ ಹೆಣೆದ ಬಿಜೆಪಿ
ಲತಾ ಸಿಂಗ್ ವರ್ಸಸ್ ಉತ್ತರಪ್ರದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟು ಅಂತರ್ಜಾತಿ ಮದುವೆಗಳ ಪರ ನಿಲುವು ತಳೆಯುತ್ತದೆ. ‘ಅಂತರ್ಜಾತೀಯ ಮದುವೆಗಳು ರಾಷ್ಟ್ರಹಿತವನ್ನು ಕಾಯುತ್ತವೆ. ವಾಸ್ತವವಾಗಿ ಜಾತಿಪದ್ಥತಿಯನ್ನು ನಾಶ ಮಾಡುತ್ತವೆ’ ಎಂದು ಸಾರಿದೆ.
ಈ ಮರ್ಯಾದೆಗೇಡು ಹತ್ಯೆಗಳನ್ನು ಖಂಡಿಸಿ ಪ್ರಮುಖ ರಾಜಕೀಯ ಪಕ್ಷಗಳು ಹೇಳಿಕೆ ನೀಡಲೂ ಹಿಂಜರಿಯುತ್ತವೆ. ಇನ್ನು ರ‍್ಯಾಲಿಗಳನ್ನು ನಡೆಸಿರುವ ನಿದರ್ಶನಗಳೇ ಇಲ್ಲ.