ರಾಷ್ಟ್ರೀಯ ಫಸಲ್ ಬಿಮಾ ಯೋಜನೆ ಅಡಿ ವಿಮಾ ಕಂತು ಪಾವತಿಸಿರುವ ರೈತರ ಹಣವನ್ನು ಬೇರೆಯವರ ಖಾತೆಗೆ ಜಮಾ ಮಾಡಿರುವ ಕೃಷಿ, ಕಂದಾಯ ಹಾಗೂ ವಿಮಾ ಕಂಪೆನಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಆಗ್ರಹಿಸಿದರು.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರೀಯ ಫಸಲ್ ಬಿಮಾ ಯೋಜನೆ ರೈತರಿಗೆ ಅನುಕೂಲವಾಗುವ ಬದಲು ವಿಮಾ ಕಂಪನಿಗಳಿಗೆ ಲಾಭದಾಯಕವಾಗಿದೆ. ವಿಮಾ ಕಂತು, ಜಮೀನು ರೈತರದ್ದಾಗಿದ್ದರೆ, ಪರಿಹಾರವನ್ನು ಮಾತ್ರ ಬೇರೆಯವರ ಖಾತೆಗೆ ಜಮಾ ಮಾಡಲಾಗಿದೆ” ಎಂದು ಆರೋಪಿಸಿದರು.
“ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದಲ್ಲಿ 1 ಕೋಟಿ ರೂ. ಹಾಗೂ ಹಳ್ಳಿ ಹೊಸೂರು ಗ್ರಾಮದ ರೈತರ 54 ಲಕ್ಷ ರೂ. ಪರಿಹಾರದ ಮೊತ್ತವನ್ನು ಬೇರೆಯವರ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಕೃಷಿ ಅಧಿಕಾರಿಗಳು ರೈತರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ” ಎಂದು ದೂರಿದರು.
“ತಪ್ಪಾಗಿ ಖಾತೆಗೆ ಜಮಾ ಮಾಡಿರುವುದು ಕೃಷಿ ಅಧಿಕಾರಿಗಳು, ವಿಮಾ ಕಂಪನಿಗಳು. ಅವರ ವಿರುದ್ಧ ಕೇಸ್ ದಾಖಲಿಸಬೇಕು. ರೈತರ ಪಹಣಿ, ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿ ಪಡೆಯುವ ವಿಮಾ ಕಂಪನಿ ನಷ್ಟ ಪರಿಹಾರವನ್ನು ಮಾತ್ರ ಸಂಬಂಧವೇ ಇಲ್ಲದವರ ಖಾತೆಗೆ ಜಮಾ ಮಾಡಿರುವುದರ ಹಿಂದ ಬಹುದೊಡ್ಡ ಅಕ್ರಮ ಇದೆ. ಕೂಡಲೇ ರಾಜ್ಯ ಸರ್ಕಾರ ಸಮಗ್ರ ತನಿಖೆಗೆ ವಿಶೇಷ ತಂಡ ರಚಿಸಬೇಕು” ಎಂದು ಒತ್ತಾಯಿಸಿದರು.
“ಕೃಷಿ ಇಲಾಖೆ ಜಂಟಿನಿರ್ದೇಶಕಿ ದೇವಿಕಾ ಎಂಬುವವರು ಅನೇಕ ಅಕ್ರಮಗಳಿಗೆ ಕಾರಣರಾಗಿದ್ದಾರೆ. ಫಸಲ್ ಬಿಮಾ ಯೋಜನೆ ಮಾತ್ರವಲ್ಲ, ಚೆಕ್ ಡ್ಯಾಂ ನಿರ್ಮಾಣ, ಯಂತ್ರೋಪಕರಣ ವಿತರಣೆ ಸೇರಿದಂತೆ ಬಹುತೇಕ ಯೋಜನೆಗಳಲ್ಲಿ ಭ್ರಷ್ಟಾಚಾರ ಎಸಗಿದ್ದು ಕೂಡಲೇ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾನವಿ ತಾಲೂಕಿನಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಜೋಳ ಮಾರಾಟ ಮಾಡಿರುವ ರೈತರಿಗೆ 10 ಕೋಟಿ ರೂ. ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಕೂಡಲೇ ಬಾಕಿ ಹಣ ಪಾವತಿಗೆ ಮುಂದಾಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬೇಡಿಕೆ ಈಡೇರಿಕೆಗೆ ಕೆಪಿಆರ್‌ಎಸ್ ಆಗ್ರಹ
“ಅಕ್ಕಿ ಗಿರಣಿ ಮಾಲೀಕರು ಎಪಿಎಂಸಿ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿದ್ದಾರೆ. ಕಾಯ್ದೆಗಳು ಕಿರುಕುಳ ನೀಡಲು ರೂಪಿಸಲಾಗುವುದಿಲ್ಲ. ಈ ಕುರಿತು ಸಿಎಂ ಭೇಟಿ ಮಾಡಿ ಚರ್ಚಿಸಲಾಗುವುದು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಎಫ್‌ಸಿಐ ಗೋದಾಮುಗಳಲ್ಲಿ ಹುಳುಗಳ ಹಾವಳಿ ಹೆಚ್ಚಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಬೂದೆಯ್ಯಸ್ವಾಮಿ ಗಬ್ಬೂರು, ದೇವರಾಜನಾಯಕ, ಮಲಣ್ಣ ದಿನ್ನಿ, ಬ್ರಹ್ಮಯ್ಯ ಆಚಾರಿ ಇದ್ದರು.