- ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಬಿಜೆಪಿ ನಾಯಕರ ಪ್ರತಿಭಟನೆ
- ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ; ಆಕ್ರೋಶ
ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳನ್ನು ಯಾವುದೇ ಷರತ್ತುಗಳಿಲ್ಲದೆ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಪಕ್ಷ ಬಿಜೆಪಿ ಮುಖಂಡರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತು, ಅವರು ಕೊಟ್ಟ ಭರವಸೆಗಳನ್ನು ಕಾರ್ಯರೂಪಕ್ಕೆ ತರಬೇಕು. ಈ ರೀತಿ ವಿಳಂಬ ಮಾಡುವುದನ್ನು ಮುಂದುವರಿಸಿದರೆ, ಮುಂದೆ ನಾವು ರಾಜ್ಯದಾದ್ಯಂತ ಯಾವ ರೀತಿ ಹೋರಾಟ ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಸಾಂಕೇತಿಕವಾಗಿ ಇಂದು ಫ್ರೀಡಂ ಪಾರ್ಕ್‌ನಲ್ಲಿ ಸಂಜೆ 5 ಗಂಟೆ ವರೆಗೂ ಪ್ರತಿಭಟನೆ ನಡೆಸುತ್ತೇವೆ.
ಸರ್ಕಾರ ಏನು ಮಾಡಲಿದೆ ಎಂಬುದನ್ನು ನೋಡಿಕೊಂಡು ಮುಂದಿನ ಹೋರಾಟದ ಬಗ್ಗೆ ತೀರ್ಮಾಣ ಮಾಡುತ್ತೇವೆ” ಎಂದರು.
ಇಂದು, ನಾಳೆ ಒಳಗೆ ವಿಪಕ್ಷ ನಾಯಕನ ಆಯ್ಕೆ
ವಿಪಕ್ಷ ನಾಯಕರ ಆಯ್ಕೆ ವಿಳಂಭವಾಗುತ್ತಿದೆ ಎಂಬ ಪ್ರಶ್ನಗೆ ಉತ್ತರಿಸಿ, “ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಕೇಂದ್ರದ ವೀಕ್ಷಕರಾಗಿ ನೇಮಕವಾಗಿರುವ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವೆ ಮಂಗಳವಾರ ಸಂಜೆ ವೇಳೆಗೆ ರಾಜ್ಯಕ್ಕೆ ಬರುತ್ತಿದ್ದಾರೆ, ಶಾಸಕರ ಅಭಿಪ್ರಾಯಪಡೆದು ಇಂದು ಅಥವಾ ನಾಳೆ ವಿಪಕ್ಷ ನಾಯಕ ಯಾರು ಎಂಬುದನ್ನು ತೀರ್ಮಾಣ ಮಾಡಲಾಗುವುದು” ಎಂದು ತಿಳಿಸಿದರು.
ಕುಮಾರಸ್ವಾಮಿ ಆರೋಪಕ್ಕೆ ಸಂಪೂರ್ಣ ಬೆಂಬಲವಿದೆ
ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಮಾಡುತ್ತಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರೀಯಿಸಿ, “ಕುಮಾರಸ್ವಾಮಿ ಅವರು ಮಾಡುತ್ತಿರುವ ಆರೋಪಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಅವರು ಬಹಳ ಜಬಾವ್ದಾರಿಯಿಂದ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರನ್ನು ಹೋರಾಟದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಅವರೂ ಸಹಕಾರ ನೀಡಬೇಕು. ಅವರು ಮಾಡುತ್ತಿರುವ ಕೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ” ಎಂದು ಹೇಳಿದರು.
‘ಘೋಷಣೆ ಮಾಡಿದಂತೆ ಪೂರ್ಣ ಪ್ರಮಾಣದಲ್ಲಿ ಭಾಗ್ಯಗಳನ್ನು ಜಾರಿ ಮಾಡಿ’
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, “ಚುನಾವಣೆಗೂ ಪೂರ್ವದಲ್ಲಿ ಮನೆಮನೆಗಳಿಗೆ ಸುಳ್ಳು ಸಹಿ ಹಾಕಿ ಭಾಗ್ಯದ ಕಾರ್ಡುಗಳನ್ನು ಹಂಚುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು” ಎಂದು ಆರೋಪಿಸಿದರು.
“ಅಧಿಕಾರಕ್ಕೆ ಬರುವ ಮೊದಲು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು, ಸರ್ಕಾರ ಬಂದು 24 ಗಂಟೆಗಳಲ್ಲಿ ಭಾಗ್ಯಗಳನ್ನು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಈಗ ಎರಡು ತಿಂಗಳಾದರೂ ಭಾಗ್ಯಗಳಿಗೆ ಮಾರ್ಗಸೂಚಿಗಳೇ ನಿರ್ಣಯ ಆಗಿಲ್ಲ” ಎಂದು ಟೀಕಿಸಿದರು.
“ಭಾಗ್ಯಗಳಿಗೆ ಇಂದು ಮಾರ್ಗಸೂಚಿಗಳನ್ನು ಮಾಡುತ್ತಿದ್ದಾರೆ. ಸುಳ್ಳು ಹೇಳುತ್ತಲೇ ಇದ್ದಾರೆ. ಭಾಗ್ಯಗಳನ್ನು ನೀಡುವಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿದೆ. ಹಾಗಾಗಿ ಕಾಂಗ್ರೆಸ್ ಘೋಷಣೆ ಮಾಡಿದಂತೆ ಪೂರ್ಣ ಪ್ರಮಾಣದಲ್ಲಿ ಭಾಗ್ಯಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದರು.
“ಅನ್ನ ಭಾಗ್ಯ ಯೋಜನೆ ಅಡಿ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ಹೇಳಿದ್ದರು. ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಕೊಡುತ್ತಿದೆ. ಹಿಂದೆ ಘೋಷಣೆ ಮಾಡುವಾಗ ಮೋದಿ ಅವರು ಅಕ್ಕಿಕೊಟ್ಟರೆ ಮಾತ್ರ ಕೊಡುತ್ತೇವೆ ಎಂದು ಹೇಳಿರಲಿಲ್ಲ. ಹಾಗಾಗಿ ಒಟ್ಟು 15 ಕೆಜಿ ಅಕ್ಕಿಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ನೀಡಬೇಕು” ಎಂದು ಆಗ್ರಹಿಸಿದರು.
“ರಾಜ್ಯದ ಜನರಿಗೆ ಉಚಿತವಾಗಿ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದರು. ಆದರೆ, ಇಂದು ಈ ರಾಜ್ಯದಲ್ಲಿ ವಿದ್ಯುತ್ ಬಿಲ್ ಜನರಿಗೆ ಮಾರಕ ಆಗುವ ರೀತಿ ಹೆಚ್ಚಳ ಮಾಡಲಾಗಿದೆ. ಈ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದು ತಿಂಗಳಲ್ಲಿ ಪ್ರತಿಭಟನೆ ನಡೆದಿರಲಿಲ್ಲ. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಒಂದೇ ತಿಂಗಳಲ್ಲಿ ಜನರ ಆಕ್ರೋಶ ಪ್ರಾರಂಭವಾಗಿದೆ” ಎಂದರು.
“ವಿದ್ಯುತ್ ಬಿಲ್ ಏರಿಕೆ ವಿರೋಧಿಸಿ ಇಡೀ ರಾಜ್ಯದಲ್ಲಿ ಕೈಗಾರಿಕೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಬಡವರಿಗೆ ಇಂದು ಲಕ್ಷ ಲಕ್ಷ ಬಿಲ್ ಬರುತ್ತಿದೆ. ಉದ್ಯಮಿಗಳು ಸಂಕಟದಲ್ಲಿದ್ದಾರೆ. ಹಾಗಾಗಿ ಹಿಂದಿನ ರೀತಿಯಲ್ಲಿ ಬಿಲ್ ನೀಡಬೇಕು ಮತ್ತು ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಅಧಿವೇಶನ 2023 | ಪ್ರಶ್ನೋತ್ತರ ಕಲಾಪಕ್ಕೆ ಬಿಜೆಪಿ ಸದಸ್ಯರಿಂದ ಅಡ್ಡಿ, 15 ನಿಮಿಷ ಸದನ ಮುಂದೂಡಿಕೆ
ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಂಸದ ಡಿ ವಿ ಸದಾನಂದಗೌಡ, ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಬಿ ಸಿ ನಾಗೇಶ್, ಹಾಲಪ್ಪ ಆಚಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್ ರವಿಕುಮಾರ್, ಸಿದ್ದರಾಜು, ಮಾಜಿ ಶಾಸಕ ಎನ್ ಮಹೇಶ್, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ ಲ ನರೇಂದ್ರ ಬಾಬು, ಮುಖಂಡರಾದ ತಾರಾ ಅನುರಾಧಾ, ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ನಿಮ್ಮ ಯೋಗ್ಯತೆಗೆ, ಮೊದಲು ಯಡಿಯೂರಪ್ಪ ಮುಖದಲ್ಲಿ ನಗು ತರಸಿ…..
ಕೆಲಸವಿಲ್ಲದ ajama ಬೆಕ್ಕಿನ ಮೀಸೆ ಕಟ್ ಮಾಡಿದನಂತೆ.